ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಬಂಗಾರಕ್ಕೆ ಭೀತಿ!

Last Updated 12 ಜೂನ್ 2012, 19:30 IST
ಅಕ್ಷರ ಗಾತ್ರ

ಕೆಂಪು ಬಂಗಾರ ಎಂದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ರೈತರಿಗೆ ಈ ಬಾರಿ ಕೈಕೊಟ್ಟಿದೆ. ಕಡುಗೆಂಪು ಬಣ್ಣ, ಉತ್ತಮ ರುಚಿ ಮತ್ತು ವಾಸನೆ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರೀಯವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಮಾರುಕಟ್ಟೆ, ಪ್ರಸಿದ್ಧಿ ಗಳಿಸಿರುವ ಬ್ಯಾಡಗಿ ತಳಿ ಮೆಣಸಿನಕಾಯಿ ತನ್ನನ್ನು ನಂಬಿದ ರೈತನ ಕಣ್ಣುಗಳಿಗೆ `ಖಾರ~ದ ತಿರುಗೇಟು ನೀಡಿದೆ; ಪರಿಣಾಮ ಸಾವಿರಾರು ಕುಟುಂಬಗಳ ಕಣ್ಣಲ್ಲಿ ನೀರು ಹರಿಯುತ್ತಿದೆ!

ಯುರೋಪ್ ಖಂಡದ ಪ್ಯಾಪ್ರಿಕಾ ತಳಿಯ ನಂತರ ಏಷ್ಯಾದಲ್ಲಿಯೇ `ಬ್ಯಾಡಗಿ ತಳಿ ಮೆಣಸಿನಕಾಯಿ~ ತನ್ನ ವೈಶಿಷ್ಟ್ಯಕ್ಕಾಗಿ ಜನಪ್ರಿಯ. ಆದರೆ ಒಣ ಮೆಣಸಿನಕಾಯಿಗೆ ಹೆಸರುವಾಸಿಯಾದ `ಬ್ಯಾಡಗಿ ಮಾರುಕಟ್ಟೆ~ಗೆ ಮಾರ್ಚ್‌ನಲ್ಲಿ ಕುಲಾಂತರಿ ತಳಿಯ ಮಹಾಪೂರವೇ ಹರಿದುಬಂದಿದೆ.

ಇದು ಬ್ಯಾಡಗಿ ಮೆಣಸಿನಕಾಯಿಯನ್ನೇ ಹೋಲುತ್ತಿದ್ದರೂ ಬಣ್ಣ, ರುಚಿ, ವಾಸನೆ, ಗುಣಮಟ್ಟದಲ್ಲಿ ಹಿಂದೆಬಿದ್ದಿದೆ. ಇಂಥ ಕುಲಾಂತರಿ ತಳಿ ಮೆಣಸಿನಕಾಯಿಯನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ ಎನ್ನುವುದು ವ್ಯಾಪಾರಸ್ಥರ ಮಾತು.

ಇದನ್ನು ಆಂತರಿಕವಾಗಿಯಷ್ಟೆ ಬಳಸಬಹುದು. ಈ ಮೆಣಸಿನಕಾಯಿ ಸಂಸ್ಕರಿಸಿ ಒಲಿಯೋರೆಸಿನ್ ದ್ರಾವಣ ಉತ್ಪಾದಿಸಲು ಸಾಧ್ಯವಿಲ್ಲ. ಪರಿಣಾಮ ವಿದೇಶದಲ್ಲಿನ ಬೇಡಿಕೆ ಕಡಿಮೆಯಾಗಲಿದ್ದು ರಫ್ತು ಪ್ರಮಾಣವೂ ಕುಸಿಯಲಿದೆ. ಇದರಿಂದ ಮೆಣಸಿನಕಾಯಿ ಬೆಲೆಯಲ್ಲೂ ಭಾರಿ ಇಳಿಕೆ ಆಗಲಿದೆ ಎನ್ನುವುದು ಉದ್ಯಮಿಗಳ ಕಳವಳಕ್ಕೂ ಕಾರಣವಾಗಿದೆ.
ಬ್ಯಾಡಗಿ ಮಾರುಕಟ್ಟೆಗೆ ಬಂದ ಶೇ 80ರಷ್ಟು ಮೆಣಸಿನಕಾಯಿ ಒಲಿಯೋರೆಸಿನ್ ದ್ರಾವಣ ತಯಾರಿಕೆಗೆ ಬಳಕೆಯಾಗುತ್ತಿದೆ. ಈ ಕಾರಣಕ್ಕೆ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚು. 50 ಸಾವಿರ ಟನ್ ಮೆಣಸಿನಕಾಯಿ ಒಲಿಯೋರೆಸಿನ್ ದ್ರಾವಣವಾಗಿ ರಫ್ತಾಗುತ್ತದೆ. ಕೊರಿಯಾ, ಜಪಾನ್, ಅಮೆರಿಕದಲ್ಲಿ ಆಹಾರ, ಔಷಧ, ಕುಕ್ಕಟ ಮತ್ತು ಕಾಸ್ಮೆಟಿಕ್ ಉದ್ಯಮದಲ್ಲಿ ಬಳಕೆಯಾಗುತ್ತದೆ.

ಭಾರತದಲ್ಲಿ ಒಲಿಯೋರೆಸಿನ್ ಉತ್ಪಾದಿಸುವ ನಾಲ್ಕೈದು ಘಟಕಗಳಿವೆ. ಕೊಚ್ಚಿನ್‌ನ ಸಿಂಥೈಟ್ ಇಂಡಿಯ ಎಂಬ ಕಂಪೆನಿ ಹರಿಹರ ಮತ್ತು ಆಂಧ್ರಪ್ರದೇಶದ ಕಮ್ಮಂನಲ್ಲಿ ಘಟಕ ಹೊಂದಿದೆ. ಕೇರಳ ಮೂಲದ್ದೇ ಪ್ಲಾಂಟ್ಸ್ ಮತ್ತು ಲಿಪಿಡ್ಸ್ ಕಂಪೆನಿಯ ಘಟಕ ದೊಡ್ಡಬಳ್ಳಾಪುರದಲ್ಲಿವೆ. ವಿದೇಶದ ಒಟ್ಟು ಬೇಡಿಕೆಯ ಶೇ 50ರಷ್ಟು ನಮ್ಮಲ್ಲಿಂದಲೇ ಪೂರೈಕೆಯಾಗುತ್ತಿದೆ.

ಆದರೆ ಕಳೆದ ಮೂರು ವರ್ಷಗಳಿಂದ ಚೀನಾ ಕೂಡಾ ಈ ನಿಟ್ಟಿನಲ್ಲಿ ಮುಂದುವರಿದಿದೆ. ಮೆಣಸಿನಕಾಯಿಯನ್ನು ಏಷ್ಯಾಖಂಡದಲ್ಲಿ ಆಹಾರಕ್ಕೆ ಬಳಸುತ್ತಾರೆ. ದುಬೈ, ಸಿಂಗಾಪುರ ಮತ್ತಿತರ ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಕೆ.ಜಿ. ಲೆಕ್ಕದಲ್ಲಿ ಪ್ಯಾಕ್ ಆಗಿ ಮಲೇಷ್ಯಾಕ್ಕೆ ರವಾನೆಯಾಗುತ್ತದೆ.

ಸ್ವಲ್ಪ ಯುರೋಪ್ ದೇಶಗಳಿಗೂ ಪೂರೈಕೆಯಾಗುತ್ತದೆ ಎನ್ನುತ್ತಾರೆ ಉದ್ಯಮಿ-ಬ್ಯಾಡಗಿ ಎಪಿಎಂಸಿ ಸದಸ್ಯ ಜಗದೀಶಗೌಡ ಪಾಟೀಲ.ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ (ದೇಶೀ ತಳಿ) ಬೆಳೆಯುವ ಉತ್ತರ ಕರ್ನಾಟಕದಲ್ಲಿ ಬರ ಬಂದಿತ್ತು.

ಪರಿಣಾಮ ಬಿತ್ತನೆ ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೀಗಾಗಿ ಇಲ್ಲಿಯ ಮಾರುಕಟ್ಟೆಗೆ ಮೆಣಸಿನಕಾಯಿ ಕಡಿಮೆ ಬರಬಹುದೆಂದು ವ್ಯಾಪಾರಸ್ಥರು ನಿರೀಕ್ಷಿಸಿದ್ದರು. ಆದರೆ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆ ಹಾಗೂ ಆಂಧ್ರಪ್ರದೇಶದ ಗುಂಟೂರು, ಕಮ್ಮಂ ಮತ್ತು ವಾರಂಗಲ್ ರೈತರು ಹೆಚ್ಚು ಇಳುವರಿಯ ಕುಲಾಂತರಿ ಮೆಣಸಿನಕಾಯಿ ಬೆಳೆದು ಈ ನಿರೀಕ್ಷೆಯನ್ನು ತಲೆಕೆಳಗೆ ಮಾಡಿದ್ದಾರೆ.

ಬಳ್ಳಾರಿ, ರಾಯಚೂರು ಜಿಲ್ಲೆ ಹಾಗೂ ಆಂಧ್ರದ ಗಡಿಭಾಗದಲ್ಲಿ ಎಕರೆಗೆ 10-15 ಕ್ವಿಂಟಲ್ ಇಳುವರಿ ಬಂದಿದೆ. ಈ ಭಾಗದ ರೈತರೆಲ್ಲರೂ ಮೆಣಸಿನಕಾಯಿಯನ್ನು ಬ್ಯಾಡಗಿ ಮಾರುಕಟ್ಟೆಗೇ ತರುತ್ತಿರುವುದರಿಂದ ಆವಕವೂ ಹೆಚ್ಚಿದೆ. ಹಿಂದೆ ಈ ಮಾರುಕಟ್ಟೆಗೆ ಬ್ಯಾಡಗಿ ಮೆಣಸಿನಕಾಯಿಯೊಂದಿಗೆ ಹೆಚ್ಚು ಖಾರವಿರುವ ಗುಂಟೂರು ಮೆಣಸಿನಕಾಯಿ ಮಾತ್ರ ಆವಕವಾಗುತ್ತಿತ್ತು.

ಆದರೆ ಈ ವರ್ಷ ಕುಲಾಂತರ ತಳಿ ಮೆಣಸಿನಕಾಯಿ ಕೂಡಾ ಬಂದುಬಿದ್ದಿದೆ. ಪರಿಣಾಮ ನಾಲ್ಕೈದು ಬಾರಿ ಲಕ್ಷಕ್ಕಿಂತ ಹೆಚ್ಚು ಮೆಣಸಿನಕಾಯಿ ಚೀಲಗಳು ಒಂದೇ ದಿನ ಮಾರುಕಟ್ಟೆಗೆ ಬಂದು ಅಚ್ಚರಿ ಮೂಡಿಸಿದ್ದೂ ಇದೆ ಎನ್ನುತ್ತಾರೆ ವ್ಯಾಪಾರಿಗಳು.

`ಮಳೆಯಾಶ್ರಿತ ಮೆಣಸಿನಕಾಯಿ ಬೆಳೆ ಅತಿವೃಷ್ಟಿ-ಬರ ಎರಡೂ ಸೇರಿ ಇಳುವರಿ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ರೈತರು ಪರ್ಯಾಯ ಬೆಳೆ ಕಡೆಗೆ ಮುಖ ಮಾಡಿದ್ದಾರೆ. ಮೆಣಸಿನಕಾಯಿ ಬೆಳೆಯುವ ರೈತರು ಬಿಟಿ ಹತ್ತಿಗೆ ಬದಲಾಗಿದ್ದಾರೆ.

ಸತತ 3 ವರ್ಷ ಹತ್ತಿಯನ್ನೇ ಬೆಳೆದರೆ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ರೈತರಿಗೆ ತಿಳಿವಳಿಕೆ ನೀಡುವ ಮೂಲಕ ರೋಗರಹಿತ ಮೆಣಸಿನಕಾಯಿ ತಳಿ ಅಭಿವೃದ್ಧಿಪಡಿಸಿದಾಗ ಮಾತ್ರ ವಿದೇಶಿ ವಿನಿಮಯ ಹೆಚ್ಚಿಸಿಕೊಳ್ಳಲು ಸಾಧ್ಯ~ ಎನ್ನುವುದು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಅಭಿಮತ.

ದಾಖಲೆ ವಹಿವಾಟು
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಒಣ ಮೆಣಸಿನಕಾಯಿ ವಹಿವಾಟು ನಡೆಯುತ್ತದೆ. 2011-2012ರಲ್ಲಿ ರೂ 350 ಕೋಟಿ ವಹಿವಾಟು ನಡೆದಿದ್ದು, ರೂ. 5.15 ಕೋಟಿ  ಮಾರುಕಟ್ಟೆ ಸೆಸ್ ಸಂಗ್ರಹವಾಗಿದೆ.

ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಚೀಲ ಮೆಣಸಿನಕಾಯಿ ಆವಕ ನಾಲ್ಕೈದು ಬಾರಿ ಆಗಿದ್ದರೂ ರೂ 5 ಕೋಟಿ ಸೆಸ್ ಸಂಗ್ರಹಿಸಲಾಗಿಲ್ಲ. ಫೆಬ್ರುವರಿ ಅಂತ್ಯದವರೆಗೂ ಕಳೆದ ವರ್ಷದಷ್ಟೇ ಸೆಸ್ ಸಂಗ್ರಹವಾಗಿದ್ದರೂ, ಮಾರ್ಚ್‌ನಲ್ಲಿ ಬೆಲೆ ಕುಸಿತದಿಂದ ರೂ. 1.5 ಕೋಟಿಯಷ್ಟೇ ಸಂಗ್ರಹಿಸಲಾಗಿದೆ ಎನ್ನುತ್ತದೆ ಎಪಿಎಂಸಿ ಅಂಕಿ-ಅಂಶ.

ಇದರಲ್ಲಿ ಶೇ 1ರಷ್ಟನ್ನು ಮಾರುಕಟ್ಟೆ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಶೇ 0.5ರಷ್ಟನ್ನು ಆವರ್ತನಿಧಿಗೆ ಸಂಗ್ರಹಿಸಲಾಗುತ್ತದೆ. ಈ ವರ್ಷ 1 ಲಕ್ಷ ಕ್ವಿಂಟಲ್‌ಗಿಂತ ಹೆಚ್ಚು ಮೆಣಸಿನಕಾಯಿ ಮಾರಾಟ ಆಗಿದ್ದರೂ ತೋಟಗಾರಿಕಾ ಇಲಾಖೆ ನಿಗದಿಪಡಿಸಿದ ರೂ 6 ಕೋಟಿ ಸಂಗ್ರಹಿಸುವ ಗುರಿ ತಲುಪಲು ಸಾಧ್ಯವಾಗಿಲ್ಲ.

 ಕಳೆದ ವರ್ಷ 4.17 ಲಕ್ಷ ಕ್ವಿಂಟಲ್ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ, 0.67ಲಕ್ಷ ಕ್ವಿಂಟಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ, 1.52 ಲಕ್ಷ ಕ್ವಿಂಟಲ್ ಗುಂಟೂರು ಮೆಣಸಿನಕಾಯಿ ಮಾರಾಟವಾಗಿದೆ.

2010-11ರಲ್ಲಿ ಬ್ಯಾಡಗಿ ಮಾರುಕಟ್ಟೆಗೆ 5.51ಲಕ್ಷ ಕ್ವಿಂಟಲ್ ಒಣ ಮೆಣಸಿನಕಾಯಿ ಆವಕವಾಗಿತ್ತು. ರೂ 5.43 ಕೋಟಿ ಸೆಸ್ ಸಂಗ್ರಹಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿತ್ತು. 2009ರ ಇಡೀ ವರ್ಷದಲ್ಲಿ ರೂ 3.4 ಕೋಟಿ ಸೆಸ್ ಸಂಗ್ರಹವಾಗಿದ್ದರೆ, 2011ರ ಮಾರ್ಚ್ ತಿಂಗಳೊಂದರಲ್ಲಿಯೇ ರೂ 2.13 ಕೋಟಿ ಸೆಸ್ ಸಂಗ್ರಹವಾಗಿತ್ತು.

ಇದರಲ್ಲಿ ಸಿಂಹಪಾಲು ಬ್ಯಾಡಗಿ ಕಡ್ಡಿ ಮೆಣಸಿನಕಾಯಿ (3.49 ಲಕ್ಷ ಕ್ವಿಂಟಲ್), ಬ್ಯಾಡಗಿ ಡಬ್ಬಿ (1.05ಲಕ್ಷ ಕ್ವಿಂಟಲ್) ಹಾಗೂ ಗುಂಟೂರು (0.29ಲಕ್ಷ ಕ್ವಿಂಟಲ್) ಆಗಿತ್ತು ಎನ್ನುತ್ತದೆ ಅಂಕಿ-ಅಂಶ.

ಜಾಗತಿಕ ಉತ್ಪಾದನೆ; ಭಾರಿ ಬೇಡಿಕೆ
ವಿಶ್ವದಲ್ಲಿ ಶೇ 24ರಷ್ಟು ಮೆಣಸಿನಕಾಯಿ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನ ಚೀನಾದ್ದು(ಶೇ 22). ದೇಶದ ಮೆಣಸಿನಕಾಯಿಯ ಶೇ 92ರಷ್ಟು ಆಂತರಿಕವಾಗಿ ಬಳಕೆಯಾದರೆ ಶೇ 8ರಷ್ಟು ಒಲಿಯೋರೆಸಿನ್ (ದ್ರಾವಣ) ರೂಪದಲ್ಲಿ ರಫ್ತಾಗುತ್ತಿದೆ. ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಾಪುರ, ಮೆಕ್ಸಿಕೊ, ಅಮೆರಿಕ ಮತ್ತಿತರ ದೇಶಗಳಿಗೆ ಮೆಣಸಿನಕಾಯಿ ಪ್ರಮುಖವಾಗಿ ರಫ್ತಾಗುತ್ತಿದೆ.

ಭಾರತೀಯ ಮೂಲದವರೇ ಹೆಚ್ಚಿರುವ ದೇಶಗಳಲ್ಲಿ ಆಹಾರಕ್ಕೆ ಬಳಸಲಾಗುತ್ತಿದೆ. 2004-05ರಲ್ಲಿ ಮೆಣಸಿನಕಾಯಿ ಮೂಲಕವೇ 499 ಕೋಟಿ ವಿದೇಶಿ ವಿನಿಮಯ ಸಂಗ್ರಹವಾಗಿದೆ. 2008-09ರಲ್ಲಿ 1081 ಕೋಟಿ, 2009-10ರಲ್ಲಿ 1200 ಮತ್ತು 2010-11ರಲ್ಲಿ 1379.50 ಕೋಟಿ ವಹಿವಾಟು ನಡೆದಿದೆ.

ಕರ್ನಾಟಕದಿಂದ ಶೇ 13, ಆಂಧ್ರದಿಂದ ಶೇ 53, ಒರಿಸ್ಸಾದಿಂದ ಶೇ 7, ಮಹಾರಾಷ್ಟ್ರದಿಂದ ಶೇ 9, ತಮಿಳುನಾಡಿನಿಂದ ಶೇ 7, ಮಧ್ಯಪ್ರದೇಶದಿಂದ ಶೇ 2ರಷ್ಟು ರಫ್ತಾಗುತ್ತಿದೆ ಎನ್ನುತ್ತದೆ ತಮಿಳುನಾಡಿನ ವಿಶ್ವವಿದ್ಯಾಲಯವೊಂದರ ಅಧ್ಯಯನ ವರದಿ. ವರ್ಷದಿಂದ ವರ್ಷಕ್ಕೆ ರಫ್ತು ಹೆಚ್ಚುತ್ತಿರುವುದನ್ನೂ ಗಮನಿಸಬಹುದು.

ಉತ್ತರ ಕರ್ನಾಟಕದಲ್ಲಿ `ನಂದಿನಿ~
ಉದ್ಯಮಿ ಜಗದೀಶಗೌಡ ಪಾಟೀಲ ಬ್ಯಾಡಗಿಯಲ್ಲಿ `ನಂದಿನಿ~ ಮೆಣಸಿನಕಾಯಿ ಸಂಸ್ಕರಣ ಘಟಕ ಹೊಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಬ್ರಾಂಡ್‌ನ ಖಾರ- ಮಸಾಲ ಪುಡಿ ಪ್ರಸಿದ್ಧ. `ಗುಣಮಟ್ಟದಲ್ಲಿ ರಾಜಿ ಇಲ್ಲ. 30 ವರ್ಷದಿಂದ ಈ ಕ್ಷೇತ್ರದಲ್ಲಿದ್ದೇವೆ.

ಆರಂಭದಲ್ಲಿ ವರ್ಷಕ್ಕೆ 60 ಕ್ವಿಂಟಲ್ ಇದ್ದ ವ್ಯವಹಾರ 2011ರಲ್ಲಿ 1 ಸಾವಿರ ಕ್ವಿಂಟಲ್‌ಗೆ ಏರಿದೆ. ನಂದಿನಿ ಬ್ರಾಂಡ್‌ಗೆ ವಿದೇಶದಲ್ಲಿ ಬೇಡಿಕೆ ಕುದುರಿಸುವ ಉದ್ದೇಶದಿಂದ ಅಮೆರಿಕ(1991), ಇಂಡೋನೇಷ್ಯಾ (1996), ಯುರೋಪ್ (2000) ಸುತ್ತಿ ಬಂದಿದ್ದೇನೆ. ನಿರೀಕ್ಷೆಯಂತೆ ಯೋಜನೆ ಕೈಗೊಳ್ಳಲು ಸಾಧ್ಯವಾಗದ್ದರಿಂದ ಸುಮ್ಮನಾಗಿದ್ದೇನೆ.

ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಸ್ಕರಿಸಿ ಪುಡಿ ಮಾಡುವ ಘಟಕ ಇದೆ. ಹುಬ್ಬಳ್ಳಿಯಲ್ಲಿ ಪ್ಯಾಕಿಂಗ್ ಮಾಡಿ ಪೂರೈಸಲಾಗುತ್ತಿದೆ. ಸ್ಥಳೀಯವಾಗಿಯೂ ಭಾರಿ ಬೇಡಿಕೆ ಇದೆ~ ಎನ್ನುತ್ತಾರೆ ಅವರು.

ಸ್ವಿಟ್ಜರ್ಲೆಂಡ್ ಕಂಪೆನಿ ಪ್ರಶಂಸೆ

`ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಸ್ವಿಟ್ಜರ್ಲೆಂಡ್‌ನ ಡಿವಿಜಿಯಾನ್ ಕಂಪೆನಿಯ ಟ್ಯಾಂಗ್‌ರಾಬನ್ಸನ್ ಮತ್ತು  ಪಾಪ್‌ಬುಷ್ ನೇತೃತ್ವದ ನಿಯೋಗ ಇತ್ತೀಚೆಗೆ ಭೇಟಿ ನೀಡಿ `ಪ್ರಪಂಚದಲ್ಲಿಯೇ ಉತ್ಕೃಷ್ಟ ಗುಣಮಟ್ಟವನ್ನು ಬ್ಯಾಡಗಿ ಮೆಣಸಿನಕಾಯಿ ಹೊಂದಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ಈ ತಳಿಗೆ ನಮ್ಮಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ 26 ವರ್ಷಗಳಿಂದ ಈ ಮೆಣಸಿನಕಾಯಿಯನ್ನೇ ನಾವು ಒಲಿಯೋರೆಸಿನ್ ತಯಾರಿಸಲು ಬಳಸುತ್ತಿದ್ದೇವೆ. ಚೀನಾದಲ್ಲಿ ಹೆಚ್ಚು ಬೆಳೆಯುವ ಜೂಡೋ ಹೈಬ್ರಿಡ್ ತಳಿ ಮೆಣಸಿನಕಾಯಿ ಬ್ಯಾಡಗಿಗೆ ಸರಿಸಾಟಿ ಆಗಲಾರದು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಇರುವುದರಿಂದ ತಳಿ ಅಭಿವೃದ್ಧಿ ಆಗಬೇಕಾಗಿದೆ ಎಂಬುದು ಈ ನಿಯೋಗದ ಅಭಿಪ್ರಾಯ~ ಎನ್ನುತ್ತಾರೆ ಜಗದೀಶಗೌಡ ಪಾಟೀಲ.

ಉತ್ತೇಜನ- `ಸರ್ಕಾರಿ~ ಹೆಜ್ಜೆ!
ಮೆಣಸಿನಕಾಯಿ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ `ಎಸ್‌ಟಿಸಿಎಲ್~(ಸ್ಪೈಸ್ ಟ್ರೇಡಿಂಗ್ ಕಾರ್ಪೊರೇಷನ್ ಲಿ.) ಹಾವೇರಿಯ ಬ್ಯಾಡಗಿಯಲ್ಲಿ 2006ರಲ್ಲಿ ಸ್ಥಾಪಿಸಿದ ಸಂಸ್ಕರಣ ಘಟಕ ಕಾರ್ಯಾರಂಭಕ್ಕೂ ಮುನ್ನವೇ ಕಣ್ಣುಮುಚ್ಚಿದೆ.
 
ಹಸಿ ಮೆಣಸಿನಕಾಯಿಯಲ್ಲಿನ ನೀರಿನ ಅಂಶ ತೆಗೆದು ಒಣಗಿಸಿ ಪುಡಿ ಮಾಡುವ ಉದ್ದೇಶದಿಂದ ರೂ 4 ಕೋಟಿ ವೆಚ್ಚದಲ್ಲಿ ಆರಂಭಿಸಿ ಘಟಕದಲ್ಲೆಗ ಯಂತ್ರಗಳು ತುಕ್ಕು ಹಿಡಿಯುತ್ತಿವೆ!

ಹಾವೇರಿಯ ದೇವಹೊಸೂರ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಬ್ಯಾಡಗಿ ತಳಿಗಳ ವಂಶವಾಹಿ ಶುದ್ಧತೆ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಕಳೆದ 4-5 ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಮಳೆ ಪ್ರಮಾಣ ವ್ಯತ್ಯಯ ಮತ್ತು ವಿದುಚ್ಛಕ್ತಿ ಅಭಾವದಿಂದ ತಳಿ ಸಂರಕ್ಷಾಣಾ ಕಾರ್ಯ ಕುಂಠಿತವಾಗಿದೆ.

ಬಿಡುಗಡೆ ಪೂರ್ವ ಪರೀಕ್ಷೆ ಬಾಕಿ ಉಳಿದಿದೆ. ಹವಾಮಾನ ಸಹಕರಿಸಿದರೆ 3-4 ವರ್ಷಗಳಲ್ಲಿ ಶುದ್ಧ ತಳಿ ಬಿಡುಗಡೆ ಸಾಧ್ಯವಾಗಬಹುದು ಎನ್ನುತ್ತವೆ ಮೂಲಗಳು!

ಕೋಲ್ಡ್ ಸ್ಟೋರೇಜ್
ಬ್ಯಾಡಗಿ ತಾಲ್ಲೂಕು ಛತ್ರ ಸಮೀಪ ಕ್ಯಾಂಕರ್ ಕಲರ್ಸ್‌ ಹಾಗೂ ರಾಣೆಬೆನ್ನೂರು ತಾಲ್ಲೂಕು ಕುಮಾರಪಟ್ಟಣದ ಬಳಿ ಸಿಥೈಟ್ ಕಂಪೆನಿಯ ಎರಡು ಮೆಣಸಿನಕಾಯಿ ಸಂಸ್ಕರಣಾ ಘಟಕಗಳಿದ್ದು, ಇಲ್ಲಿ ಮೆಣಸಿನಕಾಯಿ ತೊಟ್ಟು ಬೇರ್ಪಡಿಸಲಾಗುತ್ತದೆ. ನಂತರ ದೊಡ್ಡಬಳ್ಳಾಪುರ ಸಮೀಪದ ಘಟಕಕ್ಕೆ ಸಾಗಿಸಿ ಅಲ್ಲಿ ಒಲಿಯೋರೆಸಿನ್ ತಯಾರಿಸಿ ರಪ್ತು ಮಾಡಲಾಗುತ್ತದೆ.

1 ಲಕ್ಷ ಚೀಲ ಸಂಗ್ರಹ ಸಾಮರ್ಥ್ಯದ 14ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್‌ಗಳು (ಶೀತಲ ಘಟಕ), ಮೆಣಸಿನಕಾಯಿ ಪುಡಿ ಮಾಡುವ 20ಕ್ಕೂ ಹೆಚ್ಚು ಘಟಕಗಳು ಬ್ಯಾಡಗಿಯಲ್ಲಿವೆ. ಧಾರಣೆ ಕಡಿಮೆ ಇದ್ದಾಗ ಮಾರಲು ಇಚ್ಛಿಸದ ರೈತರು, `ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದಾಗ ಮಾರೋಣ~ ಎಂದು ಸರಕನ್ನು ಈ ಘಟಕಗಳಲ್ಲಿ ಸಂಗ್ರಹಿಸಿಡುತ್ತಾರೆ.

`ಮಂಡಳಿ ಸ್ಥಾಪನೆ ಆಗಲಿ~
ಬ್ಯಾಡಗಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಇರುವುದರಿಂದ `ಮೆಣಸಿನಕಾಯಿ ಮಂಡಳಿ~ ಸ್ಥಾಪಿಸುವ ಮೂಲಕ ಬೆಳೆಗಾರರನ್ನು ಪ್ರೋತ್ಸಾಹಿಸಬೇಕಾಗಿದೆ. ಉಳಿದ ಬೆಳೆಗಳಿಗೆ ನೀಡುವ ಸಬ್ಸಿಡಿಯನ್ನು ಮೆಣಸಿನಕಾಯಿ ಬೆಳೆಗೂ ವಿಸ್ತರಿಸಿ ಅಭಿವೃದ್ಧಿಪಡಿಸಬೇಕಾಗಿದೆ.

ಆಗ ಮಾತ್ರ ವಿದೇಶಿ ವಿನಿಮಯ ಹೆಚ್ಚಿಸಿಕೊಳ್ಳಲು ಸಾಧ್ಯ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೆಣಸಿನಕಾಯಿ ಉತ್ಪಾದನೆ ಆಗುತ್ತಿದ್ದರೂ ವಿದೇಶಿ ವಿನಿಮಯ ನಿರೀಕ್ಷಿತ ಪ್ರಮಾಣದಲ್ಲಿ ಸಾಧಿಸಲು ಸಾಧ್ಯವಾಗಿಲ್ಲ. ಇದಕ್ಕೆ ಗುಣಮಟ್ಟವಿಲ್ಲದ ಕುಲಾಂತರಿ ಮೆಣಸಿನಕಾಯಿ ತಳಿ ಕಾರಣ~ ಎನ್ನುತ್ತಾರೆ ಎಂದು ಜಗದೀಶಗೌಡ ಪಾಟೀಲ.
(ಚಿತ್ರಗಳು: ವೀರೇಶ ಕೊಪ್ಪದ, ಬ್ಯಾಡಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT