ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಲಿಗೆ ಬಲಿಯಾಗುತ್ತಿರುವ ವೃಕ್ಷ ಸಂಪತ್ತು

Last Updated 7 ಮೇ 2012, 6:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದ ವ್ಯಾಪ್ತಿಯ ರಸ್ತೆಬದಿ ಹಾಗೂ ಮನೆಗಳ ಮುಂಭಾಗದಲ್ಲಿರುವ ಮರಗಳು ಈಗ ಸದ್ದಿಲ್ಲದೆ ಕಣ್ಮರೆಯಾಗುತ್ತಿವೆ!

ಮನೆ ಮುಂಭಾಗ ಕಾಂಪೌಂಡ್ ನಿರ್ಮಾಣ, ಅಂಗಡಿಗಳ ಮುಂದೆ ಪ್ಲಾಸ್ಟಿಕ್ ನೆರಳಿನ ಹೊದಿಕೆ ಹಾಕಲು ಮರಗಳ ಕೊಂಬೆ ಕಡಿಯುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಹೀಗಾಗಿ, ಮರಗಳು ಮಳೆ-ಗಾಳಿಗೆ ಸಿಲುಕಿ ನೆಲಕ್ಕೆ ಉರುಳುವ ಅಪಾಯ ಎದುರಾಗಿದೆ. ಕೆಲವೆಡೆ ರಸ್ತೆಬದಿಯಲ್ಲಿದ್ದ ಮರಗಳ ಬುಡಕ್ಕೆ ನಿವಾಸಿಗಳು ಕೊಡಲಿಪೆಟ್ಟು ಹಾಕಿರುವುದು ಉಂಟು. ಆದರೆ, ನಗರಸಭೆ ಆಡಳಿತ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳನ್ನು ಉಳಿಸಲು ಮಾತ್ರ ಮುಂದಾಗುತ್ತಿಲ್ಲ ಎನ್ನುವುದು ಪರಿಸರ ಪ್ರೇಮಿಗಳ ಅಳಲು.

ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆಬದಿಯಲ್ಲಿ ಮಾತ್ರ ಮರಗಳು ಹೆಚ್ಚಿವೆ. ಉಳಿದ ರಸ್ತೆಗಳ ಬದಿಯಲ್ಲಿ ಇಂತಹ ದೃಶ್ಯ ಕಾಣುವುದು ಅಪರೂಪ. ಬಿ. ರಾಚಯ್ಯ ಜೋಡಿರಸ್ತೆಯಲ್ಲಿ ಹಲವು ವರ್ಷದ ಹಿಂದೆಯೇ ಗಿಡ ನೆಡಲಾಗಿದೆ. ಈಗ ಬಹಳಷ್ಟು ಮರಗಳು ನೆರಳು ನೀಡುತ್ತಿವೆ. ಆದರೆ, ಕೆಲವು ಅಂಗಡಿಗಳ ಮುಂಭಾಗ ಮರಗಳು ಕಣ್ಮರೆಯಾಗಿವೆ. ಮರಗಳು ಇಲ್ಲದಿರುವ ಸ್ಥಳದಲ್ಲಿ ಮತ್ತೆ ಗಿಡ ನೆಟ್ಟು ಪೋಷಿರುವ ಪ್ರಯತ್ನ ನಡೆದಿಲ್ಲ.

ಪ್ರತಿವರ್ಷವೂ ನಗರಸಭೆಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಾಮಾನ್ಯ. ಆದರೆ, ನಗರದ ವ್ಯಾಪ್ತಿಯಲ್ಲಿ ಎಷ್ಟು ಗಿಡ ನೆಡಲಾಗಿದೆ ಎಂಬ ಲೆಕ್ಕವೂ ಇಲ್ಲ. ಜತೆಗೆ, ನೆಡುವ ಗಿಡಗಳಿಗೆ ಸೂಕ್ತ ರಕ್ಷಣೆ ನೀಡದಿರುವ ಪರಿಣಾಮ ಬಿಡಾಡಿ ಮೇಕೆಗಳ ಹಾವಳಿಗೆ ಬಲಿಯಾಗುತ್ತಿವೆ.

ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿ ಅನ್ವಯ ನಿವೇಶನ ಖರೀದಿಸಿ ಮನೆ ನಿರ್ಮಿಸಿ ಕೊಳ್ಳುವ ನಿವಾಸಿಗಳು ಕಡ್ಡಾಯವಾಗಿ ಮನೆ ಮುಂಭಾಗ ಎರಡು ಗಿಡ ನೆಟ್ಟು ಬೆಳೆಸ ಬೇಕಿದೆ. ಆದರೆ, ಈ ನಿಯಮ ಪಾಲನೆಯಾಗಿಲ್ಲ. ನಾಗ ರಿಕರು ಕಡ್ಡಾಯವಾಗಿ ನಿಯಮ ಪಾಲಿಸಿದ್ದರೆ ಜಿಲ್ಲಾ ಕೇಂದ್ರದ ವ್ಯಾಪ್ತಿ ಹಸಿರು ಹೊದಿಕೆ ಯೇ ಸೃಷ್ಟಿಯಾಗುತ್ತಿತ್ತು. ಕೆಲವು ನಿವಾಸಿಗಳು ಮರ ಗಳನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಕೆಲವೆಡೆ ಅಲಂಕಾರಿಕ ಗಿಡ ಬೆಳೆಸಿ ್ದದಾರೆ. ಆದರೆ, ಪರಿಸರದ ಅಭಿವೃದ್ಧಿಗೆ ಪೂರಕ ವಾಗುವಂತಹ ಗಿಡ ನೆಡಲು ಸಾರ್ವಜನಿಕರು ಮುಂದಾಗಿ ರುವುದು ಕಡಿಮೆ.

ಪ್ರತಿಯೊಂದು ಕುಟುಂಬಕ್ಕೂ ಗಿಡಗಳನ್ನು ನಗರಸಭೆಯಿಂದಲೇ ಉಚಿತವಾಗಿ ನೀಡುವಂತಹ ಯೋಜನೆಯೂ ಅನುಷ್ಠಾನಗೊಂಡಿಲ್ಲ. ಈ ಮಧ್ಯೆ ಉದ್ಯಾನಗಳಲ್ಲಿರುವ ಗಿಡಗಳ ಪೋಷಣೆಗೂ ಸ್ಥಳೀಯ ಆಡಳಿತ ನಿರ್ಲಕ್ಷ್ಯವಹಿಸಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸು ವಂತಹ ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ ಎಂಬುದು ಪೋಷಕರ ದೂರು.

`ಕೆಲವು ಬಡಾವಣೆಗಳಲ್ಲಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಸುತ್ತುಗೋಡೆ ನಿರ್ಮಿಸಿಕೊಂಡಿರುವ ನಿದರ್ಶನವಿದೆ. ಅದನ್ನು ತೆರವುಗೊಳಿಸಿ ಖಾಲಿ ಸ್ಥಳದಲ್ಲಿ ಗಿಡ ನೆಡುವುದು ಉತ್ತಮ. ಪ್ರಸ್ತುತ ಮಳೆಯೂ ಆರಂಭವಾಗಿದೆ. ರಸ್ತೆಬದಿಯ ಖಾಲಿ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಗರಸಭೆ ಆಡಳಿತ ಮುಂದಾಗುವುದು ಒಳಿತು. ನಾಗರಿಕರು ಕೂಡ ಮನೆಗಳ ಮುಂದಿರುವ ಮರಗಳ ಬುಡಕ್ಕೆ ಕೊಡಲಿ ಹಾಕುವ ಪ್ರವೃತ್ತಿ ಬಿಡಬೇಕು~ ಎನ್ನುತ್ತಾರೆ ಹಿರಿಯ ನಾಗರಿಕ ನಾಗರಾಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT