ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮುಂಗಾರು: ಒಣಗಿದ ಕಬ್ಬು, ನೀರಿಗೂ ತತ್ವಾರ

Last Updated 5 ಜುಲೈ 2012, 8:25 IST
ಅಕ್ಷರ ಗಾತ್ರ

ಬಾಗಲಕೋಟೆ: ನಿರೀಕ್ಷೆಯಂತೆ ಮಳೆಯಾಗಿದ್ದರೆ ಈ ವೇಳೆಗೆ ಹೆಸರು, ಸೋಯಾಬೀನ್, ಸಜ್ಜೆ, ಜೋಳದ ಬೀಜಗಳು ಮೊಳೆತು ರೈತರ ಹೊಲ ಹಸಿರಾಗಬೇಕಿತ್ತು. ಆದರೆ, ಜಿಲ್ಲೆಗೆ ವರುಣ ಕೃಪೆ ತೋರದ ಕಾರಣ ಹೊಲ ಬರಡು ಭೂಮಿಯಂತೆ ಬಾಯಿ ತೆರೆದಿದೆ. ಮುಂಗಾರು ಹಂಗಾಮಿನ ಉತ್ತು- ಬಿತ್ತುವ ಕಾರ್ಯ ಇನ್ನೂ ಆರಂಭವಾಗಿಲ್ಲ.

ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ 161 ಮಿ.ಮೀ.ಮಳೆಯಾಗಬೇಕಿತ್ತು. ಆದರೆ, ಆಗಿರುವ ಮಳೆ ಕೇವಲ 63 ಮಿ.ಮೀ. ಮಾತ್ರ. ಅಂದರೆ, ಜಿಲ್ಲೆಯಲ್ಲಿ ಶೇ 61ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಬರಗಾಲ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ನೀರಿನ ಮೂಲಗಳಾದ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸಂಪೂರ್ಣ ಬತ್ತಿಹೋಗಿವೆ. ಜಲಾಶಯಗಳೂ ಬರಿದಾಗಿವೆ. ಬಿಸಿಲತಾಪಕ್ಕೆ ಅಂತರ್ಜಲ ಇಳಿದು ಕೊಳವೆಬಾವಿಗಳಲ್ಲೂ ನೀರು ಬರುತ್ತಿಲ್ಲ. ಇದರಿಂದ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಒಣಗಿದ ಕಬ್ಬು: ನದಿ, ಕೊಳವೆಬಾವಿ ಆಶ್ರಯಿಸಿ ಜಿಲ್ಲೆಯ 428 ಗ್ರಾಮಗಳ ವ್ಯಾಪ್ತಿಯ 88,500 ಹೆಕ್ಟೇರ್‌ನಲ್ಲಿ  ಬೆಳೆದಿರುವ ಕಬ್ಬಿನಲ್ಲಿ 25,605 ಹೆಕ್ಟೇರ್‌ನಲ್ಲಿ ಬೆಳೆ ಒಣಗಿದೆ. ಇದರಿಂದ ರೂ1.26 ಕೋಟಿ  ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಮುಂದಿನ ಒಂದು ವಾರದೊಳಗೆ ಮಳೆಯಾಗದಿದ್ದರೇ ಕಬ್ಬಿನ ಗದ್ದೆ ಸಂಪೂರ್ಣ ಒಣಗುವ ಸಾಧ್ಯತೆ ದಟ್ಟವಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಶೇ1ರಷ್ಟು ಮಾತ್ರ ಬಿತ್ತನೆ: `ಜಿಲ್ಲೆಯಲ್ಲಿ ಮಳೆ ಆಶ್ರಯಿಸಿ  94,100 ಹೆಕ್ಟೇರ್ ಮತ್ತು ನೀರಾವರಿ ಆಧರಿಸಿ 1,45,900 ಹೆಕ್ಟೇರ್ ಸೇರಿದಂತೆ ಒಟ್ಟು 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪ್ರಸಕ್ತ ವರ್ಷ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ವಾಡಿಕೆ ಮಳೆಯಾಗದ ಕಾರಣ ಕೇವಲ 935 ಹೆಕ್ಟೇರ್(ಶೇ1) ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 93,364 ಹೆಕ್ಟೇರ್‌ನಲ್ಲಿ (ಶೇ 64) ಬಿತ್ತನೆ ಮಾಡಲಾಗಿದೆ~ ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.

ಬಿತ್ತನೆಯಾಗದ ಏಕದಳ ಧಾನ್ಯ: ಜಿಲ್ಲೆಯಲ್ಲಿ ಮಳೆ ಆಶ್ರಯದಲ್ಲಿ ಜೂನ್ ಅಂತ್ಯದೊಳಗೆ 38,580 ಹೆಕ್ಟೇರ್ ಹೆಸರು, 3,450 ಹೆಕ್ಟೇರ್ ಸೋಯಾಬೀನ್ ಮತ್ತು ಸೂರ್ಯಕಾಂತಿ, ಸಜ್ಜೆ ಬಿತ್ತನೆಯಾಗಬೇಕಿತ್ತು. ಆದರೆ, ಕೇವಲ 60 ಹೆಕ್ಟೇರ್ ಹೊಲದಲ್ಲಿ ಹೆಸರು ಮತ್ತು 150 ಹೆಕ್ಟೇರ್ ಸೋಯಾಬೀನ್ ಮಾತ್ರ ಬಿತ್ತನೆಯಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಗುರುಮೂರ್ತಿ ತಿಳಿಸಿದರು.

ಟ್ಯಾಂಕರ್‌ನಲ್ಲಿ ನೀರು: ಬಾಗಲಕೋಟೆ ನಗರಕ್ಕೆ ನೀರು ಪೂರೈಸುವ ಆನದಿನ್ನಿ ಬ್ಯಾರೇಜ್ ಸಂಪೂರ್ಣ ಬರಿದಾಗಿರುವುದರಿಂದ ಕಳೆದ ಒಂದು ತಿಂಗಳಿಂದ ನವನಗರ ಮತ್ತು ವಿದ್ಯಾಗಿರಿಗೆ 20 ಟ್ಯಾಂಕರ್‌ಗಳ ಮೂಲಕ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ.

ಮುಧೋಳ ಪಟ್ಟಣದಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಪ್ರತಿದಿನ ಐದು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಬಾದಾಮಿ ತಾಲ್ಲೂಕಿನ ಆನಂತಗಿರಿ ಮತ್ತು ಹಂಗರಗಿ ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಗೋಶಾಲೆ: ಜಮಖಂಡಿ ತಾಲ್ಲೂಕಿನ ತೊದಲಬಾಗಿಯಲ್ಲಿ ಜಿಲ್ಲಾಡಳಿತ ಗೋಶಾಲೆಯನ್ನು ತೆರೆದಿದ್ದು, 1,451 ಜಾನುವಾರುಗಳಿಗೆ ನೀರು, ಮೇವು ಒದಗಿಸಲಾಗಿದೆ. ಆದರೆ, ನೀರು-ಮೇವು ಸಮರ್ಪಕವಾಗಿ ಪೂರೈಕೆಯಾಗದೇ ಜಾನುವಾರುಗಳು ಬಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT