ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿದಾಟುವ ಗಡಿನಾಡಿನ ಕನ್ನಡಿಗ ಮಕ್ಕಳು

Last Updated 17 ಜೂನ್ 2011, 11:00 IST
ಅಕ್ಷರ ಗಾತ್ರ

ಅಡೂರು (ಬದಿಯಡ್ಕ): ಅಡೂರು, ದೇಲಂಪಾಡಿ, ಸುಳ್ಯಪದವು, ವಾಣಿನಗರದಂತಹ ಕೇರಳ-ಕರ್ನಾಟಕ ಗಡಿಪ್ರದೇಶದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಣಾಕಾಂಕ್ಷಿ ಮಕ್ಕಳ ಸೇರ್ಪಡೆ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಪ್ರದೇಶದ ಮಂದಿ ಕರ್ನಾಟಕದ ಜಾಲ್ಸೂರು, ಸುಳ್ಯ, ಈಶ್ವರಮಂಗಲ, ಪಾಣಾಜೆಗಳಲ್ಲಿ ವ್ಯಾಸಂಗಕ್ಕೆ ಮುಂದಾಗುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಭಾಷೆಯ ಮೇಲೆ ನಡೆಯುವ ಮಲಯಾಳೀಕರಣದ ದಬ್ಬಾಳಿಕೆಯಿಂದಾಗಿ ಇಂತಹ ವಾತಾವರಣ ನಿರ್ಮಾಣವಾಗಿರಬಹುದೆಂದು ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.

ಮಲಯಾಳಿಯೇತರ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕನಿಷ್ಠ 8 ಮಂದಿ ವಿದ್ಯಾರ್ಥಿಗಳು 1ನೇ ತರಗತಿಗೆ ಸೇರ್ಪಡೆಯಾಗಬೇಕೆಂದು ಕಡ್ಡಾಯ ನಿಯಮವಿದೆ. ಈ ಮಕ್ಕಳನ್ನು ಕ್ರೋಡೀಕರಿಸುವುದೇ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಸವಾಲಾಗುತ್ತಿದೆ. ಶಾಲೆಯ ಅಸ್ತಿತ್ವದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಕಡ್ಡಾಯವಾಗಿ 32 ವಿದ್ಯಾರ್ಥಿಗಳಿಂದ ಹೆಚ್ಚಿನ ವಿದ್ಯಾರ್ಥಿಗಳಿರಬೇಕು. ಗಡಿನಾಡಿನ ಪ್ರದೇಶದಲ್ಲಿ ಈ ಸಂಖ್ಯೆಯನ್ನು ದಾಟಲು ಅಗತ್ಯವಿರುವಷ್ಟು ಕನ್ನಡಿಗ ಮಕ್ಕಳು ದೊರೆಯುತ್ತಿಲ್ಲ.

ಇದಕ್ಕೆ ಬಹುತೇಕ ವಿದ್ಯಾರ್ಥಿ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದು ಒಂದು ಕಾರಣವಾದರೆ, ಕೇರಳ ಸರ್ಕಾರದ ಮಲಯಾಳ ಭಾಷಾಧ್ಯಯನದ ಕಡ್ಡಾಯ ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.

ಈ ಅಡಚಣೆಗೆ ಪೂರಕವಾಗಿ ಜಿಲ್ಲೆಯ ಕೆಲವು ಕನ್ನಡ ಶಾಲೆಗಳಲ್ಲಿ ಮಲಯಾಳ ಅಧ್ಯಾಪಕರ ನೇಮಕಾತಿಯೂ ನಡೆಯುತ್ತಿದೆ. ಇದಕ್ಕಾಗಿ ನಡೆದ ಹೋರಾಟಗಳೂ ನ್ಯಾಯಾಲಯದ ಮುಂದಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕರ ಬೊಧನೆಯಿಂದಾಗಿ ಕನ್ನಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತೂ ಕುಸಿಯಬಹುದು ಎಂದು ಪಾಲಕರು ಅಭಿಪ್ರಾಯಪಡುತ್ತಾರೆ.


ಹೀಗಾಗಿ ಬಹುತೇಕ ಹೆತ್ತವರು ಆಂಗ್ಲ ಮಾಧ್ಯಮ ಅಥವಾ ಕರ್ನಾಟಕದ ಶಿಕ್ಷಣಕ್ಕಾಗಿ ಆಸಕ್ತಿ ತೋರುತ್ತಿದ್ದಾರೆ. ಗಡಿ ಪ್ರದೇಶದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಅಧ್ಯಾಪಕರ ಹುದ್ದೆಗಳಿಗೆ ಸಂಚಕಾರವಿದೆ. ಮಲಯಾಳಿ ಉದ್ಯೋಗಾರ್ಥಿಗಳಿಗೆ ಶುಕ್ರದೆಸೆ ಮೂಡಲಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಲಯಾಳ ಭಾಷೆಯು ಹೆಚ್ಚುವರಿ ಅಧ್ಯಯನ ವಿಷಯವಾಗಿ ಬರುವ ಬಗ್ಗೆ ಪಾಲಕರಿಗೂ ಆತಂಕವಿದೆ.

ಕೇರಳ ಸರ್ಕಾರದ ಕನ್ನಡ ದಮನಕಾರಿ ಧೋರಣೆಯಿಂದ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಇಲ್ಲಿನ ಗ್ರಾಮೀಣ ಪ್ರದೇಶದ ಕನ್ನಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅತಂತ್ರರಾಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕಾಗಿ ಕರ್ನಾಟಕದತ್ತ ವಲಸೆ ಹೋಗುತ್ತಿದ್ದಾರೆ. ಆರ್ಥಿಕವಾಗಿ ಶಕ್ತರಾದ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಬಡ ಕನ್ನಡಿಗ ವಿದ್ಯಾರ್ಥಿಗಳು ಮಾತ್ರ `ಪಾಲಿಗೆ ಬಂದದ್ದೇ ಪಂಚಾಮೃತ~ ಎಂಬಂತೆ ತಮ್ಮ ಗಲ್ಲಿಯೊಳಗೆ ಇರುವ ಶಾಲೆಯಲ್ಲಿ ದೊರೆತಷ್ಟನ್ನು ಕಲಿತುಕೊಳ್ಳಬೇಕಾಗಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT