ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಭಣಭಣ

Last Updated 11 ಜುಲೈ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು:  ವಕೀಲರಿಗೆ ಸಂಬಂಧಿಸಿದ ಉದ್ದೇಶಿತ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ನೀಡಿದ್ದ ಕರೆ ಅನ್ವಯ ಬಹುತೇಕ ವಕೀಲರು ಬುಧವಾರ ಕೋರ್ಟ್ ಕಲಾಪದಿಂದ ಹೊರಕ್ಕುಳಿದರು. ಇದರಿಂದ ನಗರದ ಎಲ್ಲ ನ್ಯಾಯಾಲಯಗಳ ಆವರಣ ಭಣಗುಟ್ಟುತ್ತಿತ್ತು. ರಜಾಕಾಲದ ಕಳೆ ನ್ಯಾಯಾಲಯಗಳಲ್ಲಿ ಎದ್ದು ಕಾಣುತ್ತಿತ್ತು.

ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಕಲಾಪ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಲೋಕಾಯುಕ್ತ ವಿಶೇಷ ಕೋರ್ಟ್ ಕಾರ್ಯ ನಿರ್ವಹಿಸಿತು. ಹೈಕೋರ್ಟ್‌ನಲ್ಲಿ ಎಲ್ಲ ನ್ಯಾಯಮೂರ್ತಿಗಳು ಕಲಾಪ ನಡೆಸಿದರು. ಕೆಲವೇ ಕೆಲವು ವಕೀಲರು ಕಲಾಪಕ್ಕೆ ಹಾಜರು ಆಗಿದ್ದರು. ಬಹುತೇಕ ಪ್ರಕರಣಗಳಲ್ಲಿ ವಕೀಲರು ಗೈರುಹಾಜರಾದ ಕಾರಣ ನ್ಯಾಯಮೂರ್ತಿಗಳು ವಿಚಾರಣೆ  ಮುಂದೂಡುವುದು ಅನಿವಾರ್ಯವಾಯಿತು.

ಕಕ್ಷಿದಾರರಿಗೆ ವಕೀಲರು ಮೊದಲೇ ವಿಷಯ ತಿಳಿಸಿದ ಕಾರಣ, ಅವರು ಹಾಜರು ಇರಲಿಲ್ಲ.
`ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ~ ಹಾಗೂ `ರಾಷ್ಟ್ರೀಯ ಕಾನೂನು ಕಾಲೇಜುಗಳ ಮಸೂದೆ~ ತಿದ್ದುಪಡಿ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ಈ ಮುಷ್ಕರಕ್ಕೆ ಕರೆ ನೀಡಿದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿಯೂ ಮುಷ್ಕರ ನಡೆಸಲಾಯಿತು. ಇದು ಗುರುವಾರವೂ ಮುಂದುವರಿಯಲಿದೆ.

ಆಯಾ ರಾಜ್ಯಗಳಲ್ಲಿನ ಎಲ್ಲ ಕಾನೂನು ಕಾಲೇಜುಗಳಿಗೆ ಮಾನ್ಯತೆ ನೀಡುವುದು, ಅವುಗಳ ಪಠ್ಯಕ್ರಮ ನಿಗದಿಪಡಿಸುವುದು ಇತ್ಯಾದಿ ಅಧಿಕಾರ ರಾಜ್ಯ ವಕೀಲರ ಪರಿಷತ್ತಿನ ವ್ಯಾಪ್ತಿಗೆ ಒಳಪಟ್ಟಿದೆ. `ರಾಷ್ಟ್ರೀಯ ಕಾನೂನು ಕಾಲೇಜುಗಳ ಮಸೂದೆ~ ಜಾರಿಯಾದರೆ ಈ ಅಧಿಕಾರ ಸರ್ಕಾರದ ಪಾಲಾಗುತ್ತದೆ ಎನ್ನುವುದು ಪರಿಷತ್ ಹೇಳಿಕೆ.

ವಿದೇಶಿ ವಕೀಲರು ಭಾರತಕ್ಕೆ ಬಂದು ವಕೀಲಿ ವೃತ್ತಿ ನಡೆಸಲು ಅಥವಾ ಇಲ್ಲಿಯ ವಕೀಲರು ವಿದೇಶದಲ್ಲಿ ವೃತ್ತಿ ನಡೆಸಲು ಕೆಲವೊಂದು ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಇದರ ಜೊತೆಗೆ ಕೆಲವು ಷರತ್ತುಗಳು ಕೂಡ ಅನ್ವಯ ಆಗುತ್ತವೆ. ಆದರೆ, `ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ~ ಜಾರಿಗೊಂಡರೆ, ಯಾವುದೇ ಪರೀಕ್ಷೆ ಇಲ್ಲದೇ, ವಿದೇಶಿ ವಕೀಲರು ಭಾರತಕ್ಕೆ ಬಂದು ವಕೀಲಿ ವೃತ್ತಿ ನಡೆಸುತ್ತಾರೆ.
 
ಇಲ್ಲಿಯ ವಕೀಲರು ಮಾತ್ರ ವಿದೇಶದಲ್ಲಿನ ಷರತ್ತುಗಳಿಗೆ ಒಳಪಟ್ಟು ಅಲ್ಲಿ ವೃತ್ತಿ ನಡೆಸಬೇಕಾಗುತ್ತದೆ. ಆದುದರಿಂದ ಈ ಮಸೂದೆಗಳಿಗೆ ವಕೀಲರಿಂದ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT