ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಡ್‌ಫಾದರ್ ಇಲ್ಲದ ಹಳ್ಳಿಹೈದ

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ಚಿತ್ರರಂಗದ ಹಿನ್ನೆಲೆಯಿಲ್ಲದೆ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಶಾರುಖ್‌ಖಾನ್‌ಗೆ ಹೋಲಿಸಿಕೊಳ್ಳುವ ಅಕುಲ್ ತಾವೂ ಅವರಂತೆ `ಗಾಡ್‌ಫಾದರ್~ ಇಲ್ಲದೆ ಬೆಳೆದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ತಮ್ಮ ಭವಿಷ್ಯದ ಬಗ್ಗೆ ಈಗಲೂ  ಅವರು ಭರವಸೆ ಇಟ್ಟುಕೊಂಡಿದ್ದಾರೆ. ಇದೋ ಅವರ ಮಾತು...

ಹತ್ತು ವರ್ಷ... ಚಿತ್ರರಂಗಕ್ಕೆ ಕಾಲಿಡಬೇಕೆಂಬ ನನ್ನ ಕನಸು ನನಸಾಗಲು ತೆಗೆದುಕೊಂಡಿದ್ದು ಬರೋಬ್ಬರಿ ಹತ್ತು ವರ್ಷ. ಅಷ್ಟೂ ದಿನ ಅನುಭವಿಸಿದ ನೋವು, ಸಂಕಟ, ಯಾತನೆ... ಹಂಚಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲಿ ರೆಡ್‌ಕಾರ್ಪೆಟ್ ಹಾಕಿ ಸ್ವಾಗತಿಸುವವರು ಇರಲಿಲ್ಲ. ನನ್ನ ಕುಟುಂಬಕ್ಕೆ ಚಿತ್ರರಂಗದ ಹಿನ್ನೆಲೆಯೂ ಇರಲಿಲ್ಲ.
ಈ ಎಲ್ಲಾ `ಇಲ್ಲ~ಗಳ ನಡುವೆಯೇ ಮೂಟೆಯಷ್ಟು ಹಟದೊಂದಿಗೆ ಕಿರುತೆರೆಗೆ ಕಾಲಿಟ್ಟೆ.

ಉದಯ ಟೀವಿಯ `ಆಘಾತ~ ನನ್ನ ಮೊದಲ ಧಾರಾವಾಹಿ. ಆ ಬಳಿಕ ಅವಕಾಶಗಳ ಕದ ತೆರೆಯಿತು. `ಆತ್ಮೀಯ~ ಚಿತ್ರಕ್ಕೆ ನಾಯಕನಾಗುವ ಅವಕಾಶ ಸಿಕ್ಕಿತು. ಈಗ ಗೋವಿಂದರಾಜು ನಿರ್ದೇಶನದ `ಗಗನಚುಕ್ಕಿ~ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರೀಕರಣ ಬಹುತೇಕ ಮುಗಿದಿದ್ದು ಡಬ್ಬಿಂಗ್ ಹಂತದಲ್ಲಿದೆ. ಭಾವನಾ ರಾವ್ ಚಿತ್ರದ ನಾಯಕಿ.

ನನ್ನ ಊರು ಮಹಾರಾಷ್ಟ್ರ. 15ನೇ ವಯಸ್ಸಿನವರೆಗೆ ಕನ್ನಡದ ಗಂಧಗಾಳಿಯಿಲ್ಲದೆ ಬೆಳೆದೆ. ಬಳಿಕ ಬೆಂಗಳೂರು ಸೆಳೆಯಿತು. ಕನ್ನಡ ಕಲಿತಿದ್ದು ಇಲ್ಲಿ ಬಂದ ಬಳಿಕವೇ. ಅಷ್ಟು ಬೇಗ ಹೇಗೆ ಅಚ್ಚಕನ್ನಡ ಕಲಿತೆ ಎಂದು ಇಂದಿಗೂ ಹಲವರು ನನ್ನ ಬಳಿ ಅಚ್ಚರಿಯಿಂದ ಪ್ರಶ್ನಿಸುತ್ತಾರೆ. ಅವರಿಗೆ ನಾನು ಹೇಳುವುದಿಷ್ಟೇ- ಕನ್ನಡ ಭಾಷೆ ಕಲಿಯಲು ಕರ್ನಾಟಕದಲ್ಲೇ ಹುಟ್ಟಬೇಕಾಗಿಲ್ಲ. ಭಾಷೆಯನ್ನು ಪ್ರೀತಿಸುವ ಎಲ್ಲರೂ ಕನ್ನಡಿಗರೇ.

ಇಂದು ನಾನು ಬದುಕು ಕಟ್ಟಿಕೊಂಡಿರುವುದೂ ಅದೇ ಭಾಷೆಯಿಂದ.
ಓದಿದ್ದು ಎಂಬಿಎ. ಒಂದಷ್ಟು ವರ್ಷ ಸಾಫ್ಟ್‌ವೇರ್, ಅನಿಮೇಷನ್, ಎಚ್‌ಆರ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೆ. ಆಗೆಲ್ಲ ಬಣ್ಣದ ಲೋಕ ಕೈಚಾಚಿ ಕರೆಯುತ್ತಿತ್ತು. ಅವಕಾಶಗಳಿಗಾಗಿ ಕಾಯುತ್ತಿದ್ದೆ. ಕಿರುತೆರೆ ಹಾಗೂ ಸಿನಿಮಾ ಮಧ್ಯೆ ನನಗೆ ಆಯ್ಕೆಗಳಿರಲಿಲ್ಲ.

ಜನಸಾಮಾನ್ಯರನ್ನು ರಂಜಿಸಬೇಕು ಎಂದು ನಾನು ರಂಗಕ್ಕಿಳಿದವನು. ಮಾಧ್ಯಮ ಯಾವುದಾದರೂ ಸರಿ, ರಂಜನೆ ಮುಖ್ಯ. `ಪ್ಯಾಟಿ ಮಂದಿ ಹಳ್ಳೀಗ್ ಬಂದ್ರು...~ ಮಾಡುವಾಗ ಭಯವಿತ್ತು. ಹೊಸ ಪ್ರಕಾರದ ಕಾರ್ಯಕ್ರಮವಾದ್ದರಿಂದ ಜನ ಸ್ವೀಕರಿಸುವ ಬಗ್ಗೆ ಅನುಮಾನಗಳೂ ಇದ್ದವು. ಮೊದಲು ಹಳ್ಳಿ ವಾತಾವರಣಕ್ಕೆ ನಾನು ಹೊಂದಿಕೊಳ್ಳಬೇಕಿತ್ತು. ಬಳಿಕ ಸ್ಪರ್ಧಿಗಳನ್ನೂ ತಯಾರು ಮಾಡಬೇಕಿತ್ತು. ಪ್ರಸಾರವಾದ ಎರಡು ವಾರಗಳಲ್ಲೇ ಟಿಆರ್‌ಪಿ ರೇಟಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದು ಅಚ್ಚರಿ ಮೂಡಿಸಿತ್ತು.

ನೀವು ಕ್ಯಾಮೆರಾ ಕಣ್ಣಿಗಾಗಿ ಅಳುತ್ತೀರಿ ಎಂಬ ಅಪವಾದ ನಮ್ಮ ಮೇಲಿತ್ತು. ಅದು ಖಂಡಿತಾ ಸುಳ್ಳು. ಟಿಆರ್‌ಪಿಗಾಗಿ ನಾವು ನಟಿಸಿದ್ದೇ ಇಲ್ಲ. ಅಲ್ಲಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಡುತ್ತಿದ್ದೆವು, ಅಷ್ಟೆ. ಮೂರು ತಿಂಗಳು ಮನೆಯಿಂದ ದೂರ ಇರುವಾಗ ಸ್ಪರ್ಧಿಗಳಲ್ಲಿ ಈ ರೀತಿಯ ಅಸಹನೆ ಮೂಡುವುದು ಸಹಜವೂ ಆಗಿತ್ತು. ಆ ಸಂದರ್ಭಗಳನ್ನು ನಾವು ಸೂಕ್ತವಾಗಿ ಬಳಸಿಕೊಂಡೆವು ಅಷ್ಟೆ.

ನೀವು ಮುಖಕ್ಕೆ ಹೊಡೆದಂತೆ ಮಾತಾಡುತ್ತೀರಿ, ಬೈಯುತ್ತೀರಿ ಎಂಬ ಟೀಕೆಗಳೂ ಸಾಕಷ್ಟು ಬಂದಿದ್ದವು. ನಡವಳಿಕೆ ಸರಿ ಇಲ್ಲ ಎನಿಸಿದಾಗ, ತಪ್ಪು ಮಾಡಿದಾಗ ನಾನೂ ಬೈಯುತ್ತಿದ್ದೆ, ಹೊಡೆಯುತ್ತಿದ್ದೆ, ಕುಳಿತು ಬುದ್ಧಿ ಹೇಳುತ್ತಿದ್ದೆನೇ ಹೊರತು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲಾ ಸಮಸ್ಯೆಯನ್ನೂ ಸಾವಧಾನದಿಂದ ಬಗೆಹರಿಸುತ್ತಿದ್ದೆ. ನಟ ಸುದೀಪ್ ಜತೆ ಕುಳಿತು ಕಾರ್ಯಕ್ರಮ ನಡೆಸುತ್ತಿದ್ದ ದಿನಗಳು ಖುಷಿ ನೀಡುತ್ತಿದ್ದವು.

ಸಿನಿಮಾಗೆ ಹೋಲಿಸಿದರೆ ಕಿರುತೆರೆಯಲ್ಲಿ ಪ್ರತಿಕ್ರಿಯೆ ತಕ್ಷಣ ಸಿಗುತ್ತದೆ. ಸಿನಿಮಾ ಚಿತ್ರೀಕರಣ ಆರಂಭಗೊಂಡು ಬಿಡುಗಡೆ ಹೊತ್ತಿಗೆ ಕನಿಷ್ಠ ವರ್ಷವಾಗಿರುತ್ತದೆ. ಆದರೆ ರಿಯಾಲಿಟಿ ಶೋ ಐದರಿಂದ ಆರು ದಿನಗಳ ಒಳಗೆ ಪ್ರಸಾರವಾಗುತ್ತದೆ. ಜನ ಗುರುತಿಸುವುದು ಟಿವಿ ಮಾಧ್ಯಮದ ಮೂಲಕವೇ.

ಮಾತು ರಸವತ್ತಾಗಿರಬೇಕು. ಸಮಯಕ್ಕೆ ತಕ್ಕಂತಿರಬೇಕು. ಬೋರು ಹೊಡೆಸುವಂತೆ ಇರಬಾರದು. ಕೇಳಿದವರು ಚೆನ್ನಾಗಿದೆ ಅನ್ನುವಂತಿರಬೇಕು. ನಾನು ಮಾತಿಗೆ ಸಿದ್ಧತೆ ನಡೆಸಿಕೊಂಡವನಲ್ಲ. ಹೇಳಲೇಬೇಕಾದ ಒಂದೆರಡು ಸಂಗತಿಗಳನ್ನು ಸಣ್ಣ ಚೀಟಿಯಲ್ಲಿ ಬರೆದಿದ್ದು ಬಿಟ್ಟರೆ ಬೇರೆ ಸ್ಕ್ರಿಪ್ಟ್ ಹಿಡಿದಿದ್ದು ಇಲ್ಲ. ಒಂದು ವೇಳೆ ಹಿಡಿದರೂ ಬ್ಬೆ ಬ್ಬೆ ಬ್ಬೇ ಅನ್ನಬೇಕೇನೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT