ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕೊಡ ಪ್ರದರ್ಶನ

Last Updated 14 ಆಗಸ್ಟ್ 2012, 7:35 IST
ಅಕ್ಷರ ಗಾತ್ರ

ಬಂಗಾರಪೇಟೆ: ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂಗಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಗ್ರಾಮಸ್ಥರು ಮತ್ತು ಮಹಿಳೆಯರ ಆಕ್ರೋಶದ ಮಾತುಗಳನ್ನು ಎದುರಿಸಬೇಕಾಯಿತು.

ಅಷ್ಟೇ ಅಲ್ಲ, ಸಚಿವರಿಗೆ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು. ಕೊಳವೆಬಾವಿ ಕೊರೆಸುವಂತೆ ಮನವಿ ಮಾಡಿದರು.

ಬೆಳಿಗ್ಗೆ 11.45ರ ವೇಳೆಗೆ ನಗರದ ಪ್ರವಾಸಿ ಮಂದಿರಕ್ಕೆ ಬಂದು ಅಲ್ಲಿನ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟಿಸಿ, ಬಂಗಾರಪೇಟೆ ಕಡೆಗೆ ಸಾಗಿದ ಸಚಿವರು ಚಿಕ್ಕಅಂಕಂಡಳ್ಳಿಗೆ ಭೇಟಿ ನೀಡಿದಾಗ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿದರು.

ಕುಡಿಯಲು ನೀರು ಸಿಗುತ್ತಿಲ್ಲ. ಪಂಚಾಯಿತಿ ವತಿಯಿಂದ 10 ದಿನಕ್ಕೊಮ್ಮೆ 10 ಕೊಡ ನೀರು ಪೂರೈಸಲಾಗುತ್ತದೆ. ಅದು ಯಾವುದಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ಹೊಸ ಕೊಳವೆ ಬಾವಿ ಕೊರೆಸಬೇಕು ಎಂದು ಆಗ್ರಹಿಸಿದರು.

ಕೂಡಲೇ ಸ್ಪಂದಿಸಿದ ಸಚಿವರು, ಒಂದು ವಾರದೊಳಗೆ ಕೊಳವೆಬಾವಿ ಕೊರೆಯಿಸಿ ಎಂದು ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣಪ್ಪ ಅವರಿಗೆ ಸೂಚಿಸಿದರು.

ತಾಲ್ಲೂಕಿನ ಚಿಕ್ಕಅಂಕಂಡಳ್ಳಿ, ತಿಮ್ಮೋಪುರ, ಕಾರಹಳ್ಳಿ, ಹುಣಸನಹಳ್ಳಿ ಮತ್ತು ಬೂದಿಕೋಟೆಯ ಮಾರ್ಕಂಡಯ್ಯ ಜಲಾಶಯಕ್ಕೆ ಸಚಿವರು ಭೇಟಿ ನೀಡಿದರು.

ಮನವಿ: ಜಲಾಶಯದಿಂದ ಮಾಲೂರಿಗೆ ನೀರು ಪೂರೈಸುವುದರಿಂದ ಬೂದಿಕೋಟೆಯ ರೈತರಿಗೆ ತೊಂದರೆ ಆಗಲಿದೆ. ನೀರಾವರಿಗಾಗಿ ಜಲಾಶಯವನ್ನೇ ನಂಬಿರುವ ನೂರಾರು ರೈತರಿಗೆ ವಂಚನೆಯಾಗಲಿದೆ.  ಜಲಾಶಯ 118 ಎಕರೆ ವಿಸ್ತಾರ ಇದ್ದು, 2 ಸಾವಿರ ಎಕರೆ ನೀರಾವರಿ ಅಚ್ಚುಕಟ್ಟು ಜಮೀನನ್ನು ಹೊಂದಿದೆ.

ಜಲಾಶಯದ ತಳ ಮಟ್ಟದಿಂದ ಸಂಪೂರ್ಣ ನೀರನ್ನು ಮಾಲೂರಿಗೆ ಸರಬರಾಜು ಮಾಡಿದರೆ ಬೂದಿಕೋಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಕೃಷಿಕರಿಗೆ ಅನಾನುಕೂಲವಾಗುತ್ತದೆ ಎಂದು ಸ್ಥಳೀಯ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ತಿಮ್ಮೋಪುರದಲ್ಲಿಯೂ ಗ್ರಾಮಸ್ಥರು ಕೊಳವೆ ಬಾವಿ ಕೊರೆಯಿಸುವಂತೆ ಮನವಿ ಸಲ್ಲಿಸಿದರು. ನಂತರ ಕಾರಹಳ್ಳಿಗೆ ಆಗಮಿಸಿದ ಸಚಿವರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೊಡ್ಡಕೆರೆ ಹೂಳು ತೆಗೆಸುವಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು. ಹುಣಸನಹಳ್ಳಿಯಲ್ಲಿಯೂ ಕುಡಿಯುವ ನೀರು ಸಮಸ್ಯೆ, ಜಾನುವಾರು ಮೇವಿನ ಸಮಸ್ಯೆ ನೀಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್, ಶಾಸಕ ಎಂ.ನಾರಾಯಣಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್, ಸದಸ್ಯ ಎಂ.ಎಸ್.ಆನಂದ್, ತಹಶೀಲ್ದಾರ್ ಎಸ್.ಎಂ.ಮಂಗಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಡಿವೈಎಸ್ಪಿ ಪುಟ್ಟಮಾದಯ್ಯ, ಸಿಪಿಐ ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT