ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಆಗಿರದಿರಲಿ ಪ್ರೇಕ್ಷಕರ ಗ್ಯಾಲರಿ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಏಕದಿನ ಸರಣಿಯಲ್ಲಿ ಆಡಿದಾಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣಿಸಿತು. ಕ್ರಿಕೆಟ್ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿರುವ ದೇಶದಲ್ಲಿಯೇ ಹೀಗೆ ಆಗಿದ್ದು ಅಚ್ಚರಿ.

ವೆಸ್ಟ್ ಇಂಡೀಸ್ ಎದುರು ದೋನಿ ಪಡೆಯು ಮೂರು ಟೆಸ್ಟ್ ಪಂದ್ಯಗಳನ್ನು ಆಡುವಾಗಲೂ ಗ್ಯಾಲರಿಗಳು ಖಾಲಿ ಆಗಿಯೇ ಉಳಿದರೆ?

ಅತಿ ಎನಿಸಿದೆಯಾ ಕ್ರಿಕೆಟ್? ಅಂಥ ಅನುಮಾನ ಮೂಡಿರುವುದಂತೂ ನಿಜ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಹೋರಾಡಿ ಒಂದೂ ಪಂದ್ಯವನ್ನು ಬಿಡದಂತೆ ಗೆದ್ದ ಭಾರತಕ್ಕೆ ಜಯದ ಕೊರತೆ ಕಾಡಲಿಲ್ಲ. ಆದರೆ ಕೊರತೆ ಎನಿಸಿದ್ದು ಪ್ರೇಕ್ಷಕರದ್ದು.

ಐದು ಪಂದ್ಯಗಳು ನಡೆದ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಹೆಚ್ಚಿರಲಿಲ್ಲ. ಮೊಹಾಲಿಯ ಪುಟ್ಟ ಕ್ರೀಡಾಂಗಣದ ಗ್ಯಾಲರಿಗಳೂ ಖಾಲಿ ಖಾಲಿ. ಇನ್ನು ದೇಶದ ದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದ ಈಡನ್ ಗಾರ್ಡನ್ಸ್ ಅಂತೂ ಬರಿದಾದ ಬಾಣಲೆಯಂತೆ!

ಏಕದಿನ ಪಂದ್ಯಗಳನ್ನು ನೋಡಲು ಭಾರತದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಾರೆ ಎನ್ನುವ ತತ್ವವೂ ಸತ್ವ ಕಳೆದುಕೊಂಡಿತು. ಇನ್ನು ಟೆಸ್ಟ್ ಪಂದ್ಯಗಳ ಕಥೆ ಏನಾದೀತೆಂದು ಯೋಚಿಸಿದರೆನೇ ಆತಂಕ ಕಾಡುತ್ತದೆ.

ನವೆಂಬರ್ ಆರರಿಂದ ವೆಸ್ಟ್ ಇಂಡೀಸ್ ವಿರುದ್ಧ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಅದಕ್ಕಂತೂ ನೋಡುಗರ ಸಂಖ್ಯೆ ತೀರ ಕಡಿಮೆ ಆಗಿರುತ್ತದೆ ಎನ್ನುವ ಅನುಮಾನ ಈಗಾಗಲೇ ಬಲಗೊಂಡಿದೆ.

ವಿಂಡೀಸ್ ಕಳೆಗುಂದಿರುವ ತಂಡ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಂತೂ ಇಲ್ಲ. ಅನುಭವಿಗಳ ಕೊರತೆಯಿಂದ ಸತ್ವ ಕಳೆದುಕೊಂಡಿರುವ ಕ್ರಿಕೆಟ್ ಪಡೆಯ ವಿರುದ್ಧ `ಮಹಿ~ ಬಳಗ ಆಡುವುದನ್ನು ನೋಡಲು ಇಷ್ಟಪಡುವ ಜನರಾದರೂ ಎಷ್ಟು?

ಮುಖ್ಯವಾಗಿ ಕೆರಿಬಿಯನ್ ನಾಡಿನ ತಂಡದಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಕ್ರೀಡಾಂಗಣಕ್ಕೆ ಸೆಳೆದು ತರುವಂಥ ಆಟಗಾರರಿಲ್ಲ. ಆಸಕ್ತಿಯಿಂದ ನೋಡಬೇಕೆಂದರೆ ಆತಿಥೇಯ ಭಾರತದ ಆಟಗಾರರನ್ನು ಮಾತ್ರ.

ಆದರೆ ಈಗಾಗಲೇ ಅತಿ ಎನಿಸುವಷ್ಟು ದೋನಿ ಬಳಗ ಆಡಿರುವ ಪಂದ್ಯಗಳನ್ನು ನೋಡಿ ಸುಸ್ತಾಗಿರುವ ಅಭಿಮಾನಿಗಳು ಒಂದರ ಹಿಂದೊಂದು ಕ್ರಿಕೆಟ್ ಸರಣಿಯನ್ನು ನೋಡುವಂಥ ಮನಃಸ್ಥಿತಿಯಲ್ಲಿ ಇಲ್ಲ.

ಟ್ವೆಂಟಿ-20 ರೋಮಾಂಚನಕ್ಕೆ ಒಗ್ಗಿಕೊಂಡಿರುವವರು ನಿಜವಾದ ಕ್ರಿಕೆಟ್ `ಟೆಸ್ಟ್~ ಎನ್ನುವುದನ್ನು ಮರೆತು ಹೋಗುವಂಥ ವಾತಾವರಣವೂ ನಿರ್ಮಾಣವಾಗಿದೆ.

ಐಪಿಎಲ್ ಎಲ್ಲವನ್ನೂ ಹಾಳು ಮಾಡಿತು ಎಂದು ಗೊಣಗುವ ಕ್ರಿಕೆಟ್ ಪಂಡಿತರು `ಟೆಸ್ಟ್ ತನ್ನ ಅಸ್ಥಿತ್ವ ಕಳೆದುಕೊಳ್ಳುವುದಿಲ್ಲ~ ಎನ್ನುವ ಮಂತ್ರ ಪಠಣ ಬಿಟ್ಟಿಲ್ಲ. ಆದರೆ ಏಕದಿನ ಪಂದ್ಯಗಳನ್ನೇ ನೋಡಲು ಬಾರದವರು ಟೆಸ್ಟ್ ಕಡೆಗೆ ತಿರುಗಿ ನೋಡುತ್ತಾರಾ? ಎನ್ನುವುದು ಈಗ ಎದ್ದಿರುವ ಪ್ರಶ್ನೆ.

`ಟೆಸ್ಟ್~ ಕ್ರಿಕೆಟ್ ಪ್ರಕಾರಕ್ಕೆ ಗೌರವಯುತ ಸ್ಥಾನವಿದೆ. ಇದು ಒಪ್ಪುವ ಮಾತು! ಆದರೆ ಅತಿಯಾಗಿರುವ ಕ್ರಿಕೆಟ್ ಸರಣಿಗಳ ಸಂಖ್ಯೆಯ ನಡುವೆ ಆಸಕ್ತಿ ಉಳಿಯುವುದಾದರೂ ಹೇಗೆ? ಹಿಂದೆ ವೆಸ್ಟ್ ಇಂಡೀಸ್ ಹಾಗೂ ಭಾರತ  ಟೆಸ್ಟ್‌ನಲ್ಲಿ ಎದುರಾದರೆ ಕ್ರೀಡಾಂಗಣಗಳು ಭರ್ತಿ ಆಗುತ್ತಿದ್ದವು. ಈಗ ಅಂಥ ಆಸೆ ಇಟ್ಟುಕೊಳ್ಳಲಾಗದು.

ಒಂದು ವೇಳೆ ವಿಂಡೀಸ್-ಭಾರತ ನಡುವಣ ಸರಣಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತರೆ ಆಗ ಖಂಡಿತವಾಗಿಯೂ `ಟೆಸ್ಟ್~ ಇನ್ನೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಗಟ್ಟಿ ಎಂದು ಹೇಳಬಹುದು!          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT