ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿಯ `ಕಾಪು'ಗೂ ಬೇಕು ದಲಿತ ಸಿ.ಎಂ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಉತ್ತನಹಳ್ಳಿಗೆ ಭೇಟಿಕೊಟ್ಟಾಗ, ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ಕಾ. ಪು. ಸಿದ್ದಲಿಂಗಸ್ವಾಮಿ ಅವರು ಪ್ರಚಾರಕ್ಕೆ ಬಂದಿದ್ದಾರೆ ಎನ್ನುವುದು ಕಿವಿಗೆ ಬಿತ್ತು. ಅವರನ್ನು ಹುಡುಕಿಕೊಂಡು ಹೊರಟೆವು. ಊರೊಳಗಿನ ಪುಟ್ಟ ಅಂಬೇಡ್ಕರ್ ಭವನದಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರೂ ಸೇರಿದಂತೆ ಸಭಿಕರನ್ನು ಉದ್ದೇಶಿಸಿ ಸ್ಥಳೀಯ ಮುಖಂಡರೊಬ್ಬರು ಮಾತನಾಡುತ್ತಿದ್ದರು.

`ಇಡೀ ರಾಜ್ಯವೇ ವರುಣಾ ಕ್ಷೇತ್ರದತ್ತ ನೋಡುತ್ತಿದೆ. ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕಿದ್ದರೆ ಈ ಕ್ಷೇತ್ರದ ದಲಿತರು ಸಿದ್ದರಾಮಯ್ಯ ಅವರಿಗೆ ಮತ ಹಾಕಬಾರದು. ಸಿದ್ದರಾಮಯ್ಯ ಆಯ್ಕೆಯಾದರೆ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪುತ್ತದೆ'  ಎಂದು ಅವರಾಡುತ್ತಿದ್ದ ಮಾತು ಕಿವಿಗೆ ಬಿದ್ದಿತು.

ಸಭೆಯಿಂದ ನಿರ್ಗಮಿಸುತ್ತಿದ್ದ `ಕಾಪುಸಿ' ಅವರ ಜತೆ ಸಂದರ್ಶನ ನಡೆಸಿದಾಗ...

ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಲು ಸಿದ್ದರಾಮಯ್ಯ ಅವರನ್ನು ಸೋಲಿಸಿ ಎನ್ನುವುದು ನಿಮ್ಮ ಚುನಾವಣಾ ಕಾರ್ಯತಂತ್ರವೇ?

-  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬಂದೇ ಬರುತ್ತದೆ ಎನ್ನುವ ಭಾವನೆ ದಲಿತ ಮುಖಂಡರಲ್ಲಿ ಇದೆ. ಅಂತಹ ನಿರೀಕ್ಷೆ ಸತ್ಯವಾಗಲಿ. ಅವರ ಭಾವನೆಗಳಿಗೆ ಒಳ್ಳೆಯದಾಗಲಿ. ದಲಿತರ ಅನಿಸಿಕೆ ಮತ್ತು ನಿರೀಕ್ಷೆಗಳಿಗೆ ನಮ್ಮ ಬೆಂಬಲ ಇದೆ. ನನ್ನ ಜತೆ ಬಂದಿರುವ ಈ ಭಾಗದ ದಲಿತ ಮುಖಂಡರ ಭಾವನೆಗಳಿಗೆ ನಾನು ಬೆಲೆ ಕೊಡಬೇಕಾಗಿರುವುದು  ನನ್ನ ಧರ್ಮ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ನನಗೆ ಮುಖ್ಯವಲ್ಲ. ನಾನು ಬ್ರಹ್ಮಚಾರಿ. ಜನರ  ಸೇವೆ ಮಾಡಬೇಕೆಂಬ ಭಾವನೆ ಇದೆ.

  • ನಾನು ಹುಟ್ಟಿದ ಊರು `ಕಾರ್ಯ' ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನನಗೆ ಇದೊಂದು ಚಿರಪರಿಚಿತ ಕ್ಷೇತ್ರ.
  • ನನ್ನ ಸ್ಪರ್ಧೆ ಇಂತವರ ವಿರುದ್ಧ ಎಂದು ಹೇಳಿದರೆ ಕಣದಲ್ಲಿ ಇರುವ ಎಲ್ಲ ಅಭ್ಯರ್ಥಿಗಳಿಗೆ ಅಗೌರವ ತೋರಿಸಿದಂತಾಗುತ್ತದೆ.  ದೊಡ್ಡ ವ್ಯಕ್ತಿ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದೇನೂ ನನಗೆ ಭಾಸವಾಗುತ್ತಿಲ್ಲ.

20 ವರ್ಷಗಳಿಂದ ನನ್ನ ಜತೆ ಇದ್ದಾನೆ. ಅವನ ಋಣ ತೀರಿಸಬೇಕೆಂಬ ಕಾರಣಕ್ಕೆ ಸಾಹೇಬ್ರು (ಯಡಿಯೂರಪ್ಪ) ನನಗೆ ಟಿಕೆಟ್ ಕೊಟ್ಟಿಲ್ಲ. ನನಗಿರುವ  ಜನ ಬೆಂಬಲ  ಮತ್ತು  ನನ್ನ ಸಂಘಟನೆ  ಸಾಮರ್ಥ್ಯ ನೋಡಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಹೆಚ್ಚಿನ ಪ್ರಯೋಜನ ಆಗಿಲ್ಲ: ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಮಾತನಾಡಿಸಿದಾಗ, `ಸಿದ್ದರಾಮಯ್ಯ ಅವರಿಂದ ದಲಿತರಿಗೆ ಹೆಚ್ಚಿನ ಪ್ರಯೋಜನ ಆಗಿಲ್ಲ. ಕೇರಿಗೆ ಪ್ರಚಾರಕ್ಕೆ ಬಂದಾಗ ``ಹೊಲ್ಯಾರ ಬೀದಿಗೆ ಹೋಗೊದು   ಯಾಕೆ ಬಿಡಿ'' ಎಂದು ಹೇಳುತ್ತ ನಮ್ಮತ್ತ ಬರುವುದಿಲ್ಲ' ಎಂದು ಜಯಮ್ಮ ಪ್ರತಿಕ್ರಿಯಿಸಿದರು.

ಲಲಿತಾದ್ರಿಪುರದ ಹೋಟೆಲ್‌ನಲ್ಲಿ ಮಾತಿಗೆ ಸಿಕ್ಕ ಸಿರಿಕಂಠಪ್ಪ, `ಮನೆಯಲ್ಲಿ 4 ವೋಟ್‌ಗಳಿದ್ರೆ 4 ದಿಕ್ಕುಗಳಿಗೆ ಇವೆ. ಊರು ಕೂಡ ಹಾಗೆ ಇದೆ' ಎಂದರು. ಸಿದ್ದರಾಮಯ್ಯ ಸ್ವಜಾತಿ ಪ್ರೇಮಿ. ಜಾತಿ ಭೇದ ಮಾಡ್ತಾರೆ. ಸತತವಾಗಿ ಆರಿಸಿ ಬಂದವ್ರೆ.  ಈ ಬಾರಿ ಹೊಸಬರನ್ನ ನೋಡೋಣ' ಎಂದು ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಈ ಎರಡೂ ಗ್ರಾಮಗಳಲ್ಲಿ ವ್ಯಕ್ತವಾದ ಅಭಿಪ್ರಾಯಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಅನಿಸಿಕೆ ವರುಣಾ ಗ್ರಾಮದಲ್ಲಿ ಕೇಳಿ ಬಂದಿತು. ಸಿದ್ದರಾಮಯ್ಯ ಅವರಿಂದ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗ್ತಾ ಇವೆ. ಸಾಹೇಬ್ರು ಸಿ. ಎಂ. ಆದ್ರೆ ಅಭಿವೃದ್ಧಿ ಚಕ್ರ ವೇಗವಾಗಿ ತಿರುಗಬಹುದು' ಎಂದು ಗಣೇಶ್ ನುಡಿದರು.

ಸಿದ್ದರಾಮಯ್ಯ ಅವರ ಸ್ವಂತ ಊರಾದ ಸಿದ್ದರಾಮನಹುಂಡಿಯಲ್ಲಿನ ಅವರ ಮನೆ ಮುಂದೆಯೇ ಚಪ್ಪರದಡಿ ಊಟದ ಸಮಾರಾಧನೆ ನಡೆಯುತ್ತಿತ್ತು. ನಮ್ಮ ಕಾರು ಅಲ್ಲಿ ನಿಲ್ಲುತ್ತಿದ್ದಂತೆ ಮನೆಯವರು ಓಡಿ ಬಂದು `ನಿಶ್ಚಿತಾರ್ಥ ನಡೀತಾ ಇದೆ. ಬೇರೆ ಅರ್ಥ ಕಲ್ಪಿಸಬೇಡಿ' ಎಂದು ಸ್ಪಷ್ಟನೆ ನೀಡಿದರು. ಊರಿನ ಇತರರೂ ಅದನ್ನು ಪುಷ್ಟೀಕರಿಸಿದರು. ಊರಲ್ಲಿ ಕಾಂಗ್ರೆಸ್ ಪ್ರಭಾವ ಭರ್ಜರಿಯಾಗಿದೆ ಎನ್ನುವುದು ಸ್ಥಳೀಯರನ್ನು ಮಾತನಾಡಿಸಿದಾಗ ಅನುಭವಕ್ಕೆ ಬಂದಿತು. ನಾಗರಾಜ್ ಎಂಬುವವರು, `ನಮ್ಮ ಸಾಹೇಬ್ರು ಆರಿಸಿ ಬಂದೇ ಬರ್ತಾರೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರೆ, ಜೋಗಿಸಿದ್ದಯ್ಯ ಗ್ರಾಮದ ದಲಿತರಾದ ನಂಜಮ್ಮ, ಮಂಜು, ಕುಪ್ಪೆಗಾಲದ ರಂಗಸ್ವಾಮಿ, ಸಂತೋಷ ಇವರಿಗೆಲ್ಲ ಸಿದ್ರಾಮಣ್ಣನೇ ನಾಯಕ ಎನ್ನುವುದು ಅವರ ಮಾತುಗಳಿಂದ ಸ್ಪಷ್ಟವಾಯಿತು.

ಅಭಿವೃದ್ಧಿಯೇ ರಕ್ಷೆ: ನಾವು ವರುಣಾದಲ್ಲಿ ಇದ್ದಾಗಲೇ, ಸಿದ್ದರಾಮಯ್ಯ ಅವರ ಪ್ರಚಾರದ ಹೊಣೆ ಹೊತ್ತಿರುವ ಅವರ ಪುತ್ರ ರಾಕೇಶ್ ನಮಗೆ ಎದುರಾದರು. ಅವರ ಕಾರಿನಲ್ಲಿ ಕುಳಿತೇ ಸಂದರ್ಶನ ನಡೆಯಿತು.

ಪ್ರಚಾರದಲ್ಲಿ ಯಾವುದಕ್ಕೆ ಆದ್ಯತೆ ನೀಡಿದ್ದೀರಿ?
-ತಂದೆಯವರ ಅಭಿವೃದ್ಧಿ ಕೆಲಸ, ಸಾಮಾಜಿಕ ನ್ಯಾಯದ ಬದ್ಧತೆ ನೆಚ್ಚಿಕೊಂಡೆ ಪ್ರಚಾರಕ್ಕೆ ಇಳಿದಿದ್ದೇವೆ. ಹೋದ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಅಲೆ ಎದ್ದಿತ್ತು. ಈ ಬಾರಿ ಅಂತಹ ಗಾಳಿ ನಮ್ಮ ತಂದೆಯವರ ಪರ ಬೀಸ್ತಾ ಇದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಂತವರೆಲ್ಲ ಪ್ರಮುಖ ಪ್ರತಿಸ್ಪರ್ಧಿಗಳೇ. ಯಾರನ್ನೂ ನಿರ್ಲಕ್ಷಿಸುವಂತಿಲ್ಲ.

ನಮ್ಮ ತಂದೆ ಇಲ್ಲಿ ಸ್ಪರ್ಧಿಸುವ ವಿಷಯ ತಿಳಿದೇ ಮತದಾರರು ಹರ್ಷಗೊಂಡಿದ್ದಾರೆ. ಎಲ್ಲ ಜಾತಿ ಜನ ವರ್ಗ ಒಗ್ಗಟ್ಟಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಪ್ರಚಾರ ಸುಲಲಿತವಾಗಿ ಸಾಗುತ್ತಿದೆ. ನಮ್ಮ ತಂದೆ ಬರೀ ಕುರುಬ ಸಮಾಜದ ಮುಖಂಡರಲ್ಲ. ಒಂದು ಜಾತಿಯ ನಾಯಕತ್ವಕ್ಕೆ ಸೀಮಿತವಾಗಿದ್ದರೆ ಅವರು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.

ಕೆಜೆಪಿ ಪ್ರಚಾರಕ್ಕೆ ನಿಮ್ಮ ಪ್ರತಿಕ್ರಿಯೆ?
- ಇದೊಂದು ಪ್ರತಿಸ್ಪರ್ಧಿಗಳ ಷಡ್ಯಂತ್ರ. ದಲಿತರು ಯಾವಾಗಲೂ ನಮ್ಮನ್ನ ಬೆಂಬಲಿಸುತ್ತಲೇ ಇದ್ದಾರೆ. ಹೈಕಮಾಂಡ್ ನಾಯಕನನ್ನು ಆಯ್ಕೆ ಮಾಡುವಾಗ ದಲಿತರು, ಹಿಂದುಳಿದವರು ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಭವಿಸದು. ದಲಿತರು - ಹಿಂದುಳಿದವರಲ್ಲಿ ಒಡಕು ಮೂಡಿಸುವ ಸಂಚಿನ ವಿವರ ನಮ್ಮ  ಕಿವಿಗೆ ಬಿದ್ದಿದೆ. ಕ್ಷೇತ್ರದಲ್ಲಿ 40 ಸಾವಿರ ದಲಿತರಿದ್ದಾರೆ. ನನ್ನ ಜತೆ ಇದ್ದವರೆಲ್ಲ ದಲಿತರೇ. ವರುಣಾ, ಸಿದ್ದರಾಮನಹುಂಡಿ ಭಾಗದಲ್ಲಿನ ದಲಿತರನ್ನು ಕೇಳಿ ನೋಡಿ ನೀವೇ ತೀರ್ಮಾನಕ್ಕೆ ಬನ್ನಿ. ನಮ್ಮ ಜತೆ ಇರುವ ಮಹಾದೇವಪ್ಪ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ ಇವರೆಲ್ಲ ದಲಿತ ನಾಯಕರೇ.

ಎಲೆಕ್ಷನ್‌ನಲ್ಲಿ ದುಡ್ಡಿನ ಹೊಳೆ ಹರೀತಾ ಇದೆಯಲ್ಲ?
- `ಕಾಪುಸಿ' ಆಸ್ತಿ ಮೌಲ್ಯ  6.50 ಕೊಯಿ ರೂಪಾಯಿ ಇದೆ. ಇದು ಸಿದ್ರರಾಮಯ್ಯ ಅವರ ಆಸ್ತಿಗಿಂತ ಹೆಚ್ಚು.  ಶೋಭಾ ಕರಂದ್ಲಾಜೆ ಅವರಿಗೆ `ಕಾಪುಸಿ' 1.35 ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾರೆ. ಬ್ರಹ್ಮಚಾರಿ ಎಂದು ಹೇಳಿಕೊಳ್ಳುವ ಇವರಿಗೆ  ಇಷ್ಟು  ಪ್ರಮಾಣದ ಆಸ್ತಿ ಎಲ್ಲಿಂದ ಬಂತು? ಬ್ರಹ್ಮಚಾರಿಗೆ ಇಷ್ಟು ಆಸ್ತಿ ಬೇಕಾ?

`ದುಡ್ಡು ಇಸ್ಕೊಬೇಡಿ, ಕಿತ್ಕೊಳ್ಳಿ'

ಮೈಸೂರು: `ಚುನಾವಣೆಯಲ್ಲಿ ದುಡ್ಡು ಕೊಟ್ರೆ ಇಸ್ಕೋಬೇಡಿ. ಆದ್ರೆ ಕಿತ್ಕೊಳ್ಳಿ, ಯಾಕಂದ್ರೆ ಆ ದುಡ್ಡು ಅವರದ್ದಲ್ಲ, ಸಾರ್ವಜನಿಕರದ್ದು.  ರಾಜಕಾರಣಿಗಳ ಬಳಿ ಇರುವ ದುಡ್ಡು ಇಸ್ಕೊಂಡ್ರೆ ಸಂಬಂಧ ಬೆಳೀತದೆ. ದುಡ್ಡು ಕಿತ್ಕೊಂಡ್ರೆ ಸಂಬಂಧ ಮುರೀತದೆ. ಕಿತ್ಕೊಳ್ಳೊ ದುಡ್ಡನ್ನ  ಸ್ವಂತಕ್ಕೆ ಮಾತ್ರ ಬಳಸಿಕೊಳ್ಳಬೇಡಿ. ಸಮುದಾಯದ  ಒಳಿತಿಗೆ ಬಳಸಿಕೊಳ್ಳಿ'. ಇದು ಸಾಹಿತಿ ದೇವನೂರ ಮಹಾದೇವ ಅವರ ಕಾಳಜಿ.

ವರುಣಾ ಕ್ಷೇತ್ರದಲ್ಲಿ ಸುತ್ತಾಡಿ ಬಂದ ನಂತರ ಅವರನ್ನು ಭೇಟಿ ಮಾಡುವ ಆಸೆ ಮುಂದಿಟ್ಟಾಗ `ಬೆಳಿಗ್ಗೆ ಖಂಡಿತವಾಗಿ ಸಿಗೋಣ' ಎಂದು ಹೇಳಿದ್ದರು. ಸರಸ್ವತಿಪುರಂ ಹೋಟೆಲ್‌ನಲ್ಲಿ ಮಾತಿಗೆ ಇಳಿದ ದೇವನೂರ, `ಅಮೆರಿಕದ ಅಧ್ಯಕ್ಷರಾದ ಮೇಲೆ ಬರಾಕ್ ಒಬಾಮ ಆಸ್ತಿ ಕಮ್ಮಿ ಆಗಿ ಬಿಟ್ಟಿದೆ. ನಮ್ಮ ಜನಪ್ರತಿನಿಧಿಗಳಲ್ಲಿ ಯಾರ‌್ದಾರ ಆಸ್ತಿ ಕಡಿಮೆ ಆಗಿದೇಯಾ? ಚುನಾವಣೆಯಲ್ಲಿ ಇದು ಚರ್ಚೆ ಆಗಬೇಕೇ ಹೊರತು, ಜಾತಿಗಳನ್ನು ಪರಸ್ಪರ ಎತ್ತಿಕಟ್ಟುವ ವಿವಾದ ಬೆಳೆಸುವುದು ಮುಖ್ಯವಾಗಬಾರದು. ಅಂತಹ ಕೆಲಸವನ್ನು ಯಾರೊಬ್ಬರೂ ಮಾಡಬಾರದು' ಎಂದರು.

`ಅರಮನೆ ಮಹಾರಾಣಿಯ ಒಡವೆ ವಸ್ತುಗಳನ್ನು ಮಾರಿ ಕನ್ನಂಬಾಡಿ ಅಣೆಕಟ್ಟೆ ಕಟ್ಟಲಾಯಿತು. ಇವತ್ತು ಅಣೆಕಟ್ಟೆ  ಸುತ್ತ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಅಣೆಕಟ್ಟೆ ಹೆಚ್ಚು ಕಮ್ಮಿ ಬಿರುಕು ಬಿಟ್ಟಿದೆ. ಡ್ಯಾಂ ಒಡೆದ್ರೆ ಮಂಡ್ಯ ಡಮಾರ್ ಆಗುತ್ತೆ. ಇಂತಹ ಕೆಲ್ಸ ಯಾಕ್ ಮಾಡ್ತೀರಪಾ ಅಂದ್ರೆ ಅಭಿವೃದ್ಧಿ ಅಂತಾರೆ. ಇಂತಹ ಅಭಿವೃದ್ಧಿ ಎನ್ನುವುದು ವಿಧ್ವಂಸಕ ಕೃತ್ಯ. ಕೆಆರ್‌ಎಸ್'ಗೆ ಇಂದು ತಲುಪಿರುವ ದುರಂತ ರಾಜ್ಯಕ್ಕೆ ರೂಪಕವಾಗಿ ತೋರಿಸಿ ಮನವರಿಕೆ ಮಾಡಿಕೊಡಬೇಕಾಗಿದೆ'. 

`ಅಭಿವೃದ್ಧಿಗೆ ಬರುವ ದುಡ್ಡಿನಲ್ಲಿ ಅರ್ಧ ದುಡ್ಡು ಖರ್ಚು ಮಾಡ್ತಾರೆ. ಉಳಿದರ್ಧ ದುಡ್ಡನ್ನು ಸ್ವಂತಕ್ಕೆ ಬಳಸುತ್ತಾರೆ. ಇದರ ಒಟ್ಟಾರೆ ಸಾಲದ ಹೊರೆ ಜನರ ಮೇಲೆ ಬೀಳುತ್ತದೆ.  ಈ ಸಾಲ ತೀರಿಸೋರ‌್ಯಾರು. ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆಯುವುದಕ್ಕೆ ಕೊನೆ ಹಾಡಬೇಕಾಗಿದೆ. ಹಿಂದೆ ನಿನ್ನ ಆಸ್ತಿ ಎಷ್ಟಿತ್ತಪಾ. ಈಗ ಎಷ್ಟಿದೆ? ಇಂತದ್ದನ್ನು ಜನರು ಪ್ರಶ್ನೆ ಮಾಡಬೇಕು.  ಗಾಳಿ, ಆಹಾರ ಕೆಟ್ಟಿರುವುದು ಇಂದಿನ ದೊಡ್ಡ ಸಮಸ್ಯೆಯಾಗಿದೆ. ಅಂತರ್ಜಲ ಭೂಮಿಯಿಂದ ದೂರ ಆಗಿ ಬಿಟ್ಟಿದೆ. ಭೂಮಿಗೆ ಹತ್ತಿರ ಇದ್ದರೆ ಅಮೃತ, ದೂರ ಹೋದ್ರೆ ವಿಷ. ಇದಕ್ಕೆಲ್ಲ ಸರ್ಕಾರವೇ ಹೊಣೆ. ಹಿಂದಿನ ಜನರು ಕೆರೆ ಕಟ್ಟಿದ್ರು. ಇಂದಿನ  ರಾಜಕಾರಣಿಗಳ ಪಟಾಲಂ ಒತ್ತುವರಿ ಮಾಡ್ತಾ ಇದೆ.  ಇದು ಚುನಾವಣೆಗಳಲ್ಲಿ ಮುಖ್ಯವಾಗಿ ಚರ್ಚೆ ಆಗಬೇಕು'.

`ಜನರು ರಾಜಕಾರಣಕ್ಕೆ ಯಾಕ್ ಬರ್ತಾರೆ. ಅವಸರದಲ್ಲಿ ದುಡ್ಡು ಮಾಡಕ್ಕೆ. ಇದು ಯುವ ಜನರಿಗೆ ಆದರ್ಶವಾಗಿದೆ. ಸೇವೆ ಮಾಡಲಿಕ್ಕೆ ಇಷ್ಟೆಲ್ಲ ಕಿತ್ತಾಟ ಮಾಡುವುದಾಗಿದ್ರೆ ಕಲ್ಯಾಣ ರಾಜ್ಯ ಆಗಬೇಕಾಗಿತ್ವಲ್ಲ. ಕೆಲವು ರಾಜಕಾರಣಿಗಳು ವೀರಪ್ಪನ್‌ನಂತೆ ಕಾಡುಗಳ್ಳತನ, ಚಂಬಲ್ ಕಣಿವೆಯ ಡಕಾಯಿತರಂತೆ ದರೋಡೆ, ಕಳ್ಳತನ- ಈ ಮೂರೂ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದಾರೆ. ಇವರನ್ನೆಲ್ಲ ಚೋರ, ದರೋಡೆಕೋರ ಎಂದೇ ಗಟ್ಟಿಯಾಗಿ ಕರೆಯಬೇಕಾಗಿದೆ.  ಜನಾರ್ದನ ರೆಡ್ಡಿ ಐದು ವರ್ಷಗಳ ಹಿಂದೆ ಎಲ್ಲಿದ್ದರು, ಈಗ ಎಲ್ಲಿದ್ದಾರೆ. ಚರಿತ್ರೆಗೆ ಅದರದ್ದೇ ಆದ ವಿದ್ಯಮಾನ ಇದೆ'.

`ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಅವರ ಕುಟುಂಬ ಇಡೀ ಮೈಸೂರಿನ ಸುತ್ತ ಮುತ್ತ ಆಸ್ತಿ ಮಾಡಿಕೊಂಡಿದೆ. ಪೇಪರ್‌ನಲ್ಲಿ ಬಂದಿರುವ  ಆಸ್ತಿ ವಿವರ ನೋಡಿ ಜನ ನಗ್ತಾ ಇದಾರೆ. ಏನ್ ಇತ್ತ ಅವ್ರಿಗೆ. ಏನ್ ಇತ್ತು ಇವರ ಆಸ್ತಿ ಈ ಹಿಂದೆ...'

ಸಿದ್ದರಾಮಯ್ಯ ಬಗ್ಗೆ ಏನು ಹೇಳುವಿರಿ?
- ಹಿಂದೆ ಹಣಕಾಸು ಸಚಿವರಾಗಿದ್ದಾಗ ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಅವರಿಗೆ ಇದೆ. ಹಣಕಾಸು ಇಲಾಖೆಯನ್ನು ದಕ್ಷವಾಗಿ ನಿಭಾಯಿಸುವುದು ಹುಡುಗಾಟದ ವಿಷಯವಲ್ಲ. ಸಿದ್ದರಾಮಯ್ಯ ತುಂಬ ಒಳ್ಳೆ ನಾಯಕ. ಈ ಬಾರಿ ಗೆದ್ದೇ ಗೆಲ್ತಾರೆ. ಕ್ಷೇತ್ರದ ಪ್ರತಿಯೊಬ್ಬರಲ್ಲೂ ನಮ್ಮ ಕ್ಷೇತ್ರದ ಅಭ್ಯರ್ಥಿಯೊಬ್ಬ ಮುಖ್ಯಮಂತ್ರಿ ಆಗುವ ಬಗ್ಗೆ ಜಾತಿ ಮೀರಿ ಒಂದು ಅಸೆ ಇರುತ್ತದೆ. ಅದು ಕೆಲ್ಸ ಮಾಡ್ತದೆ' ಎಂದು ಮಾತು ಮುಗಿಸಿದರು.
 

ಅತಿ ಬುದ್ಧಿವಂತರಿಂದ ದೂರ

ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಅವರ ಒಡನಾಡಿ ಯಾರಾದರೂ ಸಿಗುವರೇ ಎಂದು ಊರವರನ್ನು ಕೇಳಿದಾಗ, ಚಿಕ್ಕವೀರೇಗೌಡರ ಮನೆ ತೋರಿಸಿದರು. 1977ರಿಂದಲೂ ಸಿದ್ದರಾಮಯ್ಯ ಅವರ ಒಡನಾಡಿ ಆಗಿರುವ ಅವರನ್ನು ಮಾತನಾಡಿಸಿದಾಗ..

`ಹತ್ತಿರದಿಂದ ನೋಡಿದಾಗ ಅವರು ದುರಹಂಕಾರಿ ಅನಿಸುವುದಿಲ್ಲ. ಸಾಮಾನ್ಯ ಜನರ ಸಂಪರ್ಕ ಕಡಿದುಕೊಂಡಿಲ್ಲ. ಆದರೆ, ಅತಿಯಾದ ಬುದ್ಧಿವಂತರನ್ನು ಮಾತ್ರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಭಾಷೆ ಒರಟಾದರೂ ಅಧಿಕಾರಿಗಳನ್ನು ಅತಿಯಾಗಿ ಓಲೈಸುವುದಿಲ್ಲ. ಹಿಂಗ್ಯಾಕ್ ಮಾಡ್ತೀಯೋ ಅಂದ್ರೆ, ಅಭ್ಯಾಸ ಬಲ ಏನ್ ಮಾಡೋದು ಅಂತಾನೆ. ಹತ್ತಿರದಿಂದ ನೋಡಿದವರು ಅವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಇವರು ಯಾರನ್ನೂ ಯಾರ ವಿರುದ್ಧವೂ ಎತ್ತಿಕಟ್ಟುವ ಪ್ರಯತ್ನ ಮಾಡಿಲ್ಲ. ನಮಗೆಲ್ಲ ಏನ್ ಮಾಡಿದ್ದೀರಾ ಎನ್ನುವ ಅಪಪ್ರಚಾರ ವ್ಯವಸ್ಥಿತವಾಗಿ ನಡೀತಾ ಇದೆ. ಹುಡುಗರದ್ದೇ ಪ್ರಾಬ್ಲಂ. ಎಲ್ಲರೂ `ಕೈ' ನೋಡ್ತಾರೆ. ಇದೊಂದು ತುಂಬ ಕೆಟ್ಟ ಪ್ರವೃತ್ತಿಯಾಗಿದೆ. ಲಿಂಗಾಯತರೂ ವೋಟ್ ಕೊಡ್ತಾರೆ. ದಲಿತರಲ್ಲಿ ಶೇ 80ರಷ್ಟು ಜನ ಇವರ ಕೈ ಹಿಡಿತಾರೆ...'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT