ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರು!

Last Updated 28 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಕಾಸರಗೋಡು: ಮಂಜೇಶ್ವರ ಶೈಕ್ಷಣಿಕ ಉಪ ಉಪಜಿಲ್ಲೆಯ 3 ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ ನೇಮಕಗೊಂಡ ಮೂವರು ಮಲಯಾಳಿ ಶಿಕ್ಷಕರು ಬರುವ ವರ್ಷ ಅದೇ ಶಾಲೆಗಳಿಗೆ ಮರುನೇಮಕಗೊಳ್ಳಲು ತೆರೆಮರೆಯಲ್ಲಿ ಸಕಲ ಸಿದ್ಧತೆಗಳಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.ಕನ್ನಡ ಶಾಲೆ ಮತ್ತು ವಿದ್ಯಾರ್ಥಿಗಳನ್ನು ಕತ್ತು ಹಿಸುಕುವ ಅಧಿಕಾರಿ ವರ್ಗ ಎಲ್ಲಾ ಬಗೆಯ ಕಸರತ್ತುಗಳಲ್ಲಿ ನಿರತವಾಗಿದೆ ಎಂದು ಕೇಳಿಬಂದಿದೆ.

ಪ್ರೀತಾ ಕೆ. (ಪೈವಳಿಕೆ ಪ್ರೌಢಶಾಲೆ), ರಾಧಾಕೃಷ್ಣ ಆರ್. (ಮಂಗಲ್ಪಾಡಿ ಪ್ರೌಢಶಾಲೆ), ರಾಣಿ ವಾಸುದೇವನ್ (ಬಂಗ್ರಮಂಜೇಶ್ವರ ಪ್ರೌಢಶಾಲೆ) ಎಂಬವರು ಕಳೆದ ವರ್ಷ ತಮಗೆ ನೇಮಕಾತಿ ಲಭಿಸಿದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಮಾಧ್ಯಮದಲ್ಲೇ ಪಾಠ ಹೇಳಲು ಮುಂದಾಗಿದ್ದರು. ಇದನ್ನು ಶಾಲೆಯ ರಕ್ಷಕ-ಶಿಕ್ಷಕ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಬಲವಾಗಿ ಖಂಡಿಸಿತ್ತು. ಆದರೆ ಬದಿಯಡ್ಕದ ‘ಬೊಳ್ಪು’ ಎಂಬ ತುಳುಪರ ಸಂಘಟನೆಯೊಂದು ಗಡಿನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆ-ವಿದ್ಯಾರ್ಥಿ-ಶಿಕ್ಷಕ ಹುದ್ದೆಗಳನ್ನು ಕಾಪಾಡಲು ನ್ಯಾಯಾಲಯದ ಮೊರೆ ಹೋಗಿತ್ತು.

ಮಲಯಾಳ ಮಾಧ್ಯಮ ಶಿಕ್ಷಕರನ್ನು ಸಂಬಂಧಪಟ್ಟ ಶಾಲೆಗಳಿಂದ ಕಿತ್ತು ಹಾಕಲು ಕನ್ನಡ ಅಭಿಮಾನಿ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಹೋರಾಟ ಫಲಕಾರಿಯಾಗಿತ್ತು. ಶಿಕ್ಷಕರನ್ನು ಕಾಸರಗೋಡು ಶಿಕ್ಷಣ ಉಪ ನಿರ್ದೇಶಕರ ಕಚೇರಿಗೆ ಎತ್ತಂಗಡಿ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಾನುಸಾರ ಶಿಕ್ಷಕರಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೂವರೂ ಶಿಕ್ಷಕರೂ ತಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು!

‘ವಿಶೇಷ ಆದೇಶ’ ಹೊರಡಿಸಿದರು!: ಈಗ ಈ ಮೂವರು ಶಿಕ್ಷಕರನ್ನು ಅಂದರೆ ಪ್ರೀತಾ ಕೆ., ರಾಧಾಕೃಷ್ಣ ಆರ್, ರಾಣಿ ವಾಸುದೇವನ್ ಅವರನ್ನು ಕ್ರಮವಾಗಿ ಕಾಸರಗೋಡು, ಕುಂಬಳೆ ಮತ್ತು ಮಂಜೇಶ್ವರ ಬಿ.ಆರ್.ಸಿ.ಗೆ ನೇಮಕ (ಸರ್ಕಾರಿ ಆದೇಶ ಸಂಖ್ಯೆ:4852/2010/ಜಿ.ಇಡಿಎನ್. ದಿನಾಂಕ 1.11.2010) ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕರ ನೇಮಕಾತಿ ವಿವಾದ ನಡೆಯುತ್ತಿರುವ ಹೊತ್ತಿನಲ್ಲೇ ಈ ‘ವಿಶೇಷ ಆದೇಶ’ ರೂಪಿಸಿ ಕನ್ನಡಪರ ಹೋರಾಟಕ್ಕೆ ಸರ್ಕಾರ ಮಣ್ಣೆರಚಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.

ವಿಶೇಷ ಆದೇಶದಲ್ಲಿ ಮೂವರು ಶಿಕ್ಷಕರನ್ನು ಬಿಆರ್‌ಸಿ ತರಬೇತುದಾರರನ್ನಾಗಿ ನೇಮಕ ಮಾಡಲು ಆಜ್ಞೆ ಹೊರಡಿಸಲಾಗಿದೆ. ಒಂದು ವರ್ಷದ ನಿಯೋಜನೆಯಲ್ಲಿ ನೇಮಕಾತಿಯನ್ನು ಗಟ್ಟಿ ಮಾಡಿಕೊಂಡ ಶಿಕ್ಷಕರು ತಾವು ಸೇರಿದ ‘ಒಂದು ವರ್ಷದೊಳಗೆ ಕನ್ನಡ ಮಾಧ್ಯಮದಲ್ಲಿ ಪಾಠ ಹೇಳಲು ತರಬೇತಿಯನ್ನೂ ಪಡೆಯಬೇಕು’ ಎಂಬ ಕಟ್ಟಪ್ಪಣೆ ವಿಧಿಸಲಾಗಿದೆ!

ಬಿಆರ್‌ಸಿ ತರಬೇತುದಾರರಾಗಿ ನೇಮಕ ಲಭಿಸಿದ ಈ ಶಿಕ್ಷಕರು ಮಲಯಾಳದಲ್ಲೇ ತರಬೇತಿ ನೀಡಿದ್ದನ್ನು ಖಂಡಿಸಿ ಕಳೆದ ತಿಂಗಳು ಕನ್ನಡ ಮಧ್ಯಮ ಶಿಕ್ಷಕರು ಬಹಿಷ್ಕಾರ ಹಾಕಿದ್ದರು. ಕನ್ನಡದಲ್ಲಿ ಲಿಖಿತ ಪರೀಕ್ಷೆ ಬರೆಯಲಾರೆವು ಎಂದು ಪಟ್ಟು ಹಿಡಿದಿದ್ದ ಈ ಮಲೆಯಾಳಿ ಶಿಕ್ಷಕರು ಬಿಆರ್‌ಸಿಯಲ್ಲಿ ಕನ್ನಡ ಕಲಿಯಲು ನೇಮಕಗೊಂಡಿದ್ದಾರೆಯೇ ಎಂದು ಕನ್ನಡ ಮಧ್ಯಮ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಶಿಕ್ಷಕರಿಗೆ ಬಿಆರ್‌ಸಿಯಲ್ಲಿ ಮಲಯಾಳ ತರಬೇತಿ ನೀಡಿ ಮಲೆಯಾಳ ಶಾಲೆಗಳಿಗೆ ನೇಮಕ ನೀಡಲು ಶಿಕ್ಷಣ ಇಲಾಖೆಗೆ ಸಾಧ್ಯವೇ ಎಂದೂ ಅವರು ಸವಾಲು ಹಾಕಿದ್ದಾರೆ.

ಕೇರಳ ಸರ್ಕಾರದ ಅಧಿಕಾರಿ ವರ್ಗ ಕಾಸರಗೋಡಿನಲ್ಲಿ ಕನ್ನಡವನ್ನು ಮಣ್ಣುಮುಕ್ಕಿಸಲು ಹೇಗೆ ವ್ಯವಸ್ಥಿತವಾಗಿ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಬೇಕಿಲ್ಲ. ‘ಮಲಯಾಳ ಕಡ್ಡಾಯ’ದ ಹಿಂದೆ ಇದೇ ಅಧಿಕಾರಿಗಳ ಅಲ್ಪಸಂಖ್ಯಾತ ಭಾಷೆಯ ಮೇಲಿರುವ ಅಸಹಿಷ್ಣುತೆ ಸ್ಪಷ್ಟ. ಆದರೆ ಕಾಸರಗೋಡು ಮತ್ತು ಮಂಜೇಶ್ವರ ಶಾಸಕರು ಕನ್ನಡಿಗರಿಗೆ ಮಾತ್ರ ಭಾಷಾ ಸಾಮರಸ್ಯದ ಪಾಠ ಹೇಳುತ್ತಲೇ ಇದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಶಾಸಕ ಸಿ.ಎಚ್.ಕುಞ್ಞಂಬು ಅವರ ಕ್ಷೇತ್ರದಲ್ಲೇ ಇರುವ ಮೂರು ಕನ್ನಡ ಶಾಲೆಗಳಿಗೆ ಈ ದುರ್ಗತಿ ಒದಗಿದೆ.

ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಹುದ್ದೆಗೆ ಮಲಯಾಳಿಗಳನ್ನು ನೇಮಕ ಮಾಡುವ ಲೋಕ ಸೇವಾ ಆಯೋಗದ, ವಿವಾದದ ನೆಪದಲ್ಲಿ ಬಿಆರ್‌ಸಿ ತರಬೇತುದಾರ ಹುದ್ದೆ ಒದಗಿಸಿಕೊಡುವ ಶಿಕ್ಷಣ ಇಲಾಖೆಯ ಸುತ್ತಾ ಭ್ರಷ್ಟಾಚಾರ ನಡೆದಿದೆ ಎಂದು ‘ಬೊಳ್ಪು’ ಅಧ್ಯಕ್ಷ ಸುಂದರ ಬಾರಡ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಪ್ರಕರಣ ವಿವಾದ ಹೈಕೋರ್ಟಿನಲ್ಲಿರುವಾಗಲೇ ಡೆಪ್ಯುಟೇಶನ್ ನಡೆದಿದ್ದು, ತೀರ್ಪಿಗೆ ಕಾಯುತ್ತಿದ್ದೇವೆ. ನ್ಯಾಯ ಲಭಿಸದಿದ್ದರೆ ಕನ್ನಡಾಭಿಮಾನಿಗಳ ಸಹಕಾರದೊಂದಿಗೆ ಸುಪ್ರೀಂಕೋರ್ಟಿಗೂ ಹೋಗಲು ಸಿದ್ಧತೆ ನಡೆಸುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT