ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚು- ವೆಚ್ಚಗಳ ಮೇಲೆ ಹದ್ದಿನ ಕಣ್ಣು

Last Updated 9 ಏಪ್ರಿಲ್ 2013, 7:10 IST
ಅಕ್ಷರ ಗಾತ್ರ

ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ಇಡುವುದರ ಜತೆಗೆ ಜಾಹೀರಾತು, ಪ್ರಚಾರ ವಿಧಾನ ಗಳ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಡಲು ಸಮಿತಿ ರಚಿಸಿದೆ.

ಚುನಾವಣೆ ಅಕ್ರಮ, ಮತದಾರರಿಗೆ ಆಮಿಷ ಒಡ್ಡುವ ಪ್ರಕ್ರಿಯೆಗೆ ತಡೆಗೆ ಯೋಜನೆಗಳನ್ನು ರೂಪಿಸಿ ಈಗಾಗಲೇ ಅನುಷ್ಠಾನಗೊಳಿಸಿದೆ. ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯ ಚುರುಕು ಗೊಳಿಸಿದ್ದು, ಹಳ್ಳಿ ಹಳ್ಳಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇದಲ್ಲದೆ ನೀತಿ ಸಂಹಿತೆ ಜಾರಿ ತಂಡ, ಪೊಲೀಸ್ ತಂಡ ಗಮನ ಹರಿಸುತ್ತಿವೆ. ಜತೆಗೆ ಸುದ್ದಿ ಮಾಧ್ಯಮ ಗಳಲ್ಲಿ ಸುದ್ದಿ ಹಾಗೂ ಜಾಹೀರಾತು ಗಳನ್ನು ಪರಿಶೀಲಿಸಲು ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ ರಚಿಸಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಇತರೆ ನಾಲ್ಕು ಮಂದಿ ಸದಸ್ಯರಿದ್ದು, ಅವರು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳತ್ತ ಗಮನ ಹರಿಸಲಿದ್ದಾರೆ. ಆಕಾಶವಾಣಿ ಜಾಹೀರಾತುಗಳೂ ಪರಿಶೀಲನೆಗೊಳ ಪಡುತ್ತವೆ. ಇವುಗಳ ಜತೆಗೆ `ಕಾಸಿಗಾಗಿ ಸುದ್ದಿ' ವಿಚಾರದ ಕಡೆಗೂ ಈ ಸಮಿತಿ ಗಮನ ಹರಿಸಲಿದೆ. ಇಂಥ ಸುದ್ದಿ ಗೋಚರಿಸಿದರೆ ಅದು ಪ್ರಚಾರ ಎಂದೇ ಪರಿಗಣಿಸಿ ಸಂಬಂಧಪಟ್ಟವರಿಂದ ವಿವರ ಪಡೆದು ಅಭ್ಯರ್ಥಿಗಳ ಖರ್ಚಿನ ಲೆಕ್ಕದಲ್ಲಿ ಬರೆಯಲಿದೆ.
ಅಭ್ಯರ್ಥಿ ಪ್ರಕಟಿಸುವ ಕರಪತ್ರಗಳಲ್ಲಿ ಮುದ್ರಕರು ಹಾಗೂ ಪ್ರಕಾಶಕರ ಹೆಸರನ್ನು ನಮೂದಿಸದಿದ್ದಲ್ಲಿ ಇವರನ್ನು ಪತ್ತೆ ಮಾಡಿ ದಂಡ ವಿಧಿಸಲಿದೆ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆಗೆ ಮುನ್ನ ಮಾಧ್ಯಮ ದೃಡೀಕರಣ ಮತ್ತು ನಿರ್ವಹಣಾ ಸಮಿತಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ಸ್ಥಳೀಯವಾಗಿ ಕೇಬಲ್ ಆಪರೇಟರ್‌ಗಳು ನಗರ, ಪಟ್ಟಣ, ಗ್ರಾಮಗಳಲ್ಲಿ ಎಂ.ಸಿ.ಎಂ.ಸಿ. ಸಮಿತಿಯ ಅನುಮತಿ ಪಡೆಯದೇ ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಜಾಹಿರಾತು/ಸ್ಕ್ರೋಲ್ ಪ್ರಕಟಿಸುವಂತಿಲ್ಲ ಎಂಬುದು ಆಯೋಗದ ಸೂಚನೆ.

ಮತದಾರರನ್ನು ಮುಕ್ತ ಆಯ್ಕೆಗೆ ಬಿಟ್ಟು, ನಿರ್ಭೀತಿಯಿಂದ ಮತ ಹಾಕು ವಂತೆ ಪ್ರೇರೇಪಿಸುವುದು ಈ ಪ್ರಯತ್ನದ ಉದ್ದೆೀಶ ಎಂದು ಆಯೋಗ ತಿಳಿಸಿದೆ.

ಸರ್ಕಾರಿ ನೌಕರರಿಗೆ ಸೂಚನೆ
ಹಾಸನ:
ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಮತದಾರರಾಗುವುದು ಕಡ್ಡಾಯವಾಗಿದ್ದು ಇನ್ನೂ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡದಿರುವ ವರು ಏ.9ರೊಳಗೆ ಖುದ್ದಾಗಿ ದಾಖಲೆಗಳನ್ನು ಕೊಟ್ಟು ನೋಂದಣಿ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿಗಳು ಮತದಾರರಾಗಿರಲೇ ಬೇಕು. ಈವರೆಗೆ ಹೆಸರು ನೋಂದಾಯಿಸದಿದ್ದಲ್ಲಿ ಕೂಡಲೇ ನೋಂದಣಿ ಮಾಡಿ ಆಯಾ ಕಚೇರಿಗೆ ಮತದಾರರ ಗುರುತಿನ ಚೀಟಿ ಪ್ರತಿ ನೀಡಬೇಕು. ಜತೆಗೆ ಈಗಾಗಲೇ ನೀಡಲಾಗಿರುವ ನೌಕರರ ಸೇವಾ ಮಾಹಿತಿಯಲ್ಲಿ ಅಪೂರ್ಣ ಕಾಲಂಗಳನ್ನು ಭರ್ತಿ ಮಾಡಿ ಏ.9ರ ಒಳಗೆ ಸಲ್ಲಿಸಲು ನೌಕರರಿಗೆ ಮತ್ತು ಅಧಿಕಾರಿಗಳಿಗೆ ತಹಶೀಲ್ದಾರರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT