ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸೆಹ್ವಾಗ್, ಜಹೀರ್ ಹಿಂತಿರುಗುವ ನಿರೀಕ್ಷೆ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೈಹಿಕ ಪರೀಕ್ಷೆಗೆ ಒಳಗಾಗಿರುವ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ವೇಗದ ಬೌಲರ್‌ಗಳಾದ ಜಹೀರ್ ಖಾನ್ ಹಾಗೂ ಉಮೇಶ್ ಯಾದವ್ ಶ್ರೀಲಂಕಾ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡಕ್ಕೆ ಹಿಂತಿರುಗುವ ನಿರೀಕ್ಷೆ ಇದೆ.

ಫಿಟ್‌ನೆಸ್ ಸಮಸ್ಯೆ ಕಾರಣ ಈ ಆಟಗಾರರು   ಮಾರ್ಚ್‌ನಲ್ಲಿ ಢಾಕಾದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಆ ಟೂರ್ನಿಯಲ್ಲಿ ಆಡಿದ್ದ ಸಚಿನ್ ತೆಂಡೂಲ್ಕರ್ ಈ ಸರಣಿಗೆ ಲಭ್ಯರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಬುಧವಾರ ಇಲ್ಲಿ ಸಭೆ ಸೇರಲಿದ್ದು, 14 ಮಂದಿ ಆಟಗಾರರ ತಂಡವನ್ನು ಆಯ್ಕೆ ಮಾಡಲಿದ್ದಾರೆ.

ರಾಜ್ಯಸಭೆ ಸದಸ್ಯರೂ ಆಗಿರುವ ಸಚಿನ್ ಆಡಲು ಒಪ್ಪದಿದ್ದರೆ ಮೂರನೇ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅಜಿಂಕ್ಯ ರಹಾನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಸೆಹ್ವಾಗ್ ಜೊತೆ ಗೌತಮ್ ಗಂಭೀರ್ ಇನಿಂಗ್ಸ್ ಆರಂಭಿಸುತ್ತಾರೆ. ವೀರೂ ತಂಡಕ್ಕೆ ಹಿಂತಿರುಗಿದರೆ ಏಷ್ಯಾಕಪ್‌ನಲ್ಲಿ ಆಡಿದ್ದ ಮನೋಜ್ ತಿವಾರಿ ಜಾಗ ತೆರವು ಮಾಡಬೇಕಾಗುತ್ತದೆ.

ಆದರೆ ತುಂಬಾ ದಿನಗಳಿಂದ ಹೊರಗುಳಿದಿರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಮತ್ತೆ ಪರಿಗಣಿಸುತ್ತಾರೆಯೇ ಎಂಬುದು ಸದ್ಯದ ಪ್ರಮುಖ ಪ್ರಶ್ನೆ. ಅವರನ್ನು ಆಯ್ಕೆ ಮಾಡಿದರೆ ಲೆಗ್ ಸ್ಪಿನ್ನರ್ ರಾಹುಲ್ ಶರ್ಮ ಸ್ಥಾನಕ್ಕೆ ಕುತ್ತು ಬರಲಿದೆ. ಮತ್ತೊಬ್ಬ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸ್ಥಾನ ಖಚಿತ.

ಜಹೀರ್ ಹಾಗೂ ಯಾದವ್ ಹಿಂತಿರುಗಿದರೆ ಇರ್ಫಾನ್ ಪಠಾಣ್ ಅಥವಾ ಅಶೋಕ್ ದಿಂಡಾ ಸ್ಥಾನಕ್ಕೆ ಕುತ್ತು ಬರಲಿದೆ. ಆರ್.ವಿನಯ್ ಕುಮಾರ್ ಹಾಗೂ ಪ್ರವೀಣ್ ಕುಮಾರ್ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ.

ಆಲ್‌ರೌಂಡರ್ ಸ್ಥಾನಕ್ಕಾಗಿ ರವೀಂದ್ರ ಜಡೇಜಾ ಹಾಗೂ ಯೂಸುಫ್ ಪಠಾಣ್ ನಡುವೆ ಪೈಪೋಟಿ ಇದೆ. ಇವರಿಬ್ಬರೂ ಐಪಿಎಲ್‌ನಲ್ಲಿ ವಿಫಲರಾಗಿದ್ದರು. ಇದರಲ್ಲಿ ಜಡೇಜಾ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಜೊತೆಗೆ ಆಯ್ಕೆ ಸಮಿತಿ ಸದಸ್ಯರು ಹೊಸ ಮುಖಗಳ ಶೋಧಕ್ಕೆ ಮುಂದಾದರೂ ಅಚ್ಚರಿ ಇಲ್ಲ.               ವೆಸ್ಟ್‌ಇಂಡೀಸ್ `ಎ~ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಮಿಂಚಿದ್ದ ಭಾರತ `ಎ~ ತಂಡದ ಆಟಗಾರರನ್ನು ಪರಿಗಣಿಸುವ ನಿರೀಕ್ಷೆ ಇದೆ.

ಐದು ಪಂದ್ಯಗಳ ಏಕದಿನ ಸರಣಿ ಜುಲೈ 21ರಿಂದ ಆಗಸ್ಟ್ 4ರವರೆಗೆ ಲಂಕಾದಲ್ಲಿ ನಡೆಯಲಿದೆ. ಆ.7ರಂದು ಒಂದು ಟ್ವೆಂಟಿ-20 ಪಂದ್ಯದಲ್ಲಿ ಭಾರತ ಆಡಲಿದೆ. ಉಪನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ತರಬೇತಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT