ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಪಾರ್ಕ್‌ನಲ್ಲಿ ಕಾಡುಪ್ರಾಣಿಗಳ ಸೃಷ್ಟಿ!

Last Updated 20 ಜುಲೈ 2012, 10:40 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಗಾಂಧಿಪಾರ್ಕ್ ನಲ್ಲಿ ಕಾಡುಪ್ರಾಣಿಗಳ ಸೃಷ್ಟಿ ಕಾರ್ಯ ಭರದಿಂದ ಸಾಗಿದೆ! ನಾಲ್ಕಾಳು ಎತ್ತರದ ಜಿರಾಫೆ, ಕೆಂಗಣ್ಣು ಬಿಡುವ ಕರಡಿ, ಚಂಗನೆ ಜಿಗಿಯುವ ಜಿಂಕೆಗಳು, ಬಿರುಸು ನೋಟದ ಘೇಂಡಾಮೃಗ -ಹೀಗೆ ಹತ್ತು ಹಲವು ಪ್ರಾಣಿಗಳು ಇಲ್ಲಿ `ಜೀವಕಳೆ~ ತುಂಬಿಕೊಂಡಿವೆ.

ಇವೆಲ್ಲವೂ ಸಿಮೆಂಟಿನಲ್ಲಿ ಅರಳಿದ ಪ್ರಾಣಿಗಳು. ಈ ಕಾಡುಪ್ರಾಣಿಗಳನ್ನು ನಾಡಿನಲ್ಲಿ ಸೃಷ್ಟಿಸುತ್ತಿರುವವರು ದಾವಣಗೆರೆಯ ಲಲಿತ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು.

ಒಂದಕ್ಕೊಂದು ಮುದ್ದಾಡುವ ಜೀಬ್ರಾಗಳು, ಕಳ್ಳನೋಟ ಬೀರುವ ಕರಡಿಗಳು ಈಗಷ್ಟೇ ಆಕಾರ ಪಡೆಯುತ್ತಿದ್ದು, ಎರಡು ಜಿರಾಫೆ, ಎರಡು ಘೇಂಡಾಮೃಗ, ಎರಡು ಜಿಂಕೆಗಳು ಈಗಾಗಲೇ ಜೀವ ಪಡೆದು, ಸಾರ್ವಜನಿಕರ ಆಕರ್ಷಣೆಗೆ, ಉದ್ಯಾನಕ್ಕೆ ಆಗಮಿಸುವ ಮಕ್ಕಳ ವಿಶೇಷ ಕುತೂಹಲಕ್ಕೆ ಕಾರಣವಾಗಿವೆ.

ನಾಲ್ಕು ವಿದ್ಯಾರ್ಥಿಗಳ ತಂಡ ಹಗಲು-ರಾತ್ರಿ ಈ ಕಾರ್ಯಾಚರಣೆಯಲ್ಲಿ ತೊಡಗಿದೆ. ಚಿತ್ರದುರ್ಗದ ಚಿಕ್ಕಜಾಜೂರಿನ ಎಂ. ಮಾರುತಿ, ರಾಣೇಬೆನ್ನೂರಿನ ಮಂಜುನಾಥ, ಕೊಟ್ಟೂರಿನ ವೀರಾಚಾರ್, ದಾವಣಗೆರೆಯ ಹಾಲೇಶ್ ಈ ತಂಡದಲ್ಲಿದ್ದು, ತಾವು ಕಲಿಯುವ ಶಿಕ್ಷಣದ ಒಂದು ಭಾಗವಾಗಿ ಸೃಷ್ಟಿಕಾರ್ಯದ ವ್ರತ ಕೈಗೊಂಡಿದ್ದಾರೆ. 

`ಒಂದು ಜಿರಾಫೆ 18 ಅಡಿ ಇದೆ. ಇನ್ನೊಂದು 16 ಅಡಿ ಎತ್ತರವಿದೆ. ಇವುಗಳ ನಿರ್ಮಾಣಕ್ಕೆ 12 ದಿವಸ ಹಿಡಿಯಿತು. ಇವುಗಳ ನಿರ್ಮಾಣಕ್ಕೆ ಮುಖ್ಯವಾಗಿ ಸಿಮೆಂಟ್, ಕಬ್ಬಿಣದ ರಾಡು, ಮೇಷ್, ಬೆಂಡಿಂಗ್ ವೈರ್‌ಗಳನ್ನು ಬಳಸುತ್ತೇವೆ. ಪ್ರಾಣಿಗಳ ಮುಖ, ಅವುಗಳ ಹಾವಭಾವ ಮೂಡಿಸುವುದು ಮಾತ್ರ ಬಹಳ ಸವಾಲಿನ ಕೆಲಸ~ ಎನ್ನುತ್ತಾರೆ ಮಾರುತಿ.

ಒಂದು ಜೀಬ್ರಾ ನಿರ್ಮಾಣಕ್ಕೆ 6ರಿಂದ 7 ಚೀಲ ಸಿಮೆಂಟ್ ಬೇಕು. ಪ್ರಾಣಿಗಳ ಫೋಟೋ ನೋಡಿಕೊಂಡು, ಅದರಂತೆ ನಿರ್ಮಿಸುವುದು ನಮ್ಮ ಜವಾಬ್ದಾರಿ. ಕೇವಲ ಸಿಮೆಂಟ್ ಒಂದೇ ಅಲ್ಲ ಲೋಹ, ಫೈಬರ್ ಮತ್ತು ಮೇಣದ ಕಲಾಕೃತಿಗಳನ್ನೂ ನಾವು ನಿರ್ಮಿಸುತ್ತೇವೆ. ನಾವು ನಿರ್ಮಿಸಿದ ಪ್ರಾಣಿ-ಪಕ್ಷಿಗಳ ಕಲಾಕೃತಿಗಳು ಕುವೆಂಪು ವಿಶ್ವವಿದ್ಯಾಲಯ ಆವರಣ, ಜಾವಳ್ಳಿಯ ಜ್ಞಾನದೀಪ ಆವರಣದಲ್ಲಿ ಕಂಗೊಳಿಸುತ್ತಿವೆ. ಈಗಾಗಲೇ ಜನರ ಮನಸ್ಸು ಸೆಳೆದಿದ್ದು, ಕಣ್ಮರೆ ಆಗುತ್ತಿರುವ ಪ್ರಾಣಿ ಸಂಕುಲವನ್ನು ಈ ಮೂಲಕ ಉಳಿಸುವ ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಸಿ. ಮಂಜುನಾಥ.

ಇಲ್ಲಿನ ಕೆಲಸ ಇನ್ನೂ ಒಂಬತ್ತು ದಿವಸ ಹಿಡಿಯಬಹುದು. ಇದು ಮುಗಿಯುತ್ತಿದ್ದಂತೆ ಬ್ಯಾಡಗಿ, ಬೆಂಗಳೂರಿನಲ್ಲಿ ಇದೇ ರೀತಿ ಕೆಲಸ ಕಾಯುತ್ತಿದೆ ಎಂದು ಮಾತು ಸೇರಿಸಿದರು ಹಾಲೇಶ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT