ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವಿಗೆ ಅಮೆರಿಕದಲ್ಲಿ ಚಿಕಿತ್ಸೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

ಪಂಜಾಬ್‌ನ ಎಡಗೈ ಬ್ಯಾಟ್ಸ್‌ಮನ್ ಕಳೆದ ತಿಂಗಳೇ ಚಿಕಿತ್ಸೆಗೆಗಾಗಿ ಅಮೆರಿಕಕ್ಕೆ ಪಯಣಿಸಿದ್ದರು. `ಯುವಿ~ ಶ್ವಾಸಕೋಶದಲ್ಲಿ ಗೆಡ್ಡೆ ಇರುವುದು ಕೆಲವು ತಿಂಗಳ ಹಿಂದೆ ಪತ್ತೆಯಾಗಿತ್ತು. ಆದರೆ ಅದು ಕ್ಯಾನ್ಸರ್ ಅಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದರು.

ಮತ್ತೆ ಪರೀಕ್ಷೆ ನಡೆಸಿದಾಗ 30ರ ಹರೆಯದ ಆಟಗಾರನಿಗೆ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಇದೀಗ ಅವರು ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಿಮೋಥೆರಪಿಗೆ ಒಳಗಾಗಿದ್ದಾರೆ. ಯುವರಾಜ್ ಕ್ಯಾನ್ಸರ್‌ನಿಂದ ಪೂರ್ಣ ಗುಣಮುಖರಾಗಿ ಮೇ ತಿಂಗಳ ವೇಳೆ ಕ್ರಿಕೆಟ್ ಆಡಲು ಸಾಧ್ಯ ಎಂಬ ವಿಶ್ವಾಸವನ್ನು ಅವರ ಫಿಸಿಯೋ ಡಾ. ಜತಿನ್ ಚೌಧರಿ ವ್ಯಕ್ತಪಡಿಸಿದ್ದಾರೆ.

`ಯುವಿ~ ತಾಯಿ ಶಬ್ನಮ್ ಸಿಂಗ್ ಮತ್ತು ತಂದೆ ಯೋಗರಾಜ್ ಸಿಂಗ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. `ಅದೊಂದು ಅಪರೂಪದ ಗೆಡ್ಡೆ. ಆದರೆ ಕ್ಯಾನ್ಸರ್ ತಗುಲಿರುವುದು ದೃಢಪಟ್ಟಿದೆ. ಈಗ ನೀಡುತ್ತಿರುವ ಚಿಕಿತ್ಸೆಯಲ್ಲಿ ಇದು ಗುಣವಾಗಬಹುದೇ ಅಥವಾ ಕಿಮೋಥೆರಪಿ ಅಗತ್ಯವಿದೆಯೇ ಎಂಬುದರ ಬಗ್ಗೆ ಗೊಂದಲವಿತ್ತು. ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಒಯ್ಯುವ ಅಪಧಮನಿಯ ಸನಿಹದಲ್ಲೇ ಗೆಡ್ಡೆ ಇದೆ. ಈ ಕಾರಣ ಕಿಮೋಥೆರಪಿ ಕೈಗೊಳ್ಳಲು ವೈದ್ಯರು ತೀರ್ಮಾನಿಸಿದರು~ ಎಂದು ಚೌಧರಿ ಹೇಳಿದರು.


`ಯುವರಾಜ್ ಜನವರಿ 26 ರಂದು ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಮಾರ್ಚ್ ಕೊನೆಯವರೆಗೆ ಚಿಕಿತ್ಸೆ ಮುಂದುವರಿಯಲಿದೆ. ಆ ಬಳಿಕ ಸಿಟಿ ಸ್ಕ್ಯಾನ್‌ಗೆ ಒಳಗಾಗುವರು. ಆ ವೇಳೆಗೆ ಕ್ಯಾನ್ಸರ್‌ನಿಂದ ಪೂರ್ಣ ಗುಣಮುಖರಾದರೆ ಏಪ್ರಿಲ್‌ನಲ್ಲಿ ಮರುಚೈತನ್ಯ ಶಿಬಿರದಲ್ಲಿ ಪಾಲ್ಗೊಳ್ಳುವರು. ಮೇ ತಿಂಗಳ ವೇಳೆಗೆ ಫಿಟ್‌ನೆಸ್ ಮರಳಿ ಪಡೆಯುವ ಸಾಧ್ಯತೆಯಿದೆ~ ಎಂದರು.
 
`ಯುವರಾಜ್ ಮೊದಲ ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಗಾದಾಗ ದೊರೆತ ವರದಿ ಅವರ ಕಾರಿನಿಂದ ಕಳವಾಗಿತ್ತು. ಭಾರತದ ಆಸ್ಪತ್ರೆಯೊಂದರಲ್ಲಿ ನಡೆಸಿದ್ದ ಎರಡನೇ ಪರೀಕ್ಷೆಯ ವರದಿ ಸ್ಪಷ್ಟ ಕಾರಣ ನೀಡಲು ವಿಫಲವಾಗಿತ್ತು. ಆ ಬಳಿಕ ರಷ್ಯಾದ ವೈದ್ಯರೊಬ್ಬರು ನಡೆಸಿದ ಪರೀಕ್ಷೆಯಲ್ಲಿ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಅಮೆರಿಕದ ವೈದ್ಯರ ಜೊತೆ ಚರ್ಚಿಸಿ ಕಿಮೋಥೆರಪಿ ಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು~ ಎಂದು ವಿವರಿಸಿದರು.

`ಕ್ಯಾನ್ಸರ್ ಇರುವುದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಿರುವುದು ಅದೃಷ್ಟ ಎನ್ನಬೇಕು. ಆರಂಭದಲ್ಲಿ ಆರು ಹಂತದ ಕಿಮೋಥೆರಪಿ ಅಗತ್ಯ ಎಂದು ಭಾವಿಸಲಾಗಿತ್ತು. ಆದರೆ ಆಯುರ್ವೇದಿಕ್ ಚಿಕಿತ್ಸೆಯ ಜೊತೆ ಮೂರು ಹಂತದ ಕಿಮೋಥೆರಪಿಯಲ್ಲೇ ಶೇ 100 ರಷ್ಟು ಗುಣಮುಖರಾಗಲು ಸಾಧ್ಯ~ ಎಂದು ಚೌಧರಿ ತಿಳಿಸಿದರು.

`ಯುವರಾಜ್ ಮಾನಸಿಕವಾಗಿ ಸಾಕಷ್ಟು ಬಲಿಷ್ಠರಾಗಿದ್ದಾರೆ~ ಎಂದ ಅವರು, `ಕುಟುಂಬ ಸದಸ್ಯರು ಹಾಗೂ ಗೆಳೆಯರು ಅವರ ಜೊತೆಗಿದ್ದಾರೆ. ಸಾಧ್ಯವಾದಷ್ಟು ಬೇಗ ಅಂಗಳಕ್ಕಿಳಿಯುವ ವಿಶ್ವಾಸದಲ್ಲಿ ಯುವಿ ಇದ್ದಾರೆ~ ಎಂದು ನುಡಿದರು.

ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಯುವರಾಜ್ `ಟೂರ್ನಿಯ ಶ್ರೇಷ್ಠ ಆಟಗಾರ~ ಎನಿಸಿದ್ದರು. 362 ರನ್ ಕಲೆಹಾಕುವ ಜೊತೆಗೆ 15 ವಿಕೆಟ್ ಪಡೆದಿದ್ದರು. ನಾಲ್ಕು ಸಲ `ಪಂದ್ಯಶ್ರೇಷ್ಠ~ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಬಿಸಿಸಿಐಯಿಂದ ಎಲ್ಲ ನೆರವು:
ಯುವರಾಜ್ ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, `ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು~ ಎಂದರು. `ಯುವರಾಜ್ ಅನಾರೋಗ್ಯಕ್ಕೆ ಒಳಗಾಗಿರುವುದು ಆತಂಕ ಉಂಟುಮಾಡಿದೆ. ಶೀಘ್ರದಲ್ಲೇ ಗುಣಮುಖರಾಗಲಿ~ ಎಂದು ಶುಕ್ಲಾ ಹಾರೈಸಿದ್ದಾರೆ.

ಕ್ರಿಕೆಟಿಗ ಎಸ್. ಶ್ರೀಶಾಂತ್, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒಳಗೊಂಡಂತೆ ಕ್ರೀಡಾ ತಾರೆಯರು ಹಾಗೂ ರಾಜಕಾರಣಿಗಳು `ಯುವಿ~ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.

`ಯುವರಾಜ್ ಸಿಂಗ್ ಅನಾರೋಗ್ಯದ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಈಗ ನಾನು ಅವರ ಸಂಪರ್ಕದಲ್ಲಿಲ್ಲ.  ಆದರೆ ಅವರೊಬ್ಬ ಅತ್ಯುತ್ತಮಆಟಗಾರ. ಪಂದ್ಯದ ದಿಕ್ಕು ಬದಲಿಸಬಲ್ಲ ಸಾಮರ್ಥ್ಯ ಅವರ ಬಳಿ ಇದೆ~  
            -ಎಂ.ಎಸ್.ದೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT