ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೂಲಿಕಾರರಿಗೆ ಪ್ರಯಾಸ

ಹೊಟ್ಟೆಯ ಅನ್ನ ಕಸಿದ ಪ್ರವಾಹ
Last Updated 3 ಆಗಸ್ಟ್ 2013, 10:45 IST
ಅಕ್ಷರ ಗಾತ್ರ

ಗಂಗಾವತಿ: ತುಂಗಭದ್ರಾ ನದಿಯ ಪ್ರವಾಹ ಇಲ್ಲಿನ ಕೆಲ ಗ್ರಾಮಗಳ  ಸಾರ್ವಜನಿಕರ ದೈನಂದಿನ ಚಟವಟಿಕೆಯ ಮೇಲೂ ಗಂಭೀರ  ಪರಿಣಾಮ ಬೀರಿದೆ.

ಕೂಲಿಯನ್ನೇ ನೆಚ್ಚಿಕೊಂಡಿರುವ ಆನೆಗೊಂದಿ ಗ್ರಾಮದ ಸುಮಾರು 60ಕ್ಕೂ ಹೆಚ್ಚು ಕೃಷಿ ಕೂಲಿಕಾರರಿಗೆ ಕಳೆದ 15-20 ದಿನಗಳಿಂದ ಮಾಡಲು ಕೆಲಸವಿಲ್ಲದೆ ಅನ್ನಾಹಾರಕ್ಕೆ ಪರದಾಡುವ ಸ್ಥಿತಿ ತಂದೊಡ್ಡಿದೆ.

ಸುಮಾರು 20-30 ವರ್ಷದ ಹಿಂದೆಯೆ ಕೂಲಿ ಅರಸುತ್ತಾ ಆಂಧ್ರಪ್ರದೇಶದ, ಗದ್ವಾಲ್, ಕರ್ನೂಲ್, ಮಹೆಬೂಬನಗರ, ಮೆದಕ್ ಇತರ ಜಿಲ್ಲೆಗಳಿಂದ ಆಗಮಿಸಿ ಕೃಷಿ ಕೂಲಿಕಾರರು ಆನೆಗೊಂದಿಯ ಕೋಸಗಿ ಮತ್ತು ಗದ್ವಾಲ್ ಎಂಬ ಅದೇ ಹೆಸರಿನ ಕಾಲೋನಿ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ನಾಡದೋಣಿಯ (ಹರಗೋಲು) ಮೂಲಕ ನಿತ್ಯ 50-60 ಕೂಲಿಯಾಳುಗಳು ನದಿ ದಾಟಿ, ಆಚೆ ದಡದಲ್ಲಿರುವ ಕಮಲಾಪುರ, ವೆಂಕಟಾಪುರ, ಕಡ್ಡಿರಾಂಪುರ, ಹಂಪೆ ಮೊದಲಾದ ಗ್ರಾಮಗಳ ಮಾಗಣಿಯಲ್ಲಿ ನಿತ್ಯ ಕೃಷಿ ಚಟುವಟಿಕೆಗೆ ಹೋಗುತ್ತರೆ.
ಆದರೆ ಕಳೆದ ಎರಡು ವಾರಗಳಿಂದ ನದಿಯಲ್ಲುಂಟಾಗುತ್ತಿರುವ ಪ್ರವಾಹದಿಂದ ಮುಂಜಾಗ್ರತೆ ವಹಿಸಿದ ತಹಶೀಲ್ದಾರ್, ನಾಡ ಮತ್ತು ಯಾಂತ್ರಿಕ ದೋಣಿಗಳನ್ನು ನದಿಗೆ ಇಳಿಸದಂತೆ ಆದೇಶ ನೀಡಿದ್ದರ  ಪರಿಣಾಮ ಕೂಲಿಕಾರರು ಕೆಲಸವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅನ್ನಕ್ಕೆ ಕಿಚ್ಚಿಟ್ಟ ನೀರು!: `ದಿನಾಲೂ ಕೂಲಿ ಕೆಲ್ಸಕ್ಕ ಆ ಕಡೆ ಹೋಗ್ತಿದ್ದೀವಿ. ಆದ್ರ ಒಂದು ತಿಂಗಳಿಂದ ನದ್ಯಾಗ ನೀರು ಬಿಟ್ಹಾಗಿಂದ ನಮಗ ಭಾಳ ತ್ರಾಸ್ ಆಗೈತ್ರಿ. ಆ ಕಡಿ ರೈತರು ದಿನಾ ರೂ, 80 ಕೊಡ್ತಿದ್ರು. ರೂ, 10 ಹರ್ಗೋಲಿಗೆ ಹೋದ್ರಾ ರೂ,70 ಉಳಿತಿತ್ತು' ಎಂದು ಆಶಾಬಿ ನೋವಿನಿಂದ ನುಡಿದರು.

`ಈ ಕಡಿ (ಆನೆಗೊಂದಿಯಲ್ಲಿ) ಕೆಲ್ಸಾ ಮಾಡೂಣ ಅಂದ್ರ, ಇಲ್ಲಿ ಕೆಲ್ಸಾ ಇಲ್ಲ. ಹಿಂಗಾಗಿ ಆ ಕಡಿ ಕೆಲ್ಸಾ ಇಲ್ಲ, ಈ ಕಡಿ ರೊಕ್ಕಾ ಇಲ್ಲದ್ಹಾಂಗ ಆಗೈತ್ರಿ' ಎಂದು ಜಿಂಕೇರಿ ದ್ಯಾಮವ್ವ, ಅಲ್ಲಾಳು ನರಸಮ್ಮ, ಅಶ್ವತ್ಥಮ್ಮ, ಗೀತಾ ಮೊದಲಾದವರು ಹೇಳುತ್ತಾರೆ.

ಕೂಡಲೆ ಜಿಲ್ಲಾಡಳಿತ ಗಮನ ಹರಿಸಬೇಕು, ಸಂಬಂಧಿತ ಕಂದಾಯ ಇಲಾಖೆ ಸಮೀಕ್ಷೆ ಕೈಗೊಂಡು ಆನೆಗೊಂದಿ ಮತ್ತು ವಿರೂಪಾಪುರಗಡ್ಡೆಯಲ್ಲಿ ಗಂಜಿಕೇಂದ್ರ ಸ್ಥಾಪಿಸಬೇಕು ಎಂದು ಆನೆಗೊಂದಿಯ ಹರಿಹರ ದೇವರಾಯ ಯುವಕ ಸಂಘದ ಯುವಕರು ಒತ್ತಾಯಿಸಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಪರಿಣಾಮ ಹೆಚ್ಚುವರಿ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದಾಗಿ ವಿರುಪಾಪುರ ಗಡ್ಡೆ ಈಗಾಗಲೇ ನಡುಗಡ್ಡೆಯಾಗಿದ್ದು, ನದಿಪಾತ್ರದ ಜನ ಜೀವನ ಅಸ್ತವ್ಯಸ್ತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT