ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸಿಂಹಳೀಯರೂ ಮೆಚ್ಚಿದ ಮಹಿ ಆಟ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಪಿಟಿಐ): ಪಂದ್ಯವನ್ನು ಅದ್ಭುತವಾಗಿ ಕೊನೆಗೊಳಿಸುವ ಕಲೆ ಮಹೇಂದ್ರ ಸಿಂಗ್ ದೋನಿಗೆ ಗೊತ್ತು. ಶ್ರೀಲಂಕಾ ಎದುರು ಮಂಗಳವಾರ ಗೆಲುವು ಸಾಧ್ಯವಾಗದಿದ್ದರೂ ಭಾರತ ತಂಡದ ನಾಯಕ ಒತ್ತಡವನ್ನು ನಿಭಾಯಿಸಿದ ರೀತಿಯಂತೂ ಮೆಚ್ಚುಗೆಗೆ ಅರ್ಹ.

ಆದ್ದರಿಂದಲೇ ಸಿಂಹಳೀಯರು ಕೂಡ `ಮಹಿ~ ಆಟವನ್ನು ಕೊಂಡಾಡಿದ್ದಾರೆ. ಕೊನೆಯ ಕೆಲವು ಓವರುಗಳಲ್ಲಿ ಸಂಕಷ್ಟ ಎದುರಾದಾಗ ಅದನ್ನು ಸಮರ್ಥವಾಗಿ ಎದುರಿಸುವುದು ದೋನಿಗೆ ಚೆನ್ನಾಗಿ ಗೊತ್ತು ಎನ್ನುವುದು ಲಂಕಾ ತಂಡದ ನಾಯಕ ಮಾಹೇಲ ಜಯವರ್ಧನೆ ಹತ್ತಿರದಿಂದ ಕಂಡು ಅರಿತ ಮಾತು. ಅವರ ಈ ಅಭಿಪ್ರಾಯಕ್ಕೆ ಅಂಕಿ-ಅಂಶಗಳ ಬಲವೂ ಇದೆ.

ತಮ್ಮ ಕ್ರಿಕೆಟ್ ಜೀವನದಲ್ಲಿ ಆಡಿದ ಪ್ರತಿ ನಾಲ್ಕರಲ್ಲಿ ಒಂದು ಪಂದ್ಯದಲ್ಲಿ ಔಟಾಗದೆ ಉಳಿದಿದ್ದಾರೆ ಎನ್ನುವ ಲೆಕ್ಕಾಚಾರ ಎದುರಿಗೇ ಇದೆ. ಇನ್ನೂರು ಏಕದಿನ ಪಂದ್ಯಗಳಲ್ಲಿ ಅವರು ಐವತ್ತು ಬಾರಿ ಕೊನೆಯವರೆಗೆ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಹೀಗೆ ಔಟಾಗದೇ ಉಳಿದ ಪಂದ್ಯಗಳಲ್ಲಿ ಗೆಲುವಿನ ಗುರಿಯನ್ನು ಬೆನ್ನಟ್ಟಿ ಮುಟ್ಟಿದ ರೋಚಕ ಕ್ಷಣಗಳ ಸಂಖ್ಯೆಯೂ ಹೆಚ್ಚು.

ಭಾರತ ತಂಡವು ಯಶಸ್ವಿಯಾಗಿ ಗೆಲುವಿನ ಗುರಿ ಮುಟ್ಟಿದ 49 ಪಂದ್ಯಗಳಲ್ಲಿ ಮಹಿ ಆಡಿದ್ದು, ಅವುಗಳಲ್ಲಿ ಮೂವತ್ತು ಬಾರಿ ಅಜೇಯ ಆಟವಾಡಿ ಗಮನ ಸೆಳೆದಿದ್ದಾರೆ. ಇಂಥ ಪಂದ್ಯಗಳಲ್ಲಿ ಅವರು 104.89ರ ಸರಾಸರಿಯಲ್ಲಿ ರನ್ ಗಳಿಸಿದ್ದು ಕೂಡ ವಿಶೇಷ. ಈ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾದ ಮೈಕಲ್ ಬೆವನ್, ದಕ್ಷಿಣ ಆಫ್ರಿಕಾದ ಲಾನ್ಸ್ ಕ್ಲೂಸ್ನರ್, ಪಾಕಿಸ್ತಾನದ ಅಬ್ದುಲ್ ರಜಾಕ್ ಹಾಗೂ ದಕ್ಷಿಣ ಅಫ್ರಿಕಾದ ಜಾಂಟಿ ರೋಡ್ಸ್ ಅವರಿಗಿಂತ ಉತ್ತಮ ದಾಖಲೆ ಹೊಂದಿದ್ದಾರೆ ದೋನಿ.

`ಎದುರಾಳಿ ತಂಡದವರು ಸ್ವಲ್ಪ ಲಯ ತಪ್ಪಿದರೂ ಅಪಾಯ ತಂದೊಡ್ಡುವಂಥ ಬ್ಯಾಟ್ಸ್‌ಮನ್ ಆಗಿದ್ದಾರೆ ದೋನಿ. ಶಾಂತಚಿತ್ತರಾಗಿ ಆಡುತ್ತಾರೆ. ಅದೇ ಅವರನ್ನು ಬಲವಾಗಿಸಿರುವ ಗುಣ. ಸವಾಲು ಎದುರಿಗಿದ್ದಾಗ ತಮ್ಮ ತಂಡದ ಸಂಕಷ್ಟವನ್ನು ದೂರ ಮಾಡುವಂಥ ಶಕ್ತಿಯನ್ನೂ ಹೊಂದಿದ್ದಾರೆ~ ಎಂದು ಜಯವರ್ಧನೆ ಹೇಳಿದ ಮಾತು ಅಕ್ಷರಶಃ ಸತ್ಯ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಾಗದು.

ಇನ್ನೂರು ಏಕದಿನ ಪಂದ್ಯಗಳ ಸರದಾರ ಆಗಿರುವ ರಾಂಚಿಯ ಕ್ರಿಕೆಟಿಗ ಎದುರಾಳಿಗಳಲ್ಲಿ ಭಯ ಹುಟ್ಟಿಸಿರುವ ವಿಕೆಟ್ ಕೀಪರ್ ಕೂಡ ಹೌದು. ಕ್ಷೇತ್ರರಕ್ಷಣೆಗೆ ಬಲ ನೀಡಿರುವ ಅವರು ಒಟ್ಟಾರೆ 190 ಕ್ಯಾಚ್ ಪಡೆದಿದ್ದು 63 ರನ್‌ಔಟ್‌ಗಳಿಗೆ ಕಾರಣರಾಗಿದ್ದಾರೆ. ಇದು ಕೂಡ ತಂಡಕ್ಕೆ ನೀಡಿರುವ ಮಹತ್ವದ ಕೊಡುಗೆ.
 
ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವಕ್ಕೆ ಅಗತ್ಯವಾದ ಸಹನೆ ಅವರನ್ನು ವಿಶಿಷ್ಟವಾಗಿಸುತ್ತದೆ. ಅಡಿಲೇಡ್ ಓವಲ್ ಪಂದ್ಯದಲ್ಲಿ ಅವರು ಭಾರಿ ಒತ್ತಡದ ನಡುವೆಯೂ ತೋರಿದ ಸಮಯ ಪ್ರಜ್ಞೆಯು ಲಂಕಾ ತಂಡದ ನಾಯಕನಿಗೆ ಇಷ್ಟವೆನಿಸಿದೆ.

ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೊರತೆ ಆಗದಂತೆ ಆಡುವ ಪ್ರಯತ್ನ ನಿರಂತರ. ಸಾಮಾನ್ಯವಾಗಿ ಅವರು ಕ್ರೀಸ್‌ಗೆ ಬರುವ ಹೊತ್ತಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿರುತ್ತದೆ. ಆದ್ದರಿಂದ ವಿಕೆಟ್ ಕಾಯ್ದುಕೊಂಡು ತಂಡವನ್ನು ಗುರಿಯತ್ತ ಸಾಗಿಸಬೇಕು. ಮಂಗಳವಾರದ ಪಂದ್ಯದಲ್ಲಿಯೂ ಅವರ ಉದ್ದೇಶ ಅದೇ ಆಗಿತ್ತು.
 
ಆದರೆ ಇನ್ನೊಂದು ರನ್ ಬರಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಮೂರು ರನ್ ಗಳಿಸುವಂಥ ದಿಟ್ಟತನ ಪ್ರದರ್ಶಿಸಿದ್ದು ವಿಶೇಷ. ಪಂದ್ಯದಲ್ಲಿ ಅಷ್ಟೊಂದು ನಿಕಟ ಪೈಪೋಟಿ ಸಾಧ್ಯವಾಗುವಂತೆ ಮಾಡಿದ್ದೇ ದೋನಿ. ಇದೇ ಕಾರಣಕ್ಕಾಗಿ ಜಯವರ್ಧನೆ `ಅತ್ಯಂತ ರೋಚಕವಾದ ಪಂದ್ಯಗಳಲ್ಲಿ ಇದೂ ಒಂದು~ ಎಂದು ಹೇಳಿದ್ದಾರೆ.

ಯುವರಾಜ್ ಸಿಂಗ್ ಕೂಡ ಹೀಗೆಯೇ ಆಡುವಂಥ ಬ್ಯಾಟ್ಸ್‌ಮನ್. ಆದ್ದರಿಂದ `ಮಹಿ~ ಹಾಗೂ `ಯುವಿ~ ಸ್ವಲ್ಪ ಹೆಚ್ಚು ಕಡಿಮೆ ಸಮನಾಗಿ ತೂಗುತ್ತಾರೆ. ಇವರಿಬ್ಬರ ಸ್ಟ್ರೈಕ್ ರೇಟ್ ಕ್ರಮವಾಗಿ 88.32 ಹಾಗೂ 87.60 ಆಗಿದೆ. ಆದರೆ ಸರಾಸರಿ ರನ್ ಗಳಿಕೆಯಲ್ಲಿ ಯುವರಾಜ್(37.62)ಗಿಂತ ದೋನಿ (51.41) ಎತ್ತರದಲ್ಲಿ ನಿಲ್ಲುತ್ತಾರೆ. ವಿಶ್ವ ಮಟ್ಟದ ದಾಖಲೆ ಪಟ್ಟಿಯನ್ನು ಇಟ್ಟುಕೊಂಡು ತೂಗಿ ನೋಡಿದಾಗ ಬೆವನ್ (53.58) ಅವರಿಗಿಂತ ಭಾರತದ ಬ್ಯಾಟ್ಸ್‌ಮನ್‌ಗಳು ಹಿಂದೆ.

`ಕೊನೆಯ ಓವರುಗಳಲ್ಲಿ ದೋನಿಯಂತೆ ಆಡುವುದು ಕಷ್ಟ. ರನ್ ಗತಿ ಕುಸಿಯದಂತೆ ನೋಡಿಕೊಳ್ಳುತ್ತಾರೆ~ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಕೂಡ ಹೇಳಿದ್ದಾರೆ. ಆದರೆ ದೋನಿ ಮಾತ್ರ ತಮಗಿಂತ ಯುವರಾಜ್ ಹೆಚ್ಚು ಪ್ರಭಾವಿ ಎನ್ನುತ್ತಾರೆ. `ಆರನೇ ಕ್ರಮಾಂಕದಲ್ಲಿ ಆಡುವುದು ದೊಡ್ಡ ಸವಾಲು. ಯುವಿ ಅನೇಕ ಬಾರಿ ಯಶಸ್ವಿ ಎನಿಸಿದ್ದಾರೆ~ ಎಂದು ಸಹ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT