ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿವನವೆಂಬ ಧರಣಿಯ ತಾಣ

Last Updated 1 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಕೋಲಾರ: ಮಹಾತ್ಮಾ ಗಾಂಧೀಜಿ ಒಬ್ಬರೇ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತೇ ಇರುವ ಇದು ನಗರದ ಗಾಂಧಿವನ. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ವೃತ್ತರೂಪದಲ್ಲಿರುವ ಈ ವನವನ್ನು ನಿತ್ಯ ಬಳಸಿಕೊಂಡೇ ಸಂಚರಿಸಿದರೂ ಅದರ ಕಡೆಗೆ ಗಮನ ಹರಿಸುವವರು ಅತಿ ಕಡಿಮೆ. ಈ ವನದ ಪಕ್ಕದಲ್ಲೇ ನಗರ ಠಾಣೆ ಇದೆ.

ಆದರೆ ಅಲ್ಲಿನ ಪೊಲೀಸರೂ, ಯಾವುದಾದರೂ ಧರಣಿ ನಡೆಯುವ ವೇಳೆ ಬಂದೋಬಸ್ತ್ ಸಂದರ್ಭದಲ್ಲಿ ಮಾತ್ರ ಆ ಕಡೆಗೆ ಬರುತ್ತಾರೆ. ದೂರು ಕೊಡಲು ಬರುವವರಿಗೆ ವನದ ಕಾಪೌಂಡ್ ಆಚೆಗಿರುವ ಕೆಲವು ಮರಗಳ ನೆರಳಷ್ಟೇ ಸಾಕು.

ಆವರಿಸಿದ ಪುಟ್ಟಪುಟ್ಟ ಕಾಲುದಾರಿಗಳುದ್ದಕ್ಕೂ ಸಿಮೆಂಟು ನೆಲಹಾಸು, ಅಲಂಕಾರಿಕ ಗಿಡಗಳ ಸಾಲು, ನೀರಿಲ್ಲದ, ಅಪೂರ್ಣಗೊಂಡ ಕಾರಂಜಿ ತೊಟ್ಟಿ, ನಾಲ್ಕಾರು ಬೃಹತ್ ಮರಗಳಿರುವ ಈ ಗಾಂಧಿವನ ನಿಜಕ್ಕೂ ನಿರಂತರವಾಗಿ ಬೇಕಾಗಿರುವುದು ಇಬ್ಬರಿಗೆ ಮಾತ್ರ. ವನವನ್ನು ನಿರ್ವಹಿಸುವ ಹೊಣೆ ಹೊತ್ತ ನಗರಸಭೆ ಸಿಬ್ಬಂದಿಗೆ ಮತ್ತು ಆಗಾಗ್ಗೆ ಧರಣಿ ನಡೆಸುವ ಸಂಘಟನೆಗಳ ಕಾರ್ಯಕರ್ತರಿಗೆ.

ದಿನವೂ ವನವನ್ನು ಸ್ವಚ್ಛಗೊಳಿಸಿದ ಬಳಿಕ ನಗರಸಭೆ ಸಿಬ್ಬಂದಿ, ಧರಣಿ ಮುಗಿಸಿ ಕಾರ್ಯಕರ್ತರು ನಿರ್ಗಮಿಸಿದ ಬಳಿಕ ಮತ್ತೆ ವನ ಮೌನಕ್ಕೆ ಜಾರುತ್ತದೆ. ಆಗಾಗ್ಗೆ ಇಲ್ಲಿ ಮೌನ ಧರಣಿಗಳೂ ನಡೆಯುತ್ತವೆ.

ಇವರನ್ನು ಹೊರತುಪಡಿಸಿದರೆ, ಜಿಲ್ಲಾಡಳಿತ ಅ.2ರಂದು ನಡೆಸುವ ಗಾಂಧಿ ಜಯಂತಿ ಮತ್ತು ಅ.31ರಂದು ನಡೆಸುವ ಹುತಾತ್ಮರ ದಿನಾಚರಣೆಯಂದು ಈ ವನಕ್ಕೆ ವಿಶೇಷ ಕಳೆ ಬರುತ್ತದೆ. ಏಕೆಂದರೆ ಎರಡೂ ದಿನ ಈ ವನದ ತುಂಬ ಹಲವು ಶಾಲೆಗಳ ನೂರಾರು ಮಕ್ಕಳು ನೆರೆಯುತ್ತಾರೆ. ವನದ ಆಚೀಚೆ ನೂರಾರು ನಾಗರಿಕರೂ ನೆರೆಯುತ್ತಾರೆ. ಸರ್ವಧರ್ಮ ಪ್ರಾರ್ಥನೆ ಇಲ್ಲಿ ಮೊಳಗುತ್ತದೆ. ಇವೆರಡೂ ಕಾರ್ಯಕ್ರಮ ಮುಗಿದ ಬಳಿಕ ಗಾಂಧೀಜಿಯೊಡನೆ ವನವೂ ಒಂಟಿಯಾಗುತ್ತದೆ. 

ಹಲವು ವರ್ಷಗಳ ಹಿಂದೆ ಪ್ರಮುಖ ರಾಜಕೀಯ ಪಕ್ಷಗಳ ಬಹಿರಂಗ ಸಭೆಗಳು, ಚುನಾವಣೆ ಪ್ರಚಾರ ಸಭೆಗಳಿಗೂ ಈ ವನ ಪ್ರಮುಖ ವೇದಿಕೆಯಾಗಿತ್ತು. ಸನ್ಮಾನ, ಆರ್ಕೇಷ್ಟ್ರಾ, ಸುಗಮ ಸಂಗೀತ ಕಾರ್ಯಕ್ರಮಗಳ ಕೇಂದ್ರವೂ ಆಗಿತ್ತು. ಈ ವನದ ವೇದಿಕೆಯಲ್ಲೇ ಭುವನೇಶ್ವರಿ ಕನ್ನಡ ಸಂಘದವರು ಅದ್ದೂರಿ ಕನ್ನಡ ರಾಜ್ಯೋತ್ಸವನ್ನು ಐದಾರು ದಿವಸ ನಡೆಸುತ್ತಿದ್ದರು.

ರಾಜ್ಯೋತ್ಸವದ ಸಾಂಸ್ಕೃತಿ ಕಾರ್ಯಕ್ರಮಗಳು ರಂಗಮಂದಿರಕ್ಕೆ ಸ್ಥಳಾಂತರಗೊಂಡ ಬಳಿಕ ಗಾಂಧಿವನದಲ್ಲಿ ರಾಜ್ಯೋತ್ಸವ ಕಳೆಗುಂದಿತು. ಉದ್ಘಾಟನೆ ಮಾತ್ರ ವನದ ಮುಂಭಾಗದಲ್ಲಿ ನಡೆಯುತ್ತದೆ. ಪ್ರತಿ ವರ್ಷವೂ ಗಣೇಶ ಪ್ರತಿಮೆಗಳ ಪ್ರತಿಷ್ಠಾಪನೆಗೂ ಗಾಂಧಿವನದ ಮುಂಭಾಗ ಬಳಕೆಯಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಗಾಂಧಿವನವು ವೇದಿಕೆಯ ಮರೆಗೆ ಸರಿದಿರುತ್ತದೆ.

ಉಳಿದಂತೆ ಈ ವನದಲ್ಲಿ, ಗಾಂಧೀಜಿ ಹೆಚ್ಚು ಇಷ್ಟಪಡುತ್ತಿದ್ದ, ಸಾಮಾನ್ಯ ಜನರಾಗಲೀ ಮತ್ತು ಮಕ್ಕಳಾಗಲಿ ಕಂಡು ಬರುವುದೇ ಇಲ್ಲ. ಪೊಲೀಸ್ ಠಾಣೆಯು ಎದುರಿಗೇ ಇರುವುದರಿಂದ ಹಾಗೂ ಇದು ತೆರೆದ ಉದ್ಯಾನವಾಗಿರುವುದರಿಂದ ಇಲ್ಲಿಗೆ ಪೋಲಿ ಹುಡುಗರಾಗಲೀ, ಪ್ರೇಮಿಗಳಾಗಲೀ ಬರುವುದಿಲ್ಲ. ಪಾರ್ಕುಗಳಲ್ಲಿ ಮೈಮರೆತು ನಿದ್ದೆ ಹೋಗುವ ಅಭ್ಯಾಸವಿರುವವರಿಗೂ ಇಲ್ಲಿ ಅವಕಾಶವಿಲ್ಲ. ಒಟ್ಟಾರೆ ಜನಬಳಕೆಯ ಅವಕಾಶಗಳು ಅತಿ ಕಡಿಮೆ. ವಾಣಿಜ್ಯ ಚಟುವಟಿಕೆಗಳ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆ ಇದೇ ವನದಿಂದ ಆರಂಭವಾಗುವುದು ವಿಶೇಷ.

ಗಾಂಧಿವನವನ್ನು ಸ್ಥಾಪಿಸಿರುವುದು ಉತ್ತಮವಾದ ಕಾರ್ಯವೇ. ಅಲ್ಲಿನ ವೇದಿಕೆಗಳು ಈಗ ಕೆಲವೇ ಧರಣಿ, ಕಾರ್ಯಕ್ರಮಗಳಿಗೆ ಮಾತ್ರ ಸೀಮಿವಾಗಿದೆ. ಎಲ್ಲ ಕಾರ್ಯಕ್ರಮಗಳೂ ಇಲ್ಲಿಯೇ ನಡೆಯುವಂತಾದರೆ ಎಲ್ಲರಿಗೂ ತಲುಪುತ್ತದೆ ಎನ್ನುತ್ತಾರೆ ಹಿರಿಯ ನಾಗರಿಕರಾದ ಜಗದೀಶ್.

ವನವನ್ನು ಗಾಂಧೀಜಿಯ ಸಂದೇಶಗಳ ಸ್ಮೃತಿಯ ದೃಷ್ಟಿಯಿಂದಲೂ ನವೀಕರಣ ಮಾಡಬೇಕು. ವನದಲ್ಲಿ ಗಾಂಧೀಜಿ ಸಂದೇಶದ ಫಲಕಗಳನ್ನು ಅಳವಡಿಸುವುದು ಅಗತ್ಯ. ಮಹಾತ್ಮಾ ಗಾಂಧೀಜಿ ಬಗ್ಗೆಯೇ ಮಕ್ಕಳಲ್ಲಿ ಅರಿವು ಮೂಡಿಸುವ ಶಾಲಾ -ಕಾಲೇಜು ಮಟ್ಟದ ಕಾರ್ಯಕ್ರಮ, ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ, ಸ್ಪರ್ಧೆ, ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ವನದಲ್ಲಿಯೇ ಸಂಘಟಿಸುವುದರಿಂದ ಹೆಚ್ಚು ಪ್ರಯೋಜನವಿದೆ ಎನ್ನುತ್ತಾರೆ ಅವರು.

33 ವರ್ಷ: ಗಾಂಧಿವನದಲ್ಲಿರುವ ಗಾಂಧಿ ಪ್ರತಿಮೆಯನ್ನು ಪುರಸಭೆಯು 33 ವರ್ಷದ ಹಿಂದೆ ನಿರ್ಮಿಸಿತ್ತು. 1979ರ ಫೆ.8ರಂದು ಅಂದಿನ ರಾಜ್ಯಪಾಲ ಗೋವಿಂದ ನಾರಾಯಣ ಅನಾವರಣ ಮಾಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಎಚ್.ನರಸಿಂಹಯ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT