ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ತೋಟದಲ್ಲಿ ಆರ್ಕಿಡ್‌ ಸುಂದರಿಯರು!

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೊನ್ನೆ ಶನಿವಾರ ಲಾಲ್‌ಬಾಗ್‌ (ಕೆಂಪುತೋಟ) ಎಂದಿನಂತಿರಲಿಲ್ಲ. ಅಲ್ಲಿನ ಡಾ.ಎಂ.ಎಚ್‌. ಮರಿಗೌಡ ಸಭಾಂಗಣದಲ್ಲಿ ಸುಂದರಿಯರ ದಂಡೇ ನೆರೆದಿತ್ತು. ನೋಡಲು ಒಬ್ಬರಿಗಿಂತ ಒಬ್ಬರು ಚೆಂದ. ಯಾರನ್ನು ನೋಡಲಿ, ಯಾರನ್ನು ಬಿಡಲಿ ಎಂದು ನೋಡುಗರು ಕ್ಷಣ ತಬ್ಬಿಬ್ಬಾಗುತ್ತಿದ್ದರು.

ಸ್ವಲ್ಪ ಸಾವರಿಸಿಕೊಂಡು ಇಷ್ಟಪಟ್ಟ ಸುಂದರಿಯರನ್ನು ಕೆಲವರು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದು ತೃಪ್ತಿಪಟ್ಟರು. ಮತ್ತೆ ಕೆಲವರು ಅಷ್ಟಕ್ಕೇ ತೃಪ್ತಿಯಾಗದೇ ಆ ಸುಂದರಿಯರನ್ನು ಮನೆಗೇ ಕರೆದೊಯ್ದರು! ಯಾರಪ್ಪ ಈ ಸುಂದರಿಯರು ಅಂತೀರಾ?... ಅವರು ಆರ್ಕಿಡ್‌ ಸುಂದರಿಯರು...!

–ಹೌದು, ಶನಿವಾರ ಮತ್ತು ಭಾನುವಾರ (ಸೆ.21, 22) ಲಾಲ್‌ಬಾಗ್‌ನಲ್ಲಿ ಆರ್ಕಿಡ್‌ ಸುಂದರಿಯರದ್ದೇ ಕಾರುಬಾರು. ರಾಜ್ಯವಲ್ಲದೆ ಹೊರ ರಾಜ್ಯ ಮತ್ತು ದೇಶಗಳ ಸುಮಾರು 50ಕ್ಕೂ ವಿವಿಧ ಬಗೆಯ ಆರ್ಕಿಡ್‌ ಸುಂದರಿಯರು ‘ದಿ ಆರ್ಕಿಡ್‌ ಸೊಸೈಟಿ ಆಫ್ ಕರ್ನಾಟಕ’ ಆಯೋಜಿಸಿದ್ದ ‘ಆರ್ಕಿಡ್‌ ಷೋ 2013’ರಲ್ಲಿ ಭಾಗವಹಿಸಿದ್ದರು. ಕಣ್ಮನ ಸೆಳೆಯುವ ಬಣ್ಣ, ಒನಪು, ವೈಯಾರಗಳಿಂದ ಪುಷ್ಪಪ್ರಿಯರ ಮನ ಸೆಳೆದರು. ಕೆಲ ಸುಂದರಿಯರು ಪುಷ್ಪಪ್ರಿಯರ ಮನವನ್ನಷ್ಟೇ ಅಲ್ಲ  ಮನೆಯನ್ನೂ ಅಲಂಕರಿಸಿದರು.

ದುಬಾರಿ ಬೆಲೆ ತೆತ್ತು ತಮ್ಮ ಇಷ್ಟದ ಆರ್ಕಿಡ್‌ ಖರೀದಿಸಿದ ಪುಷ್ಪಪ್ರಿಯರು, ಅವುಗಳನ್ನು ಬೆಳೆಸುವ ಬಗ್ಗೆಯೂ ಮೇಳದಲ್ಲಿ ಮಾಹಿತಿ ಪಡೆದರು. ಮತ್ತೆ ಕೆಲವರು ಆರ್ಕಿಡ್‌ ಕುರಿತು ತಮಗಿದ್ದ ಅನುಮಾನ, ಪ್ರಶ್ನೆಗಳಿಗೆ ಉತ್ತರ ಪಡೆದರು. ಮೇಳದಲ್ಲಿ ಸುಮಾರು 30 ಹೈಬ್ರಿಡ್‌ ತಳಿಯ ಆರ್ಕಿಡ್‌ಗಳನ್ನು ಪ್ರದರ್ಶಿಸಲಾಗಿತ್ತು. ಶಿರಸಿ, ಮಡಿಕೇರಿ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪುಷ್ಪ ಕೃಷಿಕರು ಮೇಳದಲ್ಲಿ ವಿವಿಧ ಬಗೆಯ ಆರ್ಕಿಡ್‌ಗಳನ್ನು ಪ್ರದರ್ಶಿಸಿದರು.

ಬಹುಬೇಗ ಬಾಡದೇ, ನೋಡುಗರ ಮನಸೆಳೆಯುವ ಆರ್ಕಿಡ್‌ಗೆ ಪುಷ್ಪೋದ್ಯಮದಲ್ಲಿ ಅಪಾರ ಬೇಡಿಕೆ. ಹಾಗಾಗಿ, ಆರ್ಕಿಡ್‌ ಬೆಳೆಯುವುದು ಈ ದಿನಗಳಲ್ಲಿ ಲಾಭಕರ ಉದ್ಯಮವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ಪಟ್ಟರು ಮೇಳಕ್ಕೆ ಭೇಟಿ ನೀಡಿದ್ದ ಗೃಹಿಣಿ ಸವಿತಾ. ವಿಶ್ವದಾದ್ಯಂತ ಒಟ್ಟು 25 ಸಾವಿರ ಜಾತಿಯ ಆರ್ಕಿಡ್‌ಗಳು ಕಂಡು ಬರುತ್ತವೆ.

ಭಾರತದಲ್ಲಿ 1,600 ಜಾತಿಯ ಆರ್ಕಿಡ್‌ಗಳಿವೆ. ಕರ್ನಾಟಕ ದಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟದ ವಾತಾವರಣ ಆರ್ಕಿಡ್‌ಗೆ ಸೂಕ್ತ. ಜನವರಿ–ಏಪ್ರಿಲ್ ತನಕದ ಹವಾಮಾನ ಹೊರತುಪಡಿಸಿದರೆ ಬೆಂಗಳೂರು ಹವಾಗುಣದಲ್ಲಿ ಆರ್ಕಿಡ್‌ ಬೆಳೆಯಲು ಅಡ್ಡಿಯಿಲ್ಲ. ಮುಖ್ಯವಾಗಿ ತೇವಾಂಶ ಕಾಪಾಡಿಕೊಳ್ಳುವುದು ಅಗತ್ಯ ಎನ್ನುತ್ತಾರೆ ದಿ ಆರ್ಕಿಡ್‌ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷ ಡಾ.ಕೆ.ಎಸ್‌. ಶಶಿಧರ್‌.

ಮೇಳದಲ್ಲಿ ಫಲನೊಪ್ಪಿಸ್, ಕ್ಲಾಟೇಯಾ, ಡೆಂಡ್ರೋಬಿಯಂ, ವೊಕೊರಾ, ಪ್ಯಾಪಿಲೊ ಪೀಡಿಯಂ  ಸೇರಿದಂತೆ ಕಾಡಿನ ಪುಷ್ಪಗಳು, ಮಿಶ್ರ ತಳಿಯ ಆರ್ಕಿಡ್ ಪುಷ್ಪಗಳನ್ನು ಪ್ರದರ್ಶಿಸಲಾಗಿದೆ. ಮೇಳಕ್ಕೆ ತೋಟಗಾರಿಕೆ ಇಲಾಖೆಯಿಂದ ಉತ್ತಮ ಸಹಕಾರ ದೊರೆತಿದೆ. ಆರ್ಕಿಡ್ ಪ್ರಿಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ವರ್ಷ ಗಾಜಿನ ಮನೆಯಲ್ಲಿ ಆರ್ಕಿಡ್‌ ಪುಷ್ಪ ಮೇಳ ನಡೆಸುವುದಾಗಿ ತೋಟಗಾರಿಕೆ ಇಲಾಖೆ ಭರವಸೆ ನೀಡಿದೆ ಎಂದು ಅವರು ಸಂತಸದಿಂದ ನುಡಿದರು.

ಏನಿದು ಆರ್ಕಿಡ್‌ ಸೊಸೈಟಿ ?
2005ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ  ‘ದಿ ಅರ್ಕಿಡ್‌ ಸೊಸೈಟಿ ಆಫ್ ಕರ್ನಾಟಕ’; ಆರ್ಕಿಡ್‌ ಬೆಳೆಯುವ, ಜನಪ್ರಿಯಗೊಳಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಮುಖ್ಯವಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆರ್ಕಿಡ್‌ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಅದನ್ನು ಉದ್ಯಮವಾಗಿ ಬೆಳೆಸುವ ನಿಟ್ಟಿ ನಲ್ಲಿ ಸೊಸೈಟಿ ಕಾರ್ಯ ನಿರ್ವಹಿಸುತ್ತದೆ.

ಆರ್ಕಿಡ್‌ ಪ್ರಿಯರಿಗಾಗಿ ಎರಡು ತಿಂಗಳಿಗೊಮ್ಮೆ ತರಬೇತಿ, ಪ್ರಾತ್ಯಕ್ಷಿಕೆ, ಸಂವಾದಗಳನ್ನೂ ಸೊಸೈಟಿ ಆಯೋಜಿಸುತ್ತದೆ. ಆರ್ಕಿಡ್‌ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಸೊಸೈಟಿಯ ಸದಸ್ಯರಿಗೆ ಭಾಗವಹಿಸಲು ಅವಕಾಶವಿದೆ. ತೋಟಗಾರಿಕೆ ಇಲಾಖೆ, ಮೈಸೂರು ತೋಟಗಾರಿಕೆ ಸೊಸೈಟಿ ಆಯೋಜಿಸುವ ಗಣ ರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಗಳ ಪುಷ್ಪ ಪ್ರದರ್ಶನದಲ್ಲಿಯೂ ಇದು ಪಾಲ್ಗೊಳ್ಳುತ್ತದೆ.

ಆರ್ಕಿಡ್‌ ಬೆಳೆಯಲು ಮಹಿಳಾ ಸ್ವಸಹಾಯ ಸಂಘಗಳು, ಹವ್ಯಾಸಿಗರು ಮತ್ತು ಕೃಷಿಕರನ್ನು ಆಕರ್ಷಿಸುವುದು ಸೊಸೈಟಿಯ ಮುಖ್ಯಕಾರ್ಯ ಚಟುವಟಿಕೆಗಳು. ಸೊಸೈಟಿಯಲ್ಲಿ 300ಕ್ಕೂ ಹೆಚ್ಚು ಸದಸ್ಯರಿದ್ದು, ದಿನೇದಿನೇ ಆಸಕ್ತರ ಸಂಖ್ಯೆ ಹೆಚ್ಚುತ್ತಿರುವುದು ಆರ್ಕಿಡ್‌ನ ಜನಪ್ರಿಯತೆ ಸೂಚಿಸುತ್ತದೆ.

ಸೊಸೈಟಿಯಿಂದ ಈ ವರ್ಷ ಆರ್ಕಿಡ್‌ಗೆ ಸಂಬಂಧಿಸಿದಂತೆ ಪುಸ್ತಕ ಬ್ಯಾಂಕ್ ಕೂಡ ಆರಂಭಿಸಲಾಗಿದೆ.  ಸೊಸೈಟಿಯ ಸದಸ್ಯರಿಗೆ ನಿಯಮಿತವಾಗಿ ತಜ್ಞರಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಲಾಗುವುದು. ಆಸಕ್ತರು ಸೊಸೈಟಿಯ ಸದಸ್ಯರಾಗಬಹುದು.

ವಿಳಾಸ: ದಿ ಆರ್ಕಿಡ್‌ ಸೊಸೈಟಿ ಆಫ್‌ ಕರ್ನಾಟಕ, ನಂ. 766, 13ನೇ ಮೇನ್‌, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು–560010.
ವೆಬ್‌ಸೈಟ್www.toskar.org
ಇ–ಮೇಲ್‌:  toskar2008@gmail.com
ಮೊಬೈಲ್‌: 94483 51170, 99451 80018, 98860 00161.

–ಮಂಜುಶ್ರೀ ಕಡಕೋಳ. ಚಿತ್ರಗಳು: ಎಸ್.ಕೆ. ದಿನೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT