ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

ಶಿವಮೊಗ್ಗ ತಾಲ್ಲೂಕು ಗೋಪಶೆಟ್ಟಿಕೊಪ್ಪ ರೈತರಿಂದ ಪ್ರತಿಭಟನೆ
Last Updated 17 ಜನವರಿ 2013, 5:47 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗುವಳಿ ಕೃಷಿ ಜಮೀನನ್ನು ನಿವೇಶಗಳನ್ನಾಗಿ ಪರಿವರ್ತಿಸಲು ಮುಂದಾದ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮ ವಿರೋಧಿಸಿ ತಾಲ್ಲೂಕಿನ ಗೋಪಶೆಟ್ಟಿಕೊಪ್ಪ ಗ್ರಾಮದ ರೈತರು ಜಮೀನಿನಲ್ಲೇ ಬುಧವಾರ ಪ್ರತಿಭಟನೆ ನಡೆಸಿದರು.

ಗೋಪಶೆಟ್ಟಿಕೊಪ್ಪದ ಸರ್ವೇ ನಂ. 95ರಲ್ಲಿ ಉಳುಮೆ ಮಾಡುತ್ತಿರುವ ಜಮೀನನ್ನು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದು ಸರ್ಕಾರದ ರೈತ ವಿರೋಧಿ ನೀತಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಸರ್ಕಾರ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಪೂರಕ ವರದಿಯೊಂದಿಗೆ ನಕ್ಷೆ ತಯಾರಿಸಲು ಜಂಟಿ ಅಳತೆ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಸಹಕರಿಸುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು.

ಈಗಾಗಲೇ ನಡೆದ ಪ್ರಾಧಿಕಾರದ ಸಭೆಗಳಲ್ಲಿ ರೈತರು ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಅಲ್ಲದೇ, ಇದೇ ಸರ್ವೇ ನಂಬರ್‌ನಲ್ಲಿ 37 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ ಕೆರೆ ಇದೆ. ಇದು ಜಮೀನುಗಳಿಗೆ ನೀರಿನ ಆಧಾರವಾಗಿದೆ. ಈ ಹಿಂದೆ ಇದೇ ಗ್ರಾಮದ ಕೆಲ ಜಮೀನುಗಳನ್ನು ರಾಜ್ಯ ಗೃಹ ಮಂಡಳಿ ಬಲವಂತಾಗಿ ವಶಪಡಿಸಿಕೊಂಡಿದೆ. ಹಾಗೆಯೇ, ತುಂಗಾ ಮೇಲ್ದಂಡೆ ಕಾಲುವೆ ರೈತರ ಜಮೀನಿನ ಮೇಲೆ ಹಾದು ಹೋಗಿರುತ್ತದೆ. ಆದರೆ, ಇಲ್ಲಿಯವರೆಗೆ  ಪರಿಹಾರ ಸಿಕ್ಕಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿದ ಜಮೀನು ಹಸಿರು ನಕ್ಷೆ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲದೇ, ಕೆರೆಯ ಕೆಳಭಾಗದಲ್ಲಿ ಅಡಿಕೆ ತೋಟ, ತೆಂಗಿನ ತೋಟಗಳೂ ಇವೆ. ಈ ಆದಾಯ ಬಿಟ್ಟರೆ ಬೇರೆ ಯಾವ ಆದಾಯ ಮೂಲಗಳು ರೈತರಿಗೆ ಇಲ್ಲ. ಈ ಕೆರೆ ಕಾಮಗಾರಿಗೆ ಮುಖ್ಯಮಂತ್ರಿ ಅನುದಾನದಡಿ ರೂ. 1 ಕೋಟಿ ಮಂಜೂರು ಆಗಿದೆ. ಇಷ್ಟಾದರೂ ಇಲ್ಲಿ ವಸತಿ ಉದ್ದೇಶಕ್ಕಾಗಿ ಭೂಸ್ವಾಧೀನಕ್ಕೆ ಮುಂದಾಗುವುದು ಸರಿ ಅಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಭೂಸ್ವಾಧೀನದ ಉದ್ದೇಶ ಕೈ ಬಿಡಬೇಕು. ರೈತರು ನೆಮ್ಮದಿಯಿಂದ ಜೀವಿಸುವಂತೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಗ್ರಾಮಸ್ಥರಾದ ಮಂಜಪ್ಪ, ರುದ್ರೇಶಪ್ಪ, ಕೆಂಚಮ್ಮ, ಸುಶೀಲಮ್ಮ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT