ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಣಗಟ್ಟೆ ಮಾಯಮ್ಮ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಾಣಗಟ್ಟೆಯ ಮಾಯಮ್ಮನ ದೇವಸ್ಥಾನ ಕಳೆದ ಒಂದು ದಶಕದಿಂದೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಮಾಯಮ್ಮ ತಾಯಿ ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವಳು.
 
ಆ ತಾಯಿ ನೂರಾರು ವರ್ಷಗಳ ಹಿಂದೆ ತನ್ನ ವಾಹನ ಕೋಣನ ಮೇಲೆ ಕುಳಿತು ಗಾಣಗಟ್ಟೆಗೆ ಬಂದು ನೆಲೆಸಿದಳು ಎಂದು ಈ ದೇವಸ್ಥಾನದ ಭಕ್ತರು ಹೇಳುತ್ತಾರೆ. ಇದಕ್ಕೆ ಯಾವ ದಾಖಲೆಗಳೂ ಇಲ್ಲ.

ಕಷ್ಟಗಳು, ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುವ ಭಕ್ತರಿಗೆ ಮಾಯಮ್ಮ ತಾಯಿ ಅಭಯ ಹಸ್ತ ಚಾಚಿ ರಕ್ಷಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಗಾಣಗಟ್ಟೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ದೇವ-ದೇವತೆಗಳಿಗೆ ಭಕ್ತರು ಹಣ್ಣು, ಕಾಯಿ, ಹೂ ಇತ್ಯಾದಿಗಳನ್ನು ತಮ್ಮ ಭಕ್ತಿಯ ಸಂಕೇತವಾಗಿ ಅರ್ಪಿಸುವ ಪರಿಪಾಠ ಇದ್ದರೆ ಮಾಯಮ್ಮನಿಗೆ ಹಣವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಭಕ್ತರು ತಮ್ಮ ಶಕ್ತಿ ಇದ್ದಷ್ಟು ಹಣವನ್ನು ಕಾಣಿಕೆಯಾಗಿ ಅರ್ಪಿಸುವ ಹರಕೆ ಹೊತ್ತುಕೊಳ್ಳುತ್ತಾರೆ.

ಉದಾಹರಣೆಗೆ ಮಕ್ಕಳಿಲ್ಲದ ಕೆಲ ಭಕ್ತರು ಹರಕೆ ಕಟ್ಟಿಕೊಂಡ ನಂತರ ಹುಟ್ಟಿದ ಮಗುವಿನ ತೂಕದಷ್ಟು ಹಣ ನೀಡುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನು ಕೆಲವರು ಮಗುವಿನ ತೂಕದಷ್ಟು ಹೂ, ಹಣ್ಣು, ಬೆಲ್ಲ ಇತ್ಯಾದಿಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಸೀರೆ, ಚಿನ್ನದ ಬಳೆ, ಗಾಜಿನ ಬಳೆಗಳನ್ನು ಹರಕೆ ರೂಪದಲ್ಲಿ ಸಲ್ಲಿಸುವ ಪರಿಪಾಠವೂ ಇದೆ.

ಮಾಯಮ್ಮ ದೇವಸ್ಥಾನಕ್ಕೆ ಎಲ್ಲಾ ಧರ್ಮ ಹಾಗೂ ಜಾತಿಗಳ ಜನರು ಬರುತ್ತಾರೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಮತ್ತು ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ.
 
ಅಮ್ಮನ ದರ್ಶನಕ್ಕೆ ಜನರು ಕಾತುರದಿಂದ ಕಾಯುವುದನ್ನು ಇಲ್ಲಿ ಕಾಣಬಹುದು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮವಾಸ್ಯೆಯ ದಿನಗಳಂದು ನೂರಾರು ಜನರು ದೇವಿಯ ದರ್ಶನಕ್ಕೆ ಬರುತ್ತಾರೆ.

ಪ್ರತಿ ದಿನ ಸಂಜೆ 6.30ಕ್ಕೆ ದೇವಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರು ಸುತ್ತಿಸಿ ಪುನಃ ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯ ಇಲ್ಲಿ ಬೆಳೆದು ಬಂದಿದೆ. ಈ ಸಮಯದಲ್ಲಿ ಭಕ್ತರು ತಮ್ಮ ಕೋರಿಕೆ  ನೆರವೇರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಎರಡು ಪ್ರತ್ಯೇಕ ಚೀಟಿಗಳಲ್ಲಿ ಬರೆದು ದೇವಸ್ಥಾನದ ಯಾವುದೋ ಮೂಲೆಯಲ್ಲಿ  ಮಣ್ಣಿನ ಕೆಳಗೆ ಬಚ್ಚಿಡುತ್ತಾರೆ.

ದೇವಿಯನ್ನು ಹೊತ್ತ ಅರ್ಚಕರು ಚೀಟಿ ಇರುವ ಸ್ಥಳ ಪತ್ತೆ ಹಚ್ಚಿ ತೆಗೆದುಕೊಡುತ್ತಾರೆ. ಅದರ ಆಧಾರದ ಮೇಲೆ ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಯ ಸಾಧ್ಯ-ಅಸಾಧ್ಯಗಳ ಬಗ್ಗೆ ಚಿಂತಿಸುತ್ತಾರೆ. ಒಟ್ಟಿನಲ್ಲಿ ಮಾಯಮ್ಮಗೆ ನಡೆಕೋ, ಪಡೆದುಕೋ ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

ಮಾಯಮ್ಮನ ಸನ್ನಿಧಿಯಲ್ಲಿ ಒಂದು ರಾತ್ರಿ ಕಳೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕೆಲವರು ದೇವಸ್ಥಾನ ಬಳಿಯೇ ಒಂದು ರಾತ್ರಿ ಕಳೆಯುತ್ತಾರೆ.

ಈ ವರ್ಷ ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ಕಾಲ ದೇವಿ ಪುರಾಣ ಪ್ರವಚನ ನಡೆಯಿತು. ಉಳಿದಂತೆ ಕಾರ್ತಿಕ ಮಾಸದಲ್ಲಿ ದೇವಿಯ ಉತ್ಸವ, ವಿಶೇಷ ಪೂಜೆ ನಡೆಯುತ್ತದೆ. ಉಳಿದಂತೆ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ದೇವಸ್ಥಾನಕ್ಕೆ ಬರುತ್ತಾರೆ.

 ಪ್ರತಿ ವರ್ಷ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಮಾಯಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಥೋತ್ಸವ ಸಮಯದಲ್ಲಿ ಮಾತ್ರ ದೇವಿಗೆ `ಬಲಿ ಸೇವೆ~ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ  ಭಕ್ತರು ದೇವಸ್ಥಾನದ  ಬಯಲಿನಲ್ಲಿಯೇ ಅಡುಗೆ ಮಾಡಿ ಅಮ್ಮನಿಗೆ ನೈವೇದ್ಯ ಮಾಡುತ್ತಾರೆ.

 ಪ್ರತಿ ಅಮವಾಸ್ಯೆಗೆ ಅನ್ನ ಸಂತರ್ಪಣೆಯನ್ನು ದೇವಸ್ಥಾನದಲ್ಲಿ ನಡೆಯುತ್ತದೆ. ಇಲ್ಲಿ ತಂಗಲು ಸದ್ಯ 15 ಕೊಠಡಿಗಳಿವೆ. ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ದೊಡ್ಡ ಕಲ್ಯಾಣ ಮಂಟಪದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಒಂದು ವರ್ಷದಿಂದ ಕೋಟಿ ರೂಗಳ ವೆಚ್ಚದಲ್ಲಿ ದೇವಸ್ಥಾನಕ್ಕೆ ರಾಜಗೋಪುರ  ನಿರ್ಮಾಣವಾಯಿತು. ಇದರ ವೆಚ್ಚವನ್ನು ಭಕ್ತರೇ ನಿರ್ವಹಿಸಿದರು.

ಗಾಣಗಟ್ಟೆಗೆ ಹೋಗಲು ಕೊಟ್ಟೂರು, ಕೂಡ್ಲಿಗಿ, ಜಗಳೂರು, ಹೊಸಹಳ್ಳಿ, ಉಜ್ಜಿನಿಯಿಂದ ಬಸ್ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದೆ.

ದೇವಸ್ಥಾನದಲ್ಲಿ ವಿಶೇಷ ಸೇವೆಗಳೇನೂ ಇಲ್ಲ. ಅರ್ಚನೆ, ಪೂಜೆ ಸಂದರ್ಭದಲ್ಲಿ ಭಕ್ತರು ತಮಗೆ ಇಷ್ಟವಾದ ವಸ್ತುಗಳನ್ನು ಅಮ್ಮನಿಗೆ ಸಲ್ಲಿಸಿ ಪೂಜೆ ಮಾಡಸಲು ಅವಕಾಶವಿದೆ.
 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ನಂ 9902608427 ಮತ್ತು 9731289355.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT