ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಪದಾರ್ಪಣೆಗೆ ಮಾನಸಿಕವಾಗಿ ಸಿದ್ಧ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ):  ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಮಾನಸಿಕವಾಗಿ ಸಿದ್ಧವಾಗಿರುವುದಾಗಿ ಭಾರತ ತಂಡದ ಭರವಸೆಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ನುಡಿದಿದ್ದಾರೆ.

`ಹೌದು, ಟೆಸ್ಟ್ ಆಡಲು ನಾನೀಗ ಸಿದ್ಧವಾಗಿದ್ದೇನೆ. ಪದಾರ್ಪಣೆ ಮಾಡಲು ಶೇಕಡಾ 100ರಷ್ಟು ತಯಾರಿ ನಡೆಸಿದ್ದೇನೆ. ಕಣಕ್ಕಿಳಿಯಲು ನನಗೆ ಸ್ಥಾನ ಸಿಗುತ್ತದೆಯೇ ಇಲ್ಲವೋ ಅದು ಬೇರೆ ಮಾತು~ ಎಂದು ಮುಂಬೈನ ಯುವ ಆಟಗಾರ ರೋಹಿತ್ ಭಾನುವಾರ ಅಭ್ಯಾಸದ ಬಳಿಕ ಹೇಳಿದರು.

ಟೆಸ್ಟ್‌ನಲ್ಲಿ ವೈಫಲ್ಯ ಕಾಣುತ್ತಿರುವ ವಿರಾಟ್ ಕೊಹ್ಲಿ ಬದಲಿಗೆ ಮುಂದಿನ ಪಂದ್ಯದಲ್ಲಿ ರೋಹಿತ್ ಸ್ಥಾನ ಪಡೆಯುವ ನಿರೀಕ್ಷೆಯಿದೆ. ವಿದೇಶಿ ಪಿಚ್‌ಗಳಲ್ಲಿ ಕೊಹ್ಲಿ ಏಳು ಇನಿಂಗ್ಸ್‌ಗಳಿಂದ ಕೇವಲ 107 ರನ್ ಕಲೆ ಹಾಕಿದ್ದಾರೆ.

`ಪದಾರ್ಪಣೆ ಮಾತ್ರವಲ್ಲ; ತಂಡದ ಅಗತ್ಯಕ್ಕೆ ಸ್ಪಂದಿಸಲು ನಾನು ಸದಾ ಸಿದ್ಧ. ಏಕೆಂದರೆ ಯಾವುದೇ ಸಂದರ್ಭದಲ್ಲಿ ಯಾರಾದರೂ ಗಾಯಕ್ಕೆ ಒಳಗಾಗಬಹುದು. ಅವರ ಬದಲಿಗೆ ಕಣಕ್ಕಿಳಿಯಲು ಸಿದ್ಧರಾಗಿರಬೇಕು. ಹಾಗಂತ ನನ್ನ ಅಭ್ಯಾಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ~ ಎಂದು ಅವರು ವಿವರಿಸಿದ್ದಾರೆ.

ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಕ್ರಮವಾಗಿ 11 ಹಾಗೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಹಾಗಾಗಿ ಅವರೀಗ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿದ್ದು, ಇವರಿಬ್ಬರಲ್ಲಿ ಯಾರು ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.

`ಎರಡನೇ ಟೆಸ್ಟ್‌ನಲ್ಲಿ ಯಾರು ಆಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸೋಮವಾರ ಪಿಚ್ ಪರಿಶೀಲನೆ ಬಳಿಕ ತಂಡದ ಆಡಳಿತ ಒಂದು ನಿರ್ಧಾರಕ್ಕೆ ಬರಬಹುದು. ಹಾಗೇ, ನಾನು ಆಡುತ್ತೇನೆಯೋ ಇಲ್ಲವೋ ಎಂಬುದು ಸಂಜೆ ವೇಳೆಗೆ ಗೊತ್ತಾಗಲಿದೆ~ ಎಂದು ರೋಹಿತ್ ತಿಳಿಸಿದ್ದಾರೆ.

ಆದರೆ ಮೊದಲ ಟೆಸ್ಟ್‌ನ ಸೋಲಿನಿಂದ ತಂಡ ಕಳೆಗುಂದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. `ಮೆಲ್ಬರ್ನ್ ಪಂದ್ಯದ ಸೋಲಿನಿಂದ ತಂಡ ಆಘಾತಕ್ಕೊಳಗಾಗಿಲ್ಲ. ಆ ಪಂದ್ಯದ ಬಳಿಕ ಸಿಕ್ಕ ವಿಶ್ರಾಂತಿ ಸಮಯವನ್ನು ಖುಷಿಯಿಂದ ಕಳೆದಿದ್ದೇವೆ. ಹಿಂದೆ ಏನಾಯಿತು ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಅದರ ಬದಲಾಗಿ ಈಗ ಏನು ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ~ ಎಂದಿದ್ದಾರೆ.

`ಆಸ್ಟ್ರೇಲಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ನಮ್ಮ ಬ್ಯಾಟ್ಸ್‌ಮನ್‌ಗಳು ಅದರಿಂದ ಆಘಾತಕ್ಕೊಳಗಾಗಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಚೆನ್ನಾಗಿಯೇ ಆಡ್ದ್ದಿದರು. ಎರಡನೇ ಇನಿಂಗ್ಸ್‌ನಲ್ಲಿ ಎಡವಿದರು ಅಷ್ಟೆ~ ಎಂದು ರೋಹಿತ್ ನುಡಿದಿದ್ದಾರೆ.

ದ್ರಾವಿಡ್ ಕಠಿಣ ಅಭ್ಯಾಸ: ಭಾನುವಾರ ಅಭ್ಯಾಸದ ವೇಳೆ ರಾಹುಲ್ ದ್ರಾವಿಡ್ ತಮ್ಮ ಬ್ಯಾಟಿಂಗ್ ಶೈಲಿಯ ಕೆಲವೊಂದು ತಾಂತ್ರಿಕ ಲೋಪಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರು. ಅದಕ್ಕಾಗಿ ಅವರು ಕೋಚ್ ಡಂಕನ್ ಫ್ಲೆಚರ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆವೋರ್ ಪೆನ್ನಿ ಸಹಾಯ ಕೋರಿದರು.

ಮೆಲ್ಬರ್ನ್ ಟೆಸ್ಟ್‌ನಲ್ಲಿ ದ್ರಾವಿಡ್ ಮೂರು ಬಾರಿ ಬೌಲ್ಡ್ ಆಗಿದ್ದರು. ಅದರಲ್ಲಿ ಒಮ್ಮೆ ನೋಬಾಲ್ ಆಗಿದ್ದ ಕಾರಣ ಬಚಾವಾಗಿದ್ದರು. ಇದಕ್ಕೆ ಅವರು ಕಾರಣ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಆಫ್ ಸೈಡ್‌ನತ್ತ ರಕ್ಷಣಾತ್ಮಕವಾಗಿ ಆಡುವಾಗ ಬ್ಯಾಟ್ ಹಾಗೂ ಪ್ಯಾಡ್ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂಬುದು ಅವರ ಆತಂಕ. ಇದಕ್ಕೆ ಟ್ರೆವೋರ್ ನೀಡಿದ ಸಲಹೆ ಎಂದರೆ ಡ್ರೈವ್ ಮಾಡುವಾಗ ದ್ರಾವಿಡ್ ಅಗತ್ಯಕ್ಕೆ ತಕ್ಕಂತೆ ಬಾಗುತ್ತಿಲ್ಲ ಎಂಬುದು. ದೇಹ ಮತ್ತು ಭುಜ ಒಟ್ಟಿಗೆ ಚಲಿಸಬೇಕು ಎಂಬುದು ಫ್ಲೆಚರ್ ನೀಡಿದ ಸಲಹೆ.

ಇನ್ನೊಂದೆಡೆ ಸೆಹ್ವಾಗ್ ತಮಾಷೆಯ ನುಡಿಗಳೊಂದಿಗೆ ಅಭ್ಯಾಸ ನಡೆಸಿದರು. `ಇವತ್ತು ಚೆಂಡು ಏಕೋ ಸರಿಯಾಗಿ ಕಾಣುತ್ತಿಲ್ಲ~ ಎಂದರು. ತಕ್ಷಣವೇ ` ಓ ನಿನ್ನೆ ರಾತ್ರಿಯ ಮತ್ತು ಇದಕ್ಕೆ ಕಾರಣ ಇರಬಹುದು~ ಎಂದು ನಗು ಬೀರುತ್ತಾ ಚೆಂಡನ್ನು ಬಾರಿಸಲು ಶುರು ಮಾಡಿದರು.

ಇತ್ತ ಸಚಿನ್ ತೆಂಡೂಲ್ಕರ್ ಮಾತ್ರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಉದ್ಯೋಗಿ ರಾಘು ನೆರವಿನಿಂದ ಅಭ್ಯಾಸದಲ್ಲಿ ತೊಡಗಿದ್ದರು. ರಾಘು ಬ್ಯಾಟಿಂಗ್ ಚಾಂಪಿಯನ್ ತೆಂಡೂಲ್ಕರ್‌ಗೆ ಚೆಂಡನ್ನು ಎಸೆದರು. ಆಯ್ಕೆ ಸಮಿತಿ ಸದಸ್ಯರಾದ ನರೇಂದ್ರ ಹಿರ್ವಾನಿ ಹಾಗೂ ಮೋಹಿಂದರ್ ಅಮರ್‌ನಾಥ್ ಅಭ್ಯಾಸ ವೀಕ್ಷಿಸಿದರು.

ಪ್ರಧಾನಿ ಜೊತೆ ಕಾಫಿ ಸವಿದರು: ಅಭ್ಯಾಸದ ಬಳಿಕ ಭಾನುವಾರ ಮಧ್ಯಾಹ್ನ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲಾರ್ಡ್ ಅವರನ್ನು ಭೇಟಿ ಮಾಡಿದ್ದರು. ಉಭಯ ಕುಶಲೋಪರಿ ಬಳಿಕ ಕಾಫಿ ಸವಿದರು. ಆಸ್ಟ್ರೇಲಿಯಾ ಆಟಗಾರರು ಕೂಡ ಈ ಸಂದರ್ಭದಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT