ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಅಮೆರಿಕ ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಗದಗ: ನಗರದಿಂದ 23 ಕಿ.ಮೀ. ದೂರದಲ್ಲಿರುವ ಕೋಟುಮಚಗಿ ಎಂಬ ಪುಟ್ಟ ಗ್ರಾಮದಲ್ಲೆಗ ವಿದೇಶಿಗರ ಕಲರವ.

ದೂರದ ಅಮೆರಿಕದಿಂದ ಬಂದ ಅಪರಿಚಿತರೊಡನೆ ಬೆರೆತು ಕಲಿಯುವ ಅವಕಾಶ ಇಲ್ಲಿನ ಜನರಿಗೆ ಬಂದೊದಗಿದೆ. ಅಂತೆಯೇ ಅಮೆರಿಕನ್ನರು ಇಲ್ಲಿನ ಜನರ ಆಚಾರ-ವಿಚಾರಗಳ ಅಧ್ಯಯನ ಮಾಡತೊಡಗಿದ್ದಾರೆ.

ಅಮೆರಿಕದ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸಹಿತ 13 ಮಂದಿಯ ತಂಡವೊಂದು ವಾರದ ಹಿಂದೆ ಕೋಟುಮಚಗಿಗೆ ಆಗಮಿಸಿದೆ. ಈ ತಂಡ ಜುಲೈ 25ರವರೆಗೆ ಈ ಗ್ರಾಮದಲ್ಲಿ ಅಧ್ಯಯನ ಕೈಗೊಳ್ಳಲಿದೆ. ಇಲ್ಲಿನ ಕೃಷಿ ಹಾಗೂ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಯ ಜೊತೆಗೆ ನೀರಿನ ಉಳಿತಾಯ, ಶೌಚಾಲಯ ಮೊದಲಾದ ಸಂಗತಿಗಳ ಕುರಿತು ಈ ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಲಿದ್ದಾರೆ.

ಕೋಟುಮಚಗಿಯತ್ತ: ಮೆಕ್ಸಿಕೊ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಧಾರವಾಡದವರಾದ ಡಾ. ರಘು ಮುರ್ತುಗಡ್ಡೆ ಹಾಗೂ ನ್ಯೂ ಮೆಕ್ಸಿಕೊದ ಡ್ಯಾನ್ ಯಂಗ್ ತಮ್ಮ ವಿದ್ಯಾರ್ಥಿಗಳಿಗೆ ಅಧ್ಯಯನದ ಸಲುವಾಗಿ ಕರ್ನಾಟಕದಲ್ಲಿ ಸ್ಥಳ ಹುಡುಕುತ್ತಿದ್ದಾಗ ಅವರಿಗೆ ಕೋಟುಮಚಗಿಯ ಹೆಸರು ಸೂಚಿಸಿದವರು ಗೋವಾದ ಸಾಗರ ಅಧ್ಯಯನ ಸಂಸ್ಥೆಯ ಸಂಶೋಧಕಕೋಟುಮಚಗಿಯವರೇ ಆದ ಡಾ. ಬಣಕಾರ.

ಈ ಸಂಬಂಧ 2010ರ ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿದ ತಂಡ ತಮ್ಮ ಉದ್ದೇಶ ತಿಳಿಸಿದೆ. ನಂತರ ಗದಗ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಈಗ ಅಧ್ಯಯನ ಕೈಗೊಂಡಿದೆ.

ಗ್ರಾಮವಾಸ್ತವ್ಯ: ಕಳೆದ ನಾಲ್ಕೈದು ದಿನಗಳಿಂದ ಈ ಗ್ರಾಮಕ್ಕೆ ಭೇಟಿ ನೀಡುತ್ತಿರುವ ತಂಡ ಶುಕ್ರವಾರ ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರೊಟ್ಟಿಗೆ ಸಮಾಲೋಚನೆಯಲ್ಲಿ ಪಾಲ್ಗೊಂಡರು. ಅಂದಾಜು ಎಂಟು ಸಾವಿರ ಜನಸಂಖ್ಯೆಯುಳ್ಳ ಹಿಂದುಳಿದ ಪ್ರದೇಶವಾದ ಕೋಟುಮಚಗಿಯಲ್ಲಿ ಶನಿವಾರ ಮುಂಜಾನೆಯಿಂದ ವಿವಿಧ ಕುಟುಂಬಗಳ ಜೊತೆ ಬೆರೆಯಲಿರುವ ಅವರು ಆ ಕುಟುಂಬಗಳ ಜೀವನ ಪದ್ಧತಿಯನ್ನು ಅರಿಯಲಿದ್ದಾರೆ. ಇದಕ್ಕಾಗಿ ಇಲ್ಲಿನ 15 ಕುಟುಂಬಗಳನ್ನು ಗುರುತಿಸಲಾಗಿದೆ. ಪ್ರತಿ ವಿದ್ಯಾರ್ಥಿಯೂ ಒಂದು ಕುಟುಂಬದೊಂದಿಗೆ ಒಂದು ದಿನ ಕಾಲ ಕಳೆಯಲಿದ್ದಾರೆ. ಹೀಗೆ ಸಮೀಕ್ಷೆ ಕೈಗೊಂಡು, ಇಲ್ಲಿನ ಜನರೊಡನೆ ಸಮಾಲೋಚಿಸಿ ನೀರಿನ ಸದ್ಬಳಕೆ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

ನೀರಿನ ಮಿತ ಬಳಕೆ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವನ್ನು ಇವರು ಹೊಂದಿದ್ದಾರೆ. `ಇದಕ್ಕಾಗಿ ಎರಡು ಶೌಚಾಲಯಗಳನ್ನು ಖರೀದಿಸಿ ತಂದಿದ್ದೇವೆ. ಮಲವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕುರಿತೂ ತಿಳಿಸಲಿದ್ದೇವೆ. ತೋಟದಲ್ಲಿ ಸಸಿ ನೆಡಲಿದ್ದೇವೆ. ಊರಿನ ನಕ್ಷೆ ತಯಾರಿಸಲಿದ್ದೇವೆ. ಇನ್ನಷ್ಟು ಯೋಜನೆಗಳ ಮೂಲಕ ಈ ಊರಿನ ಅಭಿವೃದ್ಧಿಗೆ ಸಹಕರಿಸುವ ಆಶಯ ನಮ್ಮದು~ ಎನ್ನುತ್ತಾರೆ ಡಾ. ಡ್ಯಾನ್ ಯಂಗ್ ಮಡದಿ, ಹುಬ್ಬಳ್ಳಿಯ ಶುಭಾ ದ್ವಿಭಾಷಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

`ನಮ್ಮೂರಿಗೆ ವಿದೇಶೀಗರು ಅಧ್ಯಯನಕ್ಕೆಂದು ಬಂದಿರುವುದು ಸಂತೋಷದ ವಿಷಯ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ಗ್ರಾಮ ಸುಧಾರಣೆಗೆ ಅವರು ನೀಡುವ ವರದಿಯಿಂದ ಇಲ್ಲಿಗೆ ಒಂದಿಷ್ಟು
ಯೋಜನೆಗಳು ಬರಬಹುದು~ ಎಂದು ಆಶಯ ವ್ಯಕ್ತಪಡಿಸುತ್ತಾರೆ ಕೋಟುಮಚಗಿ ಗ್ರಾಮ ಪಂಚಾಯಿತಿ. ಅಧ್ಯಕ್ಷ ಫಾಲಾಕ್ಷಯ್ಯ ಬಳಿಗೇರಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT