ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಮಾತುಕತೆಗೆ ಶಶಾಂಕ್ ಮನೋಹರ್ ಪ್ರವೇಶ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಹಾಗೂ ಐಪಿಎಲ್ ಸಂಬಂಧ ಬಿಸಿಸಿಐ ಮತ್ತು ಸಹಾರಾ ಸಮೂಹದ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಮಂಡಳಿಯ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಪ್ರವೇಶವಾಗಿದೆ.

ಈ ಕಾರಣ ಬಿಸಿಸಿಐ ಹಾಗೂ ಸಹಾರಾ ನಡುವೆ ಮತ್ತೊಂದು ಸುತ್ತಿನ ಸಮಾಲೋಚನೆ ಆರಂಭವಾಗಿದೆ. ಆದರೆ ಮಂಗಳವಾರ ಉಭಯ ಬಣಗಳು ಪ್ರತ್ಯೇಕ ಹೋಟೆಲ್‌ಗಳಲ್ಲಿ ಸಭೆ ನಡೆಸಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದವು.

ಐಪಿಎಲ್ ಐದನೇ ಅವತರಣಿಕೆಯಲ್ಲಿ ವಿದೇಶದ ಆರು ಮಂದಿ ಆಟಗಾರರನ್ನು ಆಡಿಸಲು ಅವಕಾಶ ನೀಡುವಂತೆ ಸಹಾರಾ ಸಮೂಹ ಮುಂದಿಟ್ಟಿದ್ದ ಬೇಡಿಕೆಯನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ತಿರಸ್ಕರಿಸಿತ್ತು. ಅಷ್ಟು ಮಾತ್ರವಲ್ಲದೇ, ಕಳೆದ ಐಪಿಎಲ್‌ನಲ್ಲಿ ಪಂದ್ಯಗಳನ್ನು 94ರಿಂದ 74ಕ್ಕೆ ಇಳಿಸಿದ ಕಾರಣ ಬ್ಯಾಂಕ್ ಖಾತರಿ ಹಣದಲ್ಲಿ ಕಡಿತಗೊಳಿಸುವಂತೆ ಕೋರಿದ್ದರು. ಅದಕ್ಕೂ ಮಂಡಳಿ ಒಪ್ಪಿಗೆ ನೀಡಿಲ್ಲ.

ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಶಶಾಂಕ್ ಕೂಡ ಉಪಸ್ಥಿತರಿದ್ದದ್ದು ಗಮನ ಸೆಳೆಯಿತು. ಪುಣೆ ವಾರಿಯರ್ಸ್ ತಂಡವನ್ನು ಸಹಾರಾ ಸಮೂಹ 1702 ಕೋಟಿ ರೂ. ನೀಡಿ ಖರೀದಿಸಿದಾಗ ಮಂಡಳಿ ಅಧ್ಯಕ್ಷರಾಗಿದ್ದವರು ಶಶಾಂಕ್.

ಬಿಸಿಸಿಐ ತಾಂತ್ರಿಕ ಸಭೆ: ಮಾಜಿ ನಾಯಕ ಸೌರವ್ ಗಂಗೂಲಿ ಸಾರಥ್ಯದ ಬಿಸಿಸಿಐ ತಾಂತ್ರಿಕ ಸಭೆ ಫೆಬ್ರುವರಿ 17ರಂದು ಇಲ್ಲಿ ಸಭೆ ಸೇರಲಿದ್ದು, ಐಸಿಸಿ ಶಿಫಾರಸು ಮಾಡಿರುವ ನಿಯಮಗಳನ್ನು ಜಾರಿಗೆ ತರುವ ಸಂಬಂಧ ಸಮಾಲೋಚನೆ ನಡೆಸಲಿದೆ.

ಕೆಲ ನಿಯಮಗಳನ್ನು ದೇಶಿ ಏಕದಿನ ಅಂತರ ವಲಯ ಲೀಗ್ ಟೂರ್ನಿಗಳಲ್ಲಿ ಆಳವಡಿಸುವ ಬಗ್ಗೆ ಚರ್ಚೆ ನಡೆಸಲಿದೆ. ಈ ವಿಷಯವನ್ನು ಬಿಸಿಸಿಐ ವಿಶೇಷ ಅಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.

`ಶಿಫಾರಸು ಮಾಡಿರುವ ನಿಯಮಗಳನ್ನು ದೇಶಿ ಕ್ರಿಕೆಟ್‌ನಲ್ಲಿ ಪ್ರಯೋಗ ಮಾಡಿ ನೋಡಬೇಕು~ ಎಂದು ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿದೆ. ಅಷ್ಟು ಮಾತ್ರವಲ್ಲದೇ, ಈ ಸಂಬಂಧ ಪ್ರತಿಕ್ರಿಯೆ ನೀಡಬೇಕು ಎಂದು ಅದು ಹೇಳಿದೆ.

`ಅದರಲ್ಲಿ ಪ್ರಮುಖ ನಿಯಮವೆಂದರೆ ಒಂದು ಓವರ್‌ನಲ್ಲಿ ಎರಡು ಬೌನ್ಸರ್ ಹಾಕಲು ಅವಕಾಶ ನೀಡುವುದು. ಈ ಹಿಂದೆ ಕೇವಲ ಒಂದು ಬೌನ್ಸರ್ ಹಾಕಲು ಅನುಮತಿ ಇತ್ತು. ಹಾಗೇ, ಬೌಲಿಂಗ್ ಆರಂಭಿಸುವಾಗ ಪಿಚ್‌ನ ಎರಡು ಬದಿಯಿಂದ ಹೊಸ ಚೆಂಡು ಬಳಸುವುದು, ರನ್ನರ್ ಸಹಾಯವಿಲ್ಲದೇ ಆಡುವುದು ಇದರಲ್ಲಿ ಸೇರಿವೆ. ಆದರೆ ಕೊನೆಯ ಎರಡು ನಿಯಮಗಳನ್ನು ಈಗಾಗಲೇ ಅಳವಡಿಸಲಾಗಿದೆ~ ಎಂದು ರತ್ನಾಕರ್ ವಿವರಿಸಿದರು.

`ಇದಲ್ಲದೇ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ತೀರ್ಮಾನಗಳ ಬಗ್ಗೆಯೂ ತಾಂತ್ರಿಕ ಸಮಿತಿ ಚರ್ಚಿಸಲಿದೆ. ಮುಂದಿನ ರಣಜಿ ಋತುವಿನಿಂದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಸಮಿತಿ ನಿರ್ಧರಿಸಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT