ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಮದ್ಯದಂಗಡಿ ಲೈಸನ್ಸ್ ಇಲ್ಲ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲೆಲ್ಲಿ ಮದ್ಯದ ಅಂಗಡಿಗಳ ಅಗತ್ಯ ಇದೆ ಎಂಬುದನ್ನು ಸಮೀಕ್ಷೆ ನಡೆಸಿ, ನಂತರ ಅಂತಹ ಜಾಗಗಳಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ನ ಮದ್ಯದ ಅಂಗಡಿಗಳನ್ನು ಆರಂಭಿಸಲಾಗುವುದು. ಇನ್ನು ಮುಂದೆ ಖಾಸಗಿಯವರಿಗೆ ಮದ್ಯದ ಅಂಗಡಿಗಳ ಪರವಾನಗಿ ಕೊಡುವುದಿಲ್ಲ ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.

`ಎಂಎಸ್‌ಐಎಲ್‌ಗೆ 400 ಮದ್ಯದ ಅಂಗಡಿಗಳ ಪರವಾನಗಿ ನೀಡಿದ್ದು, ಅವುಗಳಲ್ಲಿ 300 ಕಡೆ ಅಂಗಡಿಗಳನ್ನು ತೆರೆಯಲಾಗಿದೆ. ಇನ್ನೂ 100 ಕಡೆ ಅಂಗಡಿ ತೆರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಜತೆಗೆ ಎಲ್ಲೆಲ್ಲಿ ಬೇಡಿಕೆ ಇದೆ ಎಂಬುದನ್ನೂ ಸಮೀಕ್ಷೆ ನಡೆಸಿ ವರದಿ ನೀಡಲು ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ. ಸಮೀಕ್ಷೆ ಆಧರಿಸಿ ಹೊಸ ಪರವಾನಗಿಗಳನ್ನೂ ನೀಡಲಾಗುವುದು' ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮದ್ಯದ ಅಕ್ರಮ ಮಾರಾಟ ಹೆಚ್ಚಾಗಿದ್ದು, ಅದನ್ನು ತಪ್ಪಿಸಲು ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅಧಿಕೃತ ಮದ್ಯದ ಅಂಗಡಿಗಳನ್ನು ಹೆಚ್ಚು ತೆರೆಯುವುದರಿಂದ ಮಾತ್ರ ಅಕ್ರಮ ಮಾರಾಟ ಜಾಲಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ಪುನರ್‌ವಸತಿ: ಕಳ್ಳಬಟ್ಟಿ ತಯಾರಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದ 1,500 ಮಂದಿಯನ್ನು ಗುರುತಿಸಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪುನರ್‌ವಸತಿ ಕಲ್ಪಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಸೌಲಭ್ಯಗಳನ್ನು ಈ ಜನರಿಗೆ ವಿಸ್ತರಿಸಲು ಸೂಚಿಸಲಾಗಿದೆ ಎಂದರು.

ಅವಧಿ ವಿಸ್ತರಣೆ- ಸಭೆ
ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ 1ಗಂಟೆವರೆಗೂ ತೆರೆಯುವುದಕ್ಕೆ ಅವಕಾಶ ನೀಡುವ ಸಂಬಂಧ ಗೃಹ ಸಚಿವರ ಜತೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು. ವ್ಯಾಪಾರ ನಡೆಸಲು ರಾತ್ರಿ ಒಂದು ಗಂಟೆವರೆಗೆ ಅವಕಾಶ ನೀಡಬೇಕು ಎಂದು ಬಾರ್ ಮಾಲೀಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ ಎಂದರು.

ಸ್ನ್ಯಾಕ್ಸ್ ಬಾರ್ ತೆರೆಯುವುದಕ್ಕೂ ಬೇಡಿಕೆ ಇದೆ. ಆದರೆ ಆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಬಿಯರ್ ಮತ್ತು ವೈನ್ ಬಾರ್‌ಗಳ ಆರಂಭಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT