ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಅತಿರಾ ಬತ್ತದ ರೈತರು ಕಂಗಾಲು!

Last Updated 23 ಜೂನ್ 2012, 4:25 IST
ಅಕ್ಷರ ಗಾತ್ರ

ಮಡಿಕೇರಿ: ಬತ್ತದ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ರೂ.1250ಕ್ಕೆ ಹೆಚ್ಚಿಸಿದೆ. ಆದರೆ ಕೊಡಗಿನಲ್ಲಿ ಅತಿಹೆಚ್ಚು ಬೆಳೆಯಲಾಗುತ್ತಿರುವ ಅತಿರಾ ಬತ್ತದ ಬೆಳೆಗಾರರಿಗೆ ಈ ಲಾಭ ದಕ್ಕುವುದು ಅನುಮಾನವಾಗಿದೆ. 

ಅತಿರಾ ಅಕ್ಕಿಯು ಕೆಂಪು ಅಕ್ಕಿ ಎನ್ನುವ ಕಾರಣ ನೀಡಿ ಕಳೆದ ಸಾಲಿನಲ್ಲಿ ಅತಿರಾ ಬತ್ತವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ನಿಗಮದ ಅಧಿಕಾರಿಗಳು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನಿರಾಕರಿಸಿದರು. ಹೀಗಾಗಿ ಈ ಬಾರಿ ಅತಿರಾ ಬತ್ತವನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, `ಜ್ಯೋತಿ ಬತ್ತವನ್ನು ಮಾತ್ರ ಖರೀದಿಸಬಾರದೆಂದು ಸರ್ಕಾರ ಆದೇಶ ಹೊರಡಿಸಿದೆಯೆ ಹೊರತು ಅತಿರಾ ಬತ್ತಕ್ಕೆ ಅಲ್ಲ~ ಎಂದು ಹೇಳುತ್ತಾರೆ. ಅಲ್ಲದೇ, ಸಬ್ಸಿಡಿ ದರದಲ್ಲಿ ಅತಿರಾ ಬಿತ್ತನೆ ಬೀಜವನ್ನೂ ಅವರು ರೈತರಿಗೆ ನೀಡುತ್ತಿದ್ದಾರೆ. ಆಹಾರ ನಿಗಮದ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳ ನಡುವಿನ ವಿಭಿನ್ನ ನಿಲುವಿನಿಂದಾಗಿ ರೈತರು ಕಂಗಾಲಾಗಿದ್ದಾರೆ.

ಕಾಫಿಗೆ ಹೆಸರಾದಂತೆ ಕೊಡಗು ಜಿಲ್ಲೆಯು ಬತ್ತದ ಬೆಳೆಗೂ ಹೆಸರುವಾಸಿ. ಹಲವು ಪ್ರಕಾರಗಳ ಬತ್ತದ ತಳಿಗಳನ್ನು ಇಲ್ಲಿ ಬೆಳೆಯ ಲಾಗುತ್ತದೆ. ಇದರಲ್ಲಿ ಅತಿರಾ ಕೂಡ ಒಂದಾಗಿದೆ. ಜಿಲ್ಲೆಯ ಒಟ್ಟು ಬತ್ತ ಬಿತ್ತನೆಯ ಶೇ 15ರಿಂದ 20ರಷ್ಟು ಪ್ರದೇಶದಲ್ಲಿ ಅತಿರಾ ಬೆಳೆಯಲಾಗುತ್ತದೆ.

ಜಿಲ್ಲೆಯ ವಿರಾಜಪೇಟೆಯ ಸುತ್ತಮುತ್ತಲಿನ ರೈತರು ಅತಿಹೆಚ್ಚು ಅತಿರಾ ಬತ್ತವನ್ನೇ ನೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಸಲ 35,000 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುವ ಗುರಿ ಹೊಂದಲಾಗಿದೆ. ಇದರಲ್ಲಿ ಮುಖ್ಯವಾಗಿ ಅತಿರಾ, ತುಂಗಾ, ರಾಜಮುಡಿ, ಇಂಟಾನ, ಐಆರ್ 64, ಐಇಟಿ 71-91, ಬಿಆರ್-26-55 ತಳಿಯ ಬತ್ತವನ್ನು ಬೆಳೆಯಲಾಗುತ್ತದೆ.

ಕೊಡಗಿನ ವಾತಾವರಣದಲ್ಲಿ ಅತಿರಾ ಬತ್ತ ಹುಲುಸಾಗಿ ಬೆಳೆಯುತ್ತದೆ. ಹೆಕ್ಟೇರ್‌ವೊಂದಕ್ಕೆ 20 ಕ್ವಿಂಟಾಲ್ ವರೆಗೂ ಇಳುವರಿ ಬರುತ್ತದೆ. ಈ ಕಾರಣದಿಂದಾಗಿ ಕಳೆದ 4-5 ವರ್ಷಗಳಿಂದ ಈಚೆಗೆ ಅತಿರಾ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಅವಧಿಯಲ್ಲಿ (130-135 ದಿನಗಳ ಕಾಲಾವಧಿ) ಹಾಗೂ ಅತಿ ಹೆಚ್ಚು ಇಳುವರಿ ಬರುವ ಕಾರಣ ರೈತರು ಅತಿರಾ ಕಡೆ ವಾಲುತ್ತಿದ್ದಾರೆ. ಅತಿರಾ ಬತ್ತಕ್ಕೆ ಮಂಗಳೂರು ಹಾಗೂ ಕೇರಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಬೇಡಿಕೆ ಇದೆ.

ಮುಖ್ಯವಾಗಿ ಕೇರಳದ ಮಾರುಕಟ್ಟೆಯನ್ನೇ ಹೆಚ್ಚಾಗಿ ಅವಲಂಬಿಸಿ, ಅತಿರಾ ಬೆಳೆಯಲಾಗುತ್ತದೆ. ಕಳೆದ ವರ್ಷ ಅಲ್ಲಿನ ಸರ್ಕಾರವು ಪಡಿತರ ವ್ಯವಸ್ಥೆಯಲ್ಲಿ ಕೇವಲ 1 ರೂಪಾಯಿಗೆ 1 ಕೆ.ಜಿ.ಯಂತೆ ಅಕ್ಕಿ ವಿತರಿಸಿದೆ. ಹೀಗಾಗಿ ಕೊಡಗಿನ ಬತ್ತಕ್ಕೆ ಬೇಡಿಕೆ ಕುಸಿದಿತ್ತು. ಆ ದಿನಗಳಲ್ಲಿ ಮಾರುಕಟ್ಟೆ ದರವು ಪ್ರತಿ ಕ್ವಿಂಟಾಲ್‌ಗೆ ರೂ. 800 ರಿಂದ 850ಕ್ಕೆ ಇಳಿದಿತ್ತು.

ಅದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಬತ್ತಕ್ಕೆ ರೂ. 1080 ಬೆಂಬಲ ಬೆಲೆ ಘೋಷಿಸಿತ್ತು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಪ್ರತಿ ಕ್ವಿಂಟಾಲ್ ಬತ್ತಕ್ಕೆ ರೂ. 250 ಪ್ರೋತ್ಸಾಹ ಧನ ನೀಡಿತ್ತು. ಎಲ್ಲವೂ ಸೇರಿ ರಾಜ್ಯದ ಬತ್ತದ ಬೆಳೆಗಾರರಿಗೆ ರೂ.1330 ಬೆಂಬಲ ಬೆಲೆ ದೊರೆತಿತ್ತು. ಆದರೆ, ಈ ಲಾಭ ಅತಿರಾ ಬೆಳೆಗಾರರಿಗೆ ದಕ್ಕಲಿಲ್ಲ.

ಅತಿರಾ ಬತ್ತ ಕೆಂಪು ಅಕ್ಕಿ ಎನ್ನುವ ಕಾರಣವೊಡ್ಡಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಬೆಂಬಲ ಬೆಲೆಯಡಿ ಖರೀದಿಸಲಿಲ್ಲ. ಈ ಸಲವು ಇದೇ ಪರಿಸ್ಥಿತಿ ಉಂಟಾದರೆ ಏನು ಮಾಡುವುದು ಎಂದು ರೈತರು ಚಿಂತೆಗೀಡಾಗಿದ್ದಾರೆ.

`ಕೇಂದ್ರ ಸರ್ಕಾರವೇ ತೀರ್ಮಾನಿಸಬೇಕು~

ಬೆಂಬಲ ಬೆಲೆ ಯೋಜನೆಯಡಿ ಬತ್ತ ಖರೀದಿಸುವುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರ ನಿಯಮಾವಳಿಗಳನ್ನು ಸಹ ಅದೇ ರೂಪಿಸುತ್ತದೆ. ಜ್ಯೋತಿ ಬತ್ತ (ಕೆಂಪು ಬತ್ತ)ವನ್ನು ಮಿಲ್ ಮಾಡಿದಾಗ ಅಕ್ಕಿ ಪುಡಿಪುಡಿಯಾಗುತ್ತದೆ. ಹಾಗಾಗಿ ಇದನ್ನು ಖರೀದಿಸಬಾರದೆಂದು ಕೇಂದ್ರ ಸರ್ಕಾರ ಕಳೆದ ವರ್ಷ ಆದೇಶಿಸಿತ್ತು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಜಯದೇವ ಅರಸು `ಪ್ರಜಾವಾಣಿ~ಗೆ ತಿಳಿಸಿದರು.
 
ಕೆಂಪು ಬತ್ತದ ವಿಧದಲ್ಲಿ ಅತಿರಾ ಕೂಡ ಸೇರುತ್ತದೆ. ಇದನ್ನು ಸಹ ಮಿಲ್ ಮಾಡಿದಾಗ ಅಕ್ಕಿ ಪುಡಿಪುಡಿಯಾಗಿ ಬರುತ್ತದೆ. ಅಲ್ಲದೇ ಈ ಅಕ್ಕಿಯನ್ನು ಮಂಗಳೂರು ಬಿಟ್ಟರೆ ಬೇರೆ ಪ್ರದೇಶಗಳಲ್ಲಿ ಉಪಯೋಗಿಸಲ್ಲ. ಅದಕ್ಕಾಗಿ ಇದನ್ನು ಖರೀದಿಸದಂತೆ ಸರ್ಕಾರ ನಿಷೇಧ ಹೇರಿತ್ತು. ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿಗಮದ ವತಿಯಿಂದ ಪತ್ರ ಬರೆಯಲಾಗಿದ್ದು, ಅಂತಿಮ ನಿರ್ಧಾರ ಇನ್ನು ಬಂದಿಲ್ಲ ಎಂದು ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT