ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ತಾಣದಲ್ಲಿ ಸಡಗರ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಐದು ಶತಮಾನಗಳ ಇತಿಹಾಸವುಳ್ಳ ಬೆಂಗಳೂರು ಜಿಲ್ಲೆಯ ಆನೇಕಲ್ಲಿನಲ್ಲಿರುವ ತಿಮ್ಮರಾಯಸ್ವಾಮಿಗೆ ನಾಳೆ ಜಾತ್ರೆಯ ಸಡಗರ. 
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಸಿದ್ಧ ಸಂಗೀತ ಆಸ್ಥಾನ ವಿದ್ವಾಂಸರಾಗಿದ್ದ `ಭೈರವಿ' ಕೆಂಪೇಗೌಡರನ್ನೂ ಸೇರಿದಂತೆ ಹಲವು ಸಂಗೀತಾಭಿಮಾನಿಗಳಿಗೆ ಆಶ್ರಯ ನೀಡಿದ ತಾಣ ಈ ತಿಮ್ಮರಾಯಸ್ವಾಮಿ ದೇಗುಲ.

ಭೈರವಿ ರಾಗದ ಆಲಾಪನೆಗೆ ಇಡೀ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದ್ದ ಕೆಂಪೇಗೌಡರು. ಸಾಮಾನ್ಯ ಮನೆತನದಲ್ಲಿ ಜನಿಸಿ ಅಸಾಮಾನ್ಯ ಸಂಗೀತ ಸಾಧಕರಾದ ಗೌಡರ ಬಗ್ಗೆ ಆಸ್ಥಾನದಲ್ಲಿದ್ದ ಪಂಡಿತರಲ್ಲಿ ಅಸೂಯೆ ಉಂಟಾಯಿತು. ಇವರು ಉನ್ನತ ಸ್ಥಾನಕ್ಕೇರುತ್ತಿದ್ದಂತೆ ಉಳಿದ ಪಂಡಿತರ ಮತ್ಸರಕ್ಕೂ ತುತ್ತಾಗಬೇಕಾಯಿತು.

ಮಹಾಪ್ರಭುಗಳ ಸಮ್ಮುಖದಲ್ಲಿ ಗೌಡರು ಅಪಮಾನಿತರಾಗುವ ಷಡ್ಯಂತ್ರವನ್ನು ಈ ವಿದ್ವಾಂಸರು ರಚಿಸಿದರು. ಸಾಂಸಾರಿಕ ಜೀವನದಲ್ಲಿ ಅಪಾರ ನೋವನ್ನು ಉಂಡಿದ್ದ ಗೌಡರು ಇದರಿಂದ ಮನನೊಂದು ರಾಜಾಶ್ರಯ ತ್ಯಜಿಸಿ ದೇಶ ಸಂಚಾರ ಹೊರಟುಬಿಟ್ಟರು.

ಇಡೀ ದಕ್ಷಿಣ ಭಾರತವನ್ನು ಸುತ್ತುತ್ತಾ ಬಂದ ಗೌಡರಿಗೆ ಅವರ ಕೊನೆಯ ದಿನಗಳಲ್ಲಿ ಮಾನಸಿಕ ನೆಮ್ಮದಿಯನ್ನು ನೀಡಿದ್ದೇ ಈ ದೇಗುಲ. ಒಮ್ಮೆ ಅಲ್ಲಿಯ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಅವರು ದುಃಖಭರಿತವಾಗಿ ಹಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಕಂಬನಿ ತುಂಬಿ ಹರಿಯುತ್ತಿತ್ತು. ಹಾಡನ್ನು ಮುಗಿಸಿ ಸಾವಕಾಶದಿಂದ ಕಣ್ತೆರೆದಾಗ ಅವರೆದುರಿನಲ್ಲಿ ಕರಿಯ ಕಂಬಳಿ ಹೊದ್ದ ನೀಳವಾದ ಗಡ್ಡ ಹಾಗೂ ಜಟೆಗಳನ್ನು ಧರಿಸಿದ ತೇಜೋವಂತ ಮೂರ್ತಿ ನಿಂತಿರುವುದನ್ನು ಕಂಡರು.

ಅರವತ್ತು ವರ್ಷಗಳ ಹಿಂದೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಾಲಕರಾಗಿದ್ದ ಕೆಂಪೇಗೌಡರಿಗೆ ಮಾರ್ಗದರ್ಶನ ನೀಡಿ ಸಂಗೀತ ಸಾಧನೆಗೆ ಹರಸಿದ ಮಹಾನುಭಾವರಾದ ಕಂಬಳೀ ಸ್ವಾಮಿಗಳು ಅವರು. ಅವರನ್ನು ಕಂಡ ಗೌಡರ ಸಂತೋಷಕ್ಕೆ ಪಾರವೇ ಇರಲಿಲ್ಲ. ಗೌಡರ ಸಾಧನೆಯನ್ನು ಮನಃಪೂರ್ವಕವಾಗಿ ಂಡಾಡಿದ ಸ್ವಾಮಿಗಳು ಅವರ ಜನ್ಮದ ಅಂತ್ಯಕ್ಕೆ ಆನೇಕಲ್ ಪ್ರಾಂತ್ಯವೇ ಪ್ರಶಸ್ತವಾದದ್ದೆಂದು ಹರಸಿ ಹೋದರು. ಇಂಥ ಒಂದು ಅಪೂರ್ವ ತಾಣ ಈ ತಿಮ್ಮರಾಯಸ್ವಾಮಿ ದೇಗುಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT