ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗೆ ಸೌಲಭ್ಯ, ಪ್ರೋತ್ಸಾಹದ ಕೊರತೆ: ರೋಹಿತ್

Last Updated 11 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಉಡುಪಿ: `ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಕೊರತೆ ಇಲ್ಲ, ಆದರೆ ಅವರಿಗೆ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆ ಇದೆ~ ಎಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಹಾಗೂ ಕಡಿಯಾಳಿಯ ಯು. ಕಮಲಾ ಬಾಯಿ ಪ್ರೌಢಶಾಲೆ ಸಂಯುಕ್ತವಾಗಿ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಗ್ರಾಮೀಣ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ, ಸೌಕರ್ಯಗಳು ಲಭ್ಯವಾಗುತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಸಾಧನೆ ಏಕೆ ಮಾಡಿಲ್ಲ ಎಂಬುದನ್ನು ಕ್ರೀಡಾಪಟುಗಳನ್ನು ಪ್ರಶ್ನಿಸುವ ಬದಲು ಅಧಿಕಾರಿಗಳನ್ನು ಪ್ರಶ್ನಿಸುವುದು ಸೂಕ್ತ. ಉಡುಪಿ ಜಿಲ್ಲೆಯಲ್ಲಿ ಈಗಲೂ ಮಣ್ಣಿನ ಟ್ರಾಕ್‌ನಲ್ಲಿ ಕ್ರೀಡಾಪಟುಗಳು ಓಡುತ್ತಿದ್ದಾರೆ. ಸಿಂಥೆಟಿಕ್ ಟ್ರಾಕ್ ಸೌಲಭ್ಯ ಇನ್ನೂ ಸಿಕ್ಕಿಲ್ಲ~ ಎಂದರು.

`ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳಬೇಕು. ಖಾಸಗಿ ಕಂಪೆನಿಗಳು, ಬ್ಯಾಂಕ್‌ಗಳು ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗ ನೀಡುತ್ತವೆ~ ಎಂದು ಅವರು ಹೇಳಿದರು.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 75 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಆಗಿದ್ದು ದುರದೃಷ್ಟಕರ ಎಂದರು.
`ಕ್ರೀಡೆಯಲ್ಲಿ ಸೋಲು- ಗೆಲವು ಮುಖ್ಯವಲ್ಲ. ಕ್ರೀಡೆ ಎಂಬುದು ಸೋಲು- ಗೆಲುವಿನ ನಡುವೆ ನಡೆಯುವ ಹೋರಾಟ. ಗೆದ್ದವರು ಗೆಲುವನ್ನು ಕಾಯ್ದುಕೊಳ್ಳಲು ಮತ್ತು ಸೋತವರು ಗೆಲುವು ಸಾಧಿಸಲು ಶ್ರಮ ಹಾಕಬೇಕು~ ಎಂದು ಕ್ರೀಡಾಕೂಟ ಉದ್ಘಾಟನೆ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕ್ರೀಡಾಪಟುಗಳು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು. ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.ಕ್ರೀಡಾ ಪಥ ಸಂಚಲನದಲ್ಲಿ ಬ್ರಹ್ಮಾವರ ವಲಯ ಪ್ರಥಮ ಹಾಗೂ ಬೈಂದೂರು ವಲಯ ದ್ವಿತೀಯ ಸ್ಥಾನ ಪಡೆಯಿತು.

ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಡಾ. ವಿಜಯೇಂದ್ರ ವಸಂತ್ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿಯ ಹಂಗಾಮಿ ಅಧ್ಯಕ್ಷ ಉಪೇಂದ್ರ ನಾಯಕ್, ನಗರಸಭೆ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಉಜ್ವಲ್ ಡೆವಲಪರ್ಸ್‌ನ ಪುರುಷೋತ್ತಮ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸೀತಾನದಿ ವಿಠಲ ಶೆಟ್ಟಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್. ನಾಗೇಂದ್ರ ಮಧ್ಯಸ್ಥ,

ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣ ಅಧಿಕಾರಿ ವಸಂತ ಶೆಟ್ಟಿ, ಕಮಲಾ ಬಾಯಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸುದರ್ಶನ್ ನಾಯಕ್, ಮುಖ್ಯೋಪಾಧ್ಯಾಯ ಗುಣಕರ ಶೆಟ್ಟಿ, ಸಂಘಟನಾ ಸಮಿತಿ ಗೌರವ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಸವರಾಜಪ್ಪ ಉಪಸ್ಥಿತರಿದ್ದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ಉಡುಪಿ ಜಿಲ್ಲೆಯ ಐದು ಶೈಕ್ಷಣಿಕ ವಲಯಗಳ ಸುಮಾರು ನಾನೂರು ಕ್ರೀಡಾಪಟುಗಳು, 150 ಮಂದಿ ಅಂಗವಿಕಲ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.  ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಅನುಕೂಲವಾಗುಂತೆ ಈಗಾಗಲೇ 21 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಒಟ್ಟು 98 ವಿವಿಧ ಸ್ಪರ್ಧೆಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT