ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನಿರ್ಮಾಣ, ತಾಂಡಾ ಸುಧಾರಣೆ ಗುರಿ

Last Updated 25 ಜನವರಿ 2011, 12:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಮುಡಬಿ ಜಿಪಂ ಕ್ಷೇತ್ರದಲ್ಲಿ ಹೆಚ್ಚಿನ ತಾಂಡಾಗಳಿದ್ದು ಸೌಲಭ್ಯಗಳಿಂದ ವಂಚಿತವಾಗಿವೆ. ಇಲ್ಲಿನ ಇದುವರೆಗಿನ ಸದಸ್ಯರಲ್ಲಿ ಇಬ್ಬರಿಗೆ ಅಧ್ಯಕ್ಷ ಮತ್ತು ಒಬ್ಬರಿಗೆ ಉಪಾಧ್ಯಕ್ಷ ಆಗುವ ಯೋಗ ದೊರೆತಿತ್ತು. ಈ ಸಲವೂ ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಆಗಿರುವುದರಿಂದ ಇಲ್ಲಿನ ಸದಸ್ಯರು ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಇಲ್ಲಿ ವಿಜೇತರಾದರೆ ಅದೃಷ್ಟ ಖುಲಾಯಿಸಿದಂತೆಯೇ ಎನ್ನಲಾಗುತ್ತದೆ. ಇಲ್ಲಿ ಗೆದ್ದವರಿಗೆ ದೊಡ್ಡ ಸ್ಥಾನ ದೊರೆತರೂ ಈ ಕ್ಷೇತ್ರಕ್ಕೆ ಅಂಟಿಕೊಂಡ ‘ಹಿಂದುಳಿದ ಕ್ಷೇತ್ರ’ ಎಂಬ ಹಣೆಪಟ್ಟಿ ಮಾತ್ರ ಅಳಿಸಿ ಹೋಗದಿರುವುದು ದುರದೃಷ್ಟಕರ ಸಂಗತಿ.

‘ಈ ಕ್ಷೇತ್ರದ ಜನರು ಹಿಂದುಳಿಯಲು ನೀರಾವರಿ ಸೌಲಭ್ಯ ಇಲ್ಲದಿರುವುದೇ ಕಾರಣವಾಗಿದೆ. ಆದ್ದರಿಂದ ಪ್ರತಿ ಊರಿನಲ್ಲಿ ಕೆರೆ ನಿರ್ಮಿಸಲು ಮತ್ತು ತಾಂಡಾಗಳಿಗೆ ರಸ್ತೆ ಹಾಗೂ ನೀರಿನ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ಕೊಡಲಿದ್ದೇನೆ’ ಎಂದು ನೂತನ ಜಿಪಂ ಸದಸ್ಯ ಚಂದ್ರಶೇಖರ ಪಾಟೀಲ ಭರವಸೆ ಕೊಡುತ್ತಾರೆ.

ಚಿಕ್ಕನಾಗಾಂವ ಗ್ರಾಮದ ಸುತ್ತಲಿನ ಹನುಮಾನ ತಾಂಡಾ, ಶೇಕುತಾಂಡಾ ಮತ್ತು ಗಂಗಾರಾಮ ತಾಂಡಾಗಳಿಗೆ ರಸ್ತೆ ಇಲ್ಲ. ಬಸ್ ಬರುವುದೇ ಇಲ್ಲ. ದೇವಿತಾಂಡಾ, ಕಾರಿಗೊಂಡ ತಾಂಡಾ, ಹೀರು ತಾಂಡಾ, ಬಂಜಾರಾ ತಾಂಡಾ, ರಾಮನಗರ ತಾಂಡಾ, ಬಾಗಹಿಪ್ಪರ್ಗಾ ತಾಂಡಾ, ಹಾಮುನಗರ ತಾಂಡಾ, ಮೈಸಲಗಾ ತಾಂಡಾ, ಗದ್ಲೇಗಾಂವ ತಾಂಡಾ, ಹಿಮ್ಮತನಗರ, ಖೇರ್ಡಾ(ಕೆ) ವಾಡಿ, ಕಿಣ್ಣಿವಾಡಿ, ಹಾರಕೂಡ ತಾಂಡಾಗಳ ರಸ್ತೆ ಹದಗೆಟ್ಟಿದೆ. ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕಾಗಿದೆ.
 
ಬೇಸಿಗೆ ಬಂತೆಂದರೆ ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ನೀರಿಗಾಗಿ ಗುಡ್ಡ ಗುಡ್ಡ ಅಲೆಯುತ್ತಾರೆ. ಏಕಲೂರ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಪಶು ಆಸ್ಪತ್ರೆ ಇಲ್ಲ. ಈ ಕ್ಷೇತ್ರದಲ್ಲಿ ಬಡವರು ಹೆಚ್ಚಿಗಿದ್ದು ಮುಡಬಿ ಆರೋಗ್ಯ ಕೇಂದ್ರವೇ ಇವರಿಗೆ ಗತಿಯಾಗಿದೆ. ಆದರೆ ಸಿಬ್ಬಂದಿ ನಿಷ್ಕಾಳಜಿತನ ತೋರುತ್ತಾರೆ. ಹಾರಕೂಡ ಆರೋಗ್ಯ ಕೇಂದ್ರದಲ್ಲಿಯೂ ಇಂಥದ್ದೇ ಪರಿಸ್ಥಿತಿ ಇದೆ ಎಂದು ಜನರು ದೂರುತ್ತಾರೆ.

ಭರವಸೆ: ಬಾಗಹಿಪ್ಪರ್ಗಾ ಮತ್ತು ಏಕಲೂರನಲ್ಲಿ ಕೆರೆ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಮುಡಬಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮತ್ತು ಎಕ್ಸರೇ ಯಂತ್ರದ ವ್ಯವಸ್ಥೆಯಾಗಲು ಪ್ರಯತ್ನಿಸುತ್ತೇನೆ ಎಂದು ಸದಸ್ಯ ಎಂದು ಚಂದ್ರಶೇಖರ ಪಾಟೀಲ ತಿಳಿಸುತ್ತಾರೆ.

ಪಿಯುಸಿವರೆಗೆ ಓದಿರುವ ಇವರು 4 ಸಲ ಗ್ರಾಪಂ ಸದಸ್ಯ ಹಾಗೂ 2 ಸಲ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ತಂದೆಯವರಾದ ಶಂಕರೆಪ್ಪ ಗೌಡರು ಜನಾನುರಾಗಿ ಆಗಿದ್ದರು. ದುರ್ಬಲ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು 4 ಎಕರೆ ಸ್ವಂತ ಜಮೀನು ಉಚಿತವಾಗಿ ಕೊಟ್ಟಿದ್ದರು. ಅವರ ಪುಣ್ಯದ ಕಾರ್ಯವೇ ತಾವು ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಚಿಕ್ಕಪ್ಪ ಮಾಜಿ ಶಾಸಕ ದಿ.ಗೋಪಾಲರಾವ ಪಾಟೀಲ ಹಾಗೂ ನೆಂಟರಾದ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರ ಸಹಕಾರದಿಂದಾಗಿ ತಾವು ರಾಜಕೀಯಕ್ಕೆ ಬರುವಂತಾಯಿತು’ ಎನ್ನುತ್ತಾರೆ.

ಮುಡಬಿಗೆ ಆರು ಕಡೆಯಿಂದ ರಸ್ತೆಗಳು ಬಂದು ಕೂಡುತ್ತವೆ. ಆದ್ದರಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಹನ ಮತ್ತು ಜನದಟ್ಟಣೆ ಇರುತ್ತದೆ. ಇಲ್ಲಿ ಹಳೆಯ ಬಸ್ ನಿಲ್ದಾಣ ಇದ್ದರೂ ಅದು ಜನರಿಗೆ ಕುಳಿತುಕೊಳ್ಳಲು ಸಾಕಾಗುತ್ತಿಲ್ಲ ಆದ್ದರಿಂದ ದೊಡ್ಡ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ. ವೃತ್ತದಲ್ಲಿ ಶೌಚಾಲಯ, ಇಲ್ಲಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಆವರಣಗೋಡೆ ಹಾಗೂ ಬಾಲಕಿಯರ ಪ್ರೌಢಶಾಲೆಗೆ ಕಟ್ಟಡ ಒದಗಿಸಲಾಗುವುದು. ಕ್ಷೇತ್ರದ ಪ್ರತಿ ಗ್ರಾಪಂ ಕೇಂದ್ರಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಲು ಹಾಗೂ ಶಾಲೆಗಳಲ್ಲಿನ ಶಿಕ್ಷಕರ ಸ್ಥಾನಗಳನ್ನು ಭರ್ತಿ ಮಾಡಲು ಒತ್ತಾಯಿಸುತ್ತೇನೆ ಎನ್ನುತ್ತಾರೆ.

ಈಗಾಗಲೇ ಮುಡಬಿ, ಶರಣನಗರ, ಕಿಣ್ಣಿವಾಡಿ, ಬಗದೂರಿ ಗ್ರಾಮಗಳಿಗೆ ಮುಲ್ಲಾಮಾರಿ ಜಲಾಶಯದಿಂದ ನೀರು ಪೊರೈಸುವ 3.60 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ದೊರೆತಿದ್ದು ಕಾಮಗಾರಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ. ಸೈದಾಪುರ ಕೆರೆ ಭರ್ತಿ ಆಗಿದ್ದರಿಂದ ರಸ್ತೆ ಸಮಸ್ಯೆ ಆಗಿರುವ ಗ್ರಾಮಗಳಿಗೆ ಬೇರೆ ಕಡೆಯಿಂದ ರಸ್ತೆ ನಿರ್ಮಿಸಲು ಹಾಗೂ ಪರಿಹಾರದಿಂದ ವಂಚಿತ ಆಗಿರುವ ಮುಲ್ಲಾಮಾರಿ ನೀರಾವರಿ ಯೋಜನೆಯ ನಿರಾಶ್ರಿತರಿಗೆ ಹಣ ಮಂಜೂರಾಗಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT