ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರಗಳಲ್ಲಿ ಅವ್ಯವಹಾರದ ವಾಸನೆ!

ಎಪಿಎಂಸಿ ಸಚಿವರ ತವರಿನಲ್ಲಿಯೇ ಈ ದುಸ್ಥಿತಿ
Last Updated 2 ಜನವರಿ 2014, 10:09 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 2013-–14ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕಜೋಳ ಹಾಗೂ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಆರಂಭಿಸಿರುವ ಖರೀದಿ ಕೇಂದ್ರಗಳಲ್ಲಿ ಅವ್ಯವಸ್ಥೆ ಕಂಡುಬಂದಿದೆ. ಒಂದಿಲ್ಲೊಂದು ಅವ್ಯವಹಾರದ ವಾಸನೆಯೂ ಬಡಿಯುತ್ತಿದೆ!
ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರಗಳನ್ನು ದಾವಣಗೆರೆ, ಹರಿಹರ, ಹೊನ್ನಾಳಿ ಹಾಗೂ ಮಲೇಬೆನ್ನೂರು ಎಪಿಎಂಸಿ ಆವರಣದಲ್ಲಿ ಆರಂಭಿಸ ಲಾಗಿದೆ.

ಉಳಿದಂತೆ ಮಾಯಕೊಂಡ, ಚನ್ನಗಿರಿ, ಹರಪನಹಳ್ಳಿ, ಜಗಳೂರು ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳಿವೆ. ರೈತರ ಬೇಡಿಕೆ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಸಮೀಪದ ಸಾಗರಪೇಟೆಯಲ್ಲಿಯೂ ಕೇಂದ್ರ ತೆರೆಯಲಾಗಿದೆ. ಒಂದೊಂದು ಕೇಂದ್ರದಲ್ಲಿಯೂ ಒಂದಿಲ್ಲೊಂದು ಸಮಸ್ಯೆ ಇದೆ. ಅಗತ್ಯ ಸಿಬ್ಬಂದಿ ಕೊರತೆಯಿಂದ ರೈತರಿಗೆ ಸಮರ್ಪಕ ಹಾಗೂ ಶೀಘ್ರ ಸೇವೆ ದೊರೆಯುತ್ತಿಲ್ಲ ಎನ್ನಲಾಗುತ್ತಿದೆ.

ಸರ್ಕಾರವೇನೋ ರೈತರಿಗೆ ನೆರವಾಗಲೆಂದು ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ಪಹಣಿ ಹಾಗೂ ಅಗತ್ಯ ದಾಖಲೆಗಳನ್ನು ತರುವ ವ್ಯಾಪಾರಸ್ಥರೂ ಸಹ ತಾವು ರೈತರು ಎಂದು ಹೇಳಿಕೊಂಡು ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಇದರಿಂದ ಸರ್ಕಾರದ ಸೌಲಭ್ಯ ಅನರ್ಹರ ಪಾಲಾಗುತ್ತಿದೆ. ದಾಖಲೆಗಳನ್ನು ತಂದುಕೊಟ್ಟರೆ ನಾವು ಉತ್ಪನ್ನಗಳನ್ನು ತೆಗೆದುಕೊಳ್ಳಬೇಕು ಅನಿವಾರ್ಯವಿದೆ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.

ಪ್ರತಿ ಚೀಲ 50 ಕೆ.ಜಿ. 665 ಗ್ರಾಂ. ತೂಕ ಇರಬೇಕು ಎಂಬ ನಿಯಮವಿದೆ. ಕೆಲ ವ್ಯಾಪಾರಿಗಳು ತೂಕ ಹೆಚ್ಚಿಸಲು ಕಸಕಡ್ಡಿ ತುಂಬುವುದು ಕಂಡುಬರುತ್ತಿದೆ ಎಂದು ತಿಳಿಸುತ್ತಾರೆ ಅವರು. ಸಾಗರಪೇಟೆ ಉಗ್ರಾಣ ನಿಗಮಕ್ಕೆ ಕಳೆದ ತಿಂಗಳು ತರಲಾಗಿದ್ದ ಮೆಕ್ಕೆಜೋಳದಲ್ಲಿ ಕಸಕಡ್ಡಿ ಕಂಡುಬಂದಿತ್ತು. ಒಂದು ಲೋಡ್‌ ವಾಪಸ್‌ ಕಳುಹಿಸಲಾಗಿತ್ತು! ಈ ಘಟನೆಯ ‘ಜಾಡು’ ಹಿಡಿದು ಹೊರಟ ‘ಪ್ರಜಾವಾಣಿ’ಗೆ ಹಲವು ಅಚ್ಚರಿಯ ಹಾಗೂ ಆತಂಕಕಾರಿ ಮಾಹಿತಿ ದೊರೆತಿದೆ. ಉಗ್ರಾಣದ ವ್ಯವಸ್ಥಾಪಕರ ಮೇಲೆ ಪ್ರಭಾವಿಗಳ ಒತ್ತಡ ಇರುವುದು ಹಾಗೂ ಅನಿವಾರ್ಯವಾಗಿ ಉಗ್ರಾಣದಲ್ಲಿ ದಾಸ್ತಾನು ಮಾಡಿದ ಅಂಶವೂ ಬೆಳಕಿಗೆ ಬಂದಿದೆ.

‘ಚನ್ನಗಿರಿಯಿಂದ ಬಂದ ಲೋಡ್‌ಗಳನ್ನು ರಾತ್ರಿ ವೇಳೆಯೂ ಇಳಿಸಿಕೊಳ್ಳುವಂತೆ ಒತ್ತಡವಿತ್ತು. ನಿಗಮದ ಪ್ರಾದೇಶಿಕ ವ್ಯವಸ್ಥಾಪಕರು, ಚನ್ನಗಿರಿ ಎಪಿಎಂಸಿ ಯಾರ್ಡ್‌ ಕಾರ್ಯದರ್ಶಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಆಹಾರ ನಿರೀಕ್ಷಕರು, ನೋಡೆಲ್‌ ಅಧಿಕಾರಿ ಚೀಲಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದರು. ಇದರಿಂದ ಉಗ್ರಾಣದಲ್ಲಿ ಕಲ್ಲು, ಮಣ್ಣು, ಕಸ, ಕಡ್ಡಿ ಇರುವ 4–5 ಸಾವಿರ ಚೀಲಗಳಿವೆ!’ ಎಂದು ಸಾಗರಪೇಟೆ ಉಗ್ರಾಣದ ವ್ಯವಸ್ಥಾಪಕ ಕೆ.ಎಂ. ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನೊಬ್ಬನೇ ಎಲ್ಲ ಚೀಲ ಪರಿಶೀಲಿಸಲಾಗದು. ಸಿಬ್ಬಂದಿ ಇಲ್ಲ. ಈಚೆಗೆ ತಂದ ಚೀಲದಲ್ಲಿ ಕೆಲ ಸುಟ್ಟ ಕಾಳುಗಳು ಇದ್ದುದ್ದರಿಂದ ಪರಿಶೀಲಿಸಿದಾಗ, ಇತರ ಚೀಲಗಳಲ್ಲಿಯೂ ಹೀಗಾಗಿದ್ದು ಗೊತ್ತಾಯಿತು. ರೈತರು ತರುವ ಚೀಲಗಳು ಚೆನ್ನಾಗಿರುತ್ತವೆ. ಕೆಲ ವ್ಯಾಪಾರಸ್ಥರು ತಂದ ಚೀಲಗಳಲ್ಲಿ ಕಲ್ಲು ಮಣ್ಣು ಮಿಶ್ರಣವಾಗಿದ್ದು ಕಂಡುಬಂದಿದೆ. ಈಗ, ಅಂತಹ ಚೀಲಗಳ ಮೇಲೆ ಬಸವಾಪಟ್ಟಣದ ದಾಸ್ತಾನು ಸೇರಿದೆ.

ನಿವೃತ್ತಿಗೆ ಆರು ವರ್ಷವಿದೆ. ನಷ್ಟವನ್ನು ನನ್ನ ಹಣದಲ್ಲಿ ಕಡಿತ ಮಾಡಲಾಗುತ್ತದೆ. ತೆಗೆದುಕೊಳ್ಳುವಂತೆ ಒತ್ತಡ ಹಾಕಿದ ಅಧಿಕಾರಿಗಳೇ ಈಗ ಪರಿಶೀಲಿಸಿ ತೆಗೆದುಕೊಳ್ಳಬೇಕಿತ್ತು ಎಂದು ನುಣುಚಿಕೊಳ್ಳುತ್ತಿದ್ದಾರೆ. ಎಲ್ಲ ಮಿಶ್ರಣದ ಚೀಲಗಳ ಫೋಟೋ ತೆಗೆದುಕೊಂಡಿದ್ದೇನೆ. ಮಾದರಿ ಸಂಗ್ರಹಿಸಿದ್ದೇನೆ.

ದಾಖಲೆಗಳ ಸಮೇತ ಜಿಲ್ಲಾಧಿಕಾರಿ, ಆಹಾರ ಸಚಿವರಿಗೆ ದೂರು ನೀಡುತ್ತೇನೆ. ಚೀಲವೊಂದಕ್ಕೆ 1.5 ಕೆ.ಜಿ. ಮಣ್ಣಿರುವುದು ಕಂಡುಬಂದಿದೆ. ಎಪಿಎಂಸಿ ಕಾರ್ಯದರ್ಶಿ ಹಾಗೂ ಆಹಾರ ನಿರೀಕ್ಷಕರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಈ ರೀತಿ ಒತ್ತಡ ಹೇರಿದ್ದಾರೆ’. ರಾಜಕಾರಣಿಗಳ ಕೈವಾಡವೂ ಇದೆ. ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿಸಿದ ವ್ಯಾಪಾರಸ್ಥರು ಪಹಣಿ ತಂದು ಕೊಡುತ್ತಾರೆ. ಹೀಗಾಗಿ, ನಾವು ತೆಗೆದುಕೊಳ್ಳಲೇಬೇಕಾಗುತ್ತದೆ’ ಎಂದು ದೂರುತ್ತಾರೆ ಅವರು.

ವಾಪಸ್‌ ಕಳುಹಿಸಿದ್ದೇವೆ
ಈಚೆಗೆ ಸಾಗರಪೇಟೆಗೆ ಬಂದ ಚೀಲಗಳಲ್ಲಿ ಸುಟ್ಟ ಕಾಳು ಇದ್ದಿದ್ದರಿಂದ ಮೆಕ್ಕೆಜೋಳ ಪರಿಶೀಲಿಸಲಾಯಿತು. ಕಸ ಕಡ್ಡಿ ಇದ್ದ ಚೀಲಗಳನ್ನು ವಾಪಸ್‌ ಕಳುಹಿಸಿದ್ದೇವೆ. ಕಸ ಕಡ್ಡಿ ಮಿಶ್ರಿತವಾಗಿರುವ ಚೀಲಗಳಿಲ್ಲ. ಸಾಗರಪೇಟೆ ಉಗ್ರಾಣಕ್ಕೆ ಚೀಲಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿಲ್ಲ ಎಂದು ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ತಿಮ್ಮಣ್ಣ ಪ್ರತಿಕ್ರಿಯಿಸಿದರು.

ಬಹಳ ಅವ್ಯವಹಾರ ನಡೆಯುತ್ತಿದೆ
ಖರೀದಿ ಕೇಂದ್ರಗಳಲ್ಲಿ ಬಹಳ ಅವ್ಯವಹಾರ ನಡೆಯುತ್ತಿದೆ. ಹಮಾಲಿ, ಸಾರಿಗೆ ವೆಚ್ಚ ಎಷ್ಟು ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ. ಹಲವು ಜಿಲ್ಲೆಗಳ ಗುತ್ತಿಗೆಯನ್ನು ಒಬ್ಬ  ಗುತ್ತಿಗೆದಾರರಿಗೇ ನೀಡಲಾಗಿದೆ. ಇದು ಹೇಗೆ ಸಾಧ್ಯ? ಬಹಳ ಭ್ರಷ್ಟಾಚಾರ ನಡೆಯುತ್ತಿದ್ದರೂ ಜಿಲ್ಲಾಡಳಿತ ಏಕೆ ಸುಮ್ಮನಿದೆ?
– ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.

ಸಾಗಾಣಿಕೆ ವೆಚ್ಚ ಏನಾಗುತ್ತಿದೆ?

ಖರೀದಿ ಕೇಂದ್ರದಿಂದ ಉಗ್ರಾಣಕ್ಕೆ ರೈತರಿಂದಲೇ ನೇರವಾಗಿ ಸಾಗಿಸಲಾಗುತ್ತಿದೆ. ಸಾಗಾಣಿಕೆ ವೆಚ್ಚ ಬೇರೆಯವರ ಪಾಲಾಗುತ್ತಿದೆ. 2 ಚೀಲಗಳಿಗೆ (ಒಂದು ಕ್ವಿಂಟಲ್‌ ಲೆಕ್ಕ) ₨ 52ರ ಬದಲಿಗೆ ಕೇವಲ ₨ 13 ಕೊಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.
– ಬಿ.ಎಂ.ಸತೀಶ್‌, ಎಪಿಎಂಸಿ ಮಾಜಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT