ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳದಿ ಚೆನ್ನಮ್ಮನೂ ಆಕಾಶದೀಪವೂ

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ `ಕನ್ನಡದ ಕೋಟ್ಯಾಧಿಪತಿ~ ಸದ್ಯಕ್ಕೆ ಪೂರ್ಣಗೊಂಡಿದೆ. ಅದು ಪ್ರಸಾರವಾಗುತ್ತಿದ್ದ ಒಂದೂವರೆ ಗಂಟೆ ಸಮಯಕ್ಕೆ ಮೂರು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ.

ಮೊದಲನೆಯದು `ಆಕಾಶದೀಪ~. ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದಿದ್ದ ಶಿವಮೊಗ್ಗದ ಪ್ರೀತಿ ಎಂಬ ಹುಡುಗಿಯ ಬದುಕಿನ ಕತೆಯೇ `ಆಕಾಶದೀಪ~. ಅದನ್ನು ಧಾರಾವಾಹಿ ಮಾಡುತ್ತಿದ್ದಾರೆ ನಿರ್ದೇಶಕ ಸಕ್ರೆಬೈಲು ಶ್ರೀನಿವಾಸ್. ಐಎಎಸ್ ಅಧಿಕಾರಿಯಾಗಬೇಕೆಂಬ ಮಹದಾಸೆ ಹೊಂದಿದ್ದ ಹುಡುಗಿ ಅನಿವಾರ್ಯ ಕಾರಣಗಳಿಂದ ಅನರಕ್ಷಸ್ಥನನ್ನು ಮದುವೆಯಾಗಬೇಕಾಗಿ ಬರುತ್ತದೆ.

ನಂತರ ಅವಳ ಕನಸಿಗೆ ನೀರೆರೆಯುವ ಕೆಲಸ ಪತಿಯದು. `ಅವಳು ತನ್ನ ಗುರಿ ಸಾಧಿಸಬಲ್ಲಳೇ? ಎಂಬುದನ್ನು ಧಾರಾವಾಹಿ ನೋಡಿ ತಿಳಿಯಿರಿ~ ಎಂಬುದು ನಿರ್ದೇಶಕರ ಮಾತು. `ಆಕಾಶದೀಪ~ ಧಾರಾವಾಹಿಯಲ್ಲಿ ದಿವ್ಯಾ ಶ್ರೀಧರ್ ಮತ್ತು ಪರೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಪ್ರತೀ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಎರಡನೆಯದು `ಕೆಳದಿ ಚೆನ್ನಮ್ಮ~. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ತಮ್ಮ `ಶಿವಪ್ಪ ನಾಯಕ~ ಸಿನಿಮಾಗಾಗಿ ಸಂಶೋಧನೆ ನಡೆಸುವಾಗ `ಕೆಳದಿ ಚೆನ್ನಮ್ಮ~ ಎಂಬ ಪಾತ್ರ ಅವರನ್ನು ಭಾವಪರವಶವಾಗಿಸಿತಂತೆ. ಅದನ್ನು ಧಾರಾವಾಹಿ ಮಾಡುವ ಸಾಹಸಕ್ಕೆ ಕೈ ಹಾಕಿರುವ ಅವರು ಇದೀಗ 40 ದೃಶ್ಯಗಳಿಗೆ ಬೇಕಾದ ಸರಕನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. `

ಇಂಥ ಐತಿಹಾಸಿಕ ಧಾರಾವಾಹಿ ನಿರ್ಮಿಸಲು ಮನಸ್ಸು ಮಾಡಿದ ಸುವರ್ಣ ವಾಹಿನಿಗೆ ವಂದನೆಗಳು~ ಎಂದ ನಾಗಾಭರಣ ಬೆಳ್ಳಿತೆರೆಯಲ್ಲಿ ಈಡೇರದೆ ಉಳಿದ ತಮ್ಮ ಹಲವು ಕನಸುಗಳನ್ನು ಬಿಚ್ಚಿಟ್ಟರು. ಅದರ ಸಾಕಾರದ ಮೊದಲ ಹೆಜ್ಜೆಯಂತೆ `ಕೆಳದಿ ಚೆನ್ನಮ್ಮ~ ಧಾರಾವಾಹಿಯನ್ನು ರೂಪಿಸುತ್ತಿರುವುದಾಗಿ ಹೇಳಿದರು.

ತಮ್ಮ ಸಂಶೋಧನೆಗೆ ನೆರವಾದ ಹಲವು ಇತಿಹಾಸಕಾರರನ್ನು ಸ್ಮರಿಸಿದ ಅವರು, ಧಾರಾವಾಹಿ ತಂಡದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಧಾರಾವಾಹಿಗಾಗಿ ಒಂದು ಕೋಟಿ ವೆಚ್ಚದ ಸೆಟ್ ಹಾಕಿರುವುದು ವಿಶೇಷ. `ಕೆಳದಿ ಚೆನ್ನಮ್ಮ~ ಧಾರಾವಾಹಿ ಪ್ರತೀ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

ಭಾರತಿ ವಿಷ್ಣುವರ್ಧನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ `ಭಾಗ್ಯವಂತರು~ ಮೂರನೇ ಧಾರಾವಾಹಿ. ಕೂಡು ಕುಟುಂಬದ ಕತೆಯನ್ನು ಹೇಳಲು ಇಚ್ಛಿಸಿರುವ `ಭಾಗ್ಯವಂತರು~ ಧಾರಾವಾಹಿ ತಂಡ ಅದರಲ್ಲಿ `ಸಿಂಹಾದ್ರಿ~ ಕುಟುಂಬವನ್ನು ತಂದಿದೆ. ಅದರ ಮುಖ್ಯಸ್ಥ ಹಿರಿಯ ನಟ ವಿಷ್ಣುವರ್ಧನ್ ಎಂದು ಬಿಂಬಿಸಲಾಗಿದೆ. ಅವರ ಪತ್ನಿಯ ಪಾತ್ರವನ್ನು ಭಾರತಿ ನಿರ್ವಹಿಸುತ್ತಿದ್ದಾರೆ.

`ಇದು ಜಮೀನ್ದಾರರ ಕುಟುಂಬದ ಕತೆ. ನೋಡಲು ಎಲ್ಲಾ ಸರಿ ಎಂದುಕೊಂಡಿರುವ ಈ ಮನೆಯಲ್ಲಿ ಕೆಲವು ಬಿರುಕುಗಳಿರುತ್ತವೆ. ಅವುಗಳ ಅನಾವರಣ ನಿಧಾನವಾಗಿ ಆಗುತ್ತದೆ~ ಎಂದು ಕತೆಯ ಬಗ್ಗೆ ವಿವರ ನೀಡಿದ ಭಾರತಿ ಅವರಿಗೆ ಇದು ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ.

ಈ ಧಾರಾವಾಹಿಯಲ್ಲಿ ನಟಿಸುತ್ತಾ ಅವರಿಗೆ ತಮ್ಮ ಪತಿಯೊಂದಿಗೆ ನಟಿಸುತ್ತಿರುವ ಭಾವ ಬಂದಿದೆಯಂತೆ. `ಭಾಗ್ಯವಂತರು~ ಧಾರಾವಾಹಿ ಪ್ರತೀ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಮೂರು ಧಾರಾವಾಹಿಗಳ ಬಗ್ಗೆ ವಿವರ ನೀಡಿದ ವಾಹಿನಿಯ ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಅನೂಪ್ ಚಂದ್ರಶೇಖರ್ `ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ಪುನೀತ್ ರಾಜ್‌ಕುಮಾರ್ ಅವರದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೂರು ಧಾರಾವಾಹಿಗಳ ಕಲಾವಿದರು, ತಂತ್ರಜ್ಞರು ಹಾಜರಿದ್ದರು. ಜುಲೈ 30ರಿಂದ ಈ ಧಾರಾವಾಹಿಗಳು ಪ್ರಸಾರ ಆರಂಭಿಸಲಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT