ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಕ್! ಬರಿ ತಿನಿಸಷ್ಟೇ ಅಲ್ಲ...

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಡಿಸೆಂಬರ್‌ನ ತಣ್ಣನೆ ನಡುಗಿಸುವ ಚಳಿಗೆ ಸವಾಲು ಹಾಕುವಂತೆ ಮೈದಳೆದು ಎದ್ದು ನಿಲ್ಲುತ್ತದೆ ಕೇಕ್ ಸಾಮ್ರಾಜ್ಯ. ಇದು ದೇಶ-ಕಾಲದ ಚೌಕಟ್ಟು ಮೀರಿದ, ಭಾಷೆ-ಬಣ್ಣಗಳ ಚೌಕಟ್ಟು ಮೀರಿದ ಆಹಾರ ಸಾಮ್ರಾಜ್ಯ. ಸರ್ವ ಋತುಗಳಲ್ಲೂ ಮುಟ್ಟಿದರೆ ನಲುಗುವ ಬಿಳಿ ಹಾಸಿಗೆಯಂಥ ಬ್ರೆಡ್ ತುಣುಕಿನ ಮೇಲೆ ವರ್ಣಚಿತ್ತಾರದ ಹೊದಿಕೆ ಹ್ದ್ದೊದ ಚಿತ್ತಾಕರ್ಷಕ ರೂಪ ಇದರದು.

ಕೇಕ್‌ನಷ್ಟು ವೈವಿಧ್ಯಮಯ ರುಚಿ, ಆಕಾರ, ವರ್ಣರಂಜಿತ ತಿನಿಸು ಮತ್ತೊಂದಿರಲಾರದು. ಡಿಸೆಂಬರ್ ಎಂದರೆ ಕೇಕ್ ಹಬ್ಬ. ಒಂದೇ ವಾರದ ಅಂತರದಲ್ಲಿ ಎರಡು ಜಾಗತಿಕ ಸಂಭ್ರಮೋತ್ಸವಗಳ ಆಚರಣೆಯ ತಿಂಗಳಿದು. ಕ್ರಿಸ್‌ಮಸ್ ಮತ್ತು ಹೊಸವರ್ಷದ ಸ್ವಾಗತದ ಸಂಭ್ರಮ ಅರ್ಥಪೂರ್ಣವಾಗುವುದು ಕೇಕ್ ಹಾಜರಿಯಲ್ಲೇ.

ಕೇಕ್ ಸಿಹಿಯ ಜಾಡು ಹಿಡಿದು...

ಕೇಕ್‌ನ ಮೂಲ ಯಾವುದು ಎನ್ನುವುದಕ್ಕೆ ಖಚಿತ ಪುರಾವೆಗಳಿಲ್ಲ. ಕೇಕ್ ಮಾದರಿಯ ತಿನಿಸುಗಳು ಲಭ್ಯವಾದ ಆಧಾರದಲ್ಲಿ ಹಲವೆಡೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಮನುಷ್ಯ ಯಾವಾಗ ದವಸ ಧಾನ್ಯಗಳನ್ನು ಹಿಟ್ಟಾಗಿ ಪರಿವರ್ತಿಸುವ ಕಲೆಯನ್ನು ಕಲಿತನೋ ಆಗಲೇ ಕೇಕ್ ಕೂಡ ಜನಿಸಿತೆನ್ನಬೇಕು. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ `ಕೇಕ್' ಪದದ ಮೂಲ ನಾರ್ವೆ ದೇಶದ `ಕಾಕಾ' ಎಂಬ ಪದ. 13ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಅದು `ಕೇಕ್' ಎಂದು ಬದಲಾಯಿತು.

ಕ್ರಿ.ಪೂ. 200ರ ಸಮಯದಲ್ಲಿ ಗ್ರೀಕ್‌ನಲ್ಲಿ ಕೇಕ್ ಮಾದರಿಯ ತಿನಿಸು ಜನಪ್ರಿಯವಾಗಿತ್ತು. ಅಲ್ಲಿ ಕೇಕ್‌ಗೆ `ಪ್ಲಕೌಸ್' ಎಂದು ಹೆಸರು. ಅದು ಕಡಲೆಬೀಜ ಹಾಗೂ ಜೇನುತುಪ್ಪಗಳ ಸಂಯೋಜನೆಯಾಗಿತ್ತು. `ಸಟಾರಾ' ಎಂಬ ಮತ್ತೊಂದು ಬಗೆಯ ಕೇಕ್ ಕೂಡ ಜನಪ್ರಿಯತೆ ಗಳಿಸಿತ್ತು. ಕ್ರಿ.ಪೂ. 776ರಲ್ಲಿ ಗ್ರೀಕ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳಿಗೆ ಶಕ್ತಿವರ್ಧನೆಗಾಗಿ ಕೇಕ್ ನೀಡಲಾಗಿತ್ತಂತೆ. ಅದು ಈಗಿನ `ಚೀಸ್‌ಕೇಕ್' ಮಾದರಿಯದು.

ಯುರೋಪಿನ ಹಲವು ರಾಷ್ಟ್ರಗಳಲ್ಲಿ ಸಿಹಿಯಾದ ಸಣ್ಣಬ್ರೆಡ್‌ಗಳಿಗೆ ಕೇಕ್ ಎಂದು ಕರೆಯಲಾಗುತ್ತಿತ್ತು. ರೋಮ್‌ನಲ್ಲಿ ಈ ಬಗೆಯ ಆಹಾರಕ್ಕೆ `ಪ್ಲಾಸೆಂಟ' ಮತ್ತು `ಲಿಬಮ್' ಎನ್ನುವ ಹೆಸರು. 13ನೇ ಶತಮಾನದ ಹೊತ್ತಿಗೆ ಬ್ರೆಡ್ ಹಾಗೂ ಕೇಕ್ ಎರಡೂ ಬೇರೆ ಬೇರೆ ಹಾಗೂ ಒಂದಕ್ಕೊಂದು ಪೂರಕ ಎಂಬಂತೆ ಬಳಕೆಯಾಗತೊಡಗಿದವು.

ತವಾದಲ್ಲಿ ಬಿಸಿ ಮಾಡಿದ ಆರ್ದ್ರ ಹಾಗೂ ಸಾಂದ್ರೀಕರಿಸಿದ ಧಾನ್ಯದ ಕೇಕ್‌ಗಳು ಇಂಗ್ಲೆಂಡಿನ ನಿಯೊಥಿಕ್ ಎಂಬ ಹಳ್ಳಿಯಲ್ಲಿ ಪ್ರಾಕ್ತನಶಾಸ್ತ್ರಜ್ಞರಿಗೆ ದೊರೆತಿದ್ದವು. ಈ ಕೇಕುಗಳು ಈಗಿನ ಬಿಸ್ಕತ್ ಅಥವಾ ಕುಕಿಗಳಿಗೆ ಸಮಾನ. ಮಧ್ಯ ಯುರೋಪಿಯನ್ನರು ಹೆಚ್ಚಾಗಿ ಹಣ್ಣಿನ ಕೇಕ್ ಹಾಗೂ ಶುಂಠಿ ಬ್ರೆಡ್‌ಗಳನ್ನು ಮಾಡುತ್ತಿದ್ದರು. ಇವುಗಳನ್ನು ತಿಂಗಳುಗಟ್ಟಲೆ ಕೆಡದಂತೆ ಇಡಬಹುದಾಗಿತ್ತು. ಕೇಕ್‌ಗಳನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು. ಏಕೆಂದರೆ ಅದಕ್ಕೆ ಬಳಸಲಾಗುತ್ತಿದ್ದ ಸಾಮಗ್ರಿಗಳು ಅತ್ಯಂತ ಉತ್ಕೃಷ್ಟ ಗುಣಮಟ್ಟದವು ಹಾಗೂ ದುಬಾರಿಯಾಗಿದ್ದವು.

ಬೇಯಿಸಿದ ಕೇಕ್‌ಗೆ ನಿರ್ದಿಷ್ಟ ಆಕಾರ ನೀಡುವ ಪದ್ಧತಿ 1600ರ ಸಂದರ್ಭದಲ್ಲಿ ಪ್ರಾರಂಭವಾಯಿತು. ಇದರಿಂದ ವಿಶೇಷ ಸಮಾರಂಭಗಳಿಗೆ ವೈವಿಧ್ಯಮಯ ಗಾತ್ರದ ಕೇಕ್‌ಗಳ ತಯಾರಿ ಸಾಧ್ಯವಾಯಿತು. ಲೇಖಕಿ ಮೇರಿ ಆ್ಯಂಟಿನೆಟ್‌ಳ ಸಾಲು `ಲೆಟ್ ದೆಮ್ ಈಟ್ ಕೇಕ್' ಸಾಲು ಆಗ ಬಹುಜನಪ್ರಿಯವಾಗಿತ್ತು.

ಆಕೆಯ ಮಾತುಗಳು ಆಧುನಿಕ ಕಾಲದ ಸಕ್ಕರೆ ಪುಡಿಯನ್ನು ಬಳಸಿದ ಕೇಕುಗಳ ಕುರಿತಾಗಿದ್ದಲ್ಲ. ಬೇಕರಿಗಳಲ್ಲಿ ದಿನದಂತ್ಯಕ್ಕೆ ಖಾಲಿಯಾಗದೆ ಉಳಿದ ಬೇಕರಿ ತಿನಿಸುಗಳಿಗೆ ಹಿಟ್ಟು ಹಾಗೂ ನೀರು ಬೆರೆಸಿ ಅದನ್ನು ಬೇಕರಿಯಿಂದ ಹೊರಗೆ ಭಿಕ್ಷುಕರಿಗೆಂದು ಇಡಲಾಗುತ್ತಿತ್ತು. ಇದಕ್ಕೆ ಕೇಕ್ ಎಂಬ ಹೆಸರಿತ್ತು.

16ನೇ ಶತಮಾನದಲ್ಲಿ ಚಾಲ್ತಿಗೆ ಬಂದಿದ್ದು ಬ್ಲ್ಯಾಕ್ ಫಾರೆಸ್ಟ್ ಕೇಕ್. ಚೆರ‌್ರಿ ಹಣ್ಣುಗಳಿಗೆ ಪ್ರಸಿದ್ಧವಾದ ಜರ್ಮನಿಯ ದಟ್ಟ ಕಾಡಿನ ಪ್ರದೇಶ ಈ ಕೇಕ್‌ನ ಮೂಲ. ಹೀಗಾಗಿ ಅದಕ್ಕೆ ಬ್ಲ್ಯಾಕ್ ಫಾರೆಸ್ಟ್ ಎಂಬ ಹೆಸರು. 17ನೇ ಶತಮಾನದ ಅಂತ್ಯದಲ್ಲಿ ಫ್ರೆಂಚರು ಊಟದ ಅಂತ್ಯದಲ್ಲಿ ಬೇರೆ ತಿನಿಸೊಂದನ್ನು ತಿನ್ನುವ ಸಂಪ್ರದಾಯ ಹುಟ್ಟುಹಾಕಿದರು. ಇದು ಊಟಕ್ಕಿಂತಲೂ ಸಿಹಿ ಹಾಗೂ ಮತ್ತಿತರ ತಿನಿಸುಗಳಿಗೇ ಹೆಚ್ಚು ಗಮನ ಹರಿಸುವಂತೆ ಮಾಡಿತು. ಇದು ಫ್ರಾನ್ಸ್‌ನಲ್ಲಿ ವ್ಯಾಪಕವಾಗಿ ಕೇಕ್ ಬಳಕೆಗೆ ಕಾರಣವಾಯಿತು. ಈ ಅವಧಿಯಲ್ಲಿಯೇ ಬೇಕರಿಗಳು ಕೇಕ್ ಉಬ್ಬಲು ಈಸ್ಟ್‌ನ ಬದಲು ಕಡೆದ ಮೊಟ್ಟೆ ಬಳಸಲು ಪ್ರಾರಂಭಿಸಿದರು.

ಎತ್ತರೆತ್ತರಕ್ಕೆ ಕೇಕ್ ಜಗತ್ತು!
ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಕೈಗಾರಿಕಾ ಕ್ರಾಂತಿಯ ಬಳಿಕ ಬೇಕರಿ ಸಾಮಗ್ರಿಗಳು ಹೆಚ್ಚು ಸುಲಭವಾಗಿ ಮತ್ತು ಬಳಕೆಗೆ ಸಿದ್ಧವಾಗಿ ಲಭ್ಯವಾಗತೊಡಗಿತು. ಇದಕ್ಕೆ ಉತ್ಪಾದನೆಯ ಹೆಚ್ಚಳ ಹಾಗೂ ರೈಲ್ವೆ ಸಂಚಾರದ ಅಭಿವೃದ್ಧಿ ಪ್ರಮುಖ ಕಾರಣ. ಅಮೆರಿಕದಲ್ಲಿ ಕೇಕ್ ಅನ್ನು ಸಂಪತ್ತಿನ ಸೂಚಕ ಎಂದು ಪರಿಗಣಿಸಲಾಗಿತ್ತು. ಅದರ ತಯಾರಿಕೆ ಗೌರವದ ಪ್ರತಿಷ್ಠೆಯಾಗಿತ್ತು. ಇದು ಆತಿಥ್ಯದ ಸಂಕೇತ ಎಂದು ಪರಿಗಣಿಸಲಾಗಿದ್ದರಿಂದ ಗೃಹಿಣಿಯರು ಈ ಕಲೆಯನ್ನು ಕಲಿತುಕೊಳ್ಳಲೇಬೇಕಾಗಿತ್ತು.

ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್‌ಗಳ ಆವಿಷ್ಕಾರವಾಯಿತು. ಇದು ಕೇಕ್ ಉತ್ಪಾದನೆಯಲ್ಲಿನ ದೊಡ್ಡ `ಜಿಗಿತ'. ಇದಕ್ಕೂ ಮುನ್ನ ಬೇಕರಿಯವರು ಈಸ್ಟ್ ಅಥವಾ ಕಡೆದ ಮೊಟ್ಟೆಯನ್ನು ಕೇಕ್ ಮೃದುವಾಗಿಸಲು ಹಾಗೂ ಉಬ್ಬಲು ಬಳಸುತ್ತಿದ್ದರು. ಇದು ಅತ್ಯಂತ ಕಷ್ಟಕರ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುವ ವಿಧಾನ. ಬೇಕಿಂಗ್ ಸೋಡಾ ಮತ್ತು ಪುಡಿಯ ಬಳಕೆ ಒಂದು ಬಗೆಯಲ್ಲಿ ಕೇಕ್ ಉತ್ಪಾದನೆಯನ್ನು ಸುಲಭಗೊಳಿಸಿತು.

ನಿರ್ದಿಷ್ಟ ಉಷ್ಣಾಂಶ ನಿಯಂತ್ರಿಸುವಂಥ ಓವನ್‌ಗಳ ಆವಿಷ್ಕಾರವೂ ತಾಂತ್ರಿಕವಾಗಿ ಕೇಕ್ ಉತ್ಪನ್ನದ ಬೆಳವಣಿಗೆಗೆ ಕಾರಣವಾಯಿತು. ಈ ಅವಧಿಯಲ್ಲಿ ಏಂಜೆಲ್ ಕೇಕ್, ಕಪ್ ಕೇಕ್, ಬೋಸ್ಟನ್ ಕ್ರೀಮ್ ಪೈ, ರೆಡ್ ವೆಲ್ವೆಟ್, ಡೆವಿಲ್ಸ್ ಫುಡ್, ಚಾಕೊಲೇಟ್ ಕೇಕ್, ಜರ್ಮನ್ ಫುಡ್ ಹೀಗೆ ತರಹೇವಾರಿ ಕೇಕ್ ಉತ್ಪನ್ನಗಳು ಪ್ರಸಿದ್ಧಿಯಾದವು.

ಕೇಕ್ ಮೇಲ್ಭಾಗದಲ್ಲಿ ಸಕ್ಕರೆ ಪಾಕವನ್ನು ತೆಳುವಾಗಿ ಹರಡಲಾಗುತ್ತಿತ್ತು. ಇದು ಕುದಿಸಿದ ಸಕ್ಕರೆ ಪಾಕ, ಮೊಟ್ಟೆಯ ಬಿಳಿ ಭಾಗ ಮತ್ತು ಆಯ್ಕೆಮಾಡಿಕೊಂಡ ಫ್ಲೇವರ್‌ಗಳನ್ನು ಒಳಗೊಂಡಿದ್ದವು. ಇವುಗಳ ಮಿಶ್ರಣವನ್ನು ಕೇಕ್ ಮೇಲೆ ಸುರಿದು ಮತ್ತೆ ಬೇಯಿಸಲಾಗುತ್ತಿತ್ತು. ಇದರಿಂದ ಮೇಲ್ಭಾಗದ ಪಾಕ ಗಟ್ಟಿಯಾಗುತ್ತಿತ್ತು ಮತ್ತು ಗಾಜಿನಂತೆ ಹೊಳೆಯುತ್ತಿತ್ತು. 1900ರ ಹೊತ್ತಿಗೆ ಸಿಹಿಗಾಗಿ ಸಕ್ಕರೆ ಸೇಚನದ ಬದಲು ದಪ್ಪನೆಯ ಬೆಣ್ಣೆ ಕ್ರೀಮ್‌ಗಳ ಬಳಕೆ ಶುರುವಾಯಿತು.

ಬೆಟ್ಟಿ ಕ್ರಾಕರ್ ಎಂಬ ಕಂಪೆನಿ 1920ರ ವೇಳೆಗೆ ಕೇಕ್ ಮಿಶ್ರಣವನ್ನು ಪ್ರಾರಂಭಿಸಿತು. ಇದು ಆರಂಭದಲ್ಲಿ ಜನರನ್ನು ಸೆಳೆಯಲಿಲ್ಲ. ಆದರೆ ಜನರ ಅಭಿರುಚಿಗಳು, ಆಹಾರ ಕ್ರಮಗಳನ್ನು ವಿವರವಾಗಿ ಅಧ್ಯಯನ ಮಾಡಿದ ಕಂಪೆನಿ ಹೊಸ ಬಗೆಯ ಮಿಶ್ರಣಗಳನ್ನು 1947ರ ಸಮಯದಲ್ಲಿ ಬಿಡುಗಡೆ ಮಾಡಿದ್ದು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ಸಾಗಾಟಕ್ಕೆ ಸುಲಭವಾದ, ಹೊಟ್ಟೆ ತುಂಬುವುದರ ಜೊತೆಗೆ ಪೌಷ್ಟಿಕತೆಯನ್ನೂ ಒದಗಿಸುವ ಕೇಕ್‌ಗಳಿಗೆ ಮಹಾಯುದ್ಧಗಳ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿತ್ತು.

ಈ ಅವಧಿಯಲ್ಲಿಯೇ ಅದರ ಮೇಲೆ ಅನೇಕ ಪ್ರಯೋಗಗಳು ನಡೆದವು. ಕೇಕನ್ನು ಸುಲಭವಾಗಿ ತಯಾರಿಸುವಂಥ ಮಿಶ್ರಣಗಳು ಮಾರುಕಟ್ಟೆ ಪ್ರವೇಶಿಸಿದವು. ಆದರೆ ಪ್ರಾರಂಭದಲ್ಲಿ ಜನರನ್ನು ಆಕರ್ಷಿಸುವಲ್ಲಿ ಇದು ವಿಫಲವಾಯಿತು. 1947ರ ಬಳಿಕ ಅಮೆರಿಕ ಮಾರುಕಟ್ಟೆಯಲ್ಲಿ ಬೆಟ್ಟಿ ಕ್ರಾಕರ್ ಕಂಪೆನಿಯ ಈ ಉತ್ಪನ್ನ ಹೊಸ ಅಲೆ ಎಬ್ಬಿಸಿತು. ಶುಂಠಿ ಕೇಕ್ ಈ ಬಗೆಯ ಮಿಶ್ರಣದ ಮೊದಲ ಉತ್ಪನ್ನ. ಸಾಂಪ್ರದಾಯಿಕ ತಯಾರಿಕೆಯ ಪದ್ಧತಿಗಿಂತ ಕೇಕ್ ಮಿಶ್ರಣಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಫಲಿತಾಂಶ ನೀಡುತ್ತವೆ ಎಂದು ಗ್ರಾಹಕರು ಭಾವಿಸತೊಡಗಿದರು. ಮನೆಯಲ್ಲೇ ಕೇಕ್ ತಯಾರಿಸುವ ಕೆಲಸ ಸರಾಗವಾಯಿತು.

ಆಹಾರ ಇತಿಹಾಸ ತಜ್ಞರ ಪ್ರಕಾರ ಆಧುನಿಕ ಕೇಕಿನ ಶೈಲಿ (ವೃತ್ತಾಕಾರದ, ಅಲಂಕರಿಸಲಾದ ಕೇಕು) ಮೊದಲು ಯುರೋಪಿನಲ್ಲಿ ಸುಮಾರು 17ನೇ ಶತಮಾನದ ಮಧ್ಯಭಾಗದಲ್ಲಿ ಶುರುವಾಗಿದ್ದು. ತಂತ್ರಜ್ಞಾನದ ಬೆಳವಣಿಗೆ (ವಿಶ್ವಾಸಾರ್ಹ ಓವನ್‌ಗಳು, ಆಹಾರ ಉತ್ಪನ್ನಗಳ ಲಭ್ಯತೆ) ಮತ್ತು ಸಕ್ಕರೆಯ ಲಭ್ಯತೆ ಇದಕ್ಕೆ ಕಾರಣ. ಸಮತಟ್ಟಾದ ಚಕ್ರಾಕಾರದ ಟ್ರೇಗಳ ಮೇಲೆ ಇರಿಸುವ ವೃತ್ತಾಕಾರದ ಕೇಕ್‌ಗಳು ಹೆಚ್ಚು ಜನಪ್ರಿಯವಾದವು.

19ನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಹೆಚ್ಚು ಜರಡಿ ಮಾಡಿದ ಹಿಟ್ಟು ಹಾಗೂ ಈಸ್ಟ್‌ನ ಬದಲಾಗಿ ಬೇಕಿಂಗ್ ಪೌಡರ್ ಬಳಸುವ ಪದ್ಧತಿ, ಅದು ಇಂದಿಗೂ ಅಸ್ತಿತ್ವದಲ್ಲಿದೆ. ಕೇಕ್‌ನಲ್ಲಿ ಬಣ್ಣ, ವೈವಿಧ್ಯಮಯ ಬಣ್ಣಗಳ ಬಳಕೆ ಮೂಲಕ ಹೊಸ ಬೆಳವಣಿಗೆಗೆ ಕಾರಣಕರ್ತನಾದ ಫ್ರಾನ್ಸಿನ ಆಂಟೊನಿನ್ ಕರೆಮ್‌ರನ್ನು `ಆಧುನಿಕ ಕೇಕ್‌ನ ಜನಕ' ಎಂದು ಗುರುತಿಸಲಾಗಿದೆ.

ಇಂದು ನಾವು ನೋಡುವ ವೃತ್ತಾಕಾರದ ಕೇಕ್‌ನ ಮೂಲ ಪ್ರಾಚೀನ ಕಾಲದ ಬ್ರೆಡ್. ಆಗ ಕೇಕ್ ಮತ್ತು ಬ್ರೆಡ್ ಎರಡನ್ನೂ ಕೈಗಳಿಂದಲೇ ಮಾಡಲಾಗುತ್ತಿತ್ತು. ಅದನ್ನು ಚೆಂಡಿನಾಕಾರಕ್ಕೆ ತಂದು ಬೇಯಿಸುವುದು ಒಂದು ಬಗೆಯ ಫ್ಯಾಷನ್ ಕೂಡ ಆಗಿತ್ತು. ಅದರ ಮೇಲೆ ಲೋಹ ಅಥವಾ ಮರದ ತುಂಡುಗಳನ್ನಿರಿಸಿ ಅಲಂಕರಿಸುವ ಪದ್ಧತಿ 17ನೇ ಶತಮಾನದಲ್ಲಿ ಶುರುವಾಯಿತು. ಕ್ರಮೇಣ ಕೇಕ್ ಬೇಯಿಸುವ ತಟ್ಟೆಗಳು ವೈವಿಧ್ಯಮಯ ಆಕಾರ, ಗಾತ್ರಗಳಲ್ಲಿ ಲಭ್ಯವಾಗತೊಡಗಿತು.

ವಿಶಿಷ್ಟ ಆಹಾರ ಸಂಸ್ಕೃತಿ
ಸಕಲ ಧರ್ಮಗಳಲ್ಲೂ ನಿರಾಕರಣೆಯಿಲ್ಲದೆ ಒಪ್ಪಿತವಾಗಿರುವ ಆಹಾರ ಸಂಸ್ಕೃತಿ ಕೇಕ್. ಒಂದು ಬಗೆಯಲ್ಲಿದು ಜಾಗತಿಕ ಆಹಾರ. ಮತ, ಧರ್ಮ, ಜಾತಿ, ಮೇಲು ಕೀಳಿನ ಭೇದವಿಲ್ಲದೆ ಎಲ್ಲೆಡೆಯೂ ಸಮಾನವಾಗಿ ಸ್ವೀಕೃತವಾಗಿರುವ ಆಹಾರ ಪದ್ಧತಿಯಿದು. ಉಳಿದ ಅನೇಕ ಆಹಾರ ಪದಾರ್ಥಗಳಂತೆ ಕೇಕ್ ಅನ್ನು ಇದೇ ದೇಶದ ಕೊಡುಗೆ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಕೇಕ್ ಜನಪ್ರಿಯ ತಿನಿಸಾಗಿ ವಿಶ್ವವ್ಯಾಪಿ ಪ್ರಸಾರವಾಗುವ ಮೊದಲೇ ಯುರೋಪಿಯನ್ ದೇಶಗಳಲ್ಲಿ ಶತಮಾನಗಳ ಹಿಂದಿನಿಂದಲೂ ಹಲವು ಬಗೆಯಲ್ಲಿ ಜೀವತಳೆದುಕೊಂಡಿತ್ತು.

ಕೇಕ್ ಹಸಿವು ಇಂಗಿಸುವ ಪ್ರಧಾನ ಆಹಾರವಾಗದಿದ್ದರೂ, ಹಸಿದ ಹೊಟ್ಟೆಯನ್ನು ತುಂಬಿಸುವ ಹಾಗೂ ಪೌಷ್ಟಿಕಾಂಶದ ಪೂರೈಕೆಯಲ್ಲಿ ಅದರ ಕಾಣಿಕೆಯನ್ನು ಕಡೆಗಣಿಸುವಂತಿಲ್ಲ. ಅತ್ತ ಸಿಹಿಯಾಗಿಯೂ, ಇತ್ತ ಸ್ವಾದಿಷ್ಟ, ಪೌಷ್ಟಿಕ ಆಹಾರವಾಗಿಯೂ ಕಡಿಮೆ ಬೆಲೆಗೆ ಲಭ್ಯವಾಗುವ ಕೇಕ್ ಅನ್ನು ಜಾಗತಿಕ ಆಹಾರ ಎಂದು ಪರಿಗಣಿಸಬಹುದು. ವಿಶ್ವ ಮಾರುಕಟ್ಟೆಯಲ್ಲಿ ಅತಿ ಬೇಡಿಕೆಯ ಆಹಾರ ವಸ್ತು ಇದು.

ಇತಿಹಾಸದುದ್ದಕ್ಕೂ ಕೇಕ್ ಜನರಿಗೆ ಬೇಸರ ತರಿಸಿದ ಉದಾಹರಣೆ ಇಲ್ಲ. ತಂತ್ರಜ್ಞಾನ ಬೆಳೆದಂತೆ ಅದಕ್ಕೆ ಪೂರಕವಾಗಿ ಕೇಕ್ ತಯಾರಿಕೆಯ ವಿಧಾನವೂ ಬೆಳೆದಿದೆ. ವಿಶೇಷ ಸಮಾರಂಭಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಕೇಕ್ ಇಂದು ನೆಪಗಳಿಲ್ಲದೆ ಬಳಕೆಯಾಗುತ್ತಿದೆ. ರಜಾದಿನಗಳ ಪಾರ್ಟಿಗಳಲ್ಲಿ, ಹುಟ್ಟುಹಬ್ಬ, ಮದುವೆ, ನಾಮಕರಣ, ಅಂತ್ಯಕ್ರಿಯೆ ಹೀಗೆ ನಮ್ಮ ಜೀವನಚಕ್ರದ ಪ್ರತಿ ಪ್ರಮುಖ ಘಟ್ಟದಲ್ಲೂ ಕೇಕ್ ಬೇಕೇ ಬೇಕು ಎನ್ನುವಂತಾಗಿದೆ.

ಈ ಹಿಂದೆ ಕೇಕ್ ಅನ್ನು ದೇವರು ಮತ್ತು ದೆವ್ವ ಎರಡಕ್ಕೂ ನೈವೇದ್ಯದಂತೆ ಅರ್ಪಿಸುತ್ತಿದ್ದರು. ಚೀನೀಯರು ಹೆಂಗ್ ಓ (ಚಂದ್ರ) ದೇವತೆಯನ್ನು ಬೆಳೆ ಕೊಯ್ಲು ಸಮಯದಲ್ಲಿ ಆರಾಧಿಸಲು ಕೇಕ್ ಬಳಸುತ್ತಿದ್ದರು. ಮಳೆಗಾಲ, ಚಳಿಗಾಲ ಮತ್ತು ಬೇಸಗೆಕಾಲದ ಚಕ್ರದ ನಿರ್ವಹಣೆಯಲ್ಲಿ ಚಂದ್ರನದು ಅತಿದೊಡ್ಡ ಪಾತ್ರ ಎಂದು ಭಾವಿಸಿರುವ ಚೀನೀಯರು, ಹೆಂಗ್ ಓ ದೇವತೆಯ ಕಾಲ್ಪನಿಕ ಚಿತ್ರ ಬಿಡಿಸಿದ ಪೂರ್ಣಚಂದ್ರಾಕೃತಿಯ ಕೇಕ್‌ಗಳನ್ನು ಅರ್ಪಿಸುತ್ತಾರೆ. ರಷ್ಯನ್ನರು ವಸಂತಕಾಲವನ್ನು `ಮಸ್ಲೆನಿತ್ಸಾ' ಎಂಬ ಸೂರ್ಯ ದೇವತೆಯ ಆರಾಧನೆ ಮಾಡಿ `ಬೆಲ್ತಾನೆ' ಹಬ್ಬದ ಮೂಲಕ ಸ್ವಾಗತಿಸುತ್ತಾರೆ.

ಕೇಕ್ ಹಂಚಿಕೊಂಡು ತಿನ್ನುವುದು ಈ ಸಂಭ್ರಮಾಚರಣೆಯ ಪ್ರಮುಖ ಭಾಗ. ಬೆಟ್ಟದ ಬುಡಕ್ಕೆ ಚೆನ್ನಾಗಿ ಸುತ್ತಿದ ಕೇಕನ್ನು ಕೊಂಡೊಯ್ದು ಅದನ್ನು ಸೂರ್ಯ ಉದಯಿಸುವಂತೆ ಅನುಕರಣೆ ಮಾಡಲಾಗುತ್ತದೆ. ಇದರಿಂದ ಸೂರ್ಯದೇವ ಸಂತೃಪ್ತನಾಗಿ ತನ್ನ ಕಾಯಕವನ್ನು ಮುಂದುವರಿಸುತ್ತಾನೆ ಎಂಬ ನಂಬಿಕೆ. ಒಂದು ವೇಳೆ ಬೆಟ್ಟದ ಬುಡ ತಲುಪುವದರೊಳಗೆ ಕೇಕ್ ತುಂಡಾದರೆ ಅದನ್ನು ಸುತ್ತಿಕೊಟ್ಟಾತ ಒಂದು ವರ್ಷದೊಳಗೆ ಮರಣವನ್ನಪ್ಪುತ್ತಾನೆ ಎಂಬ ನಂಬಿಕೆಯೂ ಅವರಲ್ಲಿದೆ.

ಹಾಗಾಗದಿದ್ದರೆ ಮುಂದಿನ ಒಂದು ವರ್ಷದ ಅವಧಿ ಆತನ ಪಾಲಿಗೆ ಅತ್ಯುತ್ತಮವಾಗಿರುತ್ತದೆಯಂತೆ. ಸ್ವತಃ ರೈತರೇ ತಮ್ಮ ನೆಲದಲ್ಲಿ ಬೆಳೆದ ದವಸ ಧಾನ್ಯ ಮತ್ತು ಹಣ್ಣುಗಳಿಂದ ತಯಾರಿಸಿದ ಕೇಕ್ ತಯಾರಿಸಿ ಮಾರಾಟ ಮಾಡುವ ಪದ್ಧತಿಯೂ ವಿಶ್ವದ ಹಲವೆಡೆ ಚಾಲ್ತಿಯಲ್ಲಿದೆ. ಇದರಲ್ಲಿ ಬಳಸುವ ವಸ್ತುಗಳು, ಕೇಕ್‌ನ ಗಾತ್ರ ಮತ್ತು ಆಕಾರಗಳು, ಹಲವು ಆಚರಣೆಗಳು, ವಿಧಿ ವಿಧಾನಗಳನ್ನು ಸಂಕೇತಿಸುತ್ತವೆ. ಈ ಎಲ್ಲಾ ಬಗೆಯ ಕೇಕುಗಳೂ ಒಂದಿಲ್ಲೊಂದು ಬಗೆಯಲ್ಲಿ ಜನರ ಪುರಾಣಗಳ ನಂಬಿಕೆಗೆ ಕೊಂಡಿ ಬೆಸೆದುಕೊಂಡಿವೆ.

ಕ್ರಿಸ್‌ಮಸ್ ಮತ್ತು ಹೊಸವರ್ಷ
ಕೇಕ್‌ಗೆ ಮತ್ತಷ್ಟು ವಿಶೇಷ ಸ್ಥಾನ ನೀಡಿರುವುದು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗಳು. ಕ್ರಿಸ್‌ಮಸ್ ಹತ್ತಿರ ಬರುತ್ತಿದ್ದಂತೆ ಕೇಕ್‌ಗೆ ಅತೀವ ಬೇಡಿಕೆ. ಒಂದೇ ವಾರದ ಅಂತರದಲ್ಲಿ ಹೊಸ ವರ್ಷ ಸ್ವಾಗತಿಸುವಾಗಲೂ ಕೇಕ್ ಬೇಕೇ ಬೇಕು. ಹೀಗಾಗಿ ಡಿಸೆಂಬರ್ ತಿಂಗಳಿಡೀ ಕೇಕ್ ಉದ್ದಿಮೆಗಳಿಗೆ, ಬೇಕರಿಗಳಿಗೆ ಬಿಡುವಿಲ್ಲದ ಕೆಲಸ. ಕ್ರಿಶ್ಚಿಯನ್ನರ ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುವ ಕಥೆಗಳು ಕೇಕ್‌ನಲ್ಲಿ ಮೂಡುತ್ತವೆ. ಬಾಲ ಏಸು, ತಾಯಿ ಮೇರಿ ಮುಂತಾದ ಘಟನೆಗಳು ಕೇಕ್ ರೂಪದಲ್ಲಿ ದಾಖಲಾಗುತ್ತವೆ. ಕೇಕ್ ಇಲ್ಲದೆ ಈ ಎರಡು ಆಚರಣೆಗಳನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಕಲೆಯಾಗಿ ಕೇಕ್...

ಕೇಕ್ ಕೇವಲ ಆಹಾರದ ಉತ್ಪನ್ನವಲ್ಲ. ಅದೊಂದು ವಿಶಿಷ್ಟ ಕಲೆಯಾಗಿಯೂ ಬೆಳೆದಿದೆ. ಚಿತ್ರಕಲಾವಿದ, ಶಿಲ್ಪಿಗಳ ಸೂಕ್ಷ್ಮ ಕುಸುರಿ ಕೆಲಸದಂತೆಯೇ ಕೇಕ್ ವಿನ್ಯಾಸ ಕೂಡ. ವರ್ಣರಂಜಿತ ಅಲಂಕಾರದ, ಬಗೆ ಬಗೆ ವಿನ್ಯಾಸದ ಕೇಕ್‌ಗಳಿಗೆ ಬಹುಬೇಡಿಕೆ. ಕೇಕ್‌ನಲ್ಲಿ ಕಲೆ ಅರಳಿಸುವ ಕೆಲಸ ಸುಲಭವಲ್ಲ. ಅದಕ್ಕೆ ಜ್ಞಾನ, ತಾಳ್ಮೆ ಅತ್ಯಗತ್ಯ.

ಕೇಕ್ ಅಲಂಕಾರದ ಇತಿಹಾಸ ಇರುವುದು 17ನೇ ಶತಮಾನದ ಮಧ್ಯಭಾಗದ ಉತ್ತರ ಯುರೋಪ್‌ನಲ್ಲಿ. ಅದರಲ್ಲೂ ಯುರೋಪಿನ ವಾಯವ್ಯ ಪ್ರಾಂತ್ಯದಲ್ಲಿ ಕೇಕ್ ಅಲಂಕಾರ ಒಂದು ಸಾಮಾನ್ಯ ಪ್ರಕ್ರಿಯೆಯಂತೆ ಪ್ರಾರಂಭವಾಯಿತು.

ಬಳಿಕ ಅದು ಇಡೀ ಖಂಡವನ್ನು ಆವರಿಸಿತು. ಇತ್ತೀಚಿನ ದಿನಗಳಲ್ಲಿ ಕೇಕ್ ಅಲಂಕಾರ ಸಾಮಾನ್ಯ ಸಂಗತಿಯಾಗಿರದೆ, ಅಧ್ಯಯನ ಶೀಲ ವಿಷಯವೂ ಆಗಿದೆ. ಕೇಕ್ ತಯಾರಿಕೆ, ವಿನ್ಯಾಸ ಕುರಿತ ಅನೇಕ ಕೋರ್ಸ್‌ಗಳು ತಲೆ ಎತ್ತಿವೆ. ಕೇಕ್ ಲಾಭದಾಯಕ ಉದ್ದಿಮೆಯಾಗಿ ಬೆಳೆದಿರುವುದರಿಂದ ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಮುಗಿಬೀಳುತ್ತಿರುವವರ ಸಂಖ್ಯೆಯೂ ಅಧಿಕ.

ವಿವಿಧ ಸಮಾರಂಭಗಳಿಗೆ ಅದರ ಸ್ವರೂಪ, ಉದ್ದೇಶಕ್ಕೆ ಅನುಗುಣವಾಗಿ ಕೇಕ್ ತಯಾರಿಸಲಾಗುತ್ತದೆ. ಹುಟ್ಟುಹಬ್ಬದ ಕೇಕ್‌ಗಳದ್ದೇ ಒಂದು ಮಾದರಿ, ವಿವಾಹ ಮಹೋತ್ಸವದಲ್ಲಿ ಬಳಕೆಯಾಗುವ ಕೇಕ್ ಮಾದರಿ ಇನ್ನೊಂದು ಬಗೆಯದು. ವಿಲ್ಟನ್ ಮಾದರಿ, ದಿ ಲಾಂಬೆತ್ ವಿಧಾನ, ದಿ ಆಸ್ಟ್ರೇಲಿಯನ್ ವಿಧಾನ ಇತ್ಯಾದಿ ಅನೇಕ ಕೇಕ್ ವಿನ್ಯಾಸದ ವಿಧಾನಗಳಿವೆ.

ಬೆಂಗಳೂರಿನಲ್ಲಿ ಪ್ರತಿ ಡಿಸೆಂಬರ್‌ನಲ್ಲಿ ನಡೆಯುವ ನೀಲ್‌ಗಿರೀಸ್ ಕೇಕ್ ಪ್ರದರ್ಶನ ಕಲೆಗಾರಿಕೆಗೆ ಉತ್ತಮ ನಿದರ್ಶನ. ತಾಜ್‌ಮಹಲ್, ಗೋಲ್‌ಗುಂಬಜ್‌ನಂಥ ಕಟ್ಟಡಗಳು, ಪ್ರಕೃತಿ, ಪ್ರಾಣಿ ಪಕ್ಷಿಗಳು, ಕಾಲ್ಪನಿಕ ಚಿತ್ರಗಳು ಒಡಮೂಡುವ ಬೃಹತ್ ಗಾತ್ರದ ಕೇಕ್‌ಗಳನ್ನು ನೋಡಲು ಸಾವಿರಾರು ಜನ ಆಗಮಿಸುತ್ತಾರೆ ಎನ್ನುವುದೇ ಕೇಕ್‌ನ ವೈಶಿಷ್ಟ್ಯಕ್ಕೆ ಉದಾಹರಣೆಯಾಗಿದೆ.

ಸರ್ವವ್ಯಾಪಿ ಕೇಕ್!
ಕೇಕ್ ಇಲ್ಲದ ಸಮಾರಂಭಗಳೇ ಇಲ್ಲ ಎನ್ನುವ ಮಟ್ಟಿಗೆ ಅದು ಜನಜೀವನವನ್ನು ಆವರಿಸಿದೆ, ನಿಶ್ಚಿತಾರ್ಥ, ವಿವಾಹ, ನಾಮಕರಣ ಹೀಗೆ ಕೌಟುಂಬಿಕ ಸಮಾರಂಭಗಳಲ್ಲಿ ಕೇಕ್ ಇರಲೇಬೇಕು ಎಂಬಂತಾಗಿದೆ. ಕೇಕ್ ಇಲ್ಲದ ಜನ್ಮದಿನದ ಆಚರಣೆಯಂತೂ ಇಲ್ಲವೇ ಇಲ್ಲ. ಭಾರತೀಯ ಪರಂಪರೆಯಲ್ಲಿ ಉಳಿದ ರಾಷ್ಟ್ರಗಳಲ್ಲಿ ಇರುವಂತೆ ಕೇಕ್‌ಗೆ ಸುದೀರ್ಘ ಇತಿಹಾಸ ಇಲ್ಲದಿದ್ದರೂ ಅದು ನಮ್ಮ ಆಹಾರ ವ್ಯವಸ್ಥೆಯೊಳಗೆ ಒಂದಾಗಿದೆ. ಕೇಕ್ ಮೊದಲಿನಂತೆ ಸಿರಿವಂತಿಕೆಯ ದ್ಯೋತಕವಾಗಿ ಉಳಿದಿಲ್ಲ.

ಧರ್ಮ, ಜಾತಿ, ಮೇಲುಕೀಳಿನ ಅಂತರವಿಲ್ಲದೆ ಎಲ್ಲರ ನಾಲಗೆಗೂ ಸಮಾನ ರುಚಿ ತಾಕಿಸಬಲ್ಲ ಶಕ್ತಿ ಇರುವುದ ಕೇಕ್‌ಗೆ. ಅಲ್ಲದೆ ಅದಕ್ಕೆ ಮಾಂಸಾಹಾರ ಮತ್ತು ಸಸ್ಯಹಾರಿಗಳೆಂಬ ಭೇದವೂ ಇಲ್ಲ. ಅಪ್ಪಟ ಸಸ್ಯಹಾರಿಗಳಿಗೆಂದೇ ಮೊಟ್ಟೆ ರಹಿತ ಕೇಕ್‌ಗಳೂ ಮಾರುಕಟ್ಟೆಯಲ್ಲಿವೆ. ತಮ್ಮ ಪ್ರೀತಿಯ ನಟ/ನಟಿಯರ ತೂಕದಷ್ಟು, ಅವರ ವಯಸ್ಸಿನ ವರ್ಷಗಳನ್ನು ಸೂಚಿಸುವ ತೂಕದ ಕೇಕ್ ತಯಾರಿಸಿ ತರುವ ಅಭಿಮಾನಿಗಳಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ತಮ್ಮ ಜನ್ಮದಿನದಂದು ತಾವೇ ಆ ಕಾರ್ಯ ಮಾಡಿದ ಅನೇಕ ಉದಾಹರಣೆಗಳಿವೆ. ಕೇಕ್‌ನೊಂದಿಗೆ ತುಲಾಭಾರ ನಡೆಸಿ ಸಂಭ್ರಮಿಸುವ ಗಣ್ಯರು ಸಾಕಷ್ಟಿದ್ದಾರೆ.

ಕೇಕ್ ಮೇನಿಯಾ
ಮಕ್ಕಳ ಆಟಕ್ಕೆ ಸಿಗದ ವಸ್ತು, ವಿಷಯಗಳೇ ಜಗತ್ತಿನಲ್ಲಿ ಇಲ್ಲ ಎಂಬಂತಾಗಿದೆ. ಭ್ರಷ್ಟಾಚಾರ ವಿರೋಧಿ ಚಳವಳಿ ತೀವ್ರವಾದಂತೆ ಅದನ್ನೇ ಆಧರಿಸಿದ ಅಂತರ್ಜಾಲ ಆಟವೊಂದು ಹುಟ್ಟಿಕೊಂಡಿತು. ಅದೇ ಬಗೆಯಲ್ಲಿ ರೂಪುಗೊಂಡು ಜನಪ್ರಿಯವಾಗಿರುವುದು ಕೇಕ್ ಮೇನಿಯಾ ಎಂಬ ಅನಿಮೇಷನ್ ಆಟ. ಬೇಕರಿಗೆ ಬರುವ ಗ್ರಾಹಕರಿಗೆ ಇಷ್ಟವಾಗುವ ಫ್ಲೇವರ್‌ನ, ಆಕಾರ ಹಾಗೂ ಗಾತ್ರದ ಕೇಕ್ ಅನ್ನು ತಯಾರಿಸಲು ಬೇಕರಿಯ ಒಡತಿಗೆ ನೆರವಾಗುವುದು ಈ ಆಟದ ವಿಶೇಷ. ಸರಳವಾಗಿ ತೋರಿದರೂ ಈ `ಕೇಕ್ ತಯಾರಿಕೆ' ಹಲವು ಸವಾಲುಗಳನ್ನು ಹಂತ ಹಂತವಾಗಿ ಮುಂದಿಡುತ್ತಾ ಹೋಗುತ್ತದೆ.

ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಬೆಂಗಳೂರು
ಬೃಹತ್ ಗಾತ್ರದ ಕೇಕ್ ತಯಾರಿಸುವುದು ಸುಲಭವಲ್ಲ. ಅದನ್ನು ಸವಾಲಾಗಿ ತೆಗೆದುಕೊಂಡ ಅನೇಕರು ಗಿನ್ನೆಸ್ ಪುಸ್ತಕದಲ್ಲಿ ಹೆಸರು ಮೂಡಿಸುವ ಉತ್ಸಾಹ ತೋರುತ್ತಿದ್ದಾರೆ. ಅಮೆರಿಕದ ಜಾರ್ಜ್‌ಟೌನ್‌ನಲ್ಲಿ ತಯಾರಿಸಿದ 1,176.6 ಕೆ.ಜಿ.ಯ ಕೇಕ್ ವಿಶ್ವದ ಅತಿ ದೊಡ್ಡ ಕಪ್‌ಕೇಕ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಟೊರಾಂಟೊದಲ್ಲಿ 2.28 ಟನ್ ತೂಕದ ಮೂನ್ ಕೇಕ್ ತಯಾರಿಸಲಾಗಿತ್ತು.

ವಿಶ್ವಮಟ್ಟದಲ್ಲಿ ಕೇಕ್ ತಯಾರಿಕೆಗೆ ಹೊಸ ವಿಧಾನಗಳನ್ನು ಕಂಡುಹಿಡಿದವರು, ಪ್ರಯೋಗಗಳನ್ನು ನಡೆಸಿದವರು ನಾವು ಎಂದು ರಾಷ್ಟ್ರಗಳು ಹೇಳಿಕೊಳ್ಳಬಹುದು. ಆದರೆ ಬೆಂಗಳೂರಿನ ಹೆಸರು ಗಿನ್ನೆಸ್ ಪುಸ್ತಕದಲ್ಲಿ ಕೇಕ್‌ನಿಂದಾಗಿ ದಾಖಲಾಗಿರುವುದು ನಮ್ಮ ಹೆಮ್ಮೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ಡಿಸೆಂಬರ್ ಎಂಟರಂದು ಇರಿಸಲಾಗಿದ್ದ ಹಣ್ಣಿನ ಕೇಕ್‌ನ ತೂಕ 3,510 ಕೆ.ಜಿ. ಇದು ಗಿನ್ನೆಸ್ ಪುಸ್ತಕದಲ್ಲಿ ಸ್ಥಾನಪಡೆದಿದೆ. 150 ಬಾಟಲ್ ರಮ್, 1700 ಕೆ.ಜಿ. ಹಣ್ಣು ಮತ್ತು 17,500ಕ್ಕೂ ಅಧಿಕ ಮೊಟ್ಟೆಗಳನ್ನು ಈ ಬೃಹತ್ ಕೇಕ್ ತಯಾರಿಸಲು ಬಳಸಲಾಗಿತ್ತು.

ಪ್ರೀತಿ ಪ್ರೇಮದ ಸೂಚಕ
ಪ್ರೇಮಿಗಳ ಹೃದಯ ಬೆಸೆಯುವ ಕೊಂಡಿ ಎಂಬ ಖ್ಯಾತಿಯೂ ಕೇಕ್‌ಗಿದೆ. ಗೆಳೆಯ ತನ್ನ ಗೆಳತಿಗೆ ಕೇಕ್ ಕೊಡಿಸಿದರೆ ಅದು ಪ್ರೇಮ ಪ್ರಸ್ತಾಪದ ಸೂಚಕವಂತೆ. ಮನಸ್ಸಿನಲ್ಲಿ ಹೇಳಲಾಗದ್ದನ್ನು ತನ್ನ ಮೂಲಕ ಹೇಳಿಕೊಳ್ಳಲು ಪ್ರೇಮಿಗೆ ಅವಕಾಶ ಕೊಡುವಷ್ಟು ಕೇಕ್‌ನದು ಹೃದಯ ವೈಶಾಲ್ಯ.

ಸಿನಿಮಾಗಳಿಗೂ ಕೇಕ್ ನಂಟು ಬೆಸೆದಿದೆ. ತನ್ನಷ್ಟೇ ಎತ್ತರದ ಕೇಕ್ ಮುಂದೆ ನಿಂತು ನಾಯಕಿ, ನಾಯಕ ಬರುವವರೆಗೂ ಕೇಕ್ ಕತ್ತರಿಸುವುದಿಲ್ಲ ಎಂದು ಹಟ ಮಾಡುವ ಸನ್ನಿವೇಶಗಳು ಸಾಕಷ್ಟು ಸಿನಿಮಾಗಳಲ್ಲಿವೆ. ಇನ್ನು ನಟ ರವಿಚಂದ್ರನ್ ಒಂದು ಹೆಜ್ಜೆ ಮುಂದೆ ಹೋದವರು. `ಶಾಂತಿಕ್ರಾಂತಿ' ಚಿತ್ರದಲ್ಲಿ ನಟಿ ಜೂಹಿ ಚಾವ್ಲಾರನ್ನು ಕೇಕ್ ಹಾಸಿಗೆ ಮೇಲೆ ಉರುಳಾಡಿಸಿ, ತಾವೂ ಉರುಳಾಡಿದ್ದರು. ಕೇಕ್‌ನಲ್ಲಿಯೇ ಇಬ್ಬರೂ ಪ್ರೀತಿಯ ಹೊಡೆದಾಟ ನಡೆಸಿದ್ದರು.

ಆಗಿನ ಕಾಲದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ ದೃಶ್ಯವದು. ಅದೇ ದೃಶ್ಯವನ್ನುತೆಲುಗಿನಲ್ಲಿ ನಾಗಾರ್ಜುನ ಪುನರಾವರ್ತಿಸಿದ್ದರು. ಇಲ್ಲೂ ಕೇಕ್ ಹಾಸಿಗೆ ಮೇಲೆ ಮೈಚೆಲ್ಲುವ ಅವಕಾಶ ಪಡೆದವರು ಜೂಹಿ ಚಾವ್ಲಾ. ರವಿಚಂದ್ರನ್‌ರ ಹಲವು ಚಿತ್ರಗಳಲ್ಲಿ ಕೇಕ್ ತಿನ್ನುವ ಪದಾರ್ಥವಾಗದೆ ಪ್ರಣಯದ ಸಂಕೇತವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT