ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೇಂದ್ರ ನಿಲ್ದಾಣ ಸುಧಾರಣೆಯಾಗಬೇಕಿದೆ'

ರೈಲ್ವೆ ಇಲಾಖೆ, ಜನಪ್ರತಿನಿಧಿಗಳ ಗಮನಕ್ಕೆ....
Last Updated 24 ಜುಲೈ 2013, 8:43 IST
ಅಕ್ಷರ ಗಾತ್ರ

ಕೊಪ್ಪಳ: ಪ್ಲಾಟ್ ಫಾರಂ ಬಳಿ ರೈಲುಗಾಡಿ ನಿಂತಿದೆ. ಹೊಸಪೇಟೆಗೆ ಹೋಗುವ ಪ್ರಯಾಣಿಕ ಇನ್ನೊಂದು ಕಡೆಯಿಂದ ಏದುಸಿರುಬಿಟ್ಟುಕೊಂಡು ಬರುತ್ತಿದ್ದಾನೆ. ಹಳಿ ದಾಟಿಯಾದರೂ ರೈಲು ಹಿಡಿಯೋಣವೆಂದರೆ ಗೂಡ್ಸ್ ರೈಲು ಅಡ್ಡವಾಗಿ ನಿಂತಿದೆ. ಅದರ ಅಡಿ ತೂರಿಕೊಂಡು ಬರಲು ಪ್ರಯಾಣಿಕ ಪ್ರಯತ್ನಿಸುತ್ತಾನೆ... ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ. ಛೆ ನಿಲ್ದಾಣಕ್ಕೆ ಎರಡು ಪ್ಲಾಟ್‌ಫಾರಂ ಹಾಗೂ ದಾಟಲು ಮೇಲು ಸೇತುವೆ ಇರುತ್ತಿದ್ದರೆ...?

- ಟನ್‌ಗಟ್ಟಲೆ ರಸಗೊಬ್ಬರ ಹೇರಿಕೊಂಡು ಬಂದ ಗೂಡ್ಸ್‌ಗಾಡಿಯಿಂದ ಇಳಿಸಲು ಲಾರಿಗಳು ಒಂದೊಂದಾಗಿ ಬರುತ್ತವೆ. ಒಂದೊಂದೇ ಮೂಟೆ ಇಳಿಸುವಷ್ಟರಲ್ಲಿ ಧೋ... ಎಂದು ಮಳೆ ಸುರಿಯುತ್ತದೆ. ತಕ್ಷಣಕ್ಕೆ ಆಶ್ರಯ ಪಡೆಯಲು ಜಾಗವೂ ಇಲ್ಲ. ಸುತ್ತಮುತ್ತ ಲಾರಿಗಳು ಇಡೀ ಪ್ರದೇಶದಲ್ಲಿ ಕೆಸರಿನ ಓಕುಳಿ ಸೃಷ್ಟಿಸುತ್ತವೆ. ಲಾರಿ ಚಾಲಕರು, ಕೂಲಿಯಾಳುಗಳು ಗೋಳಾಡುತ್ತಾ ಹೇಳುತ್ತಾರೆ. ಈ ನಿಲ್ದಾಣಕ್ಕೊಂದು ಗೂಡ್ಸ್ ಷೆಡ್ ಇರಬೇಕಿತ್ತು...

ಊರಿಗೆ ಬಂದ ಹೊಸಬರಿಗೆ ರೈಲು ನಿಲ್ದಾಣದ ದಾರಿ ತೋರಿಸುವ ಫಲಕವೂ ಇಲ್ಲ. ಪ್ರತಿದಿನ ಸರಾಸರಿ 14 ರೈಲುಗಳು ಕೊಪ್ಪಳ ನಿಲ್ದಾಣದ ಮೂಲಕ ಸಾಗುತ್ತವೆ. 3 ಸಾವಿರ ಪ್ರಯಾಣಿಕರು ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ರೂ 2 ಲಕ್ಷ ವಹಿವಾಟಿದೆ. ಆದರೆ, ನಿಲ್ದಾಣಕ್ಕೆ ಬೇಕಾದ ಮೂಲಸೌಲಭ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ನಿಲ್ದಾಣದ ಅಧಿಕಾರಿಗಳನ್ನು ಕೇಳಿದರೆ ಎಲ್ಲವೂ ಚೆನ್ನಾಗಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ.

ಆದರೆ... ನಿಲ್ದಾಣ ಸಂಪೂರ್ಣ ಮೇಲ್ದರ್ಜೆಗೆ ಏರಬೇಕಿದೆ. ಕನಿಷ್ಠ ರೈಲುಗಳ ವೇಳಾಪಟ್ಟಿಯನ್ನಾದರೂ ಸ್ಪಷ್ಟವಾಗಿ ಕಾಣುವಂತೆ ಪರಿಷ್ಕರಿಸಿ ಹಾಕಬೇಕಿದೆ. ಕುಡಿಯುವ ನೀರು, ಮೂಲಸೌಲಭ್ಯ ಶೌಚಾಲಯ ವ್ಯವಸ್ಥಿತವಾಗಿರಬೇಕಿದೆ. ಮುಂಗಡ ಬುಕ್ಕಿಂಗ್, ಟಿಕೆಟ್ ಕೌಂಟರ್ ನಿರಂತರವಾಗಿ ತೆರೆದಿಡಬೇಕು. ಈಗಿನ ಪರಿಸ್ಥಿತಿಯಲ್ಲಿ ರೈಲು ಬರುವ ಕೆಲವು ಕಾಲದ ಮೊದಲಷ್ಟೇ ತೆ

ಮೇಲ್ದರ್ಜೆಗೆ?: ಹೊಸಪೇಟೆ- ತಿನೈಘಾಟ್ ಜೋಡಿ ಮಾರ್ಗಕ್ಕೆ ಇತ್ತೀಚೆಗೆ ಶಿಲಾನ್ಯಾಸ ನಡೆದಿದೆ. ರೂ 2,127 ಕೋಟಿ ವೆಚ್ಚದ ಈ ಮಾರ್ಗ ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಗಿಣಿಗೇರಾ, ಭಾನಾಪುರ ನಿಲ್ದಾಣಗಳ ಮೂಲಕ ಸಾಗುತ್ತದೆ. 2015ರಲ್ಲಿ ಪೂರ್ಣಗೊಳ್ಳಲಿರುವ ಈ ದ್ವಿಪಥ ಮಾರ್ಗ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಆ ವೇಳೆಗೆ ಜಿಲ್ಲೆಯ ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ ಎಂಬುದು ರೈಲ್ವೆ ಮೂಲಗಳ ಅಂಬೋಣ.

ರಸ್ತೆ ಕ್ರಾಸಿಂಗ್ ಸಮಸ್ಯೆ: ಭಾನಾಪುರ, ಹಲಗೇರಿ, ಭಾಗ್ಯನಗರ ರಸ್ತೆ, ಕಿನ್ನಾಳ ರಸ್ತೆ, ಕುಷ್ಟಗಿ ರಸ್ತೆ, ಕಿಡದಾಳ್ ಮತ್ತು ಗಿಣಿಗೇರಿಯಲ್ಲಿ ಒಟ್ಟು 7 ಲೆವೆಲ್ ಕ್ರಾಸಿಂಗ್ ಬರುತ್ತವೆ. ಇದರಲ್ಲಿ ಭಾಗ್ಯನಗರ, ಕುಷ್ಟಗಿ ರಸ್ತೆ ಮತ್ತು ಗಿಣಿಗೇರಿಗಳಲ್ಲಿ ತೀವ್ರ ಸಂಚಾರ ಸಮಸ್ಯೆ ಸೃಷ್ಟಿಯಾಗುತ್ತಿದೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ವೇಳೆ ಶಾಲಾ ಕಾಲೇಜು ಆರಂಭವಾಗುವ, ತರಗತಿಗಳು ಮುಗಿಯುವ ಅವಧಿಯಲ್ಲಿ ಇಲ್ಲಿನ ದಟ್ಟಣೆ ಹೇಳತೀರದು. ರೈಲು ಬರುತ್ತಿದ್ದರೂ ಹಳಿ ದಾಟುವ ಅವಸರದ ಮಂದಿಯನ್ನು ಕಾಣಬಹುದು. ಗೇಟು ಮುಚ್ಚಿದ್ದರೂ ಅದರ ಅಡಿ ವಾಹನ ತೂರಿಸುವ ಮಂದಿಯೂ ಇದ್ದಾರೆ. ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ರೈಲ್ವೆ ಇಲಾಖೆಯಾಗಲಿ ಪೊಲೀಸರಾಗಲಿ ಅಸಹಾಯಕರು ಎನ್ನುತ್ತಾರೆ ನಿಲ್ದಾಣ ಸಮೀಪದ ನಿವಾಸಿಗಳು.

ಗಿಣಿಗೇರಿಯಲ್ಲಿಯೂ ವಿವಿಧ ಕಂಪೆನಿಗಳಿಗೆ ಸೇರಿದ ಭಾರೀ ವಾಹನಗಳು ಎಷ್ಟೋ ವೇಳೆ ಕ್ರಾಸಿಂಗ್‌ನಲ್ಲಿ  ಸಿಲುಕಿ ರಸ್ತೆಯುದ್ದಕ್ಕೂ ಸಂಚಾರ ಸ್ಥಗಿತಗೊಂಡ ಉದಾಹರಣೆಯಿದೆ ಎನ್ನುತ್ತಾರೆ ಇಲ್ಲಿನ ವಾಹನ ಚಾಲಕರು.

ಸಮಸ್ಯೆಗಳೆಲ್ಲವೂ ಮೇಲ್ನೋಟಕ್ಕೆ ಸಾಮಾನ್ಯ ಎನಿಸುತ್ತಿವೆ. ಆದರೆ, ಹಿಂದುಳಿದ ಜಿಲ್ಲೆ ಎಂಬ ಪಟ್ಟ ಹೊತ್ತಿರುವ ಕೊಪ್ಪಳ ಸಾರಿಗೆ ವಿಚಾರದಲ್ಲಿಯೂ ಹೀಗೆಯೇ ಇರಬೇಕೇ? ಹೆಚ್ಚುವರಿ ರೈಲು ಸೇವೆ. ಮಾರ್ಗ, ನಿಲ್ದಾಣ ಉನ್ನತೀಕರಣಕ್ಕೂ ಈ ಭಾಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎನ್ನುತ್ತಾರೆ ಗೋವಿಂದರಾವ್ ಕುಲಕರ್ಣಿ.

ಗೂಡ್ಸ್ ಷೆಡ್ ಅಗತ್ಯ
ಅಮರಾವತಿ ಎಕ್ಸ್‌ಪ್ರೆಸ್ (ವಿಜಯವಾಡ- ಹುಬ್ಬಳ್ಳಿ) ನಿರಂತರ ಓಡಾಡಬೇಕು. ಹುಬ್ಬಳ್ಳಿ- ಗುಂತಕಲ್‌ಗೆ ನಿತ್ಯ ಇಂಟರ್‌ಸಿಟಿ ರೈಲು ಬೇಕು. ಹೊರರಾಜ್ಯಗಳಿಗೆ ಪಾರ್ಸೆಲ್ ಕಳುಹಿಸಲು ತೊಂದರೆ ಆಗುತ್ತಿದೆ. ಎಕ್ಸ್‌ಪ್ರೆಸ್ ರೈಲುಗಳಿಗೆ ಕನಿಷ್ಠ 5 ನಿಮಿಷ ನಿಲುಗಡೆ ನೀಡಿದರೆ ಪಾರ್ಸೆಲ್ ತುಂಬಲು ಅನುಕೂಲವಾಗುತ್ತದೆ. ಈಗ ಶೇ 80ರಷ್ಟು ಪಾರ್ಸೆಲ್ ಬುಕ್ಕಿಂಗ್ ಕಡಿಮೆಯಾಗಿದೆ. ಕೊಪ್ಪಳ -ಆಲಮಟ್ಟಿ, ಮುನಿರಾಬಾದ್-ಮೆಹಬೂಬ್‌ನಗರ ಮಾರ್ಗಗಳ  ನಿರ್ಮಾಣ ಶೀಘ್ರವೇ ಆಗಬೇಕು. ಚೆನ್ನೈ-ಮುಂಬೈ ರೈಲುಗಳು ಈ ಮಾರ್ಗದಲ್ಲಿ ಸಂಚರಿಸಬೇಕು. ಪ್ಲ್ಯಾಟ್‌ಫಾರಂ ಸಹಿತ ಅತ್ಯಾಧುನಿಕ ಗೂಡ್ಸ್‌ಷೆಡ್ ಆಗಬೇಕು.
-ಕೆ.ಎಸ್. ಗುಪ್ತಾ, ಅಧ್ಯಕ್ಷ ಕೊಪ್ಪಳ ಛೇಂಬರ್ ಆಫ್ ಕಾಮರ್ಸ್

`ಮನವರಿಕೆ ಮಾಡುತ್ತೇನೆ'
`ಜಿಲ್ಲಾ ಕೇಂದ್ರಕ್ಕೆ ಆದರ್ಶ ರೈಲು ನಿಲ್ದಾಣ' ಯೋಜನೆ ಮಂಜೂರಾಗಿದೆ. ಅದರ ಅಡಿ ಮೂಲಸೌಲಭ್ಯ ಅಭಿವೃದ್ಧಿ, ಸ್ವಚ್ಛತೆ ಇತ್ಯಾದಿ ಕಾಮಗಾರಿಗಳು ಒಂದೊಂದಾಗಿ ನಡೆಯುತ್ತಿವೆ. ಜೋಡಿ ಮಾರ್ಗ ಕಾಮಗಾರಿಯನ್ನು ಈಗಾಗಲೇ ಎಲ್ ಆ್ಯಂಡ್ ಟಿ ಕಂಪೆನಿ ಆರಂಭಿಸಿದೆ. ಜಿಲ್ಲಾವ್ಯಾಪ್ತಿಯ ಕಾಮಗಾರಿ ಸಂದರ್ಭ ಇಲ್ಲಿಗೆ ಗೂಡ್ಸ್‌ಷೆಡ್, ನಿಲ್ದಾಣ ಆಧುನೀಕರಣ ಸಂಬಂಧಿಸಿ ಇನ್ನೊಂದು ಪ್ರಸ್ತಾವ ಸಲ್ಲಿಸುತ್ತೇನೆ. ಭಾಗ್ಯನಗರ ಕ್ರಾಸ್ ಬಳಿ ಮೇಲು ಸೇತುವೆ, ಕಿನ್ನಾಳದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ರೂ 35 ಕೋಟಿ ಪ್ರಸ್ತಾವನೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 17 ಕೋಟಿ ನೀಡಲು ಒಪ್ಪಿವೆ. ಆದರೆ, ಭೂಸ್ವಾಧೀನ, ಪರಿಹಾರ ವಿತರಣೆ ಇತ್ಯಾದಿಗೆ ಬೀಳುವ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದು ರೈಲ್ವೆ ಇಲಾಖೆ ಹೇಳುತ್ತಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಒಪ್ಪುತ್ತಿಲ್ಲ. ಆದ್ದರಿಂದ ಮುಂದಿನ ಲೋಕಸಭಾ ಅಧಿವೇಶನದ ಸಂದರ್ಭ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇನ್ನೊಮ್ಮೆ ಮನವರಿಕೆ ಮಾಡಿ ಹೇಗಾದರೂ ಇಲ್ಲಿಗೆ ಮೇಲು ಸೇತುವೆ ನಿರ್ಮಿಸಲು ನೆರವು ನೀಡುವಂತೆ ಪ್ರಯತ್ನಿಸುತ್ತೇನೆ.
- ಸಂಸತ್ ಸದಸ್ಯ ಶಿವರಾಮ ಗೌಡ

ಸುರಕ್ಷತೆಗೆ ಒತ್ತು ನೀಡಿ
ಇಲ್ಲಿ ಜಿಲ್ಲಾಮಟ್ಟದ ರೈಲು ನಿಲ್ದಾಣಕ್ಕೆ ಬೇಕಾದ ಸೌಲಭ್ಯ ಇಲ್ಲ. ರಾತ್ರಿ ವಿದ್ಯುತ್ ಕೈಕೊಟ್ಟರೆ ದೇವರೇ ಗತಿ. ಸುರಕ್ಷತೆ ಆತಂಕಕಾರಿ. ಆದ್ದರಿಂದ ಎರಡೂಕಡೆ ಪ್ಲ್ಯಾಟ್‌ಫಾರಂ ನಿರ್ಮಿಸಿ, ಮೂಲಸೌಲಭ್ಯ ಒದಗಿಸಿ.
-ಮೋಹನ್ ಕಡೆಕಾರ್, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT