ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಂಪೆನಿಗಳಿಗೆ ವಹಿಸಿದ ನೀರು ಸರಬರಾಜು: ಪ್ರತಿಭಟನೆ

Last Updated 23 ಫೆಬ್ರುವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರು ಸರಬರಾಜನ್ನು ಖಾಸಗಿ ಕಂಪೆನಿಗಳಿಗೆ ವಹಿಸಿರುವುದನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ಸದಸ್ಯರು ನಗರದ ಪುರಭವನದ ಮುಂಭಾಗದಿಂದ ಉಲ್ಲಾಳು ಉಪನಗರದವರೆಗೆ ಜನ ಜಾಗೃತಿ ಜಾಥಾ ನಡೆಸಿದರು.

ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ ಸ್ಥಳೀಯ ಆಡಳಿತ ಸಂಸ್ಥೆಗಳೇ ಕುಡಿಯುವ ನೀರು ಸರಬರಾಜು ಮಾಡಬೇಕು. ಆದರೆ ಸರ್ಕಾರ ಕುಡಿಯುವ ನೀರಿನ ಸರಬರಾಜನ್ನು ಖಾಸಗಿ ಕಂಪೆನಿಗಳಿಗೆ ವಹಿಸಿದೆ. ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲ್ಬರ್ಗ ಮತ್ತು ಮೈಸೂರು ನಗರಗಳಲ್ಲಿ ನೀರಿನ ಸರಬರಾಜನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿಯ ನೀರಿನ ಮಾರುಕಟ್ಟೆ ಇದೆ. ಆ ಹಿನ್ನೆಲೆಯಲ್ಲಿ ಇದೇ 28ರಂದು ಅಮೆರಿಕದ ನೀರಿನ ವ್ಯಾಪಾರಿಗಳ ನಿಯೋಗವೊಂದು ಬೆಂಗಳೂರಿಗೆ ಬರುತ್ತಿದ್ದು, ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದೆ. ಇದರಲ್ಲಿ ಅಮೆರಿಕದ ಅತಿದೊಡ್ಡ ಕಂಪೆನಿಗಳು ಸೇರಿವೆ. ವಿದೇಶಿ ಕಂಪೆನಿಗಳು ನೀರನ್ನು ಮಾರಾಟದ ವಸ್ತುವಾಗಿಸಿಕೊಂಡು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

ಖಾಸಗಿ ಕಂಪೆನಿಗಳು ಒಂದು ಬಾಟಲಿ ತಂಪು ಪಾನೀಯ ತಯಾರಿಸಲು 10 ಲೀಟರ್‌ನಷ್ಟು ನೀರು ಬಳಸುತ್ತಿದ್ದು, ಸಾಕಷ್ಟು ಪೋಲು ಮಾಡುತ್ತಿವೆ. ಅಲ್ಲದೇ ನೀರಿನ ಬಾಟಲಿ ಕಂಪೆನಿಗಳೂ ಸಹ ಹೆಚ್ಚು ನೀರು ಬಳಕೆ ಮಾಡುತ್ತಿದ್ದು, ಅಂತರ್ಜಲ ಕ್ರಮೇಣ ಬತ್ತಿ ಹೋಗುತ್ತಿದೆ. ಹಾಗಾಗಿ ಸ್ಥಳೀಯ ಆಡಳಿತ ಸಂಸ್ಥೆಗಳೇ ನೀರು ಪೂರೈಕೆ ಮಾಡುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT