ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಿನ ದೇಹ, ಹೆಣ್ಣಿನ ಭಾವ ಅನೈಸರ್ಗಿಕ ಅಲ್ಲ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಇಪ್ಪತ್ತೊಂಬತ್ತರ ಹರೆಯದ ಲೈಂಗಿಕ ಅಲ್ಪಸಂಖ್ಯಾತರಾದ ಅಕ್ಕೈ ಪದ್ಮಸಾಲಿ (ಅವನು- ಅವಳಾದ) ಮತ್ತು ಸೋನು ನಿರಂಜನ್ (ಅವಳು- ಅವನಾದ) ಪ್ರಕೃತಿಯ ವೈಚಿತ್ರ್ಯಕ್ಕೆ ಬಲಿಯಾಗಿ ನೊಂದವರು. ಈಗ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಈ ಧೀರ-ಧೀರೆಯ ಸಂದರ್ಶನ ಇಲ್ಲಿದೆ.

 *  ಹೆಣ್ತನಕ್ಕೆ ತೆರೆದುಕೊಂಡ ಆರಂಭದ ದಿನಗಳು ಹೇಗಿದ್ದವು?
ಬೆಂಗಳೂರು ಮೂಲದವಳಾದ ನಾನು ಅಪ್ಪ, ಅಮ್ಮ, ಅಕ್ಕ, ತಮ್ಮನಿರುವ ಕೂಡು ಕುಟುಂಬದಲ್ಲಿ ಹುಟ್ಟಿದವಳು. ಎಂಟನೇ ವಯಸ್ಸಿನಲ್ಲಿ `ನಾನು ಹೆಣ್ಣು~ ಎಂಬ ಭಾವ ಪೂರ್ಣವಾಗಿ ಆವರಿಸಿಕೊಂಡಿತ್ತು. ಹೆಣ್ಣಿನ ಉಡುಗೆಯನ್ನು ಧರಿಸಲು ಇಷ್ಟಪಡುತ್ತಿದ್ದೆ. ಅವರ ಹಾಗೇ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದಕ್ಕೆ ಹಂಬಲಿಸಿದ್ದೆ.

ನನ್ನ ಇಚ್ಛೆಗನುಗುಣವಾಗಿ ನಡೆದುಕೊಂಡಾಗಲೆಲ್ಲ ಅಮ್ಮ ವಿರೋಧಿಸುತ್ತಿಐದ್ದಳು. ಶಾಲೆಯಲ್ಲಿದ್ದಾಗಲೆಲ್ಲ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಲು ಹಾತೊರೆಯುತ್ತಿದ್ದೆ. ಆದರೆ, ನಾನು ಹೆಣ್ಣು ಅಂತ ಕೂಗಿ ಹೇಳಬೇಕು ಅಂದುಕೊಂಡರೂ, ಬಾಯಿ ಬರುತ್ತಿರಲಿಲ್ಲ. ಅದಕ್ಕಾಗಿ 16ನೇ ವಯಸ್ಸಿನವರೆಗೂ ಕಾದೆ.

*  ಶಾಲಾ ದಿನಗಳು ಹೇಗಿದ್ದವು?
ನಾ ಹೇಳದೇ ಇದ್ದರೂ, ನನ್ನ ನಡಿಗೆ, ಮಾತು ಎಲ್ಲವೂ ಹೆಣ್ಣೆಂಬುದನ್ನು ತೋರ್ಪಡಿಸುತ್ತಿತ್ತು. ಇದನ್ನು ಗುರಿಯಾಗಿಟ್ಟುಕೊಂಡು ಎಲ್ಲರೂ ಕುಚೋದ್ಯ ಮಾಡಲು ಆರಂಭಿಸಿದ್ದರು. 10ನೇ ತರಗತಿ ಮುಗಿಸುವ ಹೊತ್ತಿಗೆ ನನ್ನ ಕುರಿತು ನನಗೆ ಕೇಳಿಸುವಂತೆಯೇ ಗುಸುಗುಸು ಶುರುವಾಗಿತ್ತು.
 
ನಂತರ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆದೆ.  ಸಹಪಾಠಿಗಳೆಲ್ಲರೂ ನನ್ನ ಧ್ವನಿ, ಭಾಷೆಗೆ ಛೇಡಿಸುತ್ತಿದ್ದರು. ನನಗಿರುವ ಸಮಸ್ಯೆಯ ಬಗ್ಗೆ ಉಪನ್ಯಾಸಕರಲ್ಲಿ ತಿಳಿಸಿದ್ದೆ. ಅವರು `ನೀನು ಮೊದಲು ಸರಿಯಾಗು~ ಎಂದು ನನ್ನನ್ನೇ ಆಕ್ಷೇಪಿಸಿದ್ದರು. ಅವಮಾನ, ಹಿಂಸೆ ತಾಳಲಾಗದೇ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ.

*  ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ನಂತರ ಏನು ಮಾಡಿದಿರಿ?
ಅದರ ನಂತರ ಮಾನಸಿಕವಾಗಿ ಕುಬ್ಜಳಾಗಿ ಹೋದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂತರೆ ಮೊಟ್ಟೆ, ಟೊಮೆಟೊಗಳಿಂದ ಹೊಡೆಯುತ್ತಿದ್ದರು. ಅತ್ತ ಕುಟುಂಬ ಇತ್ತ ಸಮಾಜದಿಂದ ಭಾವನೆಗಳಿಗೆ ಬೆಲೆ ಸಿಗದೆ ಹೋಗಿದ್ದರಿಂದ ಬದುಕುವುದೇ ದುಸ್ತರವೆನಿಸಿತು. ಆದರೆ ಮನಸ್ಸು ಮಾತ್ರ `ನಾನೇನು ತಪ್ಪು ಮಾಡಿದ್ದೇನೆ, ಯಾಕೆ ನೋವುಣ್ಣಬೇಕು~ ಎಂಬ ಪ್ರಶ್ನೆ ಕೇಳುತ್ತಿತ್ತು.

ಈ ಪ್ರಶ್ನೆಗೆ ಉತ್ತರ ರೂಪವಾಗಿ 2004ರಲ್ಲಿ `ಸಂಗಮ~ ಸಂಘಟನೆಯಲ್ಲಿ ಉದ್ಯೋಗ ಪಡೆದೆ. ಅಲ್ಲಿಂದ ಹೊಸ ಬಗೆಯ ಪಯಣ ಶುರುವಾಯಿತು. `ಸಂಗಮ~ದ ಸ್ಥಾಪಕರಾದ ಎಲವರ್ತಿ ಮನೋಹರ ಅವರಿಂದ ನಾಯಕತ್ವ ಮತ್ತು ಸಂವಹನದ ಕಲೆಯನ್ನು ಕಲಿತೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ ಸಮಾವೇಶದಲ್ಲಿ ಭಾಗವಹಿಸುವಷ್ಟು ಆತ್ಮವಿಶ್ವಾಸ ಪಡೆದಿದ್ದೇನೆ.

*  ದೈಹಿಕವಾಗಿಯೂ ನೀವೀಗ ಹೆಣ್ಣಾಗಿದ್ದೀರಾ?
ಇಲ್ಲ.. ಆ ಪ್ರಕ್ರಿಯೆಯಲ್ಲಿದ್ದೇನೆ. ವ್ಯಕ್ತಿ ಇಚ್ಛಿಸುವ ಲಿಂಗವನ್ನು ಪಡೆಯಬಹುದು. ಆದರೆ ವೈದ್ಯಕೀಯ ಚಿಕಿತ್ಸೆಯಲ್ಲಿ ಹಲವು ಹಂತಗಳಿದ್ದು, ಎರಡು ವರ್ಷಕ್ಕಿಂತಲೂ ಹೆಚ್ಚು ಅವಧಿ ಹಿಡಿಯುತ್ತದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೇ ಸ್ವಲ್ಪ ಮಟ್ಟಿನ ನೆಮ್ಮದಿಯಿಂದ ಬದುಕಬಹುದು. ಸುಮ್ಮನೆ ಎಲ್ಲರಿಗೂ ಶಸ್ತ್ರಚಿಕಿತ್ಸೆ ನೀಡಲಾಗದು.

ಎರಡು ವರ್ಷಗಳ  ಕಾಲ ವೈದ್ಯರು ವಿವಿಧ ರೀತಿಯ ಕೌನ್ಸೆಲಿಂಗ್ ನೀಡುತ್ತಾರೆ. ಲೈಂಗಿಕ ಅಲ್ಪಸಂಖ್ಯಾತರೆಂಬುದು ದೃಢಪಟ್ಟರೆ ಮಾತ್ರ ಚಿಕಿತ್ಸೆ ಮುಂದುವರಿಸುತ್ತಾರೆ. ಸದ್ಯ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಎರಡು ಲಕ್ಷ  ರೂಪಾಯಿ ಹಣ ಬೇಕಾಗಿದೆ.

*  ಪುರುಷರ ದೇಹದ ವಾಂಛೆಗಳೇನಾದರು ನಿಮಗಿದೆಯೇ?
ನನ್ನನ್ನು ಸಂಪೂರ್ಣವಾಗಿ ಹೆಣ್ಣು ಅಂತ ಮಾನಸಿಕವಾಗಿ ಒಪ್ಪಿಕೊಂಡಿರುವುದರಿಂದ ಪುರುಷ ದೇಹದಲ್ಲಿರುವ ವಾಂಛೆಗಳು ನನ್ನಲ್ಲಿ ಉಳಿದಿಲ್ಲ. ಲೈಂಗಿಕ ಕ್ರಿಯೆಯಲ್ಲೂ ನಾನು ಹೆಣ್ಣಿನಂತೆಯೇ ವರ್ತಿಸುತ್ತೇನೆ. ಪುರುಷ ದೇಹದಲ್ಲಾಗುವ ಯಾವುದೇ ಲೈಂಗಿಕ ಉದ್ರೇಕ ಆಗುವುದಿಲ್ಲ. ಕೆಲವರಿಗೆ ಆಗುತ್ತದೆ, ಆದರೆ, ನಾನು ಈ ಒಂದು ಇರಿಸು ಮುರಿಸಿನಿಂದ ತಪ್ಪಿಸಿಕೊಂಡಿದ್ದೇನೆ.

*  ಮದುವೆ ಮಕ್ಕಳಂತಹ ಮಾನವ ಸಹಜ ಆಸೆಗಳನ್ನು ಅದುಮಿಟ್ಟು ಬದುಕಲು ಸಾಧ್ಯವೇ?
ಖಂಡಿತಾ ಇಲ್ಲ. ಮದುವೆ, ಮಕ್ಕಳ ಬಗ್ಗೆ ಸಹಜವಾದ ಆಸೆಯಿದೆ. ನಮ್ಮದೇ ಸಮುದಾಯದಲ್ಲೂ ಹಾಗೂ ಸಹಜವಾಗಿರುವವರಲ್ಲೂ ಸಂಗಾತಿಗಳು ಸಿಗುತ್ತಾರೆ. ಆದರೆ ಪ್ರೀತಿ ನೀಡಲಾರರು. ಹಣಕ್ಕಾಗಿಯೋ, ಕಾಮತೃಷೆಗಾಗಿಯೋ ಪ್ರೀತಿಸಿದಂತೆ ನಾಟಕವಾಡುವವರೇ ಹೆಚ್ಚು.
 
ವೇಶ್ಯಾವಾಟಿಕೆಯಿಂದ ಗಳಿಸುವ ಹಣದಲ್ಲಿ ಪಾಲು ಪಡೆಯುವುದಕ್ಕಾಗಿಯೇ ಸಂಗಾತಿಗಳ ಸೋಗಿನಲ್ಲಿ ಬರುವವರಿದ್ದಾರೆ. ನನಗೂ ತುಂಬಾ ಜನ ಮದುವೆ ಪ್ರಸ್ತಾಪ ಮಾಡಿದ್ದಾರೆ. ನನಗಿನ್ನೂ ವಯಸ್ಸಿದೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಶ್ರೇಯೋಭಿವೃದ್ಧಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಹಾಗಾಗಿ ಸದ್ಯ ಮದುವೆಯ ಬಗ್ಗೆ ಯೋಚಿಸಿಲ್ಲ.

*  ನಿಮಗೆ ಕಣ್ಣೀರು ತರಿಸಿದಂತಹ ನೋವಿನ ವಿಷಯ ಯಾವುದಾದರೂ ಇದೆಯೇ?
ಸಾರ್ವಜನಿಕ ಸ್ಥಳಗಳಲ್ಲಿ ನೈಸರ್ಗಿಕ ಕರೆ ಬಂದರೆ ಸಾರ್ವಜನಿಕ ಶೌಚಾಲಯಕ್ಕೆ ಹೋಗುವಾಗ ಅನುಭವಿಸುವ ಸಂಕಟ, ಮುಜುಗರ ನನಗೆ ತುಂಬ ನೋವು ಉಂಟುಮಾಡುತ್ತದೆ. ಇನ್ನು ಲೈಂಗಿಕ ಅಲ್ಪಸಂಖ್ಯಾತರಲ್ಲೊಬ್ಬರು ಸತ್ತರೆ ಅವರಿಗೆ ಸ್ಮಶಾನದಲ್ಲಿ ಮಣ್ಣು ಮಾಡಲು ಅವಕಾಶವಿಲ್ಲ.

ಈಚೆಗೆ ನನ್ನ ಗೆಳತಿಯೊಬ್ಬಳು ತೀರಿಕೊಂಡಳು. ಶವವನ್ನು ವಿಲ್ಸನ್‌ಗಾರ್ಡನ್ ಸ್ಮಶಾನಕ್ಕೆ ತೆಗೆದುಕೊಂಡು ಹೋದರೆ, ಗಂಡು ಅಲ್ಲದ ಹೆಣ್ಣು ಅಲ್ಲದವರನ್ನು ಹೂಳಲು ಸಾಧ್ಯವಿಲ್ಲ ಎಂದರು. ಜೀವಂತ ಇದ್ದಾಗಲೂ ಅವಮಾನಿಸುತ್ತೀರಿ, ಸತ್ತ ಮೇಲೆಯೂ ಹೀಗೆಯೇ? ಎಂದು ಜಗಳವಾಡಿ ಸೀರೆಯಲ್ಲಿದ್ದಾಳೆ ಅಂದ ಮೇಲೆ ಹೆಣ್ಣು ಅಂತ ಗುರುತಿಸಿ ಎಂದು ಪಟ್ಟು ಹಿಡಿದು ಅವಳ ಅಂತ್ಯಕ್ರಿಯೆ ನಡೆಸಿದೆ. ಆದರೆ ನಾ ಸತ್ತಾಗಲೂ ಇಂತಹದ್ದೊಂದು ಸಮಸ್ಯೆ ಎದುರಾಗಬಹುದು ಎಂಬುದನ್ನು ನೆನೆದರೆ ಅಳು ಬರುತ್ತದೆ.

*  ಇಷ್ಟೆಲ್ಲ ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಗಂಡಾಗಿಯೇ ಬದುಕಬಹುದಿತ್ತಲ್ಲ ಎಂದು ಅನಿಸಿದೆಯೇ?
ಹಾಗೇ ಅನಿಸಿದರೂ ಬದುಕಲು ಸಾಧ್ಯವಿಲ್ಲ. ನಾನು ಯಾವ ತಪ್ಪನ್ನು ಮಾಡಿಲ್ಲ. ಮೋಸ ಮಾಡಿ ಗೊತ್ತಿಲ್ಲ. ಗಂಡಾಗಿ ಹುಟ್ಟಿ ಹೆಣ್ಣಿನ ಭಾವ ಹೊಂದುವುದು ಅನೈಸರ್ಗಿಕ ಎಂದು ನನಗೆ ಅನಿಸದು. ಸಮಾಜ, ಕುಟುಂಬದಿಂದ ಎಷ್ಟೇ ಅವಮಾನ ಅನುಭವಿಸಿದರೂ, ನನ್ನ ಮತ್ತು ಈ ಸಮುದಾಯದವರ ಅಸ್ತಿತ್ವಕ್ಕಾಗಿ ಹೋರಾಡುತ್ತೇನೆ, ರಾಜಿಯಾಗುವ ಪ್ರಶ್ನೆಯಿಲ್ಲ.

ಸದ್ಯದಲ್ಲೇ ಸಮಾಜವಿಜ್ಞಾನ ಮತ್ತು ರಾಜಕೀಯ ಶಾಸ್ತ್ರದಲ್ಲಿ ಬಿ.ಎ ಪದವಿ ಗಳಿಸಬೇಕು ಎಂದುಕೊಂಡಿದ್ದೇನೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಪಡೆದೇ ಪಡೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT