ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಐಸಿ ಉತ್ಪನ್ನ ಮಾರಾಟಕ್ಕೆ ವಿರೋಧ: ಕೈಮಗ್ಗ ನೇಕಾರರ ಆಕ್ರೋಶ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ) ತನ್ನ ಪ್ರಿಯದರ್ಶಿನಿ ಹ್ಯಾಂಡ್‌ಲೂಮ್ಸ ಮಳಿಗೆಯಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ ವಿಭಾಗ ಆರಂಭಿಸಲು ಮುಂದಾಗಿರುವುದು ಕೈಮಗ್ಗ ನೇಕಾರ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೈಮಗ್ಗ ಅಭಿವೃದ್ಧಿ ನಿಗಮವು ದೆಹಲಿ, ಚೆನ್ನೈ, ಮುಂಬೈ, ಸೂರತ್, ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ 180 ಪ್ರಿಯದರ್ಶಿನಿ ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕ ರೂ. 200 ಕೋಟಿಗಳಷ್ಟು ವಹಿವಾಟು ನಡೆಸುತ್ತಿದೆ.

ಕೈಮಗ್ಗದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುವ ಹಾಗೂ ನೇಕಾರರ ಶ್ರಮಕ್ಕೆ ನ್ಯಾಯಯುತ ಬೆಲೆ ಕೊಡಿಸುವ ಉದ್ದೇಶದಿಂದ ಜವಳಿ ಇಲಾಖೆಯ ಅಂಗ ಸಂಸ್ಥೆಯಾಗಿ 1974ರಲ್ಲಿ ಆರಂಭವಾದ `ಕೆಎಚ್‌ಡಿಸಿ~ ಕೈಮಗ್ಗಗಳಿಗೆ ತಾನೇ ನೂಲು ಒದಗಿಸಿ ಅಲ್ಲಿ ನೇಯ್ದ ಉತ್ಪನ್ನಗಳನ್ನು ಖರೀದಿಸಿ ಪ್ರಿಯದರ್ಶಿನಿ ಮಳಿಗೆಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಹೊಂದಿದೆ.

`ಕೆಎಸ್‌ಐಸಿ~ಯೊಂದಿಗೆ ಒಪ್ಪಂದ: ಪ್ರಿಯದರ್ಶಿನಿ ಮಳಿಗೆಗಳಲ್ಲಿ `ಕೆಎಸ್‌ಐಸಿ~ಯ ರೇಷ್ಮೆ ಉತ್ಪನ್ನಗಳನ್ನು ಕಮಿಷನ್ ಆಧಾರದ ಮೇಲೆ ಮಾರಾಟ ಮಾಡಲು ಕಳೆದ ತಿಂಗಳು `ಕೆಎಚ್‌ಡಿಸಿ~ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ದೆಹಲಿ, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಮಾರಾಟ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಿಯದರ್ಶಿನಿಯ ಎಲ್ಲಾ ಮಳಿಗೆಗಳ್ಲ್ಲಲೂ `ಕೆಎಸ್‌ಐಸಿ~ ಉತ್ಪನ್ನಗಳು ದೊರೆಯಲಿವೆ.

ಕಾನೂನು ಬಾಹಿರ: ಕೆಎಸ್‌ಐಸಿ ಹಾಗೂ ಕೆಎಚ್‌ಡಿಸಿಯ ನಡುವಿನ ಈ ಒಪ್ಪಂದ ಕಾನೂನು ಬಾಹಿರ ಎನ್ನುತ್ತಾರೆ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್.ಜೆ.ಮಾಳವದೆ.

`ಕೈಮಗ್ಗಗಳಿಂದ ರೂಪಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಏಕೈಕ ಉದ್ದೇಶದಿಂದ ನಿಗಮವನ್ನು ಸ್ಥಾಪಿಸಲಾಗಿದೆ. `ಕೆಎಸ್‌ಐಸಿ~ ಕೈಗಾರಿಕೆಯಾಗಿದ್ದು, ಅಲ್ಲಿನ ಉತ್ಪನ್ನಗಳ ಮಾರಾಟ ಇಲ್ಲಿ ಹೇಗೆ ಸಾಧ್ಯ~ ಎಂದು ಅವರು ಪ್ರಶ್ನಿಸುತ್ತಾರೆ.

`ರಾಜ್ಯದಲ್ಲಿ ನೇಕಾರ ಸಮುದಾಯವನ್ನು ವ್ಯವಸ್ಥಿತವಾಗಿ ವೃತ್ತಿಯಿಂದ ವಿಮುಖರನ್ನಾಗಿ ಮಾಡಲಾಗುತ್ತಿದೆ. ನಿಗಮದಲ್ಲಿ 10 ವರ್ಷಗಳ ಹಿಂದೆ 40,000ದಷ್ಟಿದ್ದ  ಸದಸ್ಯರ ಸಂಖ್ಯೆ ಈಗ 8,000ಕ್ಕೆ ಇಳಿದಿದೆ. ನಿಗಮವು ಸರಿಯಾದ ಸಮಯಕ್ಕೆ ನೂಲು ಪೂರೈಕೆ ಮಾಡದೆ, ದಿನಕ್ಕೆ ರೂ. 40ರಿಂದ 50  ವೇತನ ನೀಡಿದರೆ ವೃತ್ತಿ ಮುಂದುವರೆಸುವುದಾದರೂ ಹೇಗೆ ಎಂದು ಆರೋಪಿಸುತ್ತಾರೆ.

`ಹುಬ್ಬಳ್ಳಿಯ ಪ್ರಿಯದರ್ಶಿನಿ ಮಳಿಗೆಯಲ್ಲಿಯೇ ರೂ. 1 ಕೋಟಿ  ಮೌಲ್ಯದ `ಕೆಎಸ್‌ಐಸಿ~ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಇನ್ನು ನಮ್ಮ ಉತ್ಪನ್ನಗಳನ್ನು ಯಾರು ಕೇಳಬೇಕು. ಇದೆಲ್ಲಾ ಕೈಮಗ್ಗ ಮಳಿಗೆಗಳನ್ನು ನಿಧಾನವಾಗಿ ಮುಚ್ಚುವ ಹುನ್ನಾರ. ಕೆಎಚ್‌ಡಿಸಿ ಹಾಗೂ ಕೆಎಸ್‌ಐಸಿ ಎರಡೂ ಸಂಸ್ಥೆಯನ್ನು ವಿಲೀನಗೊಳಿಸಿ ನಮ್ಮನ್ನು ನೇಕಾರರನ್ನು ಜವಳಿ ಇಲಾಖೆಯ ನೌಕರರು ಎಂದು ಪರಿಗಣಿಸಿ ವೇತನ ನೀಡಲಿ~ ಎಂದು ಕೈಮಗ್ಗ ನೇಕಾರರ ಸಂಘದ ಸದಸ್ಯೆ ಕಸ್ತೂರವ್ವ ಪಟ್ಟದಕಲ್ಲು ಹೇಳುತ್ತಾರೆ.

ಕೆಎಸ್‌ಐಸಿ ಉತ್ಪನ್ನ ಮಾರಾಟ ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರ ನಿರ್ಧಾರ ಎನ್ನುವ ಹುಬ್ಬಳ್ಳಿ ಪ್ರಿಯದರ್ಶಿನಿ ಮಳಿಗೆ ವ್ಯವಸ್ಥಾಪಕ ಎಸ್.ಜಿ.ಕುಲಕರ್ಣಿ,  `ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಪ್ರಿಯದರ್ಶಿನಿಯತ್ತ ಸೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನೇಕಾರರ ವಿರೋಧವನ್ನು ನಿಗಮದ ಗಮನಕ್ಕೆ ತರಲಾಗಿದೆ. ಶೀಘ್ರ ನೇಕಾರರ ಸಭೆ ಕರೆದು ಅವರಿಗೆ ಮನವರಿಕೆ ಮಾಡಲಾಗುವುದು~ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT