ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಮನವಿ

Last Updated 5 ಜುಲೈ 2013, 20:24 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಕೃಷಿ ವಸ್ತು ಸಂಗ್ರಹಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಆರ್) ಕಾರ್ಯದರ್ಶಿ ಡಾ.ಎಸ್.ಅಯ್ಯಪ್ಪನ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಹೆಬ್ಬಾಳ ಕೃಷಿ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ವಸ್ತು ಸಂಗ್ರಹಾಲಯ ಸ್ಥಾಪನೆಯಿಂದ ಕೃಷಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಸಹಾಯವಾಗಲಿದೆ. ಹಳೆಯ ವಿದ್ಯಾರ್ಥಿಗಳ ಸಂಘದ ಆಶಯವೂ ಇದೇ ಆಗಿದೆ. ಐಸಿಆರ್‌ನಿಂದಲೂ ಅಗತ್ಯ ಸಹಾಯ ನೀಡಲಾಗುವುದು ಎಂದರು.

ಸಮಾರಂಭ ಉದ್ಘಾಟಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ ಇದಕ್ಕೆ ಪ್ರತಿಕ್ರಿಯಿಸಿ, `ಕೃಷಿ ವಸ್ತು ಸಂಗ್ರಹಾಲಯ ಸ್ಥಾಪಿಸುವುದು ದೊಡ್ಡದಲ್ಲ. ಅದನ್ನು ಸ್ಥಾಪಿಸಿದ ಮೇಲೆ ಬೀಗ ಹಾಕುವಂತೆ ಆಗಬಾರದು. ರೈತರು ಮತ್ತು ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅಗತ್ಯ ಸಲಹೆಗಳನ್ನು ನೀಡಿದಲ್ಲಿ ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಕೃಷಿ ವಿ.ವಿ ನಿವೃತ್ತ ಕುಲಪತಿ ಡಾ.ಆರ್.ದ್ವಾರಕೀನಾಥ್ ಮಾತನಾಡಿ, `ಮಳೆ ಆಧಾರಿತ ಕೃಷಿ ಭೂಮಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಒಣಭೂಮಿಯಲ್ಲೂ ಹೆಚ್ಚು ಇಳುವರಿ ತೆಗೆಯುವ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ. ಇದಕ್ಕೆ ವಿಸ್ತರಣಾ ಕಾರ್ಯಕರ್ತರ ಕೊರತೆ ಇದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು' ಎಂದು ಮನವಿ ಮಾಡಿದರು.

`ಈ ಹಿಂದೆ ರೈತರು ಯಾವ ಕಾಲದಲ್ಲಿ ಯಾವ ಬೀಜ ಬಿತ್ತಬೇಕು, ಗೊಬ್ಬರ ಇತ್ಯಾದಿ ಬಗ್ಗೆ ಯಾರನ್ನೂ ಅವಲಂಬಿಸುವ ಅಗತ್ಯವಿರಲಿಲ್ಲ. ಆದರೆ ಇಂದು ಯೋಜನಾ ಆಯೋಗ, ಕೃಷಿ ಇಲಾಖೆ ಮತ್ತು ಐಸಿಆರ್‌ಗಳಿಂದ ನಿರ್ಧರಿಸಲ್ಪಡುತ್ತಿದ್ದು, ಜೀವನಾಧಾರಿತ ಕೃಷಿ ಅಭಿವೃದ್ಧಿಗೆ ಗಮನ ನೀಡಬೇಕಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿಲ್ಲ. ಆದರೂ ಪತ್ರಿಕೆಗಳಲ್ಲಿ ಸಾಕಷ್ಟು ಮಳೆಯಾಗಿದೆ ಎಂಬ ವರದಿಯಾಗುತ್ತಿದ್ದು, ವಸ್ತುಸ್ಥಿತಿಯ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕು' ಎಂದರು.

ಕೃಷಿ ವಿ.ವಿ ಕುಲಪತಿ ಡಾ.ಕೆ. ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ವಿ.ವೀರಭದ್ರಯ್ಯ, ವಿಸ್ತರಣಾ ನಿರ್ದೇಶಕ ಡಾ.ಎನ್. ನಾಗರಾಜ್, ಶಿಕ್ಷಣ ನಿರ್ದೇಶಕ ಡಾ.ಡಿ.ಪಿ.ಕುಮಾರ್, ನಿವೃತ್ತ ಕುಲಪತಿ ಡಾ.ಜಿ.ಕೆ.ವಿರೇಶ್ ಉಪಸ್ಥಿತರಿದ್ದರು.


ರೈತನ ಮಗಳ ಅಂತರಾಳ...
`ನನ್ನ ತಂದೆ ರೈತ. ರೈತನ ಮಗಳಾಗಿರುವ ಕಾರಣ ರೈತರು ಕೃಷಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಅರಿವು ನನಗೆ ಇದೆ. ಅಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮೂಲಕ ನಾಡಿನ ರೈತರಿಗೆ ನೆರವಾಗಬೇಕು' ಎಂಬುದು ನನ್ನ ಗುರಿ.

ಬೆಂಗಳೂರು ಕೃಷಿ ವಿಶ್ವವಿದ್ಯಾ ಲಯದ ವ್ಯಾಪ್ತಿಯಲ್ಲಿ ಎರಡು ವರ್ಷದ ಡಿಪ್ಲೊಮಾ ಕೃಷಿಗೆ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಪಡೆದ ಮಂಡ್ಯ ಜಿಲ್ಲೆಯ ನಂಜೇಗೌಡನ ಕೊಪ್ಪಲು ಗ್ರಾಮದ ವಿದ್ಯಾರ್ಥಿನಿ ಎಸ್.ಶಾಂಭವಿ ಅವರ ಮಾತಿದು.

`ಭಾರತ ಕೃಷಿ ಆಧಾರಿತ ದೇಶ. ಮಳೆಯಾಧಾರಿತ ಒಣಭೂಮಿಯಲ್ಲಿ ಕೃಷಿ ಮಾಡುವ ರೈತರು ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಅಂತಹ ರೈತರಿಗೆ ಸೂಕ್ತ ಸಲಹೆ ನೀಡಿ, ಕೃಷಿಯ ಅಭಿವೃದ್ಧಿಗೆ ನೆರವಾಗಬೇಕು ಎಂಬುದು ನನ್ನ ಗುರಿ. ಆದರೆ ಉನ್ನತ ಶಿಕ್ಷಣ ಮುಂದುವರಿಸಲು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಕೆಲಸ ಹುಡುಕಿಕೊಳ್ಳಬೇಕಿದೆ. ಹಾಗೆಯೇ ಓದನ್ನೂ ಮುಂದುವರಿಸಬೇಕು ಎಂದು ಕೊಂಡಿದ್ದೇನೆ' ಎಂದು ಹೇಳಿದರು.

ಪೋಷಕರಾದ ಶಿವನಂಜಯ್ಯ ಮತ್ತು ಮಹದೇವಮ್ಮ ಅವರು, `ಕುಟುಂಬ ನಿರ್ವಹಣೆಗೆ ಎರಡು ಎಕರೆ ಒಣಭೂಮಿ ಬಿಟ್ಟರೆ ಬೇರೆ ಆಧಾರ ವಿಲ್ಲ. ಕಳೆದ ಸಲ ಮಳೆ ಕೈಕೊಟ್ಟಿರುವ ಕಾರಣ ಯಾವ ಬೆಳೆಯೂ ಕೈ ಹತ್ತ ಲಿಲ್ಲ. ಈ ವರ್ಷ ಏನಾಗಲಿದೆಯೋ ಗೊತ್ತಿಲ್ಲ.

ಮಗಳ ಉನ್ನತ ವಿದ್ಯಾಭ್ಯಾಸದ ಕನಸು ನನಸು ಮಾಡುವ ಶಕ್ತಿ ನಮಗಿಲ್ಲ. ತಾನೇ ದುಡಿದು ಓದು ವುದಾಗಿ, ಮನೆ ಜವಾಬ್ದಾರಿಯನ್ನೂ ನಿರ್ವಹಿಸುವುದಾಗಿ ಹೇಳುತ್ತಿದ್ದಾಳೆ. ಮಗಳ ಸಾಧನೆ ಮತ್ತು ಧೈರ್ಯ ನಮಗೆ ಸಂತೋಷ ತಂದಿದೆ' ಎಂದು ಗದ್ಗದಿತರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT