ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಾದ ಮೈದಾನ ಈ ರಸ್ತೆ...

Last Updated 13 ಜೂನ್ 2011, 6:40 IST
ಅಕ್ಷರ ಗಾತ್ರ

ಹಾವೇರಿ: ಕೆಸರು ಗದ್ದೆಯಾಟ ಆಡಬೇಕೆ, ಹಾಗಾದರೆ ಹಾವೇರಿ ನಗರಕ್ಕೆ ಬನ್ನಿ...! ಅದಕ್ಕಾಗಿ ಪ್ರತ್ಯೇಕ ಮೈದಾನವೇನಿಲ್ಲ. ನಗರದ ಪ್ರತಿಯೊಂದು ರಸ್ತೆಯೂ ಮೈದಾನವೇ ಆಗಿದ್ದು, ಮಂಗಳೂರು, ಮಲ್ಪೆ ಕಡೆಯವರು ಕೂಡಾ ನಾಚುವಂತಹ ಉತ್ತಮ ಮೈದಾನಗಳು ನಗರ ಸಭೆ ನಿರ್ಲಕ್ಷ್ಯದಿಂದ ನಿರ್ಮಾಣ ಗೊಂಡಿವೆ.

ಈ ಕೆಸರು ಗದ್ದೆಯಾಟಕ್ಕೆ ಪ್ರವೇಶ ಉಚಿತವಿದ್ದು, ಅಲ್ಲಿ ಬಿದ್ದು ಕೈಕಾಲು ಗಳನ್ನು ಮುರಿದುಕೊಂಡರೆ, ಬಿದ್ದವರೇ ಜವಾಬ್ದಾರರು ಹೊರತೂ ನಗರಸಭೆ ಅಲ್ಲ. ಕೈಕಾಲ ಮುರಿದುಕೊಂಡರೂ ಪರ ವಾಗಿಲ್ಲ ಎನ್ನುವ ಧೈರ್ಯವಂತರು ಮಾತ್ರ ಮೈದಾನಕ್ಕಿಳಿಯಬೇಕು. ಧೈರ್ಯ ವಿಲ್ಲದವರು ಎರಡ್ಮೂರು ತಿಂಗಳು ಮನೆ ಬಿಟ್ಟು ಹೊರಗೆ ಬರಲೇ ಬೇಡಿ ಎಂಬ ಅಲಿಖಿತ ಫರ್ಮಾನು ಸಹ ನಗರಸಭೆ ಹೊರಡಿಸಿದಂತಿದೆ.

ಪರಸ್ಪರ ಆರೋಪ, ಪ್ರತ್ಯಾರೋಪದ ಕೆಸರೆರಚಾಟದಲ್ಲಿ ಮುಳುಗಿರುವ ಹಾವೇರಿ ನಗರಸಭೆ, ಹೊಸದಾಗಿ ಆರಂಭಿಸಿರುವ ಈ ಕೆಸರು ಗದ್ದೆಯಾಟ ಯಾವುದು ಎಂಬ ಪ್ರಶ್ನೆಗೆ, ನಗರದಲ್ಲಿನ ರಸ್ತೆಗಳಲ್ಲಿ ಒಮ್ಮೆ ಓಡಾಡಿ ಬಂದರೆ ಉತ್ತರ ತಾನಾಗಿಯೇ ದೊರೆಯುತ್ತದೆ.

ಹೌದು, ಕೆಸರು ಗದ್ದೆಯಾಟಕ್ಕೆ ಸಿದ್ಧ ಪಡಿಸಿದ ಮೈದಾನಕ್ಕಿಂತಲೂ ಹೆಚ್ಚಿನ ಕೆಸರು ನಗರದ ರಸ್ತೆಗಳಲ್ಲಿ ತುಂಬಿದ್ದು, ಜನರು ವಾಹನಗಳಲ್ಲಿ ಹೋಗುವುದಿರಲಿ, ನಡೆದುಕೊಂಡು ಅಡ್ಡಾಡುವುದು ಕಷ್ಟ ವಾಗಿದೆ. ಹೀಗಾಗಿ ಜನರು ರಸ್ತೆಗೆ ಬರಲು ಹಿಂಜರಿಯುತ್ತಿದ್ದರೆ, ಅಟೋದವರು ನಗರದೊಳಗಿನ ಯಾವುದೇ ರಸ್ತೆಗಳಿಗೂ ಬರಲು ನಿರಾಕರಿಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕುಂಟುತ್ತಾ, ತೆವಳುತ್ತಾ ಸಾಗಿರುವ ಒಳ ಚರಂಡಿ ಹಾಗೂ ನೀರು ಪೂರೈಸುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳೇ ಈ ಎಲ್ಲ ಆವಾಂತರಕ್ಕೆ ಕಾರಣವಾಗಿದೆ. ಕಾಮಗಾರಿಗಾಗಿ ನಗರದ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಅವುಗಳು ಮೂಲ ಸ್ವರೂಪವನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಡಾಂಬರ್ ರಸ್ತೆಗಳೆಲ್ಲ, ಮಣ್ಣಿನ ತಗ್ಗು ಗುಂಡಿಯ ರಸ್ತೆಗಳಾಗಿವೆ.

ಕಳೆದ ಒಂದು ವಾರದಿಂದ ಸುರಿಯುತ್ತಿ ರುವ ಮಳೆ ನಗರದ ರಸ್ತೆಗಳನ್ನು ಕೆಸರು ಗುಂಡಿಯನ್ನಾಗಿ ಮಾಡಿವೆ.ಈ ರಸ್ತೆ ಗಳಲ್ಲಿ ಸಂಚರಿಸುವುದೆಂದರೆ, ತಂತಿ ಮೇಲಿನ ನಡಿಗೆಯ ಅನುಭವ ನೀಡು ತ್ತದೆ. ಸ್ವಲ್ಪ ಆಯ ತಪ್ಪಿದರೂ ಕೆಸರಿನ ಜಳಕ ಇಲ್ಲವೇ ಕೈಕಾಲು ಮುರಿತ ಗ್ಯಾರಂಟಿ ಎನ್ನುವಂತಾಗಿದೆ. ಕಳೆದ ಒಂದು ವಾರದಲ್ಲಿ ರಸ್ತೆಗಳಲ್ಲಿ ಬಿದ್ದು ಗಾಯಗೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.

ನಗರದ ರೈಲು ನಿಲ್ದಾಣ ರಸ್ತೆ, ಜಿಲ್ಲಾ ಗುರುಭವನ ರಸ್ತೆ, ಬಸ್ ನಿಲ್ದಾಣದಿಂದ ಜೆ.ಪಿ.ವೃತ್ತದ ರಸ್ತೆ, ಮುನ್ಸಿಪಲ್ ಹೈಸ್ಕೂಲ್ ಮೈದಾನದ ರಸ್ತೆ, ಎಪಿಎಂಸಿ ರಸ್ತೆ ಸೇರಿದಂತೆ ವಿದ್ಯಾನಗರ, ಅಶ್ವಿನಿ ನಗರ, ರಾಜೇಂದ್ರನಗರ ಬಡಾವಣೆಗಳ ರಸ್ತೆಗಳು ಸಹ ಕೆಸರು ಗದ್ದೆಗಿಂತ ಭಿನ್ನವೇನಿಲ್ಲ.

ಹದಗೆಟ್ಟು ಜನ ಸಂಚಾರಕ್ಕೆ ಅನಾನು ಕೂಲವಾಗಿರುವ ರಸ್ತೆಗಳ ದುರಸ್ತಿ ಮಾಡಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನಮಗೂ ಈ ರಸ್ತೆಗಳಿಗೆ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕಾಮಗಾರಿಯನ್ನು ಹಾಗೆ ಮುಂದು ವರೆಸಿರುವುದ್ದಾರೆ. ಇದರಿಂದ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಡಲು ಕಾರಣ ವಾಗಿದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಸೂಚನೆ: ನಗರದಲ್ಲಿನ ರಸ್ತೆಗಳ ಪರಿಸ್ಥಿತಿ ವಿರುದ್ಧ ಕರ್ನಾಟಕ ಮೂಲ ಸೌಕರ್ಯ, ಅಭಿವೃದ್ಧಿ ಮತ್ತು ಹಣ ಕಾಸು ಸಂಸ್ಥೆ ನಿಯಮಿತಿ ಉತ್ತರ ಕರ್ನಾಟಕ ನಗರವಲಯ, ಬಂಡವಾಳ ಹೂಡಿಕೆ ಕಾಯಕ್ರಮ ಧಾರವಾಡ ವಿಭಾಗದ ಕಾರ್ಯ ನಿರ್ವಾಹ ಎಂಜಿನಿಯರ್ ಬಿ.ಎಸ್.ಬಿದರಕಟ್ಟಿ ಅವರಿಗೆ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಂಜಿನಿಯರ್ ಅವರು ಶನಿವಾರ ನಗರಕ್ಕೆ ಭೇಟಿ ನೀಡಿ ರಸ್ತೆಗಳ ಪರಿಶೀಲನೆ ನಡೆಸಿದ್ದಾರಲ್ಲದೇ, `ಹದಗೆಟ್ಟ ರಸ್ತೆ ಗಳನ್ನು ನೋಡಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ, ಅವುಗಳ ದುರಸ್ತಿ ಮಾಡು ವಂತೆ ಒಳಚರಂಡಿ ಕಾಮಗಾರಿ ಗುತ್ತಿಗೆ ದಾರರಿಗೆ ಹಾಗೂ ತಮ್ಮ ಇಲಾಖೆಯ ಸಹಾಯಕ ಎಂಜಿನಿಯರ್‌ಗೆ ಸೂಚಿಸಿರುವುದಾಗಿ ಅವರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT