ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟವರಲ್ಲ,ಕೇಡಿಗಳು...

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

`ಮೈಸೂರು, ಚಾಮರಾಜನಗರ ಸುತ್ತಮುತ್ತ ಹಾಡಿನ ಗಣಿಯೇ ಇದೆ~ ಎಂದರು ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ. ಕೇಡಿಗಳು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದ ಅವರಿಗೆ `ಕನ್ನಡದ ಸಂದರ್ಭದಲ್ಲಿ ಹೊರಗಿನವರ ಹಾವಳಿ ಹೆಚ್ಚು~ ಎಂಬ ಆತಂಕವಿತ್ತು.

`ಮುಂಬೈನಿಂದ ತುರ್ತಾಗಿ ಬಂದು ಹಾಡು ಮಂಡಿಸಿ ಹೋಗುವವರಿದ್ದಾರೆ. ಭಾವ - ಅರ್ಥ ಗೊತ್ತಿಲ್ಲದೇ ಹಾಡುತ್ತಾರೆ. ಅಲ್ಲೇ ಕುಳಿತು ಹಾಡುವಂತಹ ಸೌಲಭ್ಯವೂ ಈಗ ಇದೆ. ಯಾರೋ ಹಾಡಿದ್ದನ್ನು ಅನುಕರಿಸಿ ಹಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೊರಗಿನವರಿಗೆ ಮಣೆ ಹಾಕುವ ಅಗತ್ಯವಿದೆಯೇ?~ ಎಂದು ಕೇಳಿದರು.

`ಮನೋಮೂರ್ತಿ ಅಂತಹವರು ಸಂಗೀತ ನೀಡತೊಡಗಿದ ನಂತರವಷ್ಟೇ ಕನ್ನಡದ ಗಾಯಕರಿಗೆ ಕೊಂಚ ಸ್ಥಾನಮಾನ ದೊರೆತವು. ಜೋಗಿ ಚಿತ್ರದ ನಂತರ ಮಣ್ಣಿನ ವಾಸನೆಯ ಹಾಡುಗಳು ಬಂದವು. ಕನ್ನಡದಲ್ಲಿ ಒಳ್ಳೆಯ ಸಂಗೀತ ನಿರ್ದೇಶಕರಿದ್ದಾರೆ.

ಆದರೆ ಗಾಯಕರಿಲ್ಲ. ಗ್ರಾಮೀಣ ಪ್ರತಿಭೆಗಳನ್ನು ಚಿತ್ರರಂಗ ಬಳಸಿಕೊಳ್ಳುವಂತಾಗಬೇಕು~ ಎಂದು ಕಿವಿಮಾತು ಹೇಳಿದರು.

`ಕೇಡಿಗಳು ಅಂದ್ರೆ ಕೆಟ್ಟವರಲ್ಲ, ಡಕಾಯಿತರಲ್ಲ~ ಎಂದರು ಜಿ. ಭರತ್‌ಕುಮಾರ್. ಅವರು ಚಿತ್ರದ ನಿರ್ಮಾಪಕರು. ಹೊಸ ಪರಿಕಲ್ಪನೆ ಹೊಂದಿರುವ ಒಳ್ಳೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ.
 
ಇದನ್ನೆಲ್ಲ ಅವರು ಮಾಡುತ್ತಿರುವುದು ತಮಗಾಗಿ ಅಲ್ಲ, ತಮ್ಮ ತಂದೆಯವರಿಗಾಗಿ ಅಂತೆ. ಅಪ್ಪ ವೈ.ವಾಸುದೇವ್ ಚಿತ್ರರಂಗದ ಆಯಕಟ್ಟಿನ ಸ್ಥಾನದಲ್ಲಿ ಗುರುತಿಸಿಕೊಂಡವರು. ಅಂದಹಾಗೆ ದುಡ್ಡು ಮಾಡಲು ತಾವು ಬಂದಿಲ್ಲ. ಕನ್ನಡ ಚಿತ್ರೋದ್ಯಮ ಬೆಳೆಸಲು ಬಂದಿರುವುದಾಗಿ ಘೋಷಿಸಿಕೊಂಡರು. `ಚಿತ್ರದ ನಟನಾ ವರ್ಗ ಸೇರಿದಂತೆ ಎಲ್ಲರೂ ವಿದ್ಯಾವಂತರು. ಎಂಜಿನಿಯರಿಂಗ್‌ನಂತಹ ಪದವಿಗಳನ್ನು ಪಡೆದವರು~ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಪರಮಶಿವ. ತೆಲುಗು ತಮಿಳು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದ ಇವರ ಮೊದಲ ಚಿತ್ರ `ರಾಧಾ~ ಚಿತ್ರೀಕರಣ ಪೂರ್ಣಗೊಳಿಸಲಿಲ್ಲವಂತೆ. ಅವಕಾಶ ಕೊಟ್ಟಿದ್ದಕ್ಕಾಗಿ ನಿರ್ಮಾಪಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಹಳ್ಳಿ ಹುಡುಗನೊಬ್ಬ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಕಷ್ಟಗಳನ್ನು ಎದುರಿಸುತ್ತಾನೆ, ಕೊನೆಗೆ ಅದರಿಂದ ಪಾರಾಗುತ್ತಾನೆ ಎಂಬ ಒಂದು ಸಾಲಿನ ಕತೆ ಹೇಳಿದರು ನಿರ್ದೇಶಕರು. ಕುಟುಂಬಗಳು ನೋಡಬಹುದಾದ ಚಿತ್ರ ಎಂದು ಹೇಳಿದ ಅವರು ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್‌ಗೆ ಚಿತ್ರ ಕಾಯುತ್ತಿರುವುದಾಗಿ ತಿಳಿಸಿದರು.
 
ಶೇ 75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆಯಂತೆ. `ನಾಲ್ಕು ಜನ `ಕೇಡಿಗಳು~. ಅವರಲ್ಲಿಯೇ ಒಬ್ಬ ನಾಯಕ~ ಎಂದಾಗ ಪತ್ರಕರ್ತರೊಬ್ಬರು ಅಷ್ಟೂ ಜನಕ್ಕೂ ಒಬ್ಬರೇ ನಾಯಕಿಯೇ ಎಂದು ಪ್ರಶ್ನೆ ಎಸೆದರು. ಆಗ `ನಾಲ್ಕು ಜನ ಸ್ನೇಹಿತರು ಅವರಲ್ಲಿ ಒಬ್ಬ ನಾಯಕ. ಆತನಿಗೆ ನಾಯಕಿ ಇರುತ್ತಾರೆ~ ಎಂಬ ಸ್ಪಷ್ಟೀಕರಣ ನಿರ್ದೇಶಕರಿಂದ.

ದೇವರಿಗೆ, ಪೋಷಕರಿಗೆ, ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಅರ್ಪಿಸಿದ್ದು ಚಿತ್ರದ ಸಂಗೀತ ನಿರ್ದೇಶಕ ವಿ.ಎಸ್. ಅರುಣ್, ಹಾಡುಗಳನ್ನು ಬರೆದ ರಾಮಕೃಷ್ಣ ರಣಗಟ್ಟಿ ಅವರನ್ನೂ ಕೊಂಡಾಡಿದರು. ಚಿತ್ರದ ಹಾಡುಗಳಿಂದಾಗಿ ಅವರಿಗೆ ಬಾಲಿವುಡ್‌ಗೆ ಜಿಗಿಯುವ ಅವಕಾಶ ದೊರೆತಿದೆಯಂತೆ.

ನಾಯಕ ನಟ ಕೃಷ್ಣ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿ. ಚಿತ್ರರಂಗಕ್ಕೆ ಬರಲು ಮೈಕೊ ನಾಗರಾಜ್ ಅವರೇ ಸ್ಫೂರ್ತಿಯಂತೆ. ಅಭಿನಯಕ್ಕಾಗಿ ಯಾವುದೇ ಅಕಾಡೆಮಿಕ್ ತರಬೇತಿಯನ್ನು ಪಡೆದಿಲ್ಲವಂತೆ. `ಚಿತ್ರದಲ್ಲಿ ಪ್ರೇಮಕ್ಕೆ ಬಿದ್ದು ಹಾಳಾಗುವ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ~ ಎಂದರು.

ನಟಿ ಶ್ವೇತಾ ಸಂಜೀವುಲು ಈಗಾಗಲೇ ಉಪೇಂದ್ರ ಅವರ `ಸೂಪರ್~ ಹಾಗೂ `ಗಾಡ್‌ಫಾದರ್~ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಾಯಕಿಯಾಗಿ ನಟಿಸುತ್ತಿರುವ ಚಿತ್ರ `ಕೇಡಿಗಳು~. `ನನ್ನದು ಹಳ್ಳಿ ಹುಡುಗಿಯ ಪಾತ್ರ. ಏನೋ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿರುವ ಹುಡುಗಿಯಾಗಿ ನಟಿಸಿದ್ದೇನೆ~ ಎನ್ನುತ್ತ ಮುಗುಳ್ನಗೆ ಬೀರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT