ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ದಾಳಿಗೆ ನಲುಗಿದ ಪರಿಸರ ಪುನರ್‌ಸೃಷ್ಟಿ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ನಾಶವಾಗಿರುವ ಅಮೂಲ್ಯ ಪರಿಸರವನ್ನು ಪುನರುಜ್ಜೀವನಗೊಳಿಸುವ ಯೋಜನೆ ಸಿದ್ಧಪಡಿಸಿರುವ `ಭಾರತೀಯ ಅರಣ್ಯ ಮತ್ತು ಶಿಕ್ಷಣ ಸಂಶೋಧನಾ ಮಂಡಲಿ~ (ಐಸಿಎಫ್‌ಆರ್‌ಇ) ಇದರ ಉಸ್ತುವಾರಿಗಾಗಿ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಸಮಿತಿಯಲ್ಲಿ ತಜ್ಞರ ಜತೆಗೆ ಸರ್ಕಾರದ ಅಧಿಕಾರಿಗಳು, ಸ್ಥಳೀಯ ಸಮುದಾಯ, ಗಣಿ ಕಂಪೆನಿಗಳ ಪ್ರತಿನಿಧಿಗಳು, ಪರಿಸರವಾದಿಗಳು ಇರಬೇಕು. ಪಾರದರ್ಶಕ ಹಾಗೂ ವೈಜ್ಞಾನಿಕ ಕ್ರಮಗಳ ಮೂಲಕ ಮೂರು ಜಿಲ್ಲೆಗಳಲ್ಲಿ ಪರಿಸರವನ್ನು ಪುನರುಜ್ಜೀವನ ಮಾಡಬೇಕು ಎಂದು ಐಸಿಎಫ್‌ಆರ್‌ಇ ಸಲಹೆ ಮಾಡಿದೆ.

ಗುತ್ತಿಗೆ ಪ್ರದೇಶದಾಚೆಗೂ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಕಂಪೆನಿಗಳಿಂದ ಪರಿಸರಕ್ಕೆ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ನಿಯಂತ್ರಣದ ಐಸಿಎಫ್‌ಆರ್‌ಇ ಪರಿಸರ ಪುನರುಜ್ಜೀವನಗೊಳಿಸಲು ಕೈಗೊಳ್ಳಬೇಕಾದ ಕ್ರಮ ಕುರಿತು ಮಹತ್ವದ ಶಿಫಾರಸು ಮಾಡಿದೆ. ಅತೀ ಸೂಕ್ಷ್ಮವಾದ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಈ ಶಿಫಾರಸುಳು ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ಗಣಿ ಅಕ್ರಮ ಕುರಿತು ಪರಿಶೀಲಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಕೂಡಾ ಐಸಿಎಫ್‌ಆರ್‌ಇ ಯೋಜನೆಯನ್ನು ಅನುಷ್ಠಾನಗೊಳಿಸುವ ಮಹತ್ವದ ಬಗ್ಗೆ ಈಚೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಅಂತಿಮ ವರದಿಯಲ್ಲಿ ಪ್ರಸ್ತಾಪಿಸಿದೆ.

ಪ್ರತಿ ಗಣಿ ಪ್ರದೇಶದಲ್ಲಿ `ಪರಿಸರ ಪುನರುಜ್ಜೀವನ ಮತ್ತು ಪುನರ್ವಸತಿ ಯೋಜನೆಗೆ~ (ಆರ್ ಅಂಡ್ ಆರ್ ಪ್ಲಾನ್) 4.25ಕೋಟಿ ಹಣ  ಅಗತ್ಯವಿದ್ದು, ಇದನ್ನು ಗಣಿ ಮಾಲೀಕರಿಂದಲೇ ವಸೂಲು ಮಾಡಬೇಕೆಂದು ಐಸಿಎಫ್‌ಆರ್‌ಇ ಹೇಳಿದೆ. ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿದೆಯೇ ಎಂಬ ಕುರಿತು ತಜ್ಞರ ಸಮಿತಿ ನಿರಂತರ ಪರಿಶೀಲಿಸಬೇಕೆಂದು ಸಲಹೆ ಮಾಡಲಾಗಿದೆ.

 ಹೊಸಪೇಟೆ ತಾಲೂಕು ಕಾರಿಗನೂರಿನ ಆರ್‌ಬಿಎಸ್‌ಎಸ್‌ಎನ್ ಗಣಿ ಪ್ರದೇಶವನ್ನು ಐಸಿಎಫ್‌ಆರ್‌ಇ ಮಾದರಿಯಾಗಿ ತೆಗೆದುಕೊಂಡು ಅಧ್ಯಯನ ಮಾಡಿದೆ. ಈ ಗಣಿ ಪ್ರದೇಶಕ್ಕಾಗಿ ಸಿದ್ಧಪಡಿಸಿರುವ ಯೋಜನೆ ಎಲ್ಲ ಗಣಿಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಿದೆ.

ಅಕ್ರಮ ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಜನ ವಸತಿಗಳು, ಪ್ರಾಣಿ- ಪಕ್ಷಿ ಸಂಕುಲಗಳು, ಸಸ್ಯ ಪ್ರಬೇಧಗಳನ್ನು ಕುರಿತು ಸಂಶೋಧನೆ ಮಾಡಿರುವ ಐಸಿಎಫ್‌ಆರ್‌ಇ ಇದನ್ನು ಪುನರ್‌ರೂಪಿಸುವ ನಿಟ್ಟಿನಲ್ಲಿ ಏನೇನು ಮಾಡಬೇಕೆಂದು ಸಲಹೆ ನೀಡಿದೆ. ಕಲುಷಿತಗೊಂಡಿರುವ ಗಾಳಿ, ನೀರು, ಭೂಮಿ ಹೊರ ಮೇಲ್ಮೈ ಸುಧಾರಣೆಗೆ ವೈಜ್ಞಾನಿಕ ಕ್ರಮಗಳನ್ನು ಸೂಚಿಸಿದೆ. ಗಣಿ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಜನರ ಕಲ್ಯಾಣ ಯೋಜನೆ ಕೈಗೊಳ್ಳುವ ಕುರಿತು ಕಿವಿ ಮಾತು ಹೇಳಿದೆ.

ಗಣಿ ದೂಳು ಮತ್ತು ಗಣಿ ಗುಂಡಿಗಳ ಕಲುಷಿತ ನೀರನ್ನು ಪರಿಸರಕ್ಕೆ ಹಾನಿಯಾಗದಂತೆ ಹೇಗೆ ವಿಸರ್ಜನೆ ಮಾಡಬೇಕೆಂದು ಜಾಗೃತಿ ಮೂಡಿಸಬೇಕು. ಗಣಿಗಾರಿಕೆಯಿಂದ ವಲಸೆ ಹೋದ ಪಕ್ಷಿ ಸಂಕುಲಗಳು ಹಿಂತಿರುಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಈ  ಪ್ರದೇಶದಲ್ಲಿ ಬೆಳೆಸಬೇಕಾದ ಮರ- ಗಿಡಗಳನ್ನು ಕುರಿತು ಸಲಹೆ ನೀಡಿದೆ.

ಗುತ್ತಿಗೆ ಪ್ರದೇಶದ ಆಚೆಗೆ ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪೆನಿಗಳಿಗೆ ಹೆಕ್ಟೇರ್‌ಗೆ ಐದು ಕೋಟಿ ಹಾಗೂ ನಿಗದಿತ ಪ್ರದೇಶದ ಆಚೆಗೆ ರಸ್ತೆ, ಕಚೇರಿ ಹಾಗೂ ಅದಿರು ದಾಸ್ತಾನು ಮಾಡಿದ ಗಣಿ ಕಂಪೆನಿಗಳಿಗೆ ಹೆಕ್ಟೇರ್‌ಗೆ ಒಂದು ಕೋಟಿ ರೂಪಾಯಿ ದಂಡ ಹಾಕಬೇಕು. ಈ ಹಣವನ್ನು ಪರಿಸರ ಪುನರುಜ್ಜೀವನ ಕಾರ್ಯಕ್ರಮಕ್ಕೆ ಬಳಸಬೇಕು ಎಂದು ಸಿಇಸಿ ಅಂತಿಮ ವರದಿಯೂ ಶಿಫಾರಸು ಮಾಡಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT