ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ, ಗೋವಾದಲ್ಲಿ ನವಜಾತಶಿಶು ಮರಣ ಕಡಿಮೆ

Last Updated 13 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರದಲ್ಲಿ ನವಜಾತಶಿಶು ಮರಣದ ಪ್ರಮಾಣ ಸಾವಿರಕ್ಕೆ 35ರಷ್ಟು ಇರುವುದು ಆತಂಕಕಾರಿ ವಿಚಾರ ಎಂದು ಮಕ್ಕಳ ತಜ್ಞ ಡಾ.ಜಿ. ಗುರುಪ್ರಸಾದ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿರುವ ಮೂರು ದಿನಗಳ `ಪೆಡಿಕಾನ್-2012~ ರಾಜ್ಯಮಟ್ಟದ ಮಕ್ಕಳ ತಜ್ಞರ ಸಮ್ಮೇಳನದಲ್ಲಿ ಅವರು `ಎನ್‌ಆರ್‌ಪಿ- 2010 ಗೈಡ್‌ಲೈನ್ಸ್~ ವಿಷಯದ ಕುರಿತು ಅವರು ಮಾತನಾಡಿದರು.

ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ನವಜಾತಶಿಶು ಮರಣ ಪ್ರಮಾಣ ಕಡಿಮೆ ಇದ್ದು, ಅಲ್ಲಿ ಸಾವಿರಕ್ಕೆ 10ರಷ್ಟು ಮಾತ್ರ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಉತ್ತರಪ್ರದೇಶ ಹಾಗೂ ರಾಜಸ್ತಾನ ರಾಜ್ಯದಲ್ಲಿ ಸಾವಿನ ಸಂಖ್ಯೆ ಸಾವಿರಕ್ಕೆ 70ರಷ್ಟಿದೆ ಎಂದ ಅವರು, ಕೇರಳ ಹಾಗೂ ಗೋವಾದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಜತೆಗೆ, ಚಿಕ್ಕರಾಜ್ಯ. ಇದರಿಂದ ಸಾವಿನ ಸಂಖ್ಯೆ ಕಡಿಮೆ ಎಂದು ಹೇಳಿದರು.

1947ರ ಸಮಯದಲ್ಲಿ ಮಕ್ಕಳ ಮರಣದ ಪ್ರಮಾಣ ಹೆಚ್ಚಾಗಿತ್ತು. ಈಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 110ರಷ್ಟಿದ್ದ ಪ್ರಮಾಣ ಈಗ 35ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ. ನ್ಯುಮೋನಿಯಾ, ಅತಿಸಾರ, ಲಸಿಕೆ ಕೊರತೆಯಿಂದ ಪುಟ್ಟಮಕ್ಕಳು ಈ ಹಿಂದೆ ಹೆಚ್ಚಾಗಿ ಸಾವನ್ನಪ್ಪುತ್ತಿದ್ದವು.

ಈಗ ವೈದ್ಯಕೀಯ ಕ್ಷೇತ್ರ ಸಾಕಷ್ಟು ಬೆಳವಣಿಗೆ ಸಾಧಿಸಿದೆ. `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ~ ಅಡಿ ಜಿಲ್ಲಾ ಆಸ್ಪತ್ರೆಗಳಲ್ಲೂ ಮಕ್ಕಳ ಘಟಕಗಳು ಆರಂಭಗೊಂಡು, ಚಿಕಿತ್ಸೆ ದೊರೆಯುತ್ತಿದೆ. ಜತೆಗೆ, ಬಾಣಂತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸಗಳೂ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ನಡೆಯುತ್ತಿವೆ ಎಂದು ಹೇಳಿದರು.

ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ನಾತಕೋತ್ತರ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದಾರೆ. ಮಂಗಳೂರು, ಮೈಸೂರು, ಚಿತ್ರದುರ್ಗ, ಹಾವೇರಿಯಿಂದ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಹಾಗೂ ಚಿಕಿತ್ಸೆಯ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ನರ್ಸಿಂಗ್ ಸಂಬಂಧಿಸಿದ ವಿಚಾರಗೋಷ್ಠಿಯಲ್ಲಿ ಬಾಣಂತಿಯರ ಹಾಗೂ ಮಕ್ಕಳ ಆರೈಕೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಸಂಜೆ ಬಾಪೂಜಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು `ಕತ್ತಲಿನಿಂದ ಬೆಳಕಿನೆಡೆಗೆ~ ಎಂಬ ಕಾರ್ಯಕ್ರಮ ನಡೆಸಿಕೊಟ್ಟರು.

ದಿನವಿಡೀ ವಿಚಾರ ವಿನಿಮಯ
ಶುಕ್ರವಾರ ದಿನವಿಡೀ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡಿಕೊಂಡರು. ಹಲವಾರು ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಬಾಪೂಜಿ ಸಭಾಂಗಣ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಾಗಾರಗಳು ನಡೆದವು.

ವಿಚಾರಗೋಷ್ಠಿ

ಅದಕ್ಕೂ ಮೊದಲು ನರ್ಸಿಂಗ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಐಎಪಿ ರಾಜ್ಯ ಘಟಕದ ಅಧ್ಯಕ್ಷ ಡಾ.ಪಿ.ಎಸ್. ಸುರೇಶ್‌ಬಾಬು ಮಾತನಾಡಿ, `ವೈದ್ಯರು ನೀಡುವ ಚಿಕಿತ್ಸೆಯಲ್ಲಿ ದಾದಿಯರ ಪಾತ್ರ ಪ್ರಮುಖ. ರೋಗಿಗಳಿಗೆ ಚಿಕಿತ್ಸೆಯಲ್ಲಿ ನರ್ಸ್‌ಗಳು ನೆರವಾಗುತ್ತಾರೆ. ಇತ್ತೀಚೆಗೆ ನರ್ಸಿಂಗ್ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ~ ಎಂದು ಹೇಳಿದರು.

ದಾವಣಗೆರೆ, ನರ್ಸಿಂಗ್ ಶಿಕ್ಷಣಕ್ಕೆ ಉತ್ತಮ ಸ್ಥಳ. ಇಲ್ಲಿ ನಿರಂತರವಾಗಿ ದಾದಿಯರ ಶಿಕ್ಷಣ ಮುಂದುವರಿಸಿಕೊಂಡು ಹೋಗಲಾ ಗುವುದು ಎಂದು ಮಾಹಿತಿ ನೀಡಿದರು. ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ ಹಾಜರಿದ್ದರು.
 
ಉದ್ಘಾಟನೆ
ಭಾರತೀಯ ಮಕ್ಕಳ ತಜ್ಞರ ಅಕಾಡೆಮಿ: ಎಂಬಿಎ ಕಾಲೇಜು ಮೈದಾನ. `ಪಿಡಿಕಾನ್-2012~- 31ನೇ ರಾಜ್ಯಮಟ್ಟದ ಮಕ್ಕಳ ತಜ್ಞ ವೈದ್ಯರ ಸಮ್ಮೇಳನ ಉದ್ಘಾಟನಾ ಸಮಾರಂಭ. ಉದ್ಘಾಟನೆ: ಶಾಸಕ ಶಾಮನೂರು ಶಿವಶಂಕರಪ್ಪ. ಅತಿಥಿಗಳು: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಎನ್.ಎಸ್. ಮಹಾಂತ್‌ಶೆಟ್ಟಿ. ಅಧ್ಯಕ್ಷತೆ: ಡಾ.ಎಂ.ಕೆ.ಸಿ. ನಾಯರ್. ಸಂಜೆ 7ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT