ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಯಿಂದಲೂ ಕಾಸು

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಪ್ರಕೃತಿ ವಿಕೋಪ ಹಾಗು ರೋಗಬಾಧೆಯಿಂದ ಕೃಷಿಯಲ್ಲಿ ಇಳುವರಿ ಕಡಿಮೆ ಆಗುತ್ತಲೇ ಇರುತ್ತದೆ. ಜತೆಗೆ ಮಾರುಕಟ್ಟೆಯ ಬೇಡಿಕೆ, ಧಾರಣೆ ಕುಸಿದಾಗ ರೈತರಿಗೆ ಆಗುವ ನಷ್ಟದ ಬಗ್ಗೆ ಹೇಳುವಂತೆಯೇ ಇಲ್ಲ.

ಇದನ್ನು ಸರಿದೂಗಿಸಲು ಪ್ರಗತಿಪರ ಕೃಷಿಕರು ಬೇಸಾಯಕ್ಕೆ ಪೂರಕವಾದ ಉಪಕಸುಬಿನಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಕ್ಕೇರಿ ಸುಧೀರ್ ಶೆಟ್ಟಿ.

ಇವರು ಒಂದು ವರ್ಷದಿಂದ ತಾಯಿ ಸರಸ್ವತಿ ಮತ್ತು ಪತ್ನಿ ವಿನಯಾ ಅವರ ಸಹಕಾರದೊಂದಿಗೆ ಕೋಳಿ ಮರಿ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 3 ಸಾವಿರ ಬ್ರಾಯ್ಲರ್ (ಮಾಂಸದ) ತಳಿಯ ಕೋಳಿಮರಿಗಳನ್ನು ಖಾಸಗಿ ಕಂಪೆನಿಯಿಂದ ಪಡೆದು ಮೂವತ್ತೆಂಟು ದಿನ ನಿರ್ವಹಣೆ ಮಾಡಿ ಅದೇ ಕಂಪೆನಿಗೆ ಮಾರಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಸಾಕಣೆಗೆ ಬೇಕಾದ ಕೋಳಿಮರಿಗಳು, ಅದರ ಆಹಾರ, ಔಷಧಿ ಮತ್ತು ಇತರ ಪರಿಕರಗಳನ್ನು ಕಂಪೆನಿಯೇ ನೀಡುತ್ತದೆ. ಇವರು ಕೋಳಿಗಳ ವಾಸದ ಮನೆ, ನೀರಿನ ವ್ಯವಸ್ಥೆ ಹಾಗು ವಾತಾವರಣಕ್ಕೆ ಸರಿಯಾಗಿ ಉಷ್ಣಾಂಶ ಕಾಪಾಡುವ ಅನುಕೂಲ ಕಲ್ಪಿಸಿಕೊಳ್ಳಬೇಕು.

ನಿಗದಿತ ದಿನದ ವರೆಗೆ (38 ದಿನ) ಮರಿಗಳನ್ನು ಸಲಹಿ ಒಳ್ಳೇ ತೂಕದ, ರೋಗ ಮುಕ್ತ ಕೋಳಿಗಳನ್ನು ಹಿಂತಿರುಗಿಸಬೇಕು. ಇವುಗಳ ತೂಕಗಳಿಗೆ ತಕ್ಕಂತೆ ಧಾರಣೆ. ಒಂದು ಕಿಲೊಗೆ ಸರಾಸರಿ 4 ರೂಪಾಯಿ ಸಿಗುತ್ತದೆ. ಒಂದೊಂದು ಕೋಳಿ ಸರಾಸರಿ 2.2 ಕಿಲೊ ತೂಗುತ್ತದೆ. ಚೆನ್ನಾಗಿ ನಿರ್ವಹಿಸಿದರೆ ಕಂಪೆನಿಯಿಂದ ಬೋನಸ್ ಕೂಡ ಸಿಗುತ್ತದೆ.
ಇಷ್ಟೇ ಅಲ್ಲ. ಕೋಳಿಗಳಿಂದ ಸಿಗುವ ಗೊಬ್ಬರಕ್ಕೂ ಉತ್ತಮ ಬೇಡಿಕೆ ಮತ್ತು ಧಾರಣೆ ಇದೆ. ಹೀಗಾಗಿ ಕೈಗೆ ಕಾಸು ಬರಲು ಬಹಳ ಕಾಲ ಕಾಯಬೇಕಿಲ್ಲ.

ಪಾಲನೆ ಪೋಷಣೆ
`ಕೋಳಿ ಸಾಕಣೆಯಲ್ಲಿ ಕಷ್ಟವಿಲ್ಲ. ಆದರೆ ಬಹಳ ನಾಜೂಕಿನ ಕೆಲಸ~ ಎನ್ನುವುದು ವಿನಯಾ ಅವರ ಅನುಭವ. `ಕಂಪೆನಿಯವರು ಕೊಡುವ ಮರಿಗಳನ್ನು ಸರಿಯಾದ ರೀತಿಯಲ್ಲಿ ಬಹಳ ಎಚ್ಚರದಿಂದ ಪೋಷಣೆ ಮಾಡದಿದ್ದರೆ ರೋಗಪೀಡಿತವಾಗಿ ಸಾವನ್ನಪ್ಪುತ್ತವೆ ಅಥವಾ ಸೊರಗಿ ತೂಕ ಕಳೆದುಕೊಳ್ಳುತ್ತವೆ~ ಎಂದು ಅವರು ಹೇಳುತ್ತಾರೆ.

ಶೆಟ್ಟರು ಗುಡಿಸಿ ಸೆಗಣಿ ಸಾರಿಸಿ ಸುಣ್ಣ ಹೊಡೆಸಿ ಸ್ವಚ್ಛಗೊಳಿಸಿದ ಶೆಡ್‌ನಲ್ಲಿ ತೆಂಗಿನಾರಿನ ಪುಡಿಯನ್ನು ಹರಡುತ್ತಾರೆ. ಶೆಡ್ ವಿಭಾಗಿಸಿ ಪೇಪರ್‌ಹಾಕಿ ಅದರ ಮೇಲೆ ಪುಟ್ಟಮರಿಗಳನ್ನು ಬಿಡುತ್ತಾರೆ. ವಾತಾವರಣದ ಉಷ್ಣತೆಗೆ ಸರಿಯಾಗಿ ಮರಿಗಳಿಗೆ ಬೆಚ್ಚನೆಯ ಶಾಖ ಕೊಡುತ್ತಾರೆ.
 
ಐದು ಮತ್ತು ಏಳನೆಯ ದಿವಸ ಮರಿಗಳಿಗೆ ಕಣ್ಣಿನ ಔಷಧಿ ಹಾಗು ಇಪ್ಪತ್ತೊಂದನೆಯ ದಿವಸ ನೀರಿನಲ್ಲಿ ಔಷಧಿ ಹಾಕುತ್ತಾರೆ. ಮರಿಗಳು ಚಿಕ್ಕದಿರುವಾಗ ತಟ್ಟೆಯಲ್ಲಿ ಸದಾ ಆಹಾರ ಇರುವಂತೆ ನೋಡಿಕೊಳುತ್ತಾರೆ. ಏಕೆಂದರೆ ಅವು ದೊಡ್ಡದಾದಂತೆ ದಿನಕ್ಕೆ ಒಂದು ಬಾರಿ ಆಹಾರ ಹಾಕಿದರೂ ಸಾಕಾಗುತ್ತದೆ.

ಗಾಳಿ, ಬೆಳಕು ಚೆನ್ನಾಗಿ ಬೀಳುವ, ಜನಸಂದಣಿ ಕಡಿಮೆ ಇರುವ ಆದಷ್ಟು ನಿಶ್ಯಬ್ದ ಹಾಗು ನೆರಳು ಇರುವ ತಂಪು ವಾತಾವರಣದಲ್ಲಿ ಕೋಳಿಗಳ ವಾಸದ ಮನೆ ನಿರ್ಮಿಸಬೇಕು. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾದರೆ ಕೋಳಿಗಳು ಸೊರಗುತ್ತವೆ. ಅದಕ್ಕಾಗಿ ಶೆಡ್‌ನ ಮೇಲೆ ಅಡಿಕೆ ಸೋಗೆಯನ್ನು ಹೊದಿಸಿ ನೀರು ಹಾಯಿಸಬೇಕು. ಕೋಳಿಗಳಿಗೆ ರಾತ್ರಿಯಿಡೀ ಬೆಳಕಿನ ವ್ಯವಸ್ಥೆ ಬೇಕು ಹಾಗು ಶೆಡ್‌ಗೆ ಹದಿನೈದು ದಿವಸಕ್ಕೊಮ್ಮೆ ಔಷಧಿ ಸಿಂಪಡಿಸಬೇಕು.
 
ಕೋಳಿಗಳಿಗೆ ಬ್ರೀದಿಂಗ್ ಬಂದರೆ ಎರಡು ದಿವಸಕ್ಕೊಮ್ಮೆ ಸಾಯಂಕಾಲ ಔಷಧಿ ಹೊಡೆಯಬೇಕು. ಕೋಳಿಗಳ ತಳಭಾಗ ಒಣಗಿದ್ದು ಕೊಳೆಯಾಗದಂತೆ ನೋಡಿಕೊಂಡರೆ ರೋಗಬಾಧೆಯಿಂದ ಪಾರಾಗಬಹುದು. ಕಡಿಮೆ ಆಹಾರದಲ್ಲಿ ಹೆಚ್ಚು ತೂಕ ಬರುವಂತೆ ಸಲಹಿದರೆ ಅಧಿಕ ಲಾಭ ಪಡೆಯಬಹುದು ಎನ್ನುವುದು ಅವರ ಸಲಹೆ.

ಕೋಳಿ ಸಾಕಣೆಯನ್ನು ಸರಿಯಾಗಿ ನಿರ್ವಹಿಸಿದರೆ ಲಾಭ ಇದೆ. ಇದರಿಂದ ದೊರೆಯುವ ಗೊಬ್ಬರಕ್ಕೂ ಉತ್ತಮ ಬೇಡಿಕೆ ಹಾಗು ಧಾರಣೆ ಇದೆ. ಒಂದು ಬ್ಯಾಚ್ ಕೋಳಿ ನಿರ್ವಹಣೆಯಾದ ಬಳಿಕ ಸುಮಾರು 50 ಕಿಲೊ ತೂಕದ 100 ಚೀಲ ಗೊಬ್ಬರ ಪಡೆಯಬಹುದು. ಒಂದು ಚೀಲ ಗೊಬ್ಬರಕ್ಕೆ 75 ರೂಪಾಯಿ.
 
ಇದು ಈ ಉದ್ಯಮದ ಮೇಲು ಆದಾಯವಾಗಿದೆ. ರೈತರು ಇದನ್ನು ತಮ್ಮ ತೋಟಕ್ಕೂ ಬಳಸಿ ಹೆಚ್ಚಿನ ಇಳುವರಿ ಪಡೆದು ಆದಾಯ ಹೆಚ್ಚಿಸಿಕೊಳ್ಳಬಹುದು. ಕೋಳಿ ಸಾಕಣೆಯು ಆಸಕ್ತ ಪ್ರಗತಿಪರ ಕೃಷಿಕರಿಗೆ ಬಹಳ ಉತ್ತಮ ಉಪಕಸುಬು ಎನ್ನುವುದು ಶೆಟ್ಟರ ಕಿವಿಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT