ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೇಶ್ವರಕ್ಕೆ ಪಿಜಿ ಕೇಂದ್ರ

Last Updated 28 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಕುಂದಾಪುರ: ಕೋಟೇಶ್ವರದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಆರಂಭಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಭರವಸೆ ನೀಡಿದರು.ಕೋಟೇಶ್ವರದಲ್ಲಿ ಭಾನುವಾರ ‘ಕಾಳಾವರ ವರದರಾಜ ಎಂ. ಶೆಟ್ಟಿ’ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿಗೆ ತುರ್ತು ಬೇಕಾಗಿರುವ ಮೇಲಂತಸ್ತಿನ ಕೊಠಡಿಗಳ ನಿರ್ಮಾಣಕ್ಕಾಗಿ ಅವಶ್ಯವಿರುವ ರೂ 75 ಲಕ್ಷಗಳಲ್ಲಿ ಮೂರನೇ ಒಂದು ಭಾಗವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ಕೋಟ ಪಡುಕೆರೆ ಹಾಗೂ ತ್ರಾಸಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭ ಮಾಡಲಾಗುವುದು ಎಂದು ಪ್ರಕಟಿಸಿದರು.
ಜಾಗತಿಕ ವ್ಯವಸ್ಥೆ ಆಧುನಿಕತೆ ಹಾಗೂ ಜಾಗತೀಕರಣದ ನೆರಳಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಮಾನವ ಸಂಪತ್ತಿನ ಸದ್ಭಳಕೆಯ ಚಿಂತನೆಯಾಗಬೇಕು. ಮಕ್ಕಳ ಭವಿಷ್ಯದ ಕಾಳಜಿಯಡಿಯಲ್ಲಿ ಸಮಾಜದ ಹೆತ್ತವರ ತೀರ್ಮಾನ ಕೈಗೊಳ್ಳಬೇಕು. ಈ ದಿಸೆಯಲ್ಲಿ ಸರ್ಕಾರ ಅನುಷ್ಠಾನಕ್ಕೆ ತರುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. 

ರಾಜ್ಯ ಉದಯವಾದಾಗ ಕೇವಲ 2 ವಿಶ್ವವಿದ್ಯಾಲಯ ಹಾಗೂ 150 ಕಾಲೇಜುಗಳಿದ್ದವು. ನಂತರದ ದಿನಗಳಲ್ಲಿ ಈ ಸಂಖ್ಯೆ ವೇಗವಾಗಿ ಬೆಳೆದು 23 ಸರ್ಕಾರಿ, 6 ಖಾಸಗಿ ವಿವಿ ಹಾಗೂ ಸುಮಾರು 2,300 ಕಾಲೇಜುಗಳು ಆರಂಭವಾಗಿವೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿಯ ನಂತರ ಶಿಕ್ಷಣಕ್ಕೆ ಅತ್ಯಂತ ವಿಶೇಷ ಕಾಳಜಿ ವಹಿಸಲಾಗಿದೆ. ರೂ 12,284 ಕೋಟಿ  ಅನುದಾನ ಮೀಸಲಿಡಲಾಗಿದೆ ಎಂದರು.

ಶಿಕ್ಷಣ ರಂಗದಲ್ಲಿ ಅಗಾಧ ಬದಲಾವಣೆ ನಿರೀಕ್ಷಿಸಲಾಗಿದೆ. 2020ರ ವೇಳೆಗೆ ಪ್ರೌಢಶಾಲಾ ಶಿಕ್ಷಣಾಭ್ಯಾಸದ ನಂತರ ಹಾಗೂ ಪದವಿ ಶಿಕ್ಷಣಕ್ಕಿಂತ ನಡುವಿನ ಹಂತದ ಶಿಕ್ಷಣಾಭ್ಯಾಸದಲ್ಲಿ ಕನಿಷ್ಠ 50 ಲಕ್ಷ ಶಿಕ್ಷಣಾರ್ಥಿಗಳು ಹಾಗೂ ಕಾಲೇಜು ಶಿಕ್ಷಣಾಭ್ಯಾಸದಲ್ಲಿ ಕನಿಷ್ಠ 20 ಲಕ್ಷ ಮಂದಿ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಗುರಿ ಇರಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ 13 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 8 ಕಾಲೇಜುಗಳಲ್ಲಿ ಪ್ರಥಮ ಹಂತದ ಕಟ್ಟಡ ನಿರ್ಮಿಸಲಾಗಿದೆ. 4 ಕಾಲೇಜುಗಳಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಕಾಲೇಜಿನಲ್ಲಿ ಮಾತ್ರ ಕಟ್ಟಡ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಇದೆ ಎಂದು ಸಚಿವರು ತಿಳಿಸಿದರು.

ಉದ್ಯಮಿ ಡಾ.ಜಿ ಶಂಕರ್ ಮಾತನಾಡಿ, ಸಮಾಜ ಸೇವೆ ಮಾಡುವವರು ಸನ್ಮಾನ ಹಾಗೂ ಅಭಿವಂದನೆಯ ನಿರೀಕ್ಷೆ ಇಟ್ಟುಕೊಳ್ಳಬಾರದು. ಸದಭಿರುಚಿಯ ಚಿಂತನೆ ಇರುವವರಿಗೆ ಸನ್ಮಾನಗಳು ನಡೆ ಕಟ್ಟಿ ಹಾಕುತ್ತವೆ ಎಂದರು. ಮೂರನೇ ಹಣಕಾಸು ಕಾರ್ಯಪಡೆ ಅಧ್ಯಕ್ಷ ಎ.ಜಿ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದ ಸದಾನಂದ ಗೌಡ, ಜಿ.ಪಂ ಸದಸ್ಯ ಗಣಪತಿ ಶ್ರೀಯಾನ್, ತಾ.ಪಂ ಸದಸ್ಯ ಮಂಜು ಬಿಲ್ಲವ, ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಶೆಟ್ಟಿ, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ, ಉದ್ಯಮಿ ಆನಂದ ಸಿ. ಕುಂದರ್, ಪದವಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ನಟರಾಜ್ ಅರಸ್, ಪ್ರಾಂಶುಪಾಲ ಪ್ರೊ.ಅಭಿಷೇಕಂ, ಉಪನ್ಯಾಸಕರಾದ ನಿತ್ಯಾನಂದ ಬೈಂದೂರು, ಡಾ.ಉಷಾದೇವಿ ಜೆ.ಎಸ್, ನಿತ್ಯಾನಂದ ಗಾಂವ್ಕರ್, ಶಂಕರ ನಾಯಕ್, ರಮೇಶ್, ಸುಲೋಚನಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್ ಕಾಮಧೇನು, ಡಾ.ಉಮೇಶ್ ಪುತ್ರನ್, ಉದ್ಯಮಿ ಮೊಳಹಳ್ಳಿ ವಸಂತಿ ಶೆಟ್ಟಿ, ಪುರಸಭಾಧ್ಯಕ್ಷ ಮೋಹನದಾಸ್ ಶೆಣೈ, ಉದ್ಯಮಿ ಕಿರಣ್ ಕುಮಾರ್ ಕೊಡ್ಗಿ ಇದ್ದರು. ಕಾಲೇಜು ಕಟ್ಟಡ ನಿರ್ಮಾಣಕ್ಕೆ ರೂ 60 ಲಕ್ಷ ಕೊಡುಗೆ ನೀಡಿದ ಉದ್ಯಮಿ ಕಾಳಾವರ ವರದರಾಜ ಎಂ. ಶೆಟ್ಟಿ, ಕಟ್ಟಡದ ಗುತ್ತಿಗೆದಾರರಾದ ಸಬ್ಲಾಡಿ ಎನ್.ಜಯರಾಮ್ ಶೆಟ್ಟಿ, ಮೊಳಹಳ್ಳಿ ಪ್ರಶಾಂತ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಕಟ್ಕೇರಿ, ಸುದೀಪ್ ಶೆಟ್ಟಿ ಹಾಗೂ ಪ್ರದೀಪ್ ಮೊಗವೀರ ಕಟ್‌ಬೇಲ್ತೂರ್ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT