ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವಕ್ಕೆ ಅದ್ದೂರಿ ತಯಾರಿ!

ನಗರ ಸಂಚಾರ
Last Updated 2 ಸೆಪ್ಟೆಂಬರ್ 2013, 6:50 IST
ಅಕ್ಷರ ಗಾತ್ರ

ಬೆಳಗಾವಿ: ಇದೀಗ ಎಲ್ಲೆಡೆ ಗಣೇಶೋತ್ಸವದ ಸಡಗರ. ಅದರಲ್ಲೂ ಬೆಳಗಾವಿಯಲ್ಲಿ ಈ ವರ್ಷ ಗಣೇಶ ಉತ್ಸವಕ್ಕೆ ಹೆಚ್ಚಿನ ಮೆರುಗು ಬಂದಿದೆ. ಸಾರ್ವಜನಿಕ ಗಣೇಶ ಉತ್ಸವ ಮಂಡಳಗಳು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದರೆ, ಈ ಬಾರಿ ಸರ್ಕಾರ ಸಹ ಅನುದಾನ ಒದಗಿಸು ವುದಾಗಿ ಪ್ರಕಟಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಗಣೇಶ ಹಬ್ಬದಲ್ಲಿ ದೇಶದ ಗಮನ ಸೆಳೆದಿರುವ ಕುಂದಾ ನಗರಿ, ಗಣೇಶನನ್ನು ಬರಮಾಡಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಭವ್ಯವಾದ ಮಂಟಪ ನಿರ್ಮಿಸಲು ಆರಂಭಿಸಿದ್ದು, ನಗರದ ಬಹುತೇಕ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಲಿವೆ.

ಬೆಳಗಾವಿಯಲ್ಲಿ 1905ರಲ್ಲಿಯೇ ಸಾರ್ವಜನಿಕ ಗಣೇಶೋತ್ಸವ ಆರಂಭ ವಾಗಿದ್ದು, ಈಗ 108ನೇ ವರ್ಷದಲ್ಲಿ ಮುನ್ನಡೆದಿದೆ. ಆದರೆ ಅಂದಿನ ಸಡಗರಕ್ಕೂ ಇಂದಿನ ಸಂಭ್ರಮಕ್ಕೂ ಅಜ-ಗಜದಷ್ಟು ಅಂತರ ಕಂಡು ಬರುತ್ತಿದೆ ಎಂದು ಹಿರಿಯರು ಹೇಳುತ್ತಾರೆ. ಅಂದು ರಾಷ್ಟ್ರದ ಏಕತೆ ಹಾಗೂ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿ ದರು. ಆದರೆ ಇಂದು ದೊಡ್ಡ ಉತ್ಸವ ವಾಗಿ ರೂಪುಗೊಂಡಿದ್ದು, ಕೇವಲ ವಿಜೃಂಭಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಬೆಳಗಾವಿ ನಗರದ ಒಂದು ವೃತ್ತದಲ್ಲಿ 1905ರಲ್ಲಿ ಚಿಕ್ಕ ಪೆಂಡಾಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ, ಇಂದು ನಗರದಲ್ಲಿ 379 ಸಾರ್ವಜನಿಕ ಗಣೇಶೋತ್ಸವ  ಮಂಡಳಗಳು ಗಜಾನನ ಮೂರ್ತಿ ಪ್ರತಿಷ್ಠಾಪಿಸಲಿವೆ.

ಸಾರ್ವಜನಿಕ ಗಣೇಶೋತ್ಸವ ಮಂಡಳಗಳಿಗೆ ಸ್ಪರ್ಧೆ ಮುಖ್ಯವಾಗಿದೆ. ಪ್ರಶಸ್ತಿ ಪಡೆಯಬೇಕು ಎಂಬ ಹುಮ್ಮಸ್ಸಿ ನಿಂದ ಗಣೇಶ ಮೂರ್ತಿಗಳನ್ನು ಶೃಂಗರಿಸುವುದರ ಜೊತೆಗೆ ಭವ್ಯ ಮಂಟಪಗಳನ್ನು ಹಾಕಲಾಗುತ್ತದೆ. ಮಂಟಪಕ್ಕೆ, ಗಣೇಶ ಮೂರ್ತಿಗೆ ಪ್ರತ್ಯೇಕ ಪ್ರಶಸ್ತಿ ನೀಡುವುದರಿಂದ ಎಲ್ಲ ಮಂಟಪಗಳು ಝಗಮಗಿಸಲಿವೆ. ಮಂಟಪದೊಳಗೆ ಡಿಜಿಟಲ್ ದೀಪಗಳು, ಸ್ಪಾಟ್ ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಈ ದೀಪಗಳಿಂದ ಗಣೇಶ ಮೂರ್ತಿಗೆ ವಿವಿಧ ಬಣ್ಣಗಳ ರೂಪ ಕೊಡಲಾಗುತ್ತದೆ.

ಎತ್ತರದ ಗಣೇಶ ಮೂರ್ತಿ ಸ್ಥಾಪಿಸುವುದು ಇತ್ತಿತ್ತಲಾಗಿ ರೂಢಿ ಯಾಗಿದೆ. ಕೆಲವು ಮಂಡಳಗಳು 10ರಿಂದ 15 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿವೆ. ಗಣೇಶ ಮೂರ್ತಿಗಳ ಜೊತೆಗೆ ರೂಪಕ ಗಳನ್ನು ಸಹ ಪ್ರದರ್ಶಿಸಲಾಗು ತ್ತದೆ. ದೊಡ್ಡ ಗಣೇಶ ಮೂರ್ತಿಗಳಿಗೆ ಅಂತಿಮ ಹಂತದ ಟಚ್‌ಅಪ್ ನೀಡುವ ಕೆಲಸ ಭರದಿಂದ ಸಾಗಿದೆ.

ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಭವ್ಯ ಮಂಟಪದ ತಯಾರಿಯಲ್ಲಿದ್ದರೆ, ಮನೆ- ಮನೆಗಳಲ್ಲಿ ಗಣೇಶನ `ಮಾಡ'ಗಳು ಸುಣ್ಣ- ಬಣ್ಣಗಳ ಲೇಪನ ಕಾಣುತ್ತಿವೆ. ಮನೆ ಯೊಳಗಿನ ಗಣೇಶನಿಗೂ ಅದ್ದೂರಿ ಶೃಂಗಾರ ನಡೆದಿದೆ.

ಮಹಿಳೆಯರ ಡೊಳ್ಳು
ಬೆಳಗಾವಿ ಗಣೇಶ ಉತ್ಸವದ ಮುಖ್ಯ ಆಕರ್ಷಣೆ ಎಂದರೆ, ಗಣೇಶ ವಿಸರ್ಜನೆಯ ಮೆರವಣಿಗೆ. ಸೆ. 9ರಂದು ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಗಳನ್ನು 18ರಂದು ವಿಸರ್ಜನೆ ಮಾಡ ಲಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಭಾಗವಹಿಸಲು ನಗರದ ಮಹಿಳೆಯರ ಡೊಳ್ಳು ಕುಣಿತದ ತಂಡ ಈಗಾಗಲೇ ತಾಲೀಮು ಆರಂಭಿಸಿದೆ. ಗಜರಾಜನ ಸ್ವಾಗತ ಹಾಗೂ ಬೀಳ್ಕೊಡುಗೆಗೆ ಮಹಿಳೆಯರ ಡೊಳ್ಳು ಕುಣಿತ ವಿಶೇಷವಾಗಲಿದೆ.

ಬೆಲೆ ಏರಿಕೆ ಬಿಸಿ: `ಬೆಲೆ ಏರಿಕೆ ಬಿಸಿ ಗಣೇಶ ಮೂರ್ತಿಗಳಿಗೂ ತಟ್ಟಿದೆ. ಗಣೇಶ ಮೂರ್ತಿಗಳ ಬೆಲೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಆದರೂ ಸಹ ಜನರ ಸಂಭ್ರಮ ಕಡಿಮೆಯಾಗಿಲ್ಲ. ಕಚ್ಚಾ ಸಾಮಗ್ರಿಗಳ ದರ ಹೆಚ್ಚಾಗಿದ್ದರಿಂದ ಬೆಲೆ ಏರಿಕೆ ಯಾಗಿದೆ. ಮನೆಯೊಳಗೆ ಪ್ರತಿಷ್ಠಾಪಿಸು ವವರ ಸಂಖ್ಯೆ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ' ಎಂದು ಕಲಾವಿದ ಭರತ `ಪ್ರಜಾವಾಣಿ'ಗೆ ತಿಳಿಸಿದರು.

`ಪರಿಸರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದ್ದು, ಬಹುತೇಕರು ಮಣ್ಣಿನಿಂದ ತಯಾರಾದ ಮೂರ್ತಿಗಳನ್ನೇ ಕೇಳು ತ್ತಿದ್ದಾರೆ. ನೈಸರ್ಗಿಕ ಬಣ್ಣ ಉಪಯೋಗಿ ಸಿರುವ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣೇಶ ನಿಗಿಂತ ಪರಿಸರ ಸ್ನೇಹಿ ಗಣೇಶನಿಗೆ ಬೇಡಿಕೆ ಬರುತ್ತಿದೆ' ಎನ್ನುತ್ತಾರೆ ಅವರು.

ಒಂದು ಕೋಟಿ ಅನುದಾನ
ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಪ್ರಕಟಿಸಿದೆ. ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಗಣೇಶ ಉತ್ಸವ ಆಚರಿಸಬೇಕು ಎಂಬ ಉದ್ದೇಶದಿಂದ ಈ ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ.

`ಗಣೇಶ ಉತ್ಸವಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಮಂಜೂ ರಾಗಿದ್ದು, ಸದ್ಯದಲ್ಲಿಯೇ ಬಿಡುಗಡೆ ಆಗಬಹುದು. ಈ ಅನುದಾನವನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬು ದರ ಬಗ್ಗೆ ಸರ್ಕಾರದಿಂದ ಸೂಚನೆ ಬಂದ ನಂತರ ಯೋಜನೆ ರೂಪಿಸ ಲಾಗುವುದು.

ಗಣೇಶ ಮೂರ್ತಿಗಳು ಸಾಗುವ ಮಾರ್ಗಗಳಲ್ಲಿ ರಸ್ತೆ ಸುಧಾರಣೆ, ವಿದ್ಯುತ್ ದೀಪಾಲಂ ಕಾರ, ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಹೊಂಡಗಳ ಶೃಂಗಾರಕ್ಕೆ ಬಳಸುವ ಯೋಚನೆ ಇದೆ. ಉತ್ತಮ ಮೂರ್ತಿ, ಅಲಂಕಾರಕ್ಕೆ ನಗದು ಪ್ರಶಸ್ತಿ ನೀಡುವ ಮೂಲಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೂ ಪ್ರೋತ್ಸಾಹಿಸುವ ಬಗ್ಗೆ ಯೋಚಿಸ ಲಾಗಿದೆ' ಎಂದು ಜಿಲ್ಲಾಧಿಕಾರಿ ಎನ್. ಜಯರಾಂ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT