ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತಪ್ಪುವ ನೀರಾವರಿ ಯೋಜನೆ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಾವೇರಿ: ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕೆಂಬುದು ಜಗದ ನಿಯಮ. ಆದರೆ, ಸರ್ಕಾರವು ಟಾಟಾ ಮೆಟಾಲಿಕ್ ಕಾರ್ಖಾನೆ ಸ್ಥಾಪಿಸಲು ಜಿಲ್ಲೆಯ ರೈತರ ಭೂಮಿ ಮತ್ತು ತುಂಗಾ ಮೇಲ್ದಂಡೆ ಯೋಜನೆ ಎರಡನ್ನೂ ಕಸಿದುಕೊಳ್ಳುತ್ತಿದೆ.

ಹಾವೇರಿ ತಾಲ್ಲೂಕಿನ ಅಗಡಿ ಬಳಿ ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಈ ಭಾಗದ 2,500 ಎಕರೆಗೂ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಸಿದ್ಧತೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 200ಕ್ಕೂ ಹೆಚ್ಚಿನ ರೈತರು ತಮ್ಮ ಫಲವತ್ತಾದ ಭೂಮಿಯ ಜತೆಗೆ ಮಹತ್ವಾಕಾಂಕ್ಷೆಯ ತುಂಗಾ ಮೇಲ್ದಂಡೆ ಯೋಜನೆಯನ್ನು ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

ತುಂಗಾ ಮೇಲ್ದಂಡೆ ಯೋಜನೆ ಜಿಲ್ಲೆಯ ರೈತರ 25 ವರ್ಷಗಳ ಕನಸು. ಈಗಾಗಲೇ ಜಿಲ್ಲೆಯ ಹಿರೇಕೆರೂರ, ರಾಣೆಬೆನ್ನೂರ ತಾಲ್ಲೂಕಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ ನೀರು ಹರಿದು ಅಲ್ಲಿನ ರೈತರ ಕನಸು ನನಸಾಗಿದೆ.

ಯೋಜನೆಯ ಕಾಮಗಾರಿ ಪೂರ್ಣಗೊಂಡರೆ ತುಂಗಾ ನೀರು ಹಾವೇರಿ ತಾಲ್ಲೂಕಿಗೆ ದೊರೆಯಲಿದೆ. ಆದರೆ, ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಈ ಪ್ರದೇಶದಲ್ಲಿ ಟಾಟಾ ಮೆಟಾಲಿಕ್ ಕಾರ್ಖಾನೆ ಸ್ಥಾಪನೆ ಪ್ರಸ್ತಾಪ ಉದ್ದೇಶಿತ ತುಂಗಾ ಮೇಲ್ದಂಡೆ ಯೋಜನೆಯ ಉಪ ಕಾಲುವೆಗಳ ದಿಕ್ಕನ್ನೇ ಬದಲಿಸಲಿದೆ.

ಈಗಾಗಲೇ ಜಿಲ್ಲಾಡಳಿತ ಸದ್ದಿಲ್ಲದೇ ಈ ಕಾರ್ಯಕ್ಕೆ ಚಾಲನೆ ನೀಡಿದ್ದು ಅದು ಅಂತಿಮಗೊಂಡರೆ, ಕಳೆದ ಎರಡೂವರೆ ದಶಕಗಳಿಂದ ಹಾವೇರಿ ತಾಲ್ಲೂಕಿನ ರೈತರು ಕಾಣುತ್ತಿದ್ದ ತುಂಗಾ ಮೇಲ್ದಂಡೆ ನೀರಾವರಿಯ ಕನಸು ಕನಸಾಗಿಯೇ ಉಳಿಯಲಿದೆ.

ಉದ್ದೇಶಿತ ತುಂಗಾ ಮೇಲ್ದಂಡೆ ಯೋಜನೆಯ ಕಾಮಗಾರಿ ಈಗಾಗಲೇ 202 ಕಿ.ಮೀ. ವರೆಗೆ ಮುಗಿದಿದೆ. 202 ರಿಂದ 276 ಕಿ.ಮೀವರೆಗಿನ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ, ಹಾವೇರಿ ತಾಲ್ಲೂಕಿನ ಜಮೀನು ಸೇರಿ ಸುಮಾರು 25 ಸಾವಿರ ಹೆಕ್ಟೇರ್ ಜಮೀನು ನೀರಾವರಿಗೆ ಒಳಪಡಲಿದೆ.

ಬದಲಾವಣೆ ಅನಿವಾರ್ಯ: ಕಾರ್ಖಾನೆಯನ್ನು ಹಾವೇರಿ ತಾಲ್ಲೂಕಿನ ಅಗಡಿ, ಮಾಚಾಪೂರ ಹಾಗೂ ಬೂದಗಟ್ಟಿ ಗ್ರಾಮಗಳ ಸುಮಾರು 2,580 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. ಇದು ಸಂಪೂರ್ಣ ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರಲಿದೆ.

ಈಗಾಗಲೇ ಇಲ್ಲಿ ಉಪ ಕಾಲುವೆ ನಿರ್ಮಿಸಲು ಸಮೀಕ್ಷೆ ಕೂಡಾ ಮಾಡಲಾಗಿದೆ. ಆದರೆ, ಅದೇ ಪ್ರದೇಶದಲ್ಲಿ ಕಾರ್ಖಾನೆ ಬರುತ್ತಿರುವ ಹಿನ್ನೆಲೆಯಲ್ಲಿ ಉಪ ಕಾಲುವೆಗಳ ಮಾರ್ಗ ಬದಲಾವಣೆ ಅನಿವಾರ್ಯ ಎನ್ನುತ್ತಾರೆ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ರುದ್ರಯ್ಯ.

ಅಗಡಿ ಬಳಿ ಟಾಟಾ ಮೆಟಾಲಿಕ್ ಕಾರ್ಖಾನೆ ಹೆಸರು ಕೇಳಿ ಬರುತ್ತಿದ್ದಂತೆಯೇ ಸರ್ಕಾರ ತುಂಗಾ ಮೇಲ್ದಂಡೆ ಉಪ ಕಾಲುವೆಗಳ ಮಾರ್ಗ ಬದಲಾವಣೆಗೆ ನಿರ್ಧರಿಸಿದೆ. ಈ ಪ್ರದೇಶಕ್ಕೆ ಬರುವ ಮಾರ್ಗವನ್ನು ಬೇರೆ ಕಡೆ ನಿರ್ಮಿಸುವ ಮೂಲಕ ಯೋಜನೆಯ ನೀರನ್ನು ಜಿಲ್ಲೆಯಲ್ಲಿಯೇ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಹೇಳಿದ್ದಾರೆ.

ಬದಲಾವಣೆ ಸರಿಯಲ್ಲ: ಕಾರ್ಖಾನೆಗೆ ಭೂಮಿ ನೀಡಬೇಕೋ ಬೇಡವೋ ಎನ್ನುವ ಗೊಂದಲ ಇಲ್ಲಿನ ರೈತರಲ್ಲಿ ಇನ್ನೂ ಮುಂದುವರೆದಿದೆ. ಕಾರ್ಖಾನೆ ಬರುವುದು ಇನ್ನೂ ಸ್ಪಷ್ಟವಾಗಿಲ್ಲ. ಈಗಲೇ ತುಂಗಾ ಮೇಲ್ದಂಡೆ ಯೋಜನೆಯ ಮಾರ್ಗ ಬದಲಾವಣೆ ಮಾಡಲು ಚಿಂತನೆ ನಡೆಸಿರುವುದು ಸರಿಯಲ್ಲ.

ಕಾರ್ಖಾನೆ ಬರುವ ಬದಲು ತುಂಗಾ ಮೇಲ್ದಂಡೆ ಯೋಜನೆ ಬಂದರೆ ಒಳ್ಳೆಯದು. ಇದರಿಂದ ಕೃಷಿಯಲ್ಲಿ ಬದಲಾವಣೆ ಆಗುವುದರಲ್ಲಿ ಸಂಶಯವಿಲ್ಲ ಎಂದು ರೈತ ಮಾಲತೇಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT