ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಪ್ ಪೂರೈಕೆ ಅವ್ಯವಹಾರ ಪತ್ತೆ

Last Updated 5 ಫೆಬ್ರುವರಿ 2011, 7:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈಲು ಹಳಿ ಹಾಗೂ ಅದರ ಕೆಳಗಿನ ಅಡ್ಡಪಟ್ಟಿಯನ್ನು ಜೋಡಿಸಲು ಬಳಸಲಾಗುವ ‘ಇಲ್ಯಾಸ್ಟಿಕ್ ರೇಲ್ ಕ್ಲಿಪ್ಸ್’ ಪೂರೈಕೆ ಮಾಡುವ ಗುತ್ತಿಗೆದಾರರ ಜೊತೆ ಕೆಲ ಅಧಿಕಾರಿಗಳು ಶಾಮೀಲಾಗಿ ನೈಋತ್ಯ ರೈಲ್ವೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಲು ಯತ್ನಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಕೋಲ್ಕತ್ತಾದ ಮೇಸರ್ಸ್ ಭಾಸ್ಕರ್ ಇಂಡಸ್ಟ್ರಿಯಲ್ ಡೆವಲೆಪ್‌ಮೆಂಟ್ ಲಿಮಿಟೆಡ್ ಸಂಸ್ಥೆಯು ಕ್ಲಿಪ್ ತಯಾರಿಸಿ ಪೂರೈಸುವ ಗುತ್ತಿಗೆಯನ್ನು 2008ರ ಸೆಪ್ಟೆಂಬರ್‌ನಲ್ಲಿ ನೈಋತ್ಯ ರೈಲ್ವೆ ಕಡೆಯಿಂದ ಪಡೆದುಕೊಂಡಿತು. ಈ ಗುತ್ತಿಗೆಯನುಸಾರವಾಗಿ 2009ರ ಮೇ ತಿಂಗಳವರೆಗೆ ಹಂತ ಹಂತವಾಗಿ 29 ಲಕ್ಷ ಕ್ಲಿಪ್‌ಗಳನ್ನು ಪೂರೈಕೆ ಮಾಡಿತು. ಒಂದು ಕ್ಲಿಪ್ ತೂಕ ಸುಮಾರು 900 ಗ್ರಾಮ್. ಒಂದು ಕ್ಲಿಪ್‌ನ ಮೂಲ ಬೆಲೆಯನ್ನು 58 ರೂಪಾಯಿ ಎಂದು ಗುತ್ತಿಗೆಯಲ್ಲಿ ನಿಗದಿಪಡಿಸಲಾಗಿತ್ತು. ಪೂರೈಕೆ ಮಾಡುವ ಅವಧಿಯಲ್ಲಿ ಕ್ಲಿಪ್ ತಯಾರಿಕೆಗೆ ಖರೀದಿ ಮಾಡಲಾಗುವ ಕಬ್ಬಿಣದ ದರದಲ್ಲಿ ಏರಿಳಿತವಾದರೆ, ಅದಕ್ಕನುಗುಣವಾಗಿ ಕ್ಲಿಪ್‌ನ ಮೂಲ ಬೆಲೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬೇಕೆಂಬುದು ಗುತ್ತಿಗೆ ಕರಾರಿನಲ್ಲಿ ಸೇರಿತ್ತು.

ಅಲ್ಲದೆ, ಕ್ಲಿಪ್ ತಯಾರಿಸಲು ಗುತ್ತಿಗೆದಾರರು ಪ್ರತಿ ಬಾರಿಯೂ ಕಬ್ಬಿಣ ಖರೀದಿ ಮಾಡಿದಾಗ, ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ತಯಾರಿಕೆ ಘಟಕಕ್ಕೆ ಭೇಟಿ ನೀಡಿ ಕಬ್ಬಿಣದ ದಾಸ್ತಾನು ಹಾಗೂ ಖರೀದಿ ಮಾಡಿದ ದರವನ್ನು ಪರಿಶೀಲಿಸಬೇಕೆಂಬ ನಿಯಮವೂ ಗುತ್ತಿಗೆ ಕರಾರಿನಲ್ಲಿತ್ತು.

ಪ್ರತಿ ತಿಂಗಳು ತಾವು ತಯಾರಿಸಿದ ಕ್ಲಿಪ್‌ಗಳನ್ನು ನೈಋತ್ಯ ರೈಲ್ವೆಗೆ ಗುತ್ತಿಗೆದಾರರು ಪೂರೈಕೆ ಮಾಡಿದರು. 2009ರ ಮೇ ತಿಂಗಳ ಹೊತ್ತಿಗೆ ಒಟ್ಟು 29 ಲಕ್ಷ ಕ್ಲಿಪ್‌ಗಳನ್ನು ಪೂರೈಕೆ ಮಾಡಿದರು. ಇದರ ಒಟ್ಟು ತೂಕ 2800 ಮೆಟ್ರಿಕ್ ಟನ್ (28 ಲಕ್ಷ ಕೆ.ಜಿ.). ಪ್ರತಿ ಕ್ಲಿಪ್‌ಗೆ 58 ರೂಪಾಯಿಯ ಮೂಲ ದರದಂತೆ ಒಟ್ಟು 17.61 ಕೋಟಿ ರೂಪಾಯಿಯನ್ನು ನೈಋತ್ಯ ರೈಲ್ವೆಯಿಂದ ಪಡೆದುಕೊಂಡರು. ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಎಂಜಿನಿಯರ್ ಡಿ.ಜಿ. ದಿವಟೆ ಹಾಗೂ ಮುಖ್ಯ ಟ್ರ್ಯಾಕ್ ಎಂಜಿನಿಯರ್ ವಿಜಯ ಅಗರ್‌ವಾಲ್ ಉಸ್ತುವಾರಿಯಲ್ಲಿಯೇ ಗುತ್ತಿಗೆದಾರರಿಂದ ಕ್ಲಿಪ್ ಪಡೆದುಕೊಳ್ಳುವ ಹಾಗೂ ಹಣ ಪಾವತಿಸುವ ಕಾರ್ಯಗಳು ನಡೆದವು.

ಇದಾದ ನಂತರ ಗುತ್ತಿಗೆದಾರರು, ತಮಗೆ ಇನ್ನೂ 2.52 ಕೋಟಿ ರೂಪಾಯಿಗಳಷ್ಟು ಹಣವನ್ನು ನೈಋತ್ಯ ರೈಲ್ವೆ ಪಾವತಿಸಬೇಕಿದೆ ಎಂಬ ಹೊಸ ಲೆಕ್ಕ ಮುಂದಿಟ್ಟರು.‘ಕಬ್ಬಿಣ ಬೆಲೆ ಹೆಚ್ಚಿಗೆ ಇದ್ದ ಅವಧಿಯಲ್ಲೇ ಈ ಕ್ಲಿಪ್‌ಗಳ ತಯಾರಿಕೆಗೆ ಬೇಕಾದ ಸಂಪೂರ್ಣ ಕಬ್ಬಿಣವನ್ನು ಖರೀದಿ ಮಾಡಿದ್ದೇವೆ. ಗುತ್ತಿಗೆ ಪಡೆದುಕೊಂಡಾಗ ಒಂದು ಕೆ.ಜಿ. ಕಬ್ಬಿಣದ ಬೆಲೆ 51 ರೂಪಾಯಿ ಇದ್ದರೆ, ನಾವು ಕಬ್ಬಿಣ ಖರೀದಿಸಿದಾಗ ಇದ್ದ ಬೆಲೆ 60 ರೂಪಾಯಿ. ಅಂದರೆ ಪ್ರತಿ ಕೆ.ಜಿ.ಗೆ 9 ರೂಪಾಯಿ ಹೆಚ್ಚು ಹಣ ನೀಡಿ ಕಬ್ಬಿಣ ಖರೀದಿಸಿದ್ದೇವೆ. ಇದರನುಸಾರವಾಗಿ, ಒಟ್ಟಾರೆ 2800 ಮೆಟ್ರಿಕ್ ಟನ್ (28 ಲಕ್ಷ ಕೆ.ಜಿ.) ಕಬ್ಬಿಣ ಖರೀದಿಗೆ ನಾವು ಹೆಚ್ಚುವರಿಯಾಗಿ ಪಾವತಿಸಿದ ಹಣ 2.52 ಕೋಟಿ ರೂಪಾಯಿ ಆಗುತ್ತದೆ. ಈಗಾಗಲೇ ಪಾವತಿಸಿರುವ 17.61 ಕೋಟಿ ರೂಪಾಯಿ ಹೊರತುಪಡಿಸಿ, ಈ ಹೆಚ್ಚುವರಿ 2.52 ಕೋಟಿ ರೂಪಾಯಿ ಹಣವನ್ನು ಪಾವತಿಸಿ’ ಎಂದು ಗುತ್ತಿಗೆದಾರರು ಹೇಳಿದರು.

ಈ ಗುತ್ತಿಗೆದಾರರು ಕೇಳಿದಂತೆಯೇ ನೈಋತ್ಯ ರೈಲ್ವೆಯ ಕೆಲ ಅಧಿಕಾರಿಗಳು ಹೆಚ್ಚುವರಿ ಹಣ ಪಾವತಿಗೆ ಮುಂದಾಗುವ ಹಂತದಲ್ಲಿದ್ದರು. ಆದರೆ, ಈ ಪ್ರಕರಣ ನೈಋತ್ಯ ರೈಲ್ವೆಯಲ್ಲಿನ ಹಿರಿಯ ಎಂಜಿನಿಯರ್ ಒಬ್ಬರ ಗಮನಕ್ಕೆ ಬಂದಿತು. ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಅವರು, ‘ಈ ಗುತ್ತಿಗೆದಾರರಿಗೆ ಯಾವುದೇ ಬಾಕಿಯನ್ನು ಪಾವತಿಸುವ ಅಗತ್ಯವಿಲ್ಲ. ಈಗಾಗಲೇ ಪಾವತಿಸಿರುವ ಹಣವೇ ಹೆಚ್ಚಾಗಿದ್ದು, ಅದನ್ನು ವಾಪಸು ಪಡೆದುಕೊಳ್ಳಬೇಕು’ ಎಂದು ವರದಿ ನೀಡಿದರು.

‘ಈ ಗುತ್ತಿಗೆದಾರರರು ಹಂತ ಹಂತವಾಗಿ ಕ್ಲಿಪ್‌ಗಳನ್ನು ಪೂರೈಸಿದ ಅವಧಿಯಲ್ಲಿ ಕಬ್ಬಿಣದ ಬೆಲೆಯು ಏರಿಳಿತ ಕಂಡಿದೆ. ಪೂರೈಕೆ ಮಾಡಿದ ಅವಧಿಯಲ್ಲಿ ಕಬ್ಬಿಣದ ಬೆಲೆ ಕೆ.ಜಿ.ಗೆ ಗರಿಷ್ಠ 60 ರೂಪಾಯಿ ಇದ್ದರೆ, ಕನಿಷ್ಠ 40 ರೂಪಾಯಿ ಇತ್ತು. ಆದರೆ, ಗುತ್ತಿಗೆದಾರರು ಒಟ್ಟಾರೆ ಕಬ್ಬಿಣದ ಬೆಲೆಯನ್ನು 60 ರೂಪಾಯಿ ಎಂದು ಗಣನೆಗೆ ತೆಗೆದುಕೊಂಡು ಲೆಕ್ಕ ಮಾಡಿರುವುದು ಸರಿಯಲ್ಲ’ ಎಂದು ಈ ಅಧಿಕಾರಿ ವರದಿಯಲ್ಲಿ ವಿವರಿಸಿದರು.

ಅಲ್ಲದೆ, ಪ್ರತಿ ಬಾರಿಯೂ ಕಬ್ಬಿಣ ಖರೀದಿ ಮಾಡಿದಾಗ ದಾಸ್ತಾನು ಹಾಗೂ ದರದ ಬಗೆಗೆ ರೈಲ್ವೆ ಅಧಿಕಾರಿಗಳಿಂದ ತಪಾಸಣೆ ನಡೆಸಬೇಕೆಂಬ ಕರಾರನ್ನು ಗುತ್ತಿಗೆದಾರರು ಪಾಲಿಸಿಲ್ಲ ಎಂದೂ ವರದಿಯಲ್ಲಿ ತಿಳಿಸಿದರು.‘ಪ್ರತಿ ತಿಂಗಳು ಗುತ್ತಿಗೆದಾರರು ಪೂರೈಸಿದ ಕ್ಲಿಪ್‌ಗಳ ಪ್ರಮಾಣ ಹಾಗೂ ಆ ತಿಂಗಳು ಇರುವ ಕಬ್ಬಿಣದ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಮಾಡಿದರೆ, ಈಗಾಗಲೇ ಪಾವತಿ ಮಾಡಲಾಗಿರುವ 17.61 ಕೋಟಿ ರೂಪಾಯಿಯಿಂದ 1,36,36,224 (ಸುಮಾರು 1.36 ಕೋಟಿ) ರೂಪಾಯಿ ವಾಪಸು ಪಡೆಯಬೇಕು ಎಂದು ಅವರು ವರದಿಯಲ್ಲಿ ಸೂಚಿಸಿದರು. ಈ ಮೊತ್ತವನ್ನು ವಾಪಸು ಮಾಡಬೇಕೆಂದು ಗುತ್ತಿಗೆದಾರರಿಗೆ ಆದೇಶವನ್ನೂ ನೀಡಿದರು.

ಆದರೆ, ಆದೇಶವನ್ನು ಗುತ್ತಿಗೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಈಗ ಸುಪ್ರೀಂಕೋರ್ಟು ಈ ಪ್ರಕರಣದ ಪರಿಶೀಲನೆಗಾಗಿ ಸಂಧಾನಕಾರರೊಬ್ಬರನ್ನು ನೇಮಕ ಮಾಡಿದೆ. ಪೂರ್ವ ವಲಯ ರೈಲ್ವೆಯ ಸಹಾಯಕ ಮಹಾಪ್ರಬಂಧಕ ಎ.ಕೆ. ಗುಪ್ತಾ ಅವರು ಈಗ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ.

ಹಿರಿಯ ಎಂಜಿನಿಯರ್‌ರೊಬ್ಬರು ಸೂಕ್ತವಾಗಿ ಪರಿಶೀಲನೆ ಮಾಡಿರದಿದ್ದರೆ, ಕೆಲ ರೈಲ್ವೆ ಅಧಿಕಾರಿಗಳು ಶಾಮೀಲಾಗಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತಿದ್ದರೆಂಬುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿದ್ದರೆ ನೈಋತ್ಯ ರೈಲ್ವೆ ಬೊಕ್ಕಸಕ್ಕೆ ಬರೋಬ್ಬರಿ 3.88 ಕೋಟಿ ರೂಪಾಯಿ ನಷ್ಟ ಆಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT