ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳ ನಿರ್ಲಕ್ಷ್ಯ ಸಲ್ಲ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಂಚಿಯಲ್ಲಿ ಶನಿವಾರ ಆರಂಭವಾಗಲಿರುವ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ವಿವಾದ ರಾಜ್ಯಕ್ಕೆ ಮುಜುಗರ ಉಂಟು ಮಾಡಿದೆ. ಗಡುವು ಮುಗಿದರೂ ತಂಡದ ಪಟ್ಟಿಯನ್ನೇ ಕಳುಹಿಸಿರಲಿಲ್ಲ. ಇದು ರಾಜ್ಯದ ಅಥ್ಲೀಟ್‌ಗಳಲ್ಲಿ ಆತಂಕ ಮೂಡಿಸಿತ್ತು. ಕೆಲವು ಪ್ರತಿಭಾವಂತರು ಹೊರ ರಾಜ್ಯವನ್ನು ಪ್ರತಿನಿಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು.

ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಆಡಳಿತ ಸಮಿತಿಯನ್ನು ವಿಸರ್ಜಿಸಿರುವುದರಿಂದ ಕ್ರೀಡಾ ಇಲಾಖೆಯೇ ಸ್ವತಃ ಆಸಕ್ತಿ ವಹಿಸಿ ಆಯ್ಕೆ ಟ್ರಯಲ್ಸ್ ನಡೆಸಿತ್ತು. ಆಯ್ದ ಅಥ್ಲೀಟ್‌ಗಳ ತಂಡದ ಪಟ್ಟಿಯನ್ನು ಸಂಘಟಕರಿಗೆ ಕಳುಹಿಸಲಾಗಿದೆ ಎಂದು ಇಲಾಖೆಯ ನಿರ್ದೇಶಕರೇ ಹೇಳಿಕೆ ನೀಡಿದ್ದರು. ಆದರೆ ಈ ಪಟ್ಟಿಯನ್ನು ಭಾರತ ಅಥ್ಲೆಟಿಕ್ ಫೆಡರೇಷನ್ ತಿರಸ್ಕರಿಸಿತು. ನಿಯಮಗಳ ಪ್ರಕಾರ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಮೂಲಕವೇ ತಂಡದ ಪಟ್ಟಿಯನ್ನು ಕಳುಹಿಸಬೇಕೆಂದು ಫೆಡರೇಷನ್ ಪಟ್ಟು ಹಿಡಿಯಿತು. ಆಗ ವಿಸರ್ಜನೆಗೊಂಡಿದೆ ಎಂದಿದ್ದ `ರಾಜ್ಯ ಸಂಸ್ಥೆ'ಯ ಮೂಲಕವೇ ಕ್ರೀಡಾ ಇಲಾಖೆಯು ತಂಡದ ಪಟ್ಟಿಯನ್ನು ರವಾನಿಸಿತು. ಅದನ್ನು ಫೆಡರೇಷನ್ ಒಪ್ಪಿಕೊಂಡಿತು.


ಆದರೆ ಇಂತಹದ್ದೊಂದು ವಿವಾದದಿಂದ ಅಥ್ಲೀಟ್‌ಗಳಿಗೆ ಉಂಟಾದ ತೊಂದರೆಗೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಏಳುತ್ತದೆ. ರಾಜ್ಯದ ಕ್ರೀಡಾ ವಲಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ ಅಷ್ಟೇ.

ರಾಜ್ಯದಲ್ಲಿ ಈಗ ಕಂಡುಬಂದ ಇಂತಹುದೇ ವಿವಿಧ ಸ್ವರೂಪದ ವಿವಾದಗಳು ದೇಶದಾದ್ಯಂತ ಸುದ್ದಿಯಾಗುತ್ತಲೇ ಇವೆ. ಇವತ್ತು ನಮ್ಮಲ್ಲಿ ಕ್ರೀಡಾಪಟು ಕೇಂದ್ರಿತ ಆಡಳಿತ ಇಲ್ಲದಿರುವುದೇ ಇಂತಹ ಬಹಳಷ್ಟು ಸಮಸ್ಯೆಗಳಿಗೆ ಮೂಲ ಕಾರಣ. ಪ್ರಮುಖ ಅಂತರರಾಷ್ಟ್ರೀಯ ಕೂಟಗಳು ನಡೆಯುವಾಗ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ವಿದೇಶ ಪ್ರವಾಸಕ್ಕೆ ಹಣದ ಸಮಸ್ಯೆಯಾಗುವುದಿಲ್ಲ. ಆದರೆ ಕ್ರೀಡಾಪಟುಗಳ ಪ್ರವಾಸದ ಪ್ರಶ್ನೆ ಬಂದಾಗ ಆರ್ಥಿಕ ಸಮಸ್ಯೆಯೇ ದೊಡ್ಡ ಸುದ್ದಿಯಾಗುತ್ತದೆ. ನಮ್ಮ ಕ್ರೀಡಾ ಆಡಳಿತದ ದುಷ್ಟ ವೈಖರಿ ಇದು.

ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಹಣಕಾಸಿನ ವ್ಯವಹಾರಗಳು, ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯದಿರುವುದು ಇತ್ಯಾದಿ ಕುರಿತು ಈಗಾಗಲೇ ಬಹಳಷ್ಟು ಚರ್ಚೆ ನಡೆದಿದೆ. ಸರ್ಕಾರದಿಂದ ತನಿಖೆಯೂ ನಡೆದಿದೆ. ಈ ಸಂಸ್ಥೆಯ ಮುಖ್ಯಸ್ಥರಿಗೆ ಅಥ್ಲೆಟಿಕ್ ಫೆಡರೇಷನ್ ಎಚ್ಚರಿಕೆಯ ಪತ್ರಗಳನ್ನೂ ಬರೆದಿದೆ. ಅದನ್ನೇ ನೆಪವಾಗಿಸಿಕೊಂಡು ಸಂಸ್ಥೆಯ ಕಾರ್ಯವೈಖರಿ ವಿರುದ್ಧ ಹಲವು ಮಂದಿ ಸಹಿ ಸಂಗ್ರಹಿಸಿದ್ದಾರೆ. ಆದರೆ ಇದನ್ನೇ  `ಸಂಸ್ಥೆಯ ವಿಸರ್ಜನೆ' ಎಂದು ಪರಿಗಣಿಸುವಂತಿಲ್ಲ ಎಂದು ಅಥ್ಲೆಟಿಕ್ ಫೆಡರೇಷನ್ ನಿರ್ಧರಿಸಿದಂತಿದೆ.

ಆದರೆ ಇಂತಹ ವಾದ ವಿವಾದಗಳೇ ರಾಜ್ಯ ಅಥ್ಲೆಟಿಕ್ಸ್‌ನ ಮುಖ್ಯ ಭೂಮಿಕೆಯಾಗಿದ್ದು ಅಥ್ಲೀಟ್‌ಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಇದು ಸರಿಯಲ್ಲ. ಇಂತಹ ಪರಿಸ್ಥಿತಿ ಮತ್ತೆ ಬರಬಾರದು. ಕ್ರೀಡಾ ಆಡಳಿತ ಎನ್ನುವುದು ಕ್ರೀಡಾ ಚಟುವಟಿಕೆಗಳಿಗೆ ಮತ್ತು ಕ್ರೀಡಾಪಟುಗಳ ಒಳಿತಿಗೆ ಪೂರಕವಾಗಿರಬೇಕೇ ಹೊರತು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ಅಟಾಟೋಪಗಳಿಗೆ ಪ್ರೋತ್ಸಾಹ ನೀಡಲು ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT