ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಗೆ ಪಟ್ಟು

ದೇವಯಾನಿಗೆ ಅವಮಾನ: ವಿಷಾದ ಸಾಲದೆಂದ ಭಾರತ
Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯೂಯಾರ್ಕ್‌­ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ಕೋಳ ತೊಡಿಸಿದ ಪ್ರಕರಣದ ಬಗ್ಗೆ ಅಮೆರಿಕ  ವ್ಯಕ್ತಪಡಿಸಿದ ವಿಷಾದಕ್ಕೆ ಮಣಿಯದ ಭಾರತ, ಕ್ಷಮಾಪಣೆ ಕೇಳುವಂತೆ ಪಟ್ಟು ಹಿಡಿದಿದೆ. ದೇವಯಾನಿ  ವಿರುದ್ಧದ ಮೊಕದ್ದಮೆ­ಯನ್ನು ಬೇಷರತ್ತಾಗಿ ಕೈಬಿಡುವಂತೆ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ. 

ದೇವಯಾನಿ ಬಂಧನವನ್ನು ಭಾರತ ಗಂಭೀರವಾಗಿ ತೆಗೆದುಕೊಂಡ ಬೆನ್ನಲ್ಲೇ  ಬುಧವಾರ ದೂರವಾಣಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಅವರನ್ನು ಸಂಪರ್ಕಿ­ಸಿದ್ದ   ಅಮೆರಿಕದ ವಿದೇಶಾಂಗ ಕಾರ್ಯ­ದರ್ಶಿ ಜಾನ್ ಕೆರಿ  ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದರು.  ಆದರೆ ಇದಕ್ಕೆ ಜಗ್ಗದ  ಭಾರತ, ‘ಕೇವಲ  ಔಪ­ಚಾರಿಕವಾಗಿ ವಿಷಾದ ವ್ಯಕ್ತ­ಪಡಿಸಿದರೆ ಸಾಲದು.  ಅನುಚಿತ ವರ್ತನೆ­ಗೆಅಮೆ­ರಿಕ ಬೇಷರತ್‌ ಕ್ಷಮೆಯಾಚಿಸ­ಬೇಕು’ ಎಂದು ಒತ್ತಡ ತಂತ್ರವನ್ನು ಮುಂದುವರಿಸಿದೆ. 

ಉಭಯ ರಾಷ್ಟ್ರಗಳ ನಡುವೆ ಉದ್ಭವಿ­ಸಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ತಿಳಿ­ಗೊಳಿಸು­ವಂತೆ ಕೆರಿ ಮಾಡಿದ ಮನವಿಗೆ ಮಣಿಯದ ಭಾರತ, ರಾಜತಾಂತ್ರಿಕ ಮಾರ್ಗದಲ್ಲಿಯೇ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಹೇಳಿ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ.

ಕರೆ ಸ್ವೀಕರಿಸದ ಸಲ್ಮಾನ್‌: ಈ ನಡುವೆ ಕೆರಿ  ದೂರವಾಣಿ  ಕರೆಯನ್ನು ವಿದೇ­ಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌  ಉದ್ದೇಶಪೂರ್ವಕವಾಗಿ ಸ್ವೀಕರಿಸದೆ ನಿರ್ಲಕ್ಷಿಸಿದ್ದಾರೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಖುರ್ಷಿದ್‌, ‘ಕಳೆದ ರಾತ್ರಿ  ಕೆರಿ  ಅವರ ದೂರವಾಣಿ ಕರೆ ಬಂದಿದ್ದು ನಿಜ. ಆದರೆ, ಆಗ ನಾನು ಸ್ಥಳದಲ್ಲಿ ಇರಲಿಲ್ಲ.   ಅವರನ್ನು  ಸಂಪರ್ಕಿಸಲು ಯತ್ನಿಸುತ್ತೇನೆ’ ಎಂದಿದ್ದಾರೆ. ‘ಈ ಪ್ರಕರಣ  ನಿರ್ವ­ಹಿಸಿದ  ಅಮೆ­ರಿಕದ ಕ್ರಮದ ಬಗ್ಗೆ  ಸಮಾ­ಧಾನ­ವಿಲ್ಲ. ಅದು ತಪ್ಪನ್ನು ಒಪ್ಪಿ­ಕೊಂಡು  ಕ್ಷಮೆ ಯಾಚಿಸಬೇಕು. ಆಗ ಮಾತ್ರ  ಸಮಾ­ಧಾನ’ ಎಂದು  ಸಂಸ­ದೀಯ ವ್ಯವ­ಹಾರ­ಸಚಿವ ಕಮಲ್‌ನಾಥ್‌ ಆಗ್ರಹಿಸಿದ್ದಾರೆ.

ಉಪವಾಸ ಮಾಡುತ್ತೇನೆ
ನನ್ನ ಮಗಳ ಮೇಲಿನ ಸುಳ್ಳು ಆರೋಪಗಳನ್ನು ಕೈಬಿಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ.  ವೀಸಾದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಸಂಗೀತಾ ರಿಚರ್ಡ್ಸ್ ಳನ್ನು ಬಂಧಿಸಬೇಕೇ ಹೊರತು ನನ್ನ ಮಗಳನ್ನು ಅಲ್ಲ’.
–ಉತ್ತಮ್‌ ಖೋಬ್ರಾಗಡೆ

ಕೆಲಸದಾಕೆಗೆ ಅಮೆರಿಕ ನೆರವು
ದೇವಯಾನಿ ಅವರ ಮನೆಗೆಲಸದ ಸಹಾಯಕಿ ಸಂಗೀತಾ, ದೆಹಲಿಯಲ್ಲಿರುವ ತನ್ನ ಕುಟುಂಬದ ಸದಸ್ಯರನ್ನು ನ್ಯೂಯಾರ್ಕ್‌ಗೆ ಕರೆಸಿಕೊಳ್ಳಲು ಕಳೆದ ಆರು ತಿಂಗಳಿನಿಂದ ಸಂಚು ರೂಪಿಸಿದ್ದರು. ವಲಸೆ ಸಂಬಂಧಿ ವಿಷಯದಲ್ಲಿ ಪರಿಣತವಾಗಿರುವ ಕಾನೂನು ಸಂಸ್ಥೆ– ಆ್ಯಕ್ಸೆಸ್‌ ಇಮಿಗ್ರೇಷನ್‌, ಸಂಗೀತಾ ಕುಟುಂಬ ಅಮೆರಿಕಕ್ಕೆ ತೆರಳಲು ನೆರವು ನೀಡಿತ್ತು.  ಅಮೆರಿಕದ ವಿದೇಶಾಂಗ ಹಾಗೂ ಕಾನೂನು ಇಲಾಖೆಗಳು ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT