ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಸಿಬ್ಬಂದಿ ಆಕ್ರೋಶ

ಇನ್ನೂ ಸಿಗದ ತಿಂಗಳ ವೇತನ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಎಲ್ಲರೂ ಸಡಗರದಿಂದ ಸಜ್ಜಾಗು­ತ್ತಿ­ದ್ದಾರೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಸಿಬ್ಬಂದಿಗೆ ಮಾತ್ರ ಈ ಹಬ್ಬ ಖುಷಿ ತಂದಿಲ್ಲ. ಇದಕ್ಕೆ ಕಾರಣ ಇನ್ನೂ ಸಿಗದ ತಿಂಗಳ ವೇತನ.

‘ಪ್ರತಿ ತಿಂಗಳ ಅಂತ್ಯಕ್ಕೆ ವೇತನ ನೀಡುತ್ತಿದ್ದರು. ಆದರೆ ಈ ಬಾರಿ ತಿಂಗಳು ಕಳೆದು ಎಂಟು ದಿನವಾದರೂ ನಮಗೆ ವೇತನ ಬಂದಿಲ್ಲ. ಜೊತೆಗೆ ಹಬ್ಬ ಕೂಡ ಇದೆ. ಕೆಎಸ್‌ಸಿಎಯ ಈ ವರ್ತನೆ ನಮಗೆ ಬೇಸರ ಉಂಟು ಮಾಡಿದೆ’ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕೆಲ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವೇತನ ಕೇಳಿದರೆ ನಮ್ಮ ಮೇಲೆ ಸಿಡಿಮಿಡಿ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಕಾರಣ ಕೂಡ ನೀಡುತ್ತಿಲ್ಲ. ಬದಲಾಗಿ ನಾಳೆ ಬನ್ನಿ ಎಂಬ ಉತ್ತರ ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಹಾಗಾಗಿ ವೇತನದಲ್ಲಿ ಕಡಿತ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಂಸ್ಥೆಯಲ್ಲಿ ಸುಮಾರು 130 ಸಿಬ್ಬಂದಿ ಇದ್ದಾರೆ. ಅದರಲ್ಲೂ ಕ್ರೀಡಾಂಗಣದ ಸಿಬ್ಬಂದಿ ತುಂಬಾ ಕಷ್ಟದಲ್ಲಿದ್ದಾರೆ. ಮನೆ ಬಾಡಿಗೆ ಸೇರಿದಂತೆ ಹಲವು ಸಮಸ್ಯೆ ಇದೆ. ಅವರಿಗಾದರೂ ಸೂಕ್ತ ಸಮಯದಲ್ಲಿ ವೇತನ ನೀಡಬೇಕಿತ್ತು’ ಎಂದಿದ್ದಾರೆ.

ಆದರೆ ಸಂಸ್ಥೆಯ ಖಜಾಂಚಿ ತಲ್ಲಂ ವೆಂಕಟೇಶ್‌ ಈ ಆರೋಪವನ್ನು  ಅಲ್ಲಗಳೆ­ದಿದ್ದಾರೆ. ‘ವೇತನ ನೀಡುವುದು ತಡವಾಗಿರು­ವುದು ನಿಜ. ಆದರೆ 10 ದಿನಗಳ ಹಿಂದೆಯಷ್ಟೇ ನಾವು ಅವರಿಗೆಲ್ಲಾ ಬೋನಸ್‌ ನೀಡಿದ್ದೇವೆ. ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದಿದ್ದಾರೆ.

‘ಕೆಲ ಸಿಬ್ಬಂದಿ ತುಂಬಾ ತಡವಾಗಿ ಕಚೇರಿಗೆ ಬರುವುದು ನಮ್ಮ ಗಮನಕ್ಕೆ ಬಂದಿದೆ. ಶಿಸ್ತು ಎಂಬುದೇ ಇಲ್ಲದಂ­ತಾಗಿದೆ. ಹಾಗಾಗಿ ಕೆಲವರ ವೇತನ ಕಡಿತಗೊಳಿಸಿ ಉತ್ತಮ ವ್ಯವಸ್ಥೆ ಜಾರಿಗೆ ತರಲು ನಾವು ಈ ರೀತಿ ಮಾಡುತ್ತಿದ್ದೇವೆ. ಖಂಡಿತ ವೇತನ ನೀಡುತ್ತೇವೆ’ ಎಂದು ತಲ್ಲಂ ವೆಂಕಟೇಶ್‌ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT