ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಹಬ್ಬದಲ್ಲಿ ತುಳಸಿ ಮದುವೆ

Last Updated 9 ಸೆಪ್ಟೆಂಬರ್ 2011, 9:40 IST
ಅಕ್ಷರ ಗಾತ್ರ

ಗದಗ: ಬೆಟಗೇರಿಯ ತೆಂಗಿನಕಾಯಿ ಬಜಾರ್‌ನಲ್ಲಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ವೇದಿಕೆಯಲ್ಲಿ `ಶ್ರೀ ದೇವಿ ತುಳಸಿ ಮಹಾತ್ಮೆ~ ದೃಶ್ಯ ರೂಪಕವನ್ನು ಪ್ರತಿದಿನ ನೂರಾರು ಭಕ್ತರು ವೀಕ್ಷಿಸುತ್ತಿದ್ದಾರೆ.

ಕಳೆದ 36 ವರ್ಷದಿಂದಲೂ ತೆಂಗಿನಕಾಯಿ ಬಜಾರಿನಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ 11 ದಿನಗಳ ಕಾಲ ಪೂಜಿಸಿ, ವೈಭವದಿಂದ ವಿಸರ್ಜನೆ ಮಾಡಲಾಗುತ್ತದೆ. ಅಲ್ಲದೇ ಗಣಪನನ್ನು ಕೂರಿಸುವ ವೇದಿಕೆಯಲ್ಲಿಯೇ ಧಾರ್ಮಿಕ ಅಂಶವನ್ನು ಬಿಂಬಿಸುವ ಪುರಾಣ ಕಥೆಗಳನ್ನು ದೃಶ್ಯ ರೂಪಕಕ್ಕೆ ಅಳವಡಿಸಿ ಪ್ರದರ್ಶನ ಮಾಡುವುದು ಇಲ್ಲಿನ ವಿಶೇಷವಾಗಿದೆ.

ಸಾರ್ವಜನಿಕ ಗಜಾನನೋತ್ಸವ ಮಂಡಳಿಯು ಇಲ್ಲಿವರೆಗೆ ಮಾರ್ಕಂಡೇಯ ಪುರಾಣ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಸತಿ ಸಾವಿತ್ರಿ, ಮಹಾಭಾರತ. ರೇಣುಕಾದೇವಿ ಮಹಾತ್ಮೆ ಮುಂತಾದ ಭಕ್ತಿರಸ ಒಳಗೊಂಡ ಕಥೆಗಳನ್ನು ದೃಶ್ಯ ರೂಪಕಕ್ಕೆ ಅಳವಡಿಸಿ ಅವಳಿ ನಗರದ ಸದ್ಭಕ್ತರಿಂದ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡಿದೆ.

ಈ ವರ್ಷ `ಶ್ರೀ ದೇವಿ ತುಳಸಿ ಮಹಾತ್ಮೆ~ ದೃಶ್ಯ ರೂಪಕವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಪ್ರತಿದಿನ ಸಂಜೆ 7.30ರ ನಂತರ ಪ್ರದರ್ಶನ ಶುರುವಾಗುತ್ತದೆ. 13 ನಿಮಿಷದ ಅವಧಿಯ ಈ ದೃಶ್ಯರೂಪಕ ನೋಡುಗರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದೆ.

ಕಥಾ ಸರಾಂಶ: ಬಾನಾಸುರನ ಮಗನಾದ ಶಂಖಚೂಡ ತನಗೆ ಮರಣ ಬಾರದಂತೆ ವರವನ್ನು ಅನುಗ್ರಹಿಸಬೇಕು ಎಂದು ಬ್ರಹ್ಮನನ್ನು ಕೇಳಿಕೊಳ್ಳುತ್ತಾನೆ. ಮರಣವೆಂಬುದು ಯಾರನ್ನು ಬಿಡುವುದಿಲ್ಲ ಎಂದು ಬ್ರಹ್ಮನು ತಿಳಿಸುತ್ತಾನೆ. ಆಗ ಶಂಖಚೂಡನು `ನನ್ನ ಹೆಂಡತಿಯ ಪಾತಿವ್ರತಕ್ಕೆ ಭಂಗ ಉಂಟಾದ ಕ್ಷಣವೇ ನನಗೆ ಮರಣ ಬರಲಿ~ ಎಂದು ವರ ಕೇಳಿಕೊಳ್ಳುತ್ತಾನೆ.

ಕಾಲನಂತರ ಶಂಖಚೂಡನು ತುಳಸಿಯನ್ನು ಮದುವೆಯಾಗುತ್ತಾನೆ. ತುಳಸಿಯು ಮಹಾ ಪತಿವ್ರತೆಯಾದ್ದರಿಂದ ಸಾವಿನ ಭಯ ಶಂಖಚೂಡನ್ನನ್ನು ಕಾಡುವುದಿಲ್ಲ. ಭೂ ಮಂಡಲ, ದೇವಲೋಕ ಎಲ್ಲ ಕಡೆ ದಾಳಿ ನಡೆಸಿ ದೇವ-ಮಾನವರನ್ನು ಹಿಂಸಿಸುತ್ತಾನೆ. ಎಲ್ಲರೂ ವಿಷ್ಣುವಿನಲ್ಲಿ ಮೊರೆ ಇಡುತ್ತಾರೆ.

ಶಂಖಚೂಡನನ್ನು ಶಿವನು ಸಂಹಾರ ಮಾಡುತ್ತಾನೆ. ಆದರೆ ಅದಕ್ಕೂ ಮೊದಲು ತುಳಸಿಯ ಪಾತಿವ್ರತ ಭಂಗವಾಗಬೇಕು. ಅದಕ್ಕಾಗಿ ಏನಾದರೂ ಒಂದು ಉಪಾಯ ಮಾಡುವುದಾಗಿ ಹೇಳಿದ ವಿಷ್ಣು, ದೇವತೆಗಳಿಗೆ ಅಭಯ ನೀಡುತ್ತಾನೆ.

ಶಿವನು ಶಂಖಚೂಡನ ಜೊತೆ ಯುದ್ಧ ಪ್ರಾರಂಭಿಸುತ್ತಾನೆ. ಇತ್ತ ವಿಷ್ಣು ಶಂಖಚೂಡನ ವೇಷಧರಿಸಿಕೊಂಡು ತುಳಸಿಯ ಹತ್ತಿರಕ್ಕೆ ಬರುತ್ತಾನೆ. ತುಳಸಿಯು ವಿಷ್ಣುವನ್ನು ತನ್ನ ಗಂಡ ಎಂದು ಭ್ರಮಿಸಿ ಉಪಚಾರ ಮಾಡುತ್ತಾಳೆ. ಆಗ ಅವಳ ಪಾತಿವ್ರತ ಭಂಗವಾಗುತ್ತದೆ. ಶಂಖಚೂಡನ ಸಂಹಾರವಾಗುತ್ತದೆ.

ಸೇವಕನೊಬ್ಬ ಬಂದು ಶಂಖಚೂಡ ಮರಣಹೊಂದಿದ ಸುದ್ದಿಯನ್ನು ತುಳಸಿಗೆ ತಿಳಿಸುತ್ತಾನೆ. ಇಲ್ಲಿವರೆಗೆ ನನ್ನ ಜೊತೆಗೆ ಇದ್ದವರು ಯಾರು ಎನ್ನುವ ಅನುಮಾನ ತುಳಸಿಗೆ ಬರುತ್ತದೆ. ಆಗ ವಿಷ್ಣು ತನ್ನ ನಿಜರೂಪವನ್ನು ತೋರಿಸುತ್ತಾನೆ. ಗಂಡನನ್ನು ಕಳೆದುಕೊಂಡು ಕುಪಿತಳಾದ ತುಳಸಿ, ಪಾತಿವ್ರತಕ್ಕೆ ಭಂಗ ತಂದ ವಿಷ್ಣುವಿಗೆ ಕಲ್ಲಾಗಿ ಹೋಗು ಎಂದು ಶಾಪ ನೀಡುತ್ತಾಳೆ.

ಬಳಿಕ ವಿಷ್ಣು ತುಳಸಿಯನ್ನು ಸಮಾಧಾನಪಡಿಸಿ, ಈ ಹಿಂದೆ ತುಳಸಿ ನಾರಾಯಣನನ್ನು ವರಿಸಬೇಕು ಎಂದು ತಪಸ್ಸು ಮಾಡಿದ್ದನ್ನು ಜ್ಞಾಪಿಸುತ್ತಾನೆ. `ನಾನು ಗಡಕಿ ನದಿಯಲ್ಲಿ ಸಾಲಿಗ್ರಾಮವಾಗುತ್ತೇನೆ. ನೀನು (ತುಳಸಿ) ಗಿಡವಾಗು. ಕಾರ್ತಿಕ ಮಾಸದಲ್ಲಿ ನಿನ್ನನ್ನು ವರಿಸುತ್ತೇನೆ~ ಎಂದು ವಿಷ್ಣು ವರ ನೀಡುವಲ್ಲಿಗೆ ಕಥೆ ಸಮಾಪ್ತಿಗೊಳ್ಳುತ್ತದೆ.

ತುಳಸಿ ಮದುವೆ ದೃಶ್ಯ ರೂಪಕ ಹುಟ್ಟಿದ ಬಗೆ `ಪ್ರಜಾವಾಣಿ~ಗೆ ವಿವರಣೆ ನೀಡಿದ ಮಂಡಳಿಯ ಅಧ್ಯಕ್ಷ ವೀರಣ್ಣ ಮುಳ್ಳಾಳ, ತುಳಸಿ ಬಗ್ಗೆ ಎಲ್ಲೂ ಸವಿಸ್ತಾರವಾದ ಕಥೆ ಇಲ್ಲ. ಆದ್ದರಿಂದ ನಾವು ಎರಡು ಮೂರು ವರ್ಷದಿಂದ ಹುಡುಕಾಟ ನಡೆಸಿದ್ದೇವು. ಕೊನೆಗೆ `ಮಂಜುವಾಣಿ~ ಪತ್ರಿಕೆಯಲ್ಲಿ ಸ್ವಲ್ಪ ಕಥೆ ಸಿಕ್ಕಿತು.
 
ನಂತರ ಪಾವಗಡ ಪ್ರಕಾಶರಾವ್ ಅವರಿಂದ ಸಲಹೆ-ಸೂಚನೆ ಪಡೆದು ಒಂದು ವಿಸ್ತೃತ ಕಥೆಯನ್ನು ಸಿದ್ಧಪಡಿಸಲಾಯಿತು. ಇದಕ್ಕೆ ಯಲಪ್ಪ ಯಗಲಿ ಮಾಸ್ತರು ಸಂಭಾಷಣೆ ಬರೆದುಕೊಟ್ಟಿದ್ದಾರೆ. ಈಚಲಕಂರಜಿಯ ಮಚ್ಚೇಂದ್ರನಾಥ ಗೊಂಬೆಗಳಿಗೆ ರೂಪ ನೀಡಿದ್ದಾರೆ ಎಂದರು.

ಗಣಪತಿ ಪ್ರತಿಷ್ಠಾಪಿಸಲಾಗಿರುವ ಜಾಗದಲ್ಲಿಯೇ ನಾಟಕದ ಸ್ಟೇಜ್ ಹಾಕಲಾಗಿದೆ. ದೃಶ್ಯ ರೂಪಕದಲ್ಲಿ ಬರುವ ಪಾತ್ರಗಳನ್ನು ದಾರದ ಮೂಲಕ ಚಲಿಸುವಂತೆ ಮಾಡಲಾಗಿದೆ. ಜೊತೆಗೆ ಬಣ್ಣ-ಬಣ್ಣದ ದೀಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದರಿಂದ ವೀಕ್ಷಕರಿಗೆ ಇದೊಂದು ಹೊಸ ಅನುಭವ ನೀಡುತ್ತದೆ.

ತುಳಸಿ ಮದುವೆ ನೋಡಬೇಕು ಎನ್ನುವವರು ಇನ್ನೆರಡು ದಿನದೊಳಗೆ ತೆಂಗಿನಕಾಯಿ ಬಜಾರ್‌ಗೆ ಹೋಗುವುದು ಒಳಿತು. ಏಕೆಂದರೆ ಮುಂದಿನ ಭಾನುವಾರ ಅಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT