ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಕೂಟ ಅವ್ಯವಸ್ಥೆ: ಜಿ.ಪಂ. ಅಸಮಾಧಾನ

Last Updated 13 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಕೋಲಾರ: ಬಂಗಾರಪೇಟೆ ಮತ್ತು ನಗರದಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಅವ್ಯವಸ್ಥೆ ಎದ್ದು ಕಂಡಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಕಾಳಜಿಯಿಂದ, ಸಮರ್ಪಕವಾಗಿ ಕ್ರೀಡಾಕೂಟಗಳನ್ನು ಸಂಘಟಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಅ.ಮು.ಲಕ್ಷ್ಮಿನಾರಾಯಣ ಅವರು ಮೊದಲಿಗೆ ಕ್ರೀಡಾಕೂಟಗಳ ಅವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ, ಅಧ್ಯಕ್ಷೆ ಮಂಜುಳಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಅವರೂ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಅವರಿಗೆ ನೀರು ಕೊಟ್ಟಿಲ್ಲ. ತಿಂಡಿ ಕೊಟ್ಟಿಲ್ಲ ಎಂದು ಮಂಜುಳಾ ಅವರು ದೂರಿದರೆ, ಕ್ರೀಡಾಕೂಟ ಸಂಘಟಿಸುವ ಮುನ್ನ ಮೈದಾನವನ್ನು ಪರಿಶೀಲನೆ ಮಾಡಿ ಕ್ರೀಡಾಪಟುಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಮುನಿವೆಂಕಟಪ್ಪ ನುಡಿದರು.
ಕ್ರೀಡಾಕೂಟಗಳನ್ನು ಸಂಘಟಿಸುವಲ್ಲಿ ಅನುದಾನ ಕಡಿಮೆ ಇದೆಯಾ? ಹಾಗಿದ್ದರೆ ಅದನ್ನು ಜಿಪಂ ಗಮನಕ್ಕೆ ತನ್ನಿ. ಕ್ರಮ ಕೈಗೊಳ್ಳೋಣ. ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತೆ ಕ್ರೀಡಾಕೂಟಗಳನ್ನು ಏರ್ಪಡಿಸಬೇಡಿ ಎಂದು ಲಕ್ಷ್ಮಿನಾರಾಯಣ ನುಡಿದರು.

ಉತ್ತರ ನೀಡಲು ಯತ್ನಿಸಿದ ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಉಮಾಲಕ್ಷಿ, ಕ್ರೀಡಾಕೂಟದ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳೇ ಸರಿ ಇಲ್ಲ. ಗಾಜುಗಳು ಟ್ರ್ಯಾಕ್ ಮೇಲೆ ಇರಲಿಲ್ಲ. ಗಾಜುಗಳು ಕಂಡರೆ ನಾನೇ ಹೊಣೆ ಎಂದು ಸ್ಪಷ್ಟನೆ ನೀಡಿದರು.

ಅದನ್ನು ಒಪ್ಪದ ಶಾಂತಪ್ಪ, `ಕ್ರೀಡಾಕೂಟವನ್ನು ಸಂಘಟಿಸುವಲ್ಲಿ ಆದ ಲೋಪದ ಕುರಿತು ವಿವರಿಸಿ. ಅದನ್ನು ಬಿಟ್ಟು ವರದಿಗಾರರನ್ನು ದೂಷಿಸುವುದು ಸರಿಯಲ್ಲ. ವರದಿ ನಿಜವಾಗಿದೆ. ವರದಿಗಾರರಿಗೆ ಥ್ಯಾಂಕ್ಸ್ ಹೇಳಬೇಕು. ಮೈದಾನದಲ್ಲಿ ಗಾಜು ಇದ್ದಿದ್ದು ನಿಜ. ವರ್ಗಾವಣೆ ವ್ಯವಸ್ಥೆಯಲ್ಲಿರುವ ಅಧಿಕಾರಿಗಳ ಬಗ್ಗೆ ಯಾವುದೇ ವರದಿಗಾರರು ದುರುದ್ದೇಶದಿಂದ ಬರೆಯುವುದಿಲ್ಲ. ದುರುದ್ದೇಶವಿದ್ದರೆ ಅಂಥ ವರದಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿದೆ. ಉತ್ತಮ ಉದ್ದೇಶದಿಂದ ಬರೆದಿರುವ ವರದಿಗಳನ್ನು ಅರಿತು ಅದರಂತೆ ಕೆಲಸ ಮಾಡಬೇಕು. ಕ್ರೀಡಾಕೂಟಗಳಲ್ಲಿ ಇಂಥ ಲೋಪಗಳು ಮತ್ತೆ ನಡೆಯದಂತೆ ಎಚ್ಚರ ವಹಿಸಿ~ ಎಂದರು.

`ಕ್ರೀಡಾಂಗಣದಲ್ಲಿ ಸಂಜೆಯ ಬಳಿಕ ಪುಂಡರು ಸೇರುತ್ತಿದ್ದು, ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಕುರಿತು ದೂರುಗಳಿವೆ. ಹೀಗಾಗಿ ಕ್ರೀಡಾಂಗಣದಲ್ಲಿ ಸುಸಜ್ಜಿತ ಕಾಂಪೌಂಡ್ ನಿರ್ಮಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗಮನ ಹರಿಸಬೇಕು~ ಎಂದು ಮುನಿವೆಂಕಟಪ್ಪ ಹೇಳಿದರು.

ಸಮಸ್ಯೆಗಳು: ನಂತರ ಮಾತನಾಡಿದ ಉಮಾಲಕ್ಷ್ಮಿ , ಕ್ರೀಡಾಕೂಟಗಳನ್ನು ಸಂಘಟಿಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲಾಖೆಯಲ್ಲಿ ಇಲ್ಲ. ಹೀಗಾಗಿ ಜಿಲ್ಲಾ ಮಟ್ಟದಿಂದ ನಾನೇ ತಾಲ್ಲೂಕುಗಳಿಗೆ ಹೋಗಿ ಸಂಘಟಿಸಬೇಕಾಗಿದೆ.

ಕ್ರೀಡಾಕೂಟಗಳನ್ನು ಸಂಘಟಿಸುವ ಮುನ್ನ ನಾನೇ ಹೋಗಿ ಸ್ಥಳ ಪರಿಶೀಲಿಸಿರುವೆ. ಬಿರುಬಿಸಿಲಲ್ಲಿ ತಲೆಯ ಮೇಲೆ ಸೆರಗು ಹೊದ್ದು ನಿಂತು ಕೆಲಸ ಮಾಡಿರುವೆ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿರುವ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪ್ರತ್ಯೇಕವಾಗಿ ನೀರು ಖರೀದಿಸಿ ಸಲ್ಲಿಸಿರುವ ಬಿಲ್‌ಗಳಿಗೆ ಜಿಲ್ಲಾ ಪಂಚಾಯಿತಿ ಮಂಜೂರಾತಿ ನೀಡಿಲ್ಲ. ನೀರು ಪೂರೈಸುವಲ್ಲಿ ನಗರಸಭೆ, ಪುರಸಭೆಗಳು ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಹಳಷ್ಟು ವಿದ್ಯಾರ್ಥಿನಿಲಯಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ ಎಂದು ಪ್ರಭಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯೂ ಆಗಿರುವ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT